ಈ ಅಂಕಣಕ್ಕೆ ಕುಡುಗೆ ನೀಡಿ ಸಾಕಾರಗೊಳ್ಳುತ್ತಿರುವ ಕನಸು - ರಾಮನಗೌಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಹಳ್ಳಿಖೇಡ

 

ಶಾಲೆಯ ಹಿನ್ನೆಲೆ:

ಕಳೆದ ಒಂಭತ್ತು ವರ್ಷಗಳಿಂದ ಶ್ರೀಮತಿ ಅನುರಾಧಾ ಅವರು ಈ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಶಾಲೆಯ ಮುಖ್ಯಸ್ಥರಾಗಿ ಅವರ ಕೆಲಸದ ಅನುಭವ ಸಾಕಷ್ಟು ಕಹಿಯಾಗಿತ್ತು. ಹತ್ತು ವರ್ಷಗಳ ಹಿಂದೆ ಈ ಶಾಲೆ ನೋಡಲು ಭಣಗುಡುತ್ತಿತ್ತು. ಶಾಲಾ ಆಡಳಿತ ಮತ್ತು ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳಲು ಇಲ್ಲಿನ ಸಮುದಾಯದ ಎರಡು ಬಣಗಳು ಪ್ರಯತ್ನ ನಡೆಸಿದ್ದವು. ಅದರ ಆಘಾತ ಮುಖ್ಯ ಶಿಕ್ಷಕಿ ಅನುಭವಿಸಬೇಕಿತ್ತು. ಈ ಎರಡು ಬಣಗಳ ನಡುವಿನ ಸಂಘರ್ಷದಿಂದಾಗಿ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. ಯಾವುವೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರೂ ಎಸ್‌ಡಿಎಂಸಿ ಸದಸ್ಯರ ನಡುವೆ ಒಮ್ಮತವಿರುತ್ತಿರಲಿಲ್ಲ್ಲ. ಹಾಗಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಆಗುತ್ತಿರಲಿಲ್ಲ. ಶಾಲೆಯ ಕಾಂಪೌಂಡು ಗೋಡೆ ಯನ್ನು ನಿರ್ಮಿಸಲು ಮೀಸಲಿಟ್ಟ ಹಣ ಅನೇಕ ವರ್ಷ ಬಳಕೆಯಾಗದೇ ಹಾಗೆಯೇ ಉಳಿದುಹೋಗಿತ್ತು.

ಎಸ್‌ಡಿಎಂಸಿ ಸದಸ್ಯರ ಒಳಜಗಳದಿಂದ ಶಾಲೆಯ ದಿನನಿತ್ಯದ ಕೆಲಸಕ್ಕೂ ತೊಂದರೆಯಾಗಿತ್ತು. ಶಿಕ್ಷಕರು ಸ್ವತಂತ್ರವಾಗಿ ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಮಕ್ಕಳ ಕಲಿಕೆಯ ಮೇಲೂ ಇದು ಪರಿಣಾಮ ಬೀರುತ್ತಿತ್ತು ಎಂದು ಮುಖ್ಯ ಶಿಕ್ಷಕಿ ನಮಗೆ ತಿಳಿಸಿದರು.

ಶಿಕ್ಷಕ ರಾಮನ ಗೌಡ:

ರಾಮನ ಗೌಡರ ಹುಟ್ಟೂರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ತಮ್ಮ ಬಂಧುಗಳ ಮನೆಯಲ್ಲಿ ವಾಸಮಾಡಿಕೊಂಡು ತಾಳಿಕೋಟೆಯಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಪಡೆದರು. ಅವರು ಶಿಕ್ಷಣ ಕ್ಷೇತ್ರದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು ೨೦೦೯ರಲ್ಲಿ. ಅದಕ್ಕೂ ಮುನ್ನ ಅವರು ಕಲಬುರಗಿ ಜಿಲ್ಲೆಯ ಅಫಜಲ್ಪುರದಲ್ಲಿ ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ (ಡಿಐಇಟಿ) ಯಲ್ಲಿ ಅಗ್ರಸ್ಥಾನ ಪಡೆದು ಡಿಎಡ್ (ಡಿಪ್ಲೊಮಾ ಇನ್ ಎಜುಕೇಶನ್) ಮುಗಿಸಿದರು. ಅವರು ಕರ್ತವ್ಯಕ್ಕೆ ಹಾಜರಾದ ದಿನವೇ ಹೊಸದಾಗಿ ನೇಮಕ ಹೊಂದಿದ ಶಿಕ್ಷಕರಿಗೆ ನೀಡುವ ತರಬೇತಿ ಕಾರ್ಯಕ್ರಮವಾದ ’ಪ್ರೇರಣ’ಕ್ಕೆ ಅವರು ಹಾಜರಾಗಬೇಕಾಯಿತು.

’ಪ್ರೇರಣ’ದಲ್ಲಿ ತರಬೇತಿ ಪಡೆಯುತ್ತಿದ್ದ ಕಾಲದಲ್ಲಿ ಹೊಸ ಶಿಕ್ಷಕರಿಗೆ ನೀಡುವ ಒಂದು ಅಭ್ಯಾಸ ಕಾರ್ಯವೆಂದರೆ ತಮ್ಮ ಕನಸಿನ ಶಾಲೆಯ ಬಗ್ಗೆ ಲೇಖನ ಬರೆಯುವುದು. ತಮ್ಮ ’ಕನಸಿನ ಶಾಲೆ’ ಎಂದರೆ ಏನು ಎನ್ನುವ ಬಗ್ಗೆ ತಾವು ಬರೆದ ಸಾಲುಗಳು ರಾಮನ ಗೌಡರಿಗೆ ಈಗಲೂ ಸ್ಪಷ್ಟವಾಗಿ ನೆನಪಿದೆ. ಅವರ ಕನಸಿನ ಶಾಲೆಯೆಂದರೆ ಮಕ್ಕಳು ಪ್ರೀತಿಯಿಂದ ಬರುವಂತಹ ಆದರ್ಶಶಾಲೆ. ಅದು ಮಕ್ಕಳ ಕಲಿಕೆಯ ಕೇಂದ್ರವಾಗಿರಬೇಕು, ಅಲ್ಲಿ ಶಿಕ್ಷಕರು ಒಗ್ಗಟ್ಟಿನಿಂದ ದುಡಿಯುವಂತಿರಬೇಕು, ಈ ಶಾಲೆ ನಮ್ಮದು ಎಂಬ ಪ್ರೀತಿಯಿಂದ ಕಾಣುವ ಒಂದು ಸಮುದಾಯದಲ್ಲಿ ಆ ಶಾಲೆಯಿರಬೇಕು ಹಾಗೂ ಆ ಶಾಲೆಗೆ ಅದರದ್ದೇ ಆದ ಸುಂದರ ಕೈತೋಟವಿರಬೇಕು. ನೆಹರೂ ನಗರದ ಈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅದು ರಾಮನ ಗೌಡ ಅವರ ಕನಸಿನ ಶಾಲೆಗೆ ತದ್ವಿರುದ್ದವಾಗಿತ್ತು. ಶಾಲಾ ನೋಂದಣಿಪಟ್ಟಿಯಲ್ಲಿ ೫೮ ವಿದ್ಯಾರ್ಥಿಗಳ ಹೆಸರಿತ್ತು, ಆದರೆ ಸರಿಯಾಗಿ ಶಾಲೆಗೆ ಬರುತ್ತಿದ್ದವರು ಕೇವಲ ೧೫ ಮಂದಿ ಮಾತ್ರ. ಶಾಲಾ ಆವರಣಕ್ಕೆ ಯಾರು ಬೇಕಾದರೂ ಬಂದು ಹೋಗಬಹುದಿತ್ತು ಮತ್ತು ಆ ಕಾರಣಕ್ಕೆ ಅದು ಸಮುದಾಯದಿಂದ ದುರ್ಬಳಕೆಗೆ ಒಳಗಾಗಿತ್ತು. ಹಾಗಾಗಿ ಅಲ್ಲೊಂದು ಬದಲಾವಣೆ ತರಬೇಕಾದದ್ದು ಅನಿವಾರ್ಯವಾಗಿತ್ತು.

ಬದಲಾವಣೆಯ ತಂಗಾಳಿ:

ಶಾಲೆ ಮತ್ತು ಸಮುದಾಯದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳಲು ರಾಮನ ಗೌಡರಿಗೆ ಒಂದು ವರ್ಷವೇ ಬೇಕಾಯಿತು. ಮೊದಲನೇ ವರ್ಷ ಸಮುದಾಯದ ಮನೆಗಳಿಗೆ ಅನೇಕ ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳ ಪಾಲಕರ ಜೊತೆ ಮಾತುಕತೆ ನಡೆಸಿದರು. ಅವರು ಕಂಡುಕೊಂಡ ಮೊದಲ ಸತ್ಯ ಏನೆಂದರೆ ಅಲ್ಲಿರುವ ಕೆಲವು ಕುಟುಂಬಗಳಿಗೆ ಬೆಳಗಿನ ಉಪಹಾರ ಎಂದರೆ ಒಂದೆರಡು ಬಿಸ್ಕತ್ತು ಮಾತ್ರ. ಅನೇಕರು ತಮ್ಮ ಮಕ್ಕಳಿಗೆ ಹೊಟ್ಟೆ ತುಂಬಾ ಊಟಕ್ಕೆ ಮಧ್ಯಾಹ್ನದ ಬಿಸಿಯೂಟವನ್ನೇ ಅವಲಂಬಿಸಿದ್ದಾರೆ. ಬಹುತೇಕ ಕುಟುಂಬಗಳಿಗೆ ಕ್ಲಾಸ್-ವರ್ಕ್‌ಗೆಂದು ಬಳಸುವ ಗ್ರಾಫ್‌ಶೀಟ್ ಕೊಂಡುಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ. ತಮ್ಮ ಮಕ್ಕಳಿಗೆ ದೊರಕುವಂತಹ ಸೌಲಭ್ಯಗಳನ್ನು ಹೇಗೆ ಪಡೆದುಕೊಳ್ಳಬೇಕೆಂಬುದೂ ಅವರಿಗೆ ಗೊತ್ತಿರಲಿಲ್ಲ. ಆಧಾರ್ ಕಾರ್ಡ್‌ನ ದ್ವಿಪ್ರತಿ ಪಡೆಯಲು ಹತ್ತಿರದ ಪಟ್ಟಣಕ್ಕೆ ಭೇಟಿ ಕೊಡಬೇಕಿತ್ತು. ಆ ಬಸ್ ಪ್ರಯಾಣಕ್ಕೆ ಬೇಕಾದ ಹತ್ತು ರೂಪಾಯಿ ಭರಿಸುವ ಶಕ್ತಿಯೂ ಅನೇಕರಲ್ಲಿ ಇರಲಿಲ್ಲ. ಮನೆಯ ಯಜಮಾನ ಕುಡಿತದ ಚಟಕ್ಕೆ ದಾಸನಾಗಿರುವ ಕಾರಣ ಬಹಳಷ್ಟು ಕುಟುಂಬಗಳು ಅಸಹಾಯಕವಾಗಿದ್ದವು. ಸಮುದಾಯದ ಜೊತೆ ರಾಮನ ಗೌಡರು ನಡೆಸಿದ ಮಾತುಕತೆಯಿಂದ ಅವರು ಸಮುದಾಯ ಹಾಗೂ ವಿದ್ಯಾರ್ಥಿಗಳ ಬಗ್ಗೆ ಪರಾನುಭೂತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಇದಕ್ಕೆ ಏಕೈಕ ಪರಿಹಾರ ಶಾಲೆ ಮತ್ತು ಸಮುದಾಯದ ನಡುವೆ ನಿಕಟ ಸಂಬಂಧ ಕಾಯ್ದುಕೊಳ್ಳುವುದು ಎಂದು ರಾಮನಗೌಡರು ತಿಳಿದರು. ಇದನ್ನು ಮನವರಿಕೆ ಮಾಡಲು ಅವರು ಎಸ್‌ಡಿಎಂಸಿ ಜೊತೆ ಮಾತುಕತೆ ಶುರುಮಾಡಿದರು. ’ಒಬ್ಬ ಶಿಕ್ಷಕನಾದವನಿಗೆ ಇದು ಅನೇಕ ಶಾಲೆಗಳಲ್ಲಿ ಒಂದು, ಇದಲ್ಲದೇ ಹೋದರೆ ಇನ್ನೊಂದು ಶಾಲೆಗೆ ಹೋಗಿ ಕಲಿಸಬಹುದು. ಆದರೆ ಈ ಸಮುದಾಯಕ್ಕೆ ಇರುವುದು ಇದೊಂದೇ ಸರಕಾರಿ ಶಾಲೆ. ಹಾಗಾಗಿ ಶಾಲೆ ಪರಿಣಾಮಕಾರಿಯಾಗಿ ನಡೆಯುವಂತೆ ಮಾಡುವುದುವುದು ಅವರ ಜವಾಬ್ದಾರಿಯಾಗಬೇಕು’ ಎಂಬುದು ರಾಮನ ಗೌಡರ ತರ್ಕಬದ್ಧ ವಾದವಾಗಿತ್ತು.  ಈ ವಾದವು ಸಮುದಾಯದ ಮನಮುಟ್ಟಿತು.

ಶಾಲೆ ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಮನ ಗೌಡ ಅವರು ಪಾಲಕರ ಸಭೆ ಕರೆದರು.  ಅವರು ಸಮುದಾಯದ ಸದಸ್ಯರಿಗೆ ಮಕ್ಕಳ ಹಿತದೃಷ್ಟಿಯಿಂದ ಶಾಲೆಯ ಜೊತೆ ಸಹಕರಿಸಿ ಎಂದು ಒತ್ತಿಹೇಳಿದರು.

ರಾಮನ ಗೌಡ ಅವರು ಶಾಲೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಆರಂಭಿಸಿದರು. ಬೆಳಿಗ್ಗೆ ಹತ್ತಕ್ಕೆ ಶಾಲೆ ಆರಂಭವಾಗುವುದಿದ್ದರೆ ಒಂದು ತಾಸು ಮೊದಲೇ ಅವರು ಶಾಲೆಯಲ್ಲಿ ಹಾಜರಿರುತ್ತಿದ್ದರು. ತಾವೇ ಗಿಡಗಳಿಗೆ ನೀರು ಹಾಕುವುದನ್ನು, ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದನ್ನು ಮಾಡತೊಡಗಿದರು. ಭಾನುವಾರ ಮತ್ತು ಇತರ ರಜಾ ದಿನಗಳಲ್ಲೂ ಅವರು ಶಾಲೆಗೆ ಬರತೊಡಗಿದರು. ದಿನಗಳು ಕಳೆದಂತೆ ಮಕ್ಕಳು ಶಾಲೆಯ ಈ ದೈನಂದಿನ ಕೆಲಸಗಳಲ್ಲಿ ಕೈಜೋಡಿಸಲು ಆರಂಭಿಸಿದರು. ಇದು ತಮ್ಮದೇ ಶಾಲಾ ಆವರಣ ಎಂಬ ಅಭಿಪ್ರಾಯ ಅವರಲ್ಲಿ ಗಟ್ಟಿಯಾಯಿತು.

ಬಲು ಶೀಘ್ರದಲ್ಲೇ ಶಾಲಾ ಆವರಣದೊಳಕ್ಕೆ ಜಾನುವಾರುಗಳು ಮತ್ತು ಜನ ನುಗ್ಗದಂತೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಶಾಲೆಗೆ ಮನವರಿಕೆಯಾಯಿತು. ಶಾಲೆಯ ಕಂಪೌಂಡ್ ಗೋಡೆ ಕಟ್ಟುವ ಕೆಲಸದೆಡೆಗೆ ಗಮನ ಹರಿಸಲಾರಂಭಿಸಿದರು. ಇದಕ್ಕಾಗಿ ಊರಿನ ಸಮುದಾಯದ ಸದಸ್ಯರು ಜಿಲ್ಲಾ ಪಂಚಾಯತ್‌ನಿಂದ ಹಣ ಬಿಡುಗಡೆ ಮಾಡಿಸಿಕೊಡಲು ಸಹಾಯ ಮಾಡಿದರು. ಆವರಣ ಗೋಡೆ ಕಟ್ಟಲು ೧,೨೩,೦೦೦ ರೂ. ಮತ್ತು ಶೌಚಾಲಯ ನಿರ್ಮಾಣಕ್ಕೆ ೧,೮೮,೦೦೦ ರೂ. ಬಿಡುಗಡೆಯಾಯಿತು. ಒಟ್ಟಾರೆ ಕಾಮಗಾರಿಯು ಶಿಕ್ಷಕರು ಮತ್ತು ಸಮುದಾಯ ಸದಸ್ಯರ ಮೇಲ್ವಿಚಾರಣೆಯಲ್ಲಿ ನಡೆಯಿತು. ಸರಕಾರದಿಂದ ಮಂಜೂರಾದ ಹಣದಲ್ಲಿಯೇ ಒಂದು ಗೇಟ್ ಅನ್ನೂ ನಿರ್ಮಿಸಿ ಜೋಡಿಸುವಂತೆ ನೋಡಿಕೊಂಡರು. ಸಮುದಾಯದ ಅನೇಕ ಮಂದಿ ಪುಕ್ಕಟೆಯಾಗಿ ದುಡಿದರು. ಈ ಕೆಲಸ ಮಾಡಿ ಮುಗಿಸಿದ್ದು ಶಾಲೆ ಮತ್ತು ಸಮುದಾಯದ ನಡುವೆ ಒಂದು ಸೌಹಾರ್ದಯುತ ಸಂಬಂಧ ಬೆಳೆಯುವುದಕ್ಕೆ ಉತ್ತಮ ನಾಂದಿಯಾಯಿತು.

ತರಗತಿ ಕೊಠಡಿಯೊಳಗೆ:

ಈಗ ಮಕ್ಕಳು ಶಾಲಾ ಆವರಣ ತಮ್ಮದೇ ಎಂದು ಭಾವಿಸುತ್ತಾರೆ ಎಂಬ ನಂಬಿಕೆ ರಾಮನ ಗೌಡ ಅವರಲ್ಲಿ ಗಟ್ಟಿಯಾಯಿತು. ಇದನ್ನು ಸ್ವಚ್ಛ ಹಾಗೂ ಹಚ್ಚಹಸಿರಾಗಿ ಇಟ್ಟುಕೊಳ್ಳಬೇಕು ಎಂಬ ಪ್ರೀತಿ ಮಕ್ಕಳಲ್ಲಿ ಬಲಿತು ಬಿಟ್ಟಿದ್ದೇ ಇದಕ್ಕೆ ಕಾರಣ. ತಮ್ಮ ಶಾಲೆಯ ಆವರಣದಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂಬ ಆಸಕ್ತಿ ಅವರಲ್ಲಿ ಮೂಡಿತು. ಮಕ್ಕಳಲ್ಲಿರುವ ಈ ಪ್ರೀತಿಯೇ ಅವರನ್ನು ಕಲಿಕೆಯ ಕಡೆಗೆ ಕೊಂಡೊಯ್ಯಲು ತಮಗೆ ಸಹಕಾರಿ ಎಂದು ಅವರು ಆಲೋಚಿಸುತ್ತಾರೆ. ಶಾಲಾ ಅವಧಿಯಲ್ಲಿ ಶೇ.೨೦ರಷ್ಟು ಸಮಯವನ್ನು ಕೈತೋಟದಲ್ಲಿಯೇ ಕಳೆಯುವುದರಿಂದ ಕಲಿಕೆಗೆ ಅದೂ ಒಂದು ವೇದಿಕೆಯಾಗಿತ್ತು. ಮಕ್ಕಳು ಕಲಿಯುವುದು ಪಠ್ಯಪುಸ್ತಕಗಳಿಂದ ಮಾತ್ರ ಅಲ್ಲ ಎಂಬುದು ರಾಮನ ಗೌಡ ಅವರ ನಂಬಿಕೆ. ಇದಕ್ಕೆ ಅವರು ಸಸ್ಯಗಳ ಬಗ್ಗೆ ಇರುವ ಪಾಠಗಳ ಉದಾಹರಣೆಯನ್ನು ಕೊಡುತ್ತಾರೆ. ಸಸ್ಯಗಳ ಅಂಗಭಾಗಗಳು ಮತ್ತು ಅವು ಮಾಡುವ ಕೆಲಸ ಮಕ್ಕಳಿಗಾಗಲೇ ಪರಿಚಯ ಇರುತ್ತಿತ್ತು. ಇಂತಹ ಸಸ್ಯಗಳನ್ನೇ ಕಲಿಕಾ ಕೊಠಡಿಯೊಳಗೆ ಕೊಂಡೊಯ್ದರೆ ಮಕ್ಕಳು ಪ್ರಶ್ನೆ ಕೇಳಲು ಶುರು ಮಾಡುತ್ತಿದ್ದರು. ಇವರ ಮಾತುಕತೆಗಳೆಲ್ಲವೂ ಸ್ಥಳೀಯ ಭಾಷೆಯ ಪದಗಳಲ್ಲೇ ನಡೆಯುತ್ತಿದ್ದವು. ಈ ಅವಕಾಶ ಬಳಸಿ ಪಠ್ಯಪುಸ್ತಕದಲ್ಲಿ ಯಾವ ಪರಿಭಾಷೆ ಬಳಸಲಾಗಿದೆ ಎಂದು ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ರಾಮನ ಗೌಡರು ಶಿಕ್ಷಕ ಕಲಿಕಾ ಕೇಂದ್ರ (ಟಿಎಲ್‌ಸಿ) ದಲ್ಲಿ ಮಾಡಿದ ಚರ್ಚೆ ಸಂವಾದಗಳು ಸಹಕಾರಿಯಾಗುತ್ತಿದ್ದವು. ಬೋಧನೆಯ ಉದ್ದೇಶವು ಕೇವಲ ಪಠ್ಯಕ್ರಮವನ್ನು ಪೂರ್ಣಗೊಳಿಸುವುದಲ್ಲ ಬದಲಾಗಿ ಮಕ್ಕಳಿಗೆ ಕಲಿಕೆ ಮನದಟ್ಟಾಗುವಂತೆ ಮಾಡುವುದು ಎಂದು ಅವರು ನಂಬುತ್ತಾರೆ.

ರಾಮನ ಗೌಡರ ಶ್ರಮದ ಫಲ ಮಕ್ಕಳ ಕಲಿಕೆಯಲ್ಲಿ ಕಾಣತೊಡಗಿದೆ. ಎರಡನೇ ತರಗತಿಯಲ್ಲಿ ಓದುವ ಮಗು ಕನ್ನಡದಲ್ಲಿ ಬರೆಯುವುದು ಮತ್ತು ಓದುವುದನ್ನು ಸಲೀಸಾಗಿ ಮಾಡತೊಡಗಿದೆ. ಇದು ಹಳ್ಳಿಖೇಡದ ಖಾಸಗಿ ಶಾಲೆಗಳ ಮಕ್ಕಳಿಗೂ ಸಾಧ್ಯವಾಗಿರದ ಸಂಗತಿ. ಇದೇ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ಈ ಹಳ್ಳಿಯ ಒಂದೇ ಒಂದು ಮಗು ಖಾಸಗಿ ಶಾಲೆಗೆ ನೋಂದಣಿ ಆಗಿಲ್ಲ. ಖಾಸಗಿ ಶಾಲೆಗಳು ಪಾಲಕರನ್ನು ಸೆಳೆಯಲು ಎಲ್ಲ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇವೆ. ತೀರಾ ಕುಗ್ರಾಮಗಳಿಗೂ ತೆರಳಿ, ಸಾರಿಗೆ ಶುಲ್ಕವೂ ಬೇಡ, ಮಕ್ಕಳನ್ನು ನಮ್ಮ ಶಾಲೆಗೆ ಕಳಿಸಿ ಎನ್ನುತ್ತಿವೆ. ಆದರೆ ನೆಹರೂ ನಗರದಿಂದ ಒಂದೇ ಒಂದು ಮಗುವಿನ ನೋಂದಣಿ ಮಾಡಿಸಲು ಅವರಿಂದ ಸಾಧ್ಯವಾಗಿಲ್ಲ. ನಮ್ಮ ಶಾಲೆ ಚೆನ್ನಾಗಿ ನಡೆಯುತ್ತಿರುವವರೆಗೆ ಈ ಊರಿನಿಂದ ಯಾವ ಮಗುವೂ ಖಾಸಗಿ ಶಾಲೆಗೆ ಸೇರುವುದಿಲ್ಲ ಎಂಬ ದೃಢವಾದ ವಿಶ್ವಾಸ ರಾಮನ ಗೌಡ ಅವರದ್ದು. ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ನೆಹರೂ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೋಂದಣಿ ಮಾಡಿಸುವ ಪರಿಪಾಠ ತಂದೆತಾಯಿಯರಲ್ಲಿ ಬೆಳೆಯುತ್ತಿದೆ. ಹತ್ತಿರದ ಖೇಣಿ ಶಾಲೆಗೆ ಈ ಹಿಂದೆ ನೋಂದಣಿಯಾಗಿದ್ದ, ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮಗ ಸಿದ್ಧಾರ್ಥ ಈಗ ನೆಹರೂ ನಗರದ ಸರಕಾರಿ ಶಾಲೆಯ ವಿದ್ಯಾರ್ಥಿಯಾಗಿರುವುದೇ ಇದಕ್ಕೆ ಸಾಕ್ಷಿ. ಖೇಣಿ ಶಾಲೆಯಲ್ಲಿ ಮಗನ ಕಲಿಕೆ ಅಷ್ಟಕಷ್ಟೇ ಇತ್ತು, ಈ ಸರಕಾರಿ ಶಾಲೆಗೆ ಸೇರಿದಾಗಿನಿಂದ ಸಾಕಷ್ಟು ಸುಧಾರಣೆ ಕಂಡಿದೆ ಎಂಬುದನ್ನು ಸಿದ್ಧಾರ್ಥನ ತಂದೆಯ ಅಭಿಪ್ರಾಯ.

ಪಠ್ಯಪುಸ್ತಕದಿಂದ ಆಚೆಗೆ:

ತರಗತಿಯಿಂದಾಚೆಗೂ ಮಕ್ಕಳ ಕಲಿಕೆ ವಿಸ್ತರಿಸಬೇಕು ಎಂಬ ದಿಶೆಯಲ್ಲಿ ರಾಮನ ಗೌಡ ಅವರು ಅತ್ಯಂತ ಆಸಕ್ತಿ ವಹಿಸುತ್ತಿದ್ದಾರೆ. ಮೊರಾರ್ಜಿ ದೇಸಾಯಿ ಮತ್ತು ನವೋದಯ ಶಾಲೆಗಳಲ್ಲಿ ಮುಂದಿನ ಶಿಕ್ಷಣದ ಅವಕಾಶಗಳು ದೊರೆಯುವ ಬಗ್ಗೆ ಈಗ ಸಮುದಾಯದ ಜನರಿಗೆ ತಿಳಿದಿದೆ. ಮಕ್ಕಳೂ ಈ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಸಿದ್ಧರಾಗಲು ಉತ್ಸುಕರಾಗುತ್ತಿದ್ದಾರೆ. ಈ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳು ದಿನವೂ ಶಾಲೆಯಲ್ಲಿ ಒಂದು ಗಂಟೆ ಕಳೆಯುತ್ತಿದ್ದಾರೆ ಮತ್ತು ಅಣಕು ಪರೀಕ್ಷೆಗಳ ಮೂಲಕ ಅವರಿಗೆ ಅಭ್ಯಾಸ ಮಾಡಿಸಲಾಗುತ್ತಿದೆ. ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಕ್ಕಳಲ್ಲಿ ವಿಶ್ವಾಸ ಮೂಡುತ್ತಿದೆ. ಅವರ ಸಿದ್ಧತೆಯ ಎಲ್ಲ ಜವಾಬ್ದಾರಿಗಳನ್ನು ರಾಮನ ಗೌಡ ಅವರೇ ಹೊತ್ತಿರುತ್ತಾರೆ ಮತ್ತು ಹುಮ್ನಾಬಾದ್‌ನಲ್ಲಿ ಒಂದು ಕೇಂದ್ರದಲ್ಲಿ ನಡೆಯುವ ಪ್ರವೇಶ ಪರೀಕ್ಷೆ ಬರೆಯಲು ಮಕ್ಕಳನ್ನು ತಾವೇ ಕರೆದೊಯ್ಯುತ್ತಾರೆ. ೨೦೧೩ರಲ್ಲಿ ಮೊರಾರ್ಜಿ ಶಾಲೆಯಲ್ಲಿ ಪ್ರವೇಶ ಪಡೆಯಲು ಈ ಶಾಲೆಯ ೧೩ ಮಕ್ಕಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ೧೧ ಮಂದಿಗೆ ಪ್ರವೇಶ ಸಿಕ್ಕಿದ್ದು ಅವರೆಲ್ಲರೂ ಈಗ ಡಿಎಡ್ ಮಾಡುತ್ತಿದ್ದಾರೆ. ಅಲ್ಲಿಂದೀಚೆ ಯಾರೂ ಹಿಂತಿರುಗಿ ನೋಡಿದ್ದೇ ಇಲ್ಲ. ನೆಹರು ನಗರದ ಸರಕಾರಿ ಶಾಲೆಂiiಲ್ಲಿ ಐದನೇ ತರಗತಿ ಪೂರ್ಣಗೊಳಿಸಿದ ಬಹಳಷ್ಟು ಮಕ್ಕಳು ನಿರಂತರವಾಗಿ ನವೋದಯ ಅಥವಾ ಮೊರಾರ್ಜಿ ಶಾಲೆಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ.

ಐದನೇ ತರಗತಿ ವಿದ್ಯಾರ್ಥಿ ಸೋಮಶೇಖರ್‌ನ ತಂದೆ ಬಸವರಾಜ್. ಅವರ ಇನ್ನೂ ಇಬ್ಬರು ಮಕ್ಕಳು ಒಂದು ಮತ್ತು ಮೂರನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಆಸಕ್ತರಾಗಿರುವುದು ಮತ್ತು ಸೋಮಶೇಖರ್‌ಗೆ ಇಂಗ್ಲಿಷ್ ಓದಲು ಮತ್ತು ಬರೆಯಲು ಸಾಧ್ಯವಾಗಿರುವುದು ಬಸವರಾಜ್‌ಗೆ ಇನ್ನಿಲ್ಲದ ಖುಷಿ. ಅವರ ಪ್ರಕಾರ ರಾಮನ ಗೌಡ ಅವರು ಆದರ್ಶ ಶಿಕ್ಷಕ. ಶಿಕ್ಷಕರಾಗಿ ಅವರು ವಿದ್ಯಾರ್ಥಿಗಳ ಈಗಿನ ಅಗತ್ಯವೇನು ಮತ್ತು ಅವರ ಭವಿಷ್ಯ ಏನಾಗಬೇಕು ಎಂಬುದನ್ನೂ ಯೋಚಿಸುತ್ತಾರೆ. ಅವರ ಶ್ರಮದಿಂದಾಗಿಯೇ ಬಸವರಾಜ್ ಅವರ ಮಕ್ಕಳು ಮೊರಾರ್ಜಿ ಮತ್ತು ನವೋದಯ ಶಾಲೆಗಳಿಗೆ ಹೋಗುವ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಮಕ್ಕಳು ಮತ್ತು ಸಮುದಾಯ ರಾಮನ ಗೌಡ ಅವರನ್ನು ಕುರಿತು ಹೆಮ್ಮೆಯಿಂದ ಮಾತನಾಡತ್ತಾರೆ. ಅವರನ್ನು ಆ ಶಾಲೆಯಲ್ಲಿಯೇ ಉಳಿಸಿಕೊಳ್ಳಲು ಸಮುದಾಯ ಏನು ಬೇಕಾದರೂ ಮಾಡಲು ಸಿದ್ಧ ಎನ್ನುತ್ತಾರೆ ಬಸವರಾಜ್. ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಸಿಕ್ಕ ತಕ್ಷಣ ಅಲ್ಲಿನ ಇಡೀ ಸಮುದಾಯ ಎಚ್ಚೆತ್ತುಕೊಂಡು ಧರಣಿ ನಡೆಸಲು ಸಜ್ಜಾಗಿದೆ. ಆ ಶಿಕ್ಷಕರೇ ಈ ಶಾಲೆಯಿಂದ ತೆರಳುತ್ತೇನೆಂದು ಬಯಸುವವರೆಗೆ ನಮ್ಮ ಸಮುದಾಯ ಅವರನ್ನು ಹೋಗಲು ಬಿಡುವುದಿಲ್ಲ ಎನ್ನುವಾಗ ಬಸವರಾಜ್ ಅವರ ಕಣ್ಣುಗಳು ತೇವಗೊಂಡವು.

 

ತರಗತಿ ಕೋಣೆಯ ಕಲಿಕೆಯ ಆಚೆಗೂ ಮಾರ್ಗದರ್ಶನ:

ವಿದ್ಯಾರ್ಥಿ ವೇತನ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಸಮುದಾಯದ ಜನರಲ್ಲಿ ಸೀಮಿತ ಅರಿವಿನ ಕಾರಣದಿಂದಾಗಿ ವಿದ್ಯಾರ್ಥಿವೇತನವನ್ನು ಅರ್ಜಿಸಲ್ಲಿಸಿ ಪಡೆಯುವುದು ತೀರ ಕಡಿಮೆಯಾಗಿತ್ತು. ಇನ್ನು ಬ್ಯಾಂಕ್ ಖಾತೆಗಳೇ ಇಲ್ಲದಿರುವುದು ಅವರ ಕಷ್ಟವನ್ನು ಮತ್ತಷ್ಟು ಹೆಚ್ಚಿಸಿತ್ತು. ಇದನ್ನು ಅರಿತ ರಾಮನ ಗೌಡ ಅವರು ವಿದ್ಯಾರ್ಥಿಗಳು ಬ್ಯಾಂಕ್‌ನಲ್ಲಿ ಕನಿಷ್ಠಠೇವಣಿ ರಹಿತ ಖಾತೆಗಳನ್ನು ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈವರೆಗೆ ವಿದ್ಯಾರ್ಥಿಗಳು ಕೆನರಾ ಬ್ಯಾಂಕ್‌ನಲ್ಲಿ ನೂರಕ್ಕೂ ಹೆಚ್ಚು ಖಾತೆಗಳನ್ನು ತೆರೆದಿದ್ದು, ಇವೆಲ್ಲವೂ ರಾಮನ ಗೌಡ ಅವರ ವೈಯಕ್ತಿಕ ಮುತುವರ್ಜಿಯಿಂದ ಸಾಧ್ಯವಾಗಿದೆ. ಇನ್ನೊಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಗಳ ಮೊಬಲಗಾದ ೪೫೦೦೦ ರೂ.ವನ್ನು ಪಡೆದುಕೊಳ್ಳಲು ಅವರು ತಮ್ಮದೇ ಜೇಬಿನಿಂದ ೭೦೦ ರೂ ಖರ್ಚು ಮಾಡೇಕಾಯಿತು. ಈ ವಿದ್ಯಾರ್ಥಿ ವೇತನವು ಮಕ್ಕಳ ಪಾಲಿಗೆ ಬಹುದೊಡ್ಡ ಮೊತ್ತವಾದ್ದರಿಂದ ಅವರಿಗೆ ಆ ಖರ್ಚಿನ ಬಗ್ಗೆ ಚಿಂತೆ ಇಲ್ಲ. ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಲು ಪಾಲಕರು ಶಾಲೆಗೆ ಬರುತ್ತಿರುತ್ತಾರೆ. ಐದನೇ ತರಗತಿ ಮುಗಿಸಿದ ಬಳಿಕ ತಮ್ಮ ಮಕ್ಕಳಿಗೆ ಇರುವ ಶೈಕ್ಷಣಿಕ ಅವಕಾಶಗಳು ಯಾವುವು ಎಂದು ಅವರು ಶಿಕ್ಷಕರ ಜೊತೆ ಚರ್ಚೆ ನಡೆಸುತ್ತಾರೆ ಮತ್ತು ಕೇಳಿ ತಿಳಿದುಕೊಳ್ಳುತ್ತಾರೆ. ಈಗಂತೂ ರಾಮನ ಗೌಡ ಅವರು ಸಮುದಾಯದ ಪಾಲಿನ ಶೈಕ್ಷಣಿಕ ಮಾರ್ಗದರ್ಶಕರಾಗಿದ್ದಾರೆ. ಅವರ ಅನೇಕ ಹಳೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಹಂತವನ್ನು ತಲುಪಿದ್ದಾರೆ ಮತ್ತು ನಿಯತವಾಗಿ ಅವರ ಮಾರ್ಗದರ್ಶನವನ್ನು ಪಡೆಯುತ್ತಿರುತ್ತಾರೆ. ೨೦೧೩ರ ಬ್ಯಾಚ್‌ನ ೧೧ ವಿದ್ಯಾರ್ಥಿಗಳು ಡಿಎಡ್ ಮಾಡುತ್ತಿದ್ದಾರೆ - ಅದಕ್ಕೆ ಶಿಕ್ಷಕ ರಾಮನ ಗೌಡ ಅವರ ಸಲಹೆಯೇ ಕಾರಣ.

ಒಮ್ಮೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪರಿಶೀಲನೆಗಾಗಿ ಈ ಶಾಲೆಗೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ, ಹಾಜರಾತಿ ಪುಸ್ತಕದಲ್ಲಿ ರಾಮನ ಗೌಡ ಹಾಜರಿದ್ದಾರೆ ಎಂದು ತೋರಿಸುತ್ತಿದ್ದರೂ ಅವರು ಶಾಲೆಯಲ್ಲಿ ಇಲ್ಲದಿರುವುದನ್ನು ಕಂಡು ಅಧಿಕಾರಿಯು ಅವರಿಗೆ ಶೋಕಾಸ್ ನೋಟಿಸ್ ನೀಡಿದರು. ಆ ಹೊತ್ತಿನಲ್ಲಿ ರಾಮನ ಗೌಡರು ಪಟ್ಟಣದಲ್ಲಿ ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳಿಗೆ ನಿಯತವಾಗಿ ಬರುವಂತೆ ಮಾಡಲು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಕೆಲಸದಲ್ಲಿ ನಿರತರಾಗಿದ್ದರು.

ಇಲಾಖೆ ನೀಡಿದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡವರು ಶಾಲೆಯ ಮುಖ್ಯ ಶಿಕ್ಷಕಿ. ನಾವೆಲ್ಲರೂ ಮಕ್ಕಳಿಗಾಗಿಯೇ ದುಡಿಯುತ್ತಿರುವುದರಿಂದ ಇದಕ್ಕೆ ವಿವರಣೆ ನೀಡುವ ಬಗ್ಗೆ ತಮಗೇನೂ ಬೇಸರವಿಲ್ಲ ಎಂಬುದು ಅವರ ಸ್ಪಷ್ಟನೆ. ಇದನ್ನು ಒಪ್ಪುವ ರಾಮನ ಗೌಡ ಅವರು ಈ ಶಾಲೆ ಮತ್ತು ಮಕ್ಕಳ ಪ್ರಯೋಜನಕ್ಕಾಗಿ ಕೈಗೊಳ್ಳುವ ಪ್ರತಿಯೊಂದು ಕೆಲಸಕ್ಕೂ ಉತ್ತೇಜನ ಮತ್ತು ಸ್ವಾತಂತ್ರ್ಯವನ್ನು ಮುಖ್ಯ ಶಿಕ್ಷಕಿ ನೀಡುತ್ತಿದ್ದಾರೆ ಎಂದು ಹೇಳಿದರು.

ಶಾಲಾ ಸಹಕಾರಿ ಅಂಗಡಿ ಹಾಗು ಸಹಕಾರಿ ಬ್ಯಾಂಕ್:

ಶಾಲೆಯಲ್ಲಿ ಮಕ್ಕಳು ಸಹಕಾರಿ ಅಂಗಡಿಯನ್ನು ನಡೆಸುತ್ತಾರೆ. ವಿದ್ಯಾರ್ಥಿಗಳಿಗೆ ಬೇಕಾಗಬಹುದಾದ ಎಲ್ಲ ಲೇಖನ ಸಾಮಗ್ರಿಗಳು ಈ ಅಂಗಡಿಯಲ್ಲಿ ಲಭ್ಯ. ಇಲ್ಲಿ ಮಾರಾಟ ಮಾಡುವ ವಸ್ತುಗಳ ದರವನ್ನು ಪಟ್ಟಿ ಮಾಡಿರುವ ಒಂದು ಪ್ರದರ್ಶನ ಫಲಕವನ್ನು ತೂಗುಹಾಕಲಾಗಿದೆ. ಶಾಲಾ ಅವಧಿಯಲ್ಲಿ ಈ ಅಂಗಡಿ ತೆರೆದಿರುತ್ತದೆ. ಅಂಗಡಿಗೆ ಕೊಂಡು ತಂದಿರುವ ಮತ್ತು ಮಾರಾಟ ಮಾಡಿರುವ ವಸ್ತುಗಳ ದಾಖಲೆಯೂ ಇಲ್ಲಿರುತ್ತದೆ. ಈ ಲೇಖನ ಸಾಮಗ್ರಿಗಳನ್ನು ಹೊಂದಿರುವ ಕಪ್‌ಬೋರ್ಡ್‌ನ್ನು ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಇಲ್ಲಿಗೆ ತೆರಳಿ ತಮಗೆ ಬೇಕಾದದ್ದನ್ನು ಖರೀದಿ ಮಾಡಬಹುದಾಗಿದೆ. ಸದ್ಯ ಈ ಅಂಗಡಿಯ ಉಸ್ತುವಾರಿ ಹೊತ್ತಿರುವ ವಿದ್ಯಾರ್ಥಿ ಸಿದ್ಧಾರ್ಥ. ರಾಮನಗೌಡರನ್ನು ಮಾತನಾಡಿಸುತ್ತಿದ್ದಂತೆಯೇ ವಿದ್ಯಾರ್ಥಿಯೊಬ್ಬ ಸಿದ್ಧಾರ್ಥನಿಂದ ಲೇಖನ ಸಾಮಾಗ್ರಿ ಖರೀದಿಸಿದ. ಇಬ್ಬರೂ ಅಳುಕಿಲ್ಲದೇ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ವ್ಯವಹಾರ ಮುಗಿಸಿ ತೆರಳಿದ್ದು ಒಂದು ಅಪೂರ್ವ ಕ್ಷಣ.

ಶಾಲೆಯಲ್ಲೊಂದು ಸಹಕಾರಿ ಬ್ಯಾಂಕ್ ಕೂಡ ಇದೆ. ಬ್ಯಾಂಕಿನ ದಿನನಿತ್ಯದ ವ್ಯವಹಾರವನ್ನು ನಿರ್ವಹಿಸುವವರು ವಿದ್ಯಾರ್ಥಿಗಳೇ. ಅವರೇ ಪ್ರತಿದಿನ ಶಿಕ್ಷಕರಿಗೆ ವಿವರ ನೀಡುತ್ತಾರೆ. ಮಕ್ಕಳೇ ಈ ಬ್ಯಾಂಕ್ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಹಣಕಾಸು ವ್ಯವಹಾರದ ಅರಿವು ಪಕ್ವವಾಗುತ್ತಾ ಹೋಗುತ್ತದೆ ಎಂಬುದು ರಾಮನ ಗೌಡ ಅವರ ನಂಬಿಕೆ. ಹಣ ಉಳಿತಾಯ ಮಾಡುವುದರ ಮೌಲ್ಯವನ್ನು ಹೇಳುವುದರ ಜೊತೆಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣವನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಲು ಶಾಲೆ ಕೈಗೊಂಡಿರುವ ಇಂತಹ ಕ್ರಮಗಳು ದಾರಿದೀಪವಾಗುತ್ತವೆ ಎಂಬುದು ಅವರ ಆಲೋಚನೆ.  ಶಾಲೆಗೆ ಕಾರಣ ನೀಡದೇ ಗೈರುಹಾಜರಾದರೆ ಮಕ್ಕಳಿಗೆ ಒಂದು ರೂಪಾಯಿ ದಂಡ ವಿಧಿಸಲಾಗುತ್ತದೆ. ದಂಡದ ಹಣವು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸದ್ಯ ಬ್ಯಾಂಕ್‌ನಲ್ಲಿರುವ ಠೇವಣಿ ೮೦೦೦ ರೂ.

ಹಳೆಯ ವಿದ್ಯಾರ್ಥಿಗಳ ಸಂಘ:

ಶಾಲೆಯಲ್ಲೊಂದು ಹಳೆ ವಿದ್ಯಾರ್ಥಿಗಳ ಸಂಘವೂ ಸಕ್ರಿಯವಾಗಿದೆ. ಈ ಸಂಘದ ಭಾಗವಾಗಿರುವ ವಿದ್ಯಾರ್ಥಿಗಳ ಮೊದಲ ತಂಡ ಈಗ ನಾನಾ ಕಾಲೇಜುಗಳಲ್ಲಿ ಡಿ. ಎಡ್. ಅಧ್ಯಯನವನ್ನು ನಡೆಸುತ್ತಿದೆ. ಹಳೆಯ ವಿದ್ಯಾರ್ಥಿಗಳು ಮತ್ತು ಈಗಿನ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ಏರ್ಪಡಿಸಲಾಗುತ್ತದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಉನ್ನತ ಅಧ್ಯಯನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಮೊರಾರ್ಜಿ ಮತ್ತು ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಸಮಾಲೋಚನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಶಿಕ್ಷಕರ ದೂರದೃಷ್ಟಿ:

ಒಂದು ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯ ಎಂಬುದು ರಾಮನ ಗೌಡ ಅವರ ನಂಬಿಕೆ. ಈ ಶಿಕ್ಷಕರ ಎಲ್ಲರನ್ನೂ ಒಳಗೊಳ್ಳುವ ಭಾವನೆಯೇ ಅವರು ಎಲ್ಲರಿಗಾಗಿ ಕೆಲಸ ಮಾಡಲು ಪ್ರೇರಕ. ಕೇವಲ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದಲ್ಲದೆ ಸಹಾಯ ಬೇಕಾದ ಮಕ್ಕಳ ಭೌತಿಕ ಅಗತ್ಯಗಳನ್ನು ಅವರು ಪೂರೈಸುತ್ತಾರೆ. ಮತ್ತೊಂದು ಗಮನಾರ್ಹ ಅಂಶವೆಂದರೆ ವಿದ್ಯಾರ್ಥಿಗಳ ಸಾಮರ್ಥ್ಯದಲ್ಲಿ ರಾಮನ ಗೌಡರಿಗಿರುವ ನಂಬಿಕೆ. ಹಾಗಾಗಿ ಅವರು ವಿದ್ಯಾರ್ಥಿಗಳೇ ಮಾಡುವ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೇ ಜವಾಬ್ದಾರಿ ನೀಡುವುದರಿಂದ ಅತ್ಯಂತ ಸಕ್ರಿಯವಾಗಿ ಅವರು ಆ ಕೆಲಸದಲ್ಲಿ ತೊಡಗಿಕೊಂಡು ಅವರಿಂದ ನಿರೀಕ್ಷಿತ ಫಲಿತಾಂಶವನ್ನು ಕೊಡುತ್ತಾರೆ. ಅವರಲ್ಲಿ ವಿಶ್ವಾಸ ಮೈ ತುಂಬಿದೆ. ಯಾವುದೇ ಶಿಕ್ಷಣದ ಗುರಿ ಇದೇ ಆಗಬೇಕು.

ಒಂದು ದೂರದ ಹಳ್ಳಿಯ ಶಾಲೆಯಲ್ಲಿಯೂ ಇದು ಸಾಧ್ಯವಾಗಿದೆ ಎನ್ನುವುದು ಸಂಭ್ರಮಪಡಲು ಮತ್ತೊಂದು ಕಾರಣ. ಇನ್ನೊಂದು ವಿಶೇಷ ಅಂಶವೆಂದರೆ ವಿದ್ಯಾರ್ಥಿಗಳ ಬಗ್ಗೆ ರಾಮನ ಗೌಡರಿಗೆ ಇರುವ ಅಪರಿಮಿತ ಪ್ರೀತಿ. ಶಾಲೆ ಮತ್ತು ವಿದ್ಯಾರ್ಥಿಗಳಿಗಾಗಿ ದುಡಿಯಬೇಕು ಎಂದು ಹೊರಟುಬಿಟ್ಟರೆ ಯಾವ ಸಮಯ, ವಾರದ ಯಾವ ದಿನ ಎಂಬುದನ್ನು ಅವರು ನೋಡುತ್ತಿರಲಿಲ್ಲ್ಲ. ಶಾಲೆ iತ್ತು ಮಕ್ಕಳ ಬಗ್ಗೆ ಅವರಿಗಿರುವ ನಿಸ್ವಾರ್ಥ ಭಾವನೆಯನ್ನೇ ಮಕ್ಕಳೂ ಶಾಲೆ ಮತ್ತು ತಮ್ಮ ಶಿಕ್ಷಕರ ಬಗ್ಗೆ ತೋರುತ್ತಾರೆ. ಮುಖ್ಯ ಶಿಕ್ಷಕರೇ ಹೇಳುವಂತೆ ಅಧಿಕೃತ ಕೆಲಸಗಳಿಗೆಂದು ಅವರು ಶಾಲೆಯಿಂದ ಹೊರಗೆ ಹೋದರೆ ಮಕ್ಕಳು ಮತ್ತೆ ಮತ್ತೆ ಮುಖ್ಯ ಶಿಕ್ಷಕರ ಬಳಿಗೆ ಹೋಗಿ ’ರಾಮನ ಗೌಡ ಸರ್ ಹಿಂತಿರುಗಿ ಯಾವಾಗ ಬರುತ್ತಾರೆ’ ಎಂದು ಕಾಡುತ್ತಲೇ ಇರುತ್ತಾರೆ. ರಜಾ ದಿನಗಳಲ್ಲೂ ಮಕ್ಕಳು ಶಾಲೆಗೆ ಬರುತ್ತಿರುತ್ತಾರೆ; ಅದಕ್ಕೆ ರಾಮನ ಗೌಡ ಸರ್ ಶಾಲೆಯಲ್ಲಿ ಇರುತ್ತಾರೆ ಎಂಬುದೊಂದೇ ಕಾರಣ.

ಶಾಲೆಗಾಗಿ ತಾವು ಮಾಡುತ್ತಿರುವ ಕೆಲಸ ಇನ್ನೂ ಮುಗಿದಿಲ್ಲ ಎಂಬುದು ರಾಮನ ಗೌಡ ಅವರ ಅನಿಸಿಕೆ. ಶಾಲೆಗಾಗಿ ಮಾಡಬೇಕಾದ ಕಾರ್ಯ ಇನ್ನೂ ಬಹಳವಿದೆ ಎಂಬುದು ಅವರ ಭಾವನೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ತರಕಾರಿಗಳನ್ನು ಒದಗಿಸುವುದರಲ್ಲಿ ಶಾಲೆ ಇನ್ನೂ ಸ್ವಾವಲಂಬಿಯಾಗಿಲ್ಲ ಎಂಬ ಕೊರಗು ಅವರಿಗಿದೆ. ಸದ್ಯ ತರಕಾರಿ ಕೊಳ್ಳಲಿಕ್ಕೆಂದೇ ದಿನಕ್ಕೆ ೫೫ ರೂ. ಮಂಜೂರಾಗಿರುತ್ತದೆ. ಆದರೆ ನಿಜವಾಗಿ ಆಗುವ ಖರ್ಚು ಸುಮಾರು ೭೫ ರೂ. ಬಿಸಿಯೂಟಕ್ಕೆ ಕೆಲ ಕುಟುಂಬಗಳು ಬೇಳೆಕಾಳುಗಳು ಮತ್ತು ತರಕಾರಿಗಳನ್ನು ಕಳುಹಿಸಿಕೊಡುತ್ತಾರೆ. ನಾವೇ ಕೆಲವು ತರಕಾರಿಗಳನ್ನು ಬೆಳೆಯುವಂತಾದರೆ ಖರ್ಚು ಇನ್ನಷ್ಟು ಕಡಿಮೆಯಾಗುತ್ತದೆ ಎಂಬುದು ಅವರ ಯೋಚನೆ.

ತಮ್ಮ ಶಾಲೆಯ ಮಕ್ಕಳು ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಜ್ಞಾನವನ್ನೂ ಪಡೆಯುವಂತಾಗಬೇಕು. ಇದರಿಂದ ಅವರಿಗೆ ಹೊಸ ಜಗತ್ತಿನ ಅನುಭವವಾಗುತ್ತದೆ ಎಂಬುದು ರಾಮನ ಗೌಡ ಅವರ ನಂಬಿಕೆ. ಪ್ರಸ್ತುತ ಈ ಸೌಲಭ್ಯ ಶಾಲೆಯಲ್ಲಿಲ್ಲ. ಅದಕ್ಕಾಗಿ ಶಾಲೆಯಲ್ಲೊಂದು ಕಂಪ್ಯೂಟರ್ ಲ್ಯಾಬ್ ತೆರೆಯಬೇಕು ಎಂಬ ಕನಸು ಅವರದ್ದು. ಇದಕ್ಕಾಗಿ ಶಾಲೆಯಲ್ಲೊಂದು ಜಾಗವನ್ನೂ ಗುರುತಿಸಿದ್ದಾರೆ. ತಮ್ಮ ಕನಸು ಪೂರ್ಣಗೊಳ್ಳಲು ಹಣಕಾಸಿನ ಸಹಾಯ ನೀಡುವ ದಾನಿಗಳ ಹುಡುಕಾಟವನ್ನಾಗಲೇ ಆರಂಭಿಸಿದ್ದಾರೆ. ಇದರ ಜೊತೆಗೆ ಗ್ರಂಥಾಲಯ ಮತ್ತು ಪ್ರಯೋಗಾಲಯ ಸೌಲಭ್ಯಗಳೂ ಶಾಲೆಯಲ್ಲಿರಬೇಕೆಂದು ಅವರು ಬಯಸುತ್ತಾರೆ. ಇಂತಹ ಸೌಲಭ್ಯಗಳ ಕೊರತೆಯಿರುವಾಗ ತಾವು ಬೋಧನೆ ಮತ್ತು ಕಲಿಕೆಯ ಬಗ್ಗೆ ಪರಿಶೋಧನೆಯನ್ನು ಸೀಮಿತ ಮಟ್ಟದಲ್ಲಿ ಮಾತ್ರ ಮಾಡಬಹುದು ಎಂಬುದು ಅವರ ಅನಿಸಿಕೆ. ಮಕ್ಕಳು ನೆಲದ ಮೇಲೇ ಕುಳಿತು ಕಲಿಯುತಿರುವುದರಿಂದ, ಅವರಿಗೆಲ್ಲ ಚಾಪೆಗಳನ್ನು ಒದಗಿಸುವ ಯೋಚನೆಯೂ ಅವರಿಗಿದೆ.

ಇತ್ತೀಚಿನ ದಿನಗಳಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ತಮ್ಮ ವೃತ್ತಿಪರ ಅಭಿವೃದ್ಧಿಗೆ ನೆರವಾಗಿದೆ ಎಂದು ರಾಮನ ಗೌಡ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಫೌಂಡೇಶನ್ ಕೈಗೊಂಡಿರುವ ಅನೇಕ ಉಪಕ್ರಮಗಳನ್ನು ಶ್ಲಾಘಿಸಲು ಅವರು ಮರೆಯುವುದಿಲ್ಲ. ರಾಜ್ಯದ ಹೊರಗೂ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಲು ಅವಕಾಶ ದೊರೆತಿರುವುದು ಮತ್ತು ನಾನಾ ಭಾಗಗಳಿಂದ ವಿವಿಧ ಕ್ಷೇತ್ರಗಳ ಜನ ತಮ್ಮ ಶಾಲೆಗೆ ಭೇಟಿ ಕೊಡುತ್ತಿರುವುದು ಅವರು ತಮ್ಮ ಬೋಧನಾ ಪದ್ದತಿ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸುಧಾರಣೆ ಮಾಡಿಕೊಳ್ಳುವಂತೆ ಮಾಡಿದೆ. ಶಿಕ್ಷಣ ಇಲಾಖೆಯ ಮಾನ್ಯತೆ ಮತ್ತು ’ಉತ್ತಮ ಶಿಕ್ಷಕ ಪ್ರಶಸ್ತಿ’ ಕೂಡ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಉಪಸಂಹಾರ

ಕಳೆದ ಅನೇಕ ವರ್ಷಗಳ ಕಾಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅತ್ಯಂತ ಮುತುವರ್ಜಿಯಿಂದ ನಿರ್ವಹಣೆ ಮಾಡಿಕೊಂಡು ಬಂದಿರುವ ಶಾಲೆಯ ಚೆಂದದ ಕ್ಯಾಂಪಸ್‌ಗೆ ’ಹಸಿರು ಶಾಲಾ ಪ್ರಶಸ್ತಿ’ ದೊರಕಿದೆ. ತಮ್ಮ ಕನಸಿನ ಶಾಲೆಯ ಬಗ್ಗೆ ಲೇಖನ ಬರೆದಾಗ ಆ ಯೋಚನೆ ಇನ್ನೂ ಅಸ್ಪಷ್ಟವಾಗಿತ್ತು. ತಮ್ಮ ಕನಸು ಸಾಕಾರಗೊಳ್ಳಬಹುದು ಎಂಬುದು ಅವರಿಗೆ ಖಚಿತವಾಗಿರಲಿಲ್ಲ. ಶಿಕ್ಷಕ ವೃತ್ತಿ ಜೀವನದಲ್ಲಿ ಇನ್ನೇನು ದಶಕ ಪೂರೈಸುತ್ತಿರುವ ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದಾಗ ತಾನು ಕನಸು ಕಂಡದ್ದಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಿದ್ದೇನೆ ಎಂಬುದು ಅವರಿಗೆ ಮನವರಿಕೆಯಾಗಿದೆ. ಈಗ ಅವರಿಗೆ ತಮ್ಮ ಶಾಲೆಯ ಬಗ್ಗೆ ಇನ್ನೂ ಹೊಸ ಹೊಸ ಕನಸುಗಳಿವೆ; ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಬೇಕೆಂಬ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಶಾಲೆ ತಮ್ಮದಾಗಬೇಕು ಎಂಬುದೂ ಒಂದು. ತಮ್ಮ ವೃತ್ತಿಪರ ಜೀವನದ ಅತ್ಯಂತ ತೃಪ್ತಿಯ ಕ್ಷಣವನ್ನು ಅವರು ಹೆಮ್ಮೆಯಿಂದ ನೆನಪು ಮಾಡಿಕೊಳ್ಳುತ್ತಾರೆ; ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಮೂರು ಪ್ರಸಿದ್ಧ ಖಾಸಗಿ ಶಾಲೆಗಳನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳು ಸೋಲಿಸಿ ಗೆದ್ದ ಕ್ಷಣವದು. ಸ್ಪರ್ಧೆಯಲ್ಲಿ ಜಯ ಗಳಿಸಿದ ತಕ್ಷಣ ನುಗ್ಗಿ ಬಂದ ಮಕ್ಕಳು ತಮ್ಮನ್ನು ತಬ್ಬಿಕೊಂಡು ಇನ್ನಿಲ್ಲದ ಖುಷಿಯಲ್ಲಿ ಬೀಗಿದರು ಎನ್ನುವಾಗ ರಾಮನ ಗೌಡರ ಕಣ್ಣಿನಲ್ಲಿ ಮತ್ತೆ ಆನಂದಭಾಷ್ಪ. ಈವರೆಗೆ ತಾವು ನಡೆದುಬಂದ ದಾರಿಯ ಬಗ್ಗೆ ಅವರಲ್ಲಿ ತೃಪ್ತಿಯಿದೆ. ಆದರೆ ಸಾಗಬೇಕಾದ ದಾರಿ ಇನ್ನೂ ಸಾಕಷ್ಟು ದೂರವಿದೆ ಎಂಬ ಅರಿವೂ ಅವರಿಗಿದೆ.

ಸರಕಾರಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣವನ್ನು ಒದಗಿಸಿ ಸಮುದಾಯಗಳ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಿದೆ ಎಂಬುದನ್ನು ನೆಹರೂ ನಗರದ ಈ ಶಾಲೆ ತೋರಿಸಿಕೊಟ್ಟಿದೆ. ಶಾಲೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಖಾಸಗಿ ಶಾಲೆಗಳು ಒಡ್ಡುತ್ತಿರುವ ಸ್ಪರ್ಧೆಯನ್ನು ಮೀರಿ ಬೆಳೆಯುವುದು ಕಷ್ಟಸಾಧ್ಯವೇನೂ ಅಲ್ಲ. ವಿದ್ಯಾರ್ಥಿಗಳ ಅತ್ಯುತ್ತಮ ಕಲಿಕೆಯ ಪ್ರದರ್ಶನದಿಂದ ಅನ್ಯಥಾ ಖಾಸಗಿ ಶಾಲೆಗಳಿಗೆ ಹೋಗಿ ಸೇರುತ್ತಿದ್ದ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕರೆತರಲು ಸಾಧ್ಯವಿದೆ. ಶಾಲೆಗಳು ಯಾವತ್ತೂ ಸಮುದಾಯಗಳ ಜೊತೆ ನಿಕಟವಾಗಿದ್ದು ಕೆಲಸ ಮಾಡಬೇಕು. ಅದರ ಜೊತೆಗೆ ಸಮುದಾಯಗಳು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಿಕ್ಕ ಅವಕಾಶಗಳನ್ನು ಗೌರವಿಸಬೇಕು.

 

ಕೃತಜ್ಞತೆ:

ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೇ ತಮ್ಮ ವೃತ್ತಿಪರ ಜೀವನದ ಅನುಭವಗಳನ್ನು ಮತ್ತು ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡ ರಾಮನ ಗೌಡ ಅವರಿಗೆ ನಮ್ಮ ಕೃತಜ್ಞತೆಗಳು. ಶಾಲಾ ಭೇಟಿಯ ಸಂದರ್ಭದಲ್ಲಿ ಸಂವಾದಕ್ಕೆ ಅವಕಾಶ ಮಾಡಿ ನಮ್ಮೊಂದಿಗೆ ಸಹಕರಿಸಿದ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಅನುರಾಧಾ ಹಾಗು ಶಾಲೆಯ ಪುಟಾಣಿ ಮಕ್ಕಳಿಗೆ ಹೃದಯಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿ ತಮ್ಮ ಅನುಭವ ಮತ್ತು ಚಿಂತನೆಗಳನ್ನು ಹಂಚಿಕೊಂಡ ಸಮುದಾಯದ ಸದಸ್ಯರಿಗೂ ನಮ್ಮ ಹೃದಯಪೂರ್ವಕ ಕೃತಜ್ಞತೆ. ಇಂತಹುದೊಂದು ಶಾಲೆಯನ್ನು ಗುರುತಿಸಿ ಶಿಕ್ಷಕರ ಬಗ್ಗೆ ಸಂಕ್ಷಿಪ್ತ ವಿವರ ನೀಡಿದ್ದಕ್ಕೆ ಮತ್ತು ಕ್ಷೇತ್ರ ಭೇಟಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿದಕ್ಕೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಬೀದರ್ ಜಿಲ್ಲಾ ಘಟಕಕ್ಕೆ ನಮ್ಮ ಧನ್ಯವಾದ ಸಲ್ಲಿಸುತ್ತೇವೆ.

*****

 

ಲೇ: ಶರದ್ ಸುರೆ ಮತ್ತು ಶಿವಕುಮಾರ್ ಸಿ.ಎಂ.

 

17473 ನೊಂದಾಯಿತ ಬಳಕೆದಾರರು
6669 ಸಂಪನ್ಮೂಲಗಳು