ಈ ಅಂಕಣಕ್ಕೆ ಕುಡುಗೆ ನೀಡಿ ಸಶಕ್ತಗೊಳಿಸುವ ಸ್ಥಳಾವಕಾಶಗಳು-ಅಷ್ಟೊಂದು ಮಹತ್ವದ್ದೇ

ಸಶಕ್ತಗೊಳಿಸುವ ಸ್ಥಳಾವಕಾಶಗಳು : ಅಷ್ಟೊಂದು ಮಹತ್ವದ್ದೇ?
ಇಬ್ಬರು ಗೆಳೆಯರ ನಡುವಿನ ಸಂಭಾಷಣೆ
ಶಶಿಧರ ಜಗದೀಶನ್
 
ಬಹಳ ದಿನಗಳ ಅನಂತರ ಇಬ್ಬರು ಗೆಳೆಯರು ಭೇಟಿಯಾಗಿದ್ದರು, ಅದರಲ್ಲಿ ಒಬ್ಬರು ಶಾಲಾ ಶಿಕ್ಷಕರು (ಶಿ).  ಅವರಿಬ್ಬರೂ ಲೋಕಾಭಿರಾಮವಾಗಿ ಮಾತಿಗೆ ತೊಡಗಿದಾಗ ಶಿಕ್ಷಣದ ಬಗ್ಗೆ ಅವರ ಸಂಭಾಷಣೆಯ ವಿಷಯ ಹೊರಳಿತು.
 

ಗೆಳೆಯ: ನಿಮ್ಮ ಶಾಲೆ ನಿಜಕ್ಕೂ ಬಹಳ ಸುಂದರವಾಗಿದೆ ಮತ್ತು ಇಲ್ಲಿನ ಮಕ್ಕಳು ಬಹಳ ಖುಷಿಖುಷಿಯಾಗಿ ಸ್ನೇಹಪರರಾಗಿ ಕಾಣುತ್ತಾರೆ.  ಆದರೆ, ಇಂತಹಾ ಶಾಲೆಗಳನ್ನು ಪ್ರಾರಂಭಿಸಲು ಮತ್ತು ಅದನ್ನು ನಡೆಸಲು ಪ್ರಚಂಡ ಶಕ್ತಿ, ಉತ್ಸಾಹ ಬೇಕಾಗುತ್ತದೆ ಎಂದು ನನಗೆ ಅನಿಸುತ್ತೆ.  ಶಿಕ್ಷಣಕ್ಕೆಂದೇ ವಿಶೇಷವಾದ ವಾತಾವರಣ ನಿಜಕ್ಕೂ ಬೇಕೇ? 

 
ಶಿಕ್ಷಕ: ಇಲ್ಲಿ ಎರಡು ಪ್ರಶ್ನೆಗಳಿವೆ ಎಂದು ನನಗೆ ತೋರುತ್ತಿದೆ.  ಶಿಕ್ಷಣದ ಗುರಿ ಏನು, ಮತ್ತು ಶಾಲಾ ವಾತಾವರಣ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಎಂದು, ಹೌದೇ?
 
 
ಗೆ: ಒಂದು ನಿಮಿಷ ತಾಳಿ, ಶಾಲಾ ವಾತಾವರಣ ಅಷ್ಟೊಂದು ಮುಖ್ಯ ಎಂದು ಅನಿಸೋಲ್ಲ.  ಮಕ್ಕಳು ಎಲ್ಲ ರೀತಿಯ ಸನ್ನಿವೇಶಗಳಲ್ಲೂ ಕಲಿಯಬಲ್ಲರು ಅಂತ ನಮಗೆ ತಿಳಿದಿದೆ.  ಉದಾಹರಣೆಗೆ, ಯುದ್ಧದಿಂದ ನಲುಗಿರುವ ಜಾಗಗಳಲ್ಲಿ, ಕಡುಬಡತನದಲ್ಲಿ, ದ್ವೇಷ ಮತ್ತು ಕೌಟುಂಬಿಕ ಹಿಂಸೆಯ ನಡುವೆ, ಹೀಗೆ, ಈ ಎಲ್ಲಾ ಪರಿಸ್ಥಿತಿಗಳಲ್ಲೂ ಅವರು ಕಲಿಯಬಲ್ಲರು.  ಹೀಗಿರುವಾಗ, ಸಶಕ್ತೀಕರಣ ಸ್ಥಳಗಳು ಎನ್ನುವ ತಲೆಬಿಸಿಯೇಕೆ? ಇದು ಹೇಗೆ ಮುಖ್ಯವಾಗುತ್ತದೆ?
 
 
ಶಿ: ನಿಮ್ಮ ವಿಷಯವನ್ನೇ ಹೇಳಿ. ನಿಮ್ಮ ಮಗು ಅಂತಹಾ ಪ್ರತಿಕೂಲ ವಾತಾವರಣದಲ್ಲಿ ಬೆಳೆಯಲಿ ಎಂದು ಬಯಸುವಿರಾ?
 
 
ಗೆ: ಖಂಡಿತಾ ಇಲ್ಲ ! ರೂಢಿಗತವಾಗಿರುವ ಶಿಕ್ಷಣವನ್ನು ಪಡೆದೂ, ನಾವು ಇಂದು ಚೆನ್ನಾಗಿಯೇ ಇದ್ದೇವೆ ಅಲ್ಲವೇ?
 
ಶಿ: ನಿಮ್ಮ ಬಗ್ಗೆ ನನಗೆ ಗೊತ್ತಿಲ್ಲ – ಆದರೆ ನಾನಂತೂ ಚೆನ್ನಾಗಿಲ್ಲ!
 
 
ಗೆ: ಹಾಗಂದ್ರೆ ಏನರ್ಥ? ನಾವು ಚೆನ್ನಾಗಿಯೇ ಇದ್ದೇವೆ! ನಾವು ಸಮಾಜದಲ್ಲಿ ಯಶಸ್ವೀ ವ್ಯಕ್ತಿಗಳಾಗಿದ್ದೇವೆ, ಸಂಭಾವಿತರೂ ಎನಿಸಿಕೊಂಡಿದ್ದೇವೆ . . . .
 
ಶಿ: ಹೌದು! ನಾವು ಸ್ವಲ್ಪ ಮಟ್ಟಿಗೆ ಯಶಸ್ವೀ ಮತ್ತು ಕ್ರಿಯಾಶೀಲರು ಆಗಿದ್ದೇವೆ – ಆದರೆ ಸಮಾಜದ ವಿಶಾಲಾರ್ಥದಲ್ಲಿ ಮತ್ತು ನಿರ್ದಿಷ್ಟವಾಗಿ ವೈಯಕ್ತಿಕ ಮಟ್ಟದಲ್ಲಿ ನೋಡಿ.  ನಮ್ಮ ಸಮಾಜ ಆರೋಗ್ಯವಾಗಿದೆ ಅಂತಾಗಲೀ, ವೈಯಕ್ತಿಕವಾಗಿ ಜನರು ಬಹಳ ಸಂತೋಷವಾಗಿದ್ದಾರೆ ಎಂದಾಗಲಿ  ನನಗೆ ಅನಿಸ್ತಾ ಇಲ್ಲ.
 
ಗೆ: ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ, ಆದರೆ ಒಬ್ಬ ವ್ಯಕ್ತಿಯಾಗಿ ಇವುಗಳನ್ನು ನಾವು ಹೇಗೆ ಸರಿಪಡಿಸಬಹುದು?   ಅಲ್ಲದೇ, ಇದಕ್ಕೂ ಶಿಕ್ಷಣಕ್ಕೂ ಏನು ಸಂಬಂಧ?                                                                                                                                                                                                                                                                                                                                                                                                                                                                                                                                                           
ಶಿ: ಸಮಾಜವನ್ನು ಸರಿಮಾಡುವ ಮೊದಲು, ಯಾವುದರಿಂದ ಸಮಾಜ ಈ ರೀತಿ ಇದೆ ಎಂದು ನಾವು ನೋಡೋಣವೇ? ಅನಂತರ,  ನಮಗೆ ಶಿಕ್ಷಣ ಮತ್ತು ಸಮಾಜದ ನಡುವಿರುವ ಸಂಬಂಧವನ್ನು ಕಾಣಲು ಸಾಧ್ಯವಾಗಬಹುದು.  ಪ್ರಾಯಶಃ ನಾನು ಈ ಸಂಬಂಧವನ್ನು ನೋಡುತ್ತಿರುವ ವಿಧಾನದಲ್ಲಿ ಕಾಣಬಹುದು
 
 
ಗೆ: ಓಹೋ! ಇದು ಒಬ್ಬ ಸಮಾಜಶಾಸ್ತ್ರಜ್ಞರಿಗೆ, ಅರ್ಥಶಾಸ್ತ್ರಜ್ಞರಿಗೆ ಮತ್ತು ತತ್ವಶಾಸ್ತ್ರಜ್ಞರಿಗೆ ಕೇಳಬೇಕಾದ ಪ್ರಶ್ನೆ.  ನಿಮಗೂ ಮತ್ತು ನನಗಲ್ಲ!  ಆದರೆ ಈ ವಿಷಯವನ್ನು ಕುರಿತು ನಾನು ಆಲೋಚಿಸುವುದೇ ಆದರೆ, ನಮ್ಮ ವ್ಯವಸ್ಥೆ ಬಹಳ ಭ್ರಷ್ಟವಾಗಿದೆ ಎಂದು ಹೇಳಲು ಬಯಸುತ್ತೇನೆ.  ಅತೀ ಶ್ರೀಮಂತರು ಮತ್ತು ರಾಜಕಾರಿಣಿಗಳ ನಡುವೆ ಒಂದು ಹೊಂದಾಣಿಕೆ ಇದೆ.  ಕಳಪೆ ಆಡಳಿತವಿದೆ ಮತ್ತು ನಮಗೆ ಅರ್ಥವಾಗದ, ಅರಿವಿರದ ಅನೇಕ ಲಕ್ಷಾಂತರ ಅಂಶಗಳಿವೆ.  ವ್ಯಕ್ತಿಯನ್ನು ಸಮಾಜದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ನಾನು ಕೇಳಿದ್ದೇನೆ.                                                                                                                                                                 
 
ಶಿ: ಸರಿ, ಇದು ಬಹಳ ಸಂಕೀರ್ಣವಾದ ವಿಷಯ ಅಂತ ನಾನು ಒಪ್ಕೋತೀನಿ ಹಾಗೇ ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ಬಗ್ಗೆ ಮಾತನಾಡಲು ನಿಜವಾಗಲೂ ನನಗೆ ಸಾಮಥ್ರ್ಯವಿಲ್ಲ.  ಆದರೆ ನಾವು ಈ ಮಾನವೀಯತೆಯ ಅಂಶದ ಮೇಲೆ ಗಮನ ಹರಿಸಬಹುದಲ್ಲ? ನಾವು ಯಾಕೆ ಭ್ರಷ್ಟರಾಗಿದ್ದೇವೆ, ಏಕೆ ಶೋಷಣೆ ಮಾಡುವವರು ಮತ್ತು ದಪ್ಪಚರ್ಮದವರು ಆಗಿದ್ದೇವೆ ಅಂತಾ?
 
 
ಗೆ: ಬಹುಶಃ ಇದೂ ಮಾನವನ ಸ್ವಭಾವದ ಒಂದು ಭಾಗವಾಗಿರಬಹುದು.
 
 
ಶಿ:  ನಿಮ್ಮ ಪ್ರಕಾರ ಮಾನವ ಸ್ವಭಾವ ಎಂದರೆ, ಏನು ಅರ್ಥ?
 
 
ಗೆ: ಮನುಷ್ಯರು ಪ್ರಾಣಿವರ್ಗದ ಒಂದು ಭಾಗ, ಇಲ್ಲಿ ಸ್ವಯಂ ರಕ್ಷಣೆ ಮತ್ತು ತನ್ನ ಪೀಳಿಗೆಯ ರಕ್ಷಣೆಗೆ ತಮ್ಮ ತಮ್ಮ ಕ್ಷೇತ್ರಾಧಿಕಾರ ಸ್ಥಾಪನೆಯನ್ನು ನಾವು ಕಾಣಬಹುದು. ಪ್ರೈಮೇಟ್ ವರ್ಗದ ಪ್ರಾಣಿಗಳಲ್ಲೂ ಹಿಂಸೆ, ಪ್ರಾಬಲ್ಯವನ್ನು ನೋಡಬಹದು.  ಹೀಗಾಗಿ ಇವೆಲ್ಲಾ ನಮ್ಮ ಸ್ವಭಾವದ ಒಂದು ಭಾಗವಷ್ಟೇ ....
 
ಶಿ: ಆದರೆ ಮನುಷ್ಯರು ದಯಾಳುಗಳು, ಪರಹಿತ ಚಿಂತಕರು ಮತ್ತು ಸಹಾನುಭೂತಿಯುಳ್ಳವರೂ ಆಗಿರಬಹುದಲ್ಲವೇ! ಈ ಗುಣಗಳು ಪ್ರಾಣಿಗಳಲ್ಲೂ ಇದೆ ಎಂದು ನಾನು ಕೇಳಿದ್ದೇನೆ.  ಏನಾದರಾಗಲಿ, ಮನುಷ್ಯರಿಗೆ ಕಲಿಯುವ ಅತ್ಯದ್ಭುತ ಸಾವiಥ್ರ್ಯವಿದೆ, ಇದನ್ನು ಒಪ್ಪುವಿರಾ? ಈಗ ನಾವು, ಶಿಕ್ಷಣ ಒಬ್ಬ ವ್ಯಕ್ತಿಯ ಮೇಲೆ ಮತ್ತು ಸಮಾಜದ ಮೇಲೆ ತನ್ನ ಪ್ರಭಾವವನ್ನು ಬೀರಬಲ್ಲುದೇ ಎಂದು ನಮ್ಮನ್ನು ಕೇಳಿಕೊಳ್ಳಬೇಕು.
 
 
ಗೆ: ಖಂಡಿತವಾಗಲೂ ಆಗತ್ತೆ! ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಅವರು ಜೀವನೋಪಾಯವನ್ನು ಹೆಚ್ಚಿಸಿಕೊಂಡು ಅದರಿಂದ ಗಳಿಕೆಯನ್ನು ಹೆಚ್ಚಿಸಿಕೊಳ್ಳಲಿ ಎಂದು. ಈ ಅರ್ಥದಲ್ಲಿ ಶಿಕ್ಷಣ ವ್ಯಕ್ತಿಗತವಾಗಿ ಮತ್ತು ಸಮಾಜದ ಮೇಲೆ ಈ ಎರಡರ ಮೇಲೂ ಪ್ರಭಾವವನ್ನು ಬೀರುತ್ತದೆ.
 
 
ಶಿ: ಖಂಡಿತಾ, ಆದರೆ ಶಿಕ್ಷಣದ ಬಗ್ಗೆ ಕೃಷ್ಣಮೂರ್ತಿಯವರ ಕೆಲವು ಅಂತರ್ನೋಟವನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳಬಹುದೇ? ನಾನು ಇತ್ತೀಚೆಗಷ್ಟೇ ಅವರ ಕೆಲವು ಪುಸ್ತಕಗಳನ್ನು ಓದುತ್ತಿದ್ದೆ.
 
‘ಶಾಲೆ’’ ಎನ್ನುವ ಪದ ಸ್ಕೂಲ್ ಎನ್ನುವ ಆಂಗ್ಲ ಪದದ ಕನ್ನಡ ರೂಪ.  ಸ್ಕೂಲ್ ಪದದ ಅರ್ಥ, ವಿರಾಮ ಅಥವಾ ವ್ಯವಧಾನ ಎಂದಾಗುತ್ತದೆ.  ಇಲ್ಲಿ ವ್ಯವಧಾನದಿಂದ ಕಲಿಯುವುದು ಅಥವಾ ಕಲಿಯಲು ವ್ಯವಧಾನವನ್ನು ಹೊಂದುವುದು ಎಂಬ ಅರ್ಥವನ್ನು ಕೊಡುತ್ತದೆ.  ಈ ಸ್ಥಳ, ಭವಿಷ್ಯದ ಪ್ರಜೆಗಳನ್ನು ಸಜ್ಜುಗೊಳಿಸಲು ಇರುವಂತಹದ್ದು, ಯಾಕೆಂದರೆ ಶಾಲೆಗಳು ಇರುವುದೇ ಅದಕ್ಕೆ, ಇಲ್ಲಿ ಮನುಷ್ಯರನ್ನು ಯಾಂತ್ರಿಕ, ತಂತ್ರಜ್ಞಾನದ ಸಾಧನಗಳಾಗಿ, ಕೆಲಸ ಅಥವಾ ಉದ್ಯೋಗಕ್ಕಾಗಿ ತಯಾರುಮಾಡುವುದು ಮಾತ್ರ ಆಗಬಾರದು. ಈ ಸ್ಥಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಕಸನ ಹೊಂದುವುದಕ್ಕಾಗಿ ಇರುವಂತಹದ್ದು.  ಉದ್ಯೋಗ ಅಥವಾ ವ್ಯವಹಾರಕ್ಕೆ ತಯಾರು ಮಾಡುವುದು ಮುಖ್ಯ, ಆದರೆ, ಇಲ್ಲಿ ಯಾರೇ ಆದರೂ, ನಿರ್ಭಯದಿಂದ, ಯಾವುದೇ ಗೊಂದಲಗಳಿಲ್ಲದೇ, ಬಹು ಪ್ರಾಮಾಣಿಕ ಮನುಷ್ಯರಾಗಿ ವಿಕಸನಹೊಂದುವುದು ಪ್ರಮುಖವಾಗುತ್ತದೆ.  ಇಂತಹ ಉತ್ತಮವಾದ ಮುನುಷ್ಯರನ್ನು ತಯಾರು ಮಾಡುವುದು – ಇಲ್ಲಿ ಉತ್ತಮ ಎನ್ನುವ ಪದವನ್ನು ಅದರ ಸೂಕ್ತ ಅರ್ಥದಲ್ಲಿ ಉಪಯೋಗಿಸುತ್ತಿದ್ದೇನೆ, ಬರೀ ಗೌರವನ್ನು ಸೂಚಿಸುವುದಕ್ಕಲ್ಲ.  ಉತ್ತಮ ಎಂದರೆ ಪರಿಪೂರ್ಣ ಮಾನವರಾಗಿ. ಅಂದರೆ, ವಿಭಜನೆ ಇಲ್ಲದೇ, ಭಗ್ನಗೊಳ್ಳದೇ, ಗೊಂದಲವಿಲ್ಲದೇ ಇರುವವರಾಗಿ ಬೆಳೆಯುವುದು ಎಂದರ್ಥ.
 
“ಖಂಡಿತವಾಗಿಯೂ, ಶಾಲೆ ಎನ್ನುವುದು ವ್ಯಕ್ತಿಯೊಬ್ಬ ಜೀವನದ ಸಮಗ್ರತೆಯ ಬಗ್ಗೆ , ಪರಿಪೂರ್ಣತೆಯ ಬಗ್ಗೆ ಕಲಿಯುವ ಸ್ಥಳ.  ಇಲ್ಲಿ ಬೋಧಕರು ಮತ್ತು ಬೋಧನೆಯನ್ನು ಪಡೆವವರು ಹೊರಗಿನ ವಿಶ್ವವನ್ನು, ಜ್ಞಾನದ ಪ್ರಪಂಚವನ್ನು ಪರಿಶೋಧಿಸುವಂತಹದ್ದಾಗಿದೆ.  ಇದಲ್ಲದೇ, ಅವರು ತಮ್ಮ  ಚಿಂತನೆ, ಸ್ವಭಾವಗಳ ಬಗ್ಗೆಯೂ ಶೋಧನೆಯನ್ನು ಮಾಡುವ ಸ್ಥಳ. ಇದರಿಂದಾಗಿ ಅವರು ತಮ್ಮ ಚಿಂತನೆಯು ಹೇಗೆ ದಾರಿ ತಪ್ಪುವುದು, ತಮ್ಮನ್ನು ನಿಯಂತ್ರಣಕ್ಕೆ ಒಳಪಡಿಸುತ್ತಿರುವುದು ಏನು, ಯಾವುದು  ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.  ಈ ನಿಯಂತ್ರಣಕ್ಕೆ ಒಳಪಡಿಸುವುದು ಎಂದರೆ ಅತ್ಯಂತ ಹೆಚ್ಚಿನ ಮತ್ತು ಕ್ರೂರ  ಪ್ರಾಮುಖ್ಯತೆಯನ್ನು ನೀಡುವ ‘ನಾನು’ ಎನ್ನುವುದಕ್ಕಾಗಿದೆ.  ಈ ರೀತಿಯ ನಿಯಂತ್ರಣಕ್ಕೆ ಒಳಪಡುವುದರಿಂದ ಮತ್ತು ಆ ಕ್ಲೇಶದಿಂದ ಮುಕ್ತರಾಗುವುದು ಜಾಗೃತಿ ಮೂಡಿದಾಗ ಮಾತ್ರ.  ಇಂತಹ ಸ್ವಾತಂತ್ರ್ಯ ಅಥವಾ ಮುಕ್ತತೆ ಇರುವಲ್ಲಿ ಮಾತ್ರವೇ ನಿಜವಾದ ಕಲಿಕೆಯು ಸಾಧ್ಯವಾಗುತ್ತದೆ.”
 
ಗೆ:  ಇದು ಅಗಾಧವಾದ ಕಾರ್ಯವಾಗಿ ಮತ್ತು ಸ್ವಲ್ಪ ಬೆದರಿಕೆ ಹುಟ್ಟಿಸುವಂತೆ ಕಾಣುತ್ತದೆ.  ವಾಸ್ತವವಾಗಿ ಶಿಕ್ಷಣ ಈ ರೀತಿಯ ದೊಡ್ಡ ಸವಾಲನ್ನು ಸ್ವೀಕರಿಸಲು ಸಾಧ್ಯವೇ? ಶಿಕ್ಷಣದ ಉದ್ದೇಶದ ಬಗ್ಗೆ ಕೃಷ್ಣಮೂರ್ತಿಯವರ ಚಿಂತನೆಯನ್ನು ಅನುಮೋದಿಸುವಿರಾದರೆ, ಯಾವ ರೀತಿಯ ಪರಿಸರವನ್ನು ಸೃಷ್ಟಿಸಲು ನೀವು ಬಯಸುವಿರಿ?
 
 
ಶಿ: ಇದು ಬೆದರಿಕೆ ಹುಟ್ಟಿಸುವಂತೆ ಕಾಣಬಹುದು, ಆದರೆ ನಾನು ಈ ಸುತ್ತಲಿನ ಪ್ರಪಂಚದ ಸ್ಥಿತಿ ಗತಿಯನ್ನು ನೋಡಿದಾಗ, ಶಿಕ್ಷಣ ನೀಡಲು ನನಗೆ ಇನ್ಯಾವುದೇ ದಾರಿ ಕಾಣಿಸುತ್ತಿಲ್ಲ.  ಇಂತಹಾ ಶಿಕ್ಷಣವು ಏನನ್ನು ಬೇಡುತ್ತದೆ ಎನ್ನುವುದರ ಬಗ್ಗೆ ನಾನು ಮತ್ತು ನನ್ನ ಸಹೋದ್ಯೋಗಿಗಳು ಯೋಚಿಸುವುದು ಹೇಗೆ ಎಂಬುದನ್ನು ಹೇಳುತ್ತೇನೆ.  ಮೊಟ್ಟ ಮೊದಲಿಗೆ, ಬೋಧಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಪರಸ್ಪರ ನಂಬಿಕೆ ಮತ್ತು ಪ್ರೀತಿಯನ್ನು ಆಧರಿಸಿದ್ದಾಗಿರಬೇಕೆ ಹೊರತು ಅಧಿಕಾರ ಮತ್ತು ಭಯವನ್ನಲ್ಲ.  ಮಾನವನ ಮನೋಭೂಮಿಕೆಯನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಪರಿಶೋಧಿಸಬೇಕಾಗಿರುವಾಗ, ಅವರು ಪರಸ್ಪರ ಅಪನಂಬಿಕೆ ಮತ್ತು ಭಯವನ್ನು ಹೊಂದಿದ್ದರೆ, ಇದು ಸಾಧ್ಯವಾಗಲಾರದು.
 
ಗೆ: ನೀವು ಹೇಳುವುದು ಸರಿ, ನಾವು ನಮ್ಮ ಶಿಕ್ಷಕರನ್ನು ಕಂಡರೆ ಯಾವ ರೀತಿ ಹೆದರುತ್ತಿದ್ದೆವು ಎನ್ನುವುದು ನನಗೆ ಇನ್ನೂ ನೆನಪಿದೆ.  ಸ್ನೇಹಪರರಾದ ಮತ್ತು ದಯಾಳುವಾದ ಕೆಲವು ಶಿಕ್ಷಕರನ್ನು ಬಟ್ಟಿರೆ, ನಾವು ಎಂದಿಗೂ ಶಿಕ್ಷಕರೊಂದಿಗೆ ಅನ್ಯೋನ್ಯತೆಯ ಭಾವನೆಯನ್ನು ಹೊಂದಿರಲಿಲ್ಲ. ವಯಸ್ಕರಾಗಿ ಮತ್ತು ಮಗುವಿನ ಹೊಣೆಗಾರರಾಗಿ  ನಾವು ಎಷ್ಟೇ ಅತ್ಯುತ್ತಮ ಸಂಬಂಧಗಳನ್ನು ಹೊಂದಿದ್ದರೂ ಕೆಲವೊಮ್ಮೆ ನೀವು ಮಕ್ಕಳಿಗೆ ಗದರಿಸಿ ಹೇಳ ಬೇಕಾಗಿ ಬರುತ್ತದಲ್ಲವೇ?  ಅವರು ಒಬ್ಬರಿಗೊಬ್ಬರು ಹಾನಿ ಉಂಟುಮಾಡುವುದನ್ನು ಕಂಡಾಗ ನೀವು ಏರಿದ ಧ್ವನಿ ಎತ್ತಿ ಮಾತಾಡಬೇಕಲ್ಲವೇ, ಮತ್ತು ಕೆಲವೊಂದು ಕಟ್ಟುಪಾಡುಗಳನ್ನು ಹಾಕಲು ಪ್ರಯತ್ನಿಸಬೇಕಾಗುತ್ತದಲ್ಲವೇ?  ಅವರು ಎಂದೂ ನಿಮಗೆ ಹೆದರಿಲ್ಲ ಎಂದು ಹೇಳಬೇಡಿ!
 
ಶಿ: ಇದೊಂದು ಒಳ್ಳೆಯ ಅಂಶ, ಮತ್ತು ನಾವು ಭಯದಲ್ಲಿಡುವುದನ್ನು  ಎಲ್ಲಾ ರೀತಿಯಲ್ಲಿ  ಬಿಟ್ಟುಬಿಟ್ಟಿದ್ದೇವೆ ಎಂದು ನಾನು ಹೇಳುತ್ತಿಲ್ಲ.  ಆದರೂ, ನೀವು ಭಯವನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡಾಗ ಅಥವಾ  ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವ್ಯವಹಾರಕ್ಕೆ ಭಯವೇ ಚಲಾವಣೆಯಲ್ಲಿದ್ದಾಗ ಇದೊಂದು ಬೇರೆಯ  ವಿಷಯವಾಗುತ್ತದೆ.  ಭಾರತದಲ್ಲಿನ ಹಲವು ಶಾಲೆಗಳಲ್ಲಿ ಮಕ್ಕಳಿಗಿರುವ ಭಯದ ಬಗ್ಗೆ ಕೆಲವು ಶಿಕ್ಷಕರು ಕೆಲವು ವರ್ಷಗಳ ಹಿಂದೆ ಒಂದು ಸಮೀಕ್ಷೆಯನ್ನು ಮಾಡಿದರು.  ಅದರಲ್ಲಿ ಕೆಲವರ ಪ್ರತಿಕ್ರಿಯೆಗಳು ನನಗೆ ಇನ್ನೂ ನೆನಪಿದೆ. ಅವುಗಳೆಂದರೆ: 
 
 ‘ಹೋಂವರ್ಕ್, ಘಟಕ ಪರೀಕ್ಷೆಗಳು ಮತ್ತು ಅಪಾಯಕಾರಿ ಪ್ರಾಣಿಗಳು,’ ‘ಕತ್ತಲೆ, ಗಣಿತ ಶಿಕ್ಷಕರು ಮತ್ತು ಈಜುಕೊಳದ ಆಳವಾದ ಪ್ರದೇಶಗಳು,’ ‘ಪ್ರಕೃತಿ ವಿಕೋಪಗಳು, ತಂದೆ, ಶಿಕ್ಷಕರು ಮತ್ತು ಘಟಕ ಪರೀಕ್ಷೆಗಳು,’ ದೇವರು, ಹಾವುಗಳು, ಕೆಲವು ಶಿಕ್ಷಕರು.’
 
 
ಗೆ: ಹಮ್ ,,,,, ನನಗೆ ನೀವು ಹೇಳುವುದು ತಿಳಿಯಿತು. ಸಾಂಪ್ರದಾಯಿಕ ಶಿಕ್ಷಣದಲ್ಲಿ ಮಕ್ಕಳನ್ನು ಕಲಿಯುವಂತೆ ಪ್ರೇರೇಪಿಸಲು ಭಯವನ್ನು ಪ್ರಮುಖ ಸಾಧನವನ್ನಾಗಿ ಬಳಸಿಕೊಳ್ಳುವುದು ಕಂಡುಬರುತ್ತದೆ.  ಅಲ್ಲದೇ, ಅದರ ಬಗ್ಗೆ ಯೋಚಿಸಿದಾಗ, ಶಾಲೆಗಳು ಬಹಳಷ್ಟು ಪೈಪೋಟಿ, ಹೋಲಿಕೆ, ಸನ್ಮಾನ ಮತ್ತು ಶಿಕ್ಷೆಯನ್ನು ಉಪಯೋಗಿಸುವುದು ಕಂಡುಬರುತ್ತದೆ.  ಇದು ಕಲಿಕೆಗೆ ಹಾನಿಕಾರಕ ಎಂದು ಹೇಳುವಿರಾ?
 
 
ಶಿ: ಹೌದು! ಇದು ಕಲಿಕೆಯನ್ನು ತೀವ್ರವಾಗಿ ಕುಂಠಿತಗೊಳಿಸುತ್ತದೆ ಹಾಗೂ ಪ್ರಮುಖವಾಗಿ, ದುಷ್ಟ ಸಮಾಜವನ್ನು ಸೃಷ್ಟಿಸುತ್ತದೆ. ಆಸಕ್ತಿದಾಯಕ ವಿಷಯವೆಂದರೆ, ಭಯವು ಶೈಕ್ಷಣಿಕ ಕಲಿಕೆಯನ್ನು ರಾಜಿಮಾಡಿಕೊಳ್ಳುವಂತೆ ಮಾಡುತ್ತದೆ ಮತ್ತು ಪೈಪೋಟಿ, ಸನ್ಮಾನ ಮತ್ತು ಶಿಕ್ಷೆಗಳು ಅಲ್ಪಕಾಲೀನ ಲಾಭಗಳನ್ನು ನೀಡುತ್ತವೆಯಾದರೂ ದೀರ್ಘಾವಧಿಯಲ್ಲಿ ಸಂವೇದನಾರಹಿತ ಮತ್ತು ಅಸುರಕ್ಷಿತ ಮನೋಭಾವವನ್ನು ಹೊಂದಿರುವ ಮಾನವರನ್ನು ಸೃಷ್ಟಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ನಿಸ್ಸಂದಿಗ್ಧವಾಗಿ ತೋರಿಸಿವೆ.
 
 
ಗೆ: ನೀವು ಶಿಕ್ಷಣ ಮತ್ತು ಸಮಾಜದ ನಡುವೆ ಸಂಪರ್ಕವಿದೆ ಎಂದು ಹೇಳುತ್ತಿರುವುದು ನನಗೆ ಈಗ ಅರ್ಥವಾಗುತ್ತಿದೆ.  ಆದರೆ ಇದುವರೆಗೂ ನಾವು ಸಾಂಪ್ರದಾಯಿಕ ಶಿಕ್ಷಣದ ಕೆಟ್ಟ ಪರಿಣಾಮಗಳ ದೃಷ್ಟಿಯಿಂದ ಮಾತ್ರ ನೋಡಲು ಪ್ರಯತ್ನಿಸುತ್ತಿದ್ದೇವೆ ಎನಿಸುತ್ತಿದೆ.  ನೀವು ಅನುಸರಿಸಬೇಕೆಂದಿರುವ ವಿಧಾನದಲ್ಲಿನ ಸುಸ್ಪಷ್ಟ ಫಲಿತಾಂಶಗಳ ಬಗ್ಗೆ ಹೇಳಿ.
 
ಶಿ: ಮೊದಲಿಗೆ ಒಂದು ಹೊಣೆರಾಹಿತ್ಯದ ಹೇಳಿಕೆ.  ಶಿಕ್ಷಣ ಕ್ಷೇತ್ರದಲ್ಲಿ ನೀವು ಹೆಚ್ಚು ತೊಡಗಿಸಿಕೊಂಡಷ್ಟೂ, ಆದಷ್ಟೂ ಕಡಿಮೆ ಸಿದ್ದಾಂತ ವಾಗಿ ಹೇಳುವುದು ಮತ್ತು ಫಲಿತಾಂಶವನ್ನು  ಕುರಿತು ಖಾತರಿ ನೀಡಲು ಸಾಧ್ಯವಿಲ್ಲದಂತೆ ಕಾಣುತ್ತದೆ. ಹೀಗಿದ್ದರೂ ಈ 23 ವರ್ಷಗಳಲ್ಲಿ ಮಕ್ಕಳೊಂದಿಗೆ ಕೆಲಸಮಾಡಿ ನಮಗಿರುವ ಅನುಭವದಿಂದಾಗಿ ಕೆಲವೊಂದು ವಿಷಯಗಳನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ.
 
ಗೆ: ಉದಾಹರಣೆಗೆ?
 
ಶಿ: ಪರೀಕ್ಷೆ ಅಥವಾ ಇನ್ಯಾವುದೇ ವಿಷಯಕ್ಕಾಗಿಯಲ್ಲದೇ ಕಲಿಸುವುದಕ್ಕಾಗಿಯೇ ಬೋಧಿಸುವುದು ಸಾಧ್ಯವಿದೆ.  ವಾಸ್ತವವಾಗಿ, ಮೊದಲ ದಿನದಿಂದಲೇ ವಿದ್ಯಾರ್ಥಿಗಳನ್ನು ಆಲೋಚಿಸಲು, ಪ್ರಶ್ನಿಸಲು ಮತ್ತು ಪರಿಕಲ್ಪನೆಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆಯೋ  ಇಲ್ಲವೋ ಎಂದು ಅರಿಯಲು ಪ್ರೋತ್ಸಾಹಿಸಲಾಗುತ್ತದೆ.  ಅವರಿಗಿರುವ ಗ್ರಹಣಾ ಶಕ್ತಿ ಆಳವಾದದ್ದು ಮತ್ತು ಹೊಸ ವಿಷಯಗಳನ್ನು ಕಲಿಯಲು ಅವರಿಗಿರುವ ಸಾಮರ್ಥ್ಯ ಇದರಿಂದ ವೃದ್ಧಿಸುತ್ತದೆಂದು ನಮಗೆ ತಿಳಿದಿದೆ.  ಹೀಗಾಗಿ ಕಲಿಕೆಯು ಸಾಮಾನ್ಯಕಲಿಕೆಯನ್ನು ಮೀರಿ ಮುಂದುವರೆಯುತ್ತದೆ. ನಮ್ಮ ದಿನ ನಿತ್ಯದ ಒಡನಾಟದಲ್ಲಿಯೂ ವಿದ್ಯಾರ್ಥಿಗಳೊಂದಿಗಿನ ನಮ್ಮ ತೊಡಗಿಸಿಕೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳುವಿಕೆಯನ್ನು ಕೇಂದ್ರವಾಗಿರಿಸಿ ಪ್ರಾರಂಭಿಸಿದ ಕೂಡಲೇ ಅನೇಕ ಸೂಕ್ಷ್ಮವಾದ ಆದರೆ ಪ್ರಮುಖವಾದ ವಿಷಯಗಳು ಘಟಿಸಲು ಪ್ರಾರಂಭಿಸುತ್ತವೆ.  ಒಂದು ಮಗುವು ನಿಯಮವನ್ನು ಮುರಿದಿದ್ದರೂ ನಾವು ಪ್ರತಿಯೊಂದನ್ನು ಅರ್ಥಮಾಡಿಕೊಳ್ಳುವಿಕೆಯ ದೃಷ್ಟಿಕೋನದಿಂದ ನೋಡಿದಾಗ ......
 
ಗೆ: ಹೀಗಿದ್ದರೂ ದಿನ ನಿತ್ಯ ನೀವು ಪ್ರೇರಣೆ ಮತ್ತು ಪ್ರತಿರೋಧದ ಸವಾಲು ಎದುರಿಸುತ್ತಿಲ್ಲವೇ? ಅಲ್ಲದೇ, ನಿಮ್ಮ ಪರಿಸರ ಪ್ರೋತ್ಸಾಹಿಸದಿದ್ದರೂ, ಮಕ್ಕಳು ಹೇಗಿದ್ದರೂ ತಮ್ಮನ್ನು ಇನ್ನೊಬ್ಬರೊಡನೆ ಹೋಲಿಸಿಕೊಳ್ಳುತ್ತಾರೆ. ಈ ರೀತಿಯ ಅತಿ ನಿಯಮಾಧೀನ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವಿರಿ? 
 
ಶಿ: ನೀವು ನೇರ ವಿಷಯಕ್ಕೆ ಬಂದಿರಿ!  ನಾನು ಹೇಳಿದ ಹಾಗೆ, ಶಿಕ್ಷಣದ ಸಣ್ಣ ಗುರಿಗಳಾದ  – ಎಲ್ಲಾ ಸಾಮಾನ್ಯ ಶಾಲೆಗಳಲ್ಲೂ ನಡೆಯುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಗೌರವಯುತವಾಗಿ ನಡೆಸಿಕೊಳ್ಳದೇ ಕೌಶಲ್ಯಗಳು ಮತ್ತು ಪರಿಕಲ್ಪನೆಗಳಲ್ಲಿ ಪರಿಣಿತಿಯನ್ನು ಹೊಂದುವಂತೆ ಮಾಡಲು ನಮಗೆ ಸಾಧ್ಯವಿದೆ.  ಆದರೆ ನಕಾಶೆಯನ್ನು ದೊಡ್ಡದಾಗಿ ಹರಡಿದ ಕೂಡಲೇ ನೀವು ಮಾನವನ ಪ್ರಚಂಡ ನಿಯಮಾಧೀನ ನಡವಳಿಕೆಯ ಸವಾಲನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ನಾವು ನಮ್ಮನ್ನು ಇತರರೊಂದಿಗೆ ಪರಸ್ಪರ ಹೋಲಿಸಿಕೊಳ್ಳುವಾಗ ನಮ್ಮ ಪೂರ್ವಾಗ್ರಹಗಳು, ಭಯ, ಆತಂಕಗಳು, ಕಳವಳಗಳು, ನಿರೀಕ್ಷೆಗಳು ಮತ್ತು ಆಸೆಗಳು, ಸುಖ ಮತ್ತು ದುಃಖ, ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಅಗತ್ಯತೆ ಹಾಗೂ ನಾವು ಚಿಂತಿಸುವ ಮತ್ತು ಕಾರ್ಯವೆಸಗುವ ನಿರ್ದಿಷ್ಟ ವಿಧಾನಗಳನ್ನು ಎದುರಿಸಬೇಕಾಗುತ್ತದೆ.
 
ಗೆ: ಹಾಗಾದರೆ ಈ ಸವಾಲುಗಳನ್ನು ನೀವು ಹೇಗೆ ಎದುರಿಸುವಿರಿ?
 
ಶಿ: ವಿನಮ್ರತೆಯಿಂದ ಎಂದು ಆಶಿಸುತ್ತೇನೆ! ಏನು ಮಾಡಬೇಕೆಂಬ ಆಲೋಚನೆ ಎಂದರೆ, ನಮ್ಮ ಸ್ವಯಂ ನಿಯಮಾಧೀನತೆಯ ಬಗ್ಗೆ, ಗುರುತಿಸುವಿಕೆ ಮತ್ತು ವಿಭಜನೆ, ನಂಬಿಕೆಗಳು ಮತ್ತು ಅಸುರಕ್ಷಿತತೆ, ಹಾಗೂ ಇವು ಬೃಹತ್ ಸಮಾಜದಲ್ಲಿ ಹೇಗೆ ವರ್ತಿಸುತ್ತವೆ ಎಂದು ಅರಿವನ್ನು ಮೂಡಿಸುವಂತಹ ಪರಿಸರವನ್ನು ನಿರ್ಮಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
ಗೆ: ವಿದ್ಯಾರ್ಥಿಗಳಿಗೆ ತಮ್ಮ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇಲ್ಲವೆಂದಾಗ ಏನು ಮಾಡುವಿರಿ?
 
ಶಿ: ನೀವು ಅವರಿಗೆ ಬಲವಂತ ಮಾಡುವುದಾಗಲೀ, ಒತ್ತಡ ಹೇರುವುದಾಗಲೀ ಮಾಡುವಂತಿಲ್ಲ, ಅದಂತು ಖಂಡಿತ!  ಅವರ ಬಗ್ಗೆ ಸ್ವ-ಅರಿವನ್ನು ಮೂಡಿಸಿಕೊಳ್ಳುವಂತೆ ಅವರನ್ನು ಆಹ್ವಾನಿಸಬಹುದು ..... ಮತ್ತು ಹೀಗೆ ಮಾಡಲು, ಪರ್ಯಾಲೋಚನೆ ಮತ್ತು ಪ್ರಶ್ನಿಸಲು  ಅವಕಾಶವಿರುವಂತೆ ಶಾಲೆಯು ವಿನ್ಯಾಸಗೊಂಡಿರಬೇಕು.  ಸಹಕಾರ ಮತ್ತು ಜೊತೆಯಲ್ಲಿ ಕಾರ್ಯ ನಿರ್ವಹಿಸುವುದರ ಬಗ್ಗೆ ಒತ್ತನ್ನು ನೀಡುವ ವಿದ್ಯಾರ್ಥಿಗಳ ಒಂದು ಶಕ್ತಿಶಾಲಿ ಸಮುದಾಯ ನಮ್ಮದು.  ಇದು ನಮ್ಮನ್ನು “ಸಂಬಂಧಗಳ ದರ್ಪಣದಲ್ಲಿ” ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಸಹಜವಾಗಿ ಒತ್ತಾಯಿಸುತ್ತದೆ.  ಇದರೊಂದಿಗೆ, ಪ್ರಪಂಚದ ಎಲ್ಲೆಡೆ ಜನರು ವಿಭಿನ್ನ ಸನ್ನಿವೇಶಗಳಲ್ಲಿ ಜೀವನವನ್ನು ಹೇಗೆ  ಎದುರಿಸುವರು ಎಂದೂ ನಾವು ಕಲಿಯುತ್ತೇವೆ. ಅನಂತರ ಪ್ರಕೃತಿಯೊಂದಿಗೆ ಅತಿ ನಿಕಟವಾಗಿ ಸಮಯವನ್ನು ಕಳೆಯುತ್ತೇವೆ ಮತ್ತು ಒಂದು ದಿನದಲ್ಲಿ ಮೌನವಾಗಿ ಪರ್ಯಾಲೋಚನೆಯಲ್ಲಿ ತೊಡಗುವಂತೆ ಅವಕಾಶಗಳನ್ನೂ ಮಾಡಿಕೊಂಡಿದ್ದೇವೆ.  ವಿದ್ಯಾರ್ಥಿಗಳು ಬಹಳ ಕಷ್ಟ ಎಂದು ಕಂಡುಕೊಂಡಿರುವುದೆಂದರೆ ಪ್ರತಿ ದಿನದಲ್ಲಿನ ಅರ್ಧ ತಾಸಿನ ಮೌನದ ಸಮಯ.  ಇದು ಬಹಳ ಕಷ್ಟ ಎನ್ನಿಸುವ ಅಂಶವೆಂದರೆ ಬಹಳ ಪ್ರಕಟವಾಗಿ ಕಾಣುವುದು! ನಾವು ಯಾವುದೇ ನಿರ್ದಿಷ್ಟ ಕಾರ್ಯದಲ್ಲಿ ಅಥವಾ ಮನೋರಂಜನೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳದೇ ಇದ್ದಾಗ ನಮ್ಮಲ್ಲಿಯೇ ಒಂದು ರೀತಿಯ ತಲ್ಲಣವನ್ನು ನಾವು ಅನುಭವಿಸುತ್ತೇವೆ.
 
ಗೆ: ಆದರೆ ಮಕ್ಕಳು ಈ ಅನುಭವಗಳನ್ನು ಬೇರೆ ರೀತಿಯಲ್ಲಿಯೇ ಅನುಭವಿಸುತ್ತಿರಬಹುದು, ಉದಾಹರಣೆಗೆ, ನಿಮ್ಮ ಮೌನದ ಸಮಯವನ್ನು ಮಕ್ಕಳು ಯೋಜನೆ ಮಾಡಿಕೊಳ್ಳುವುದಕ್ಕಾಗಿ ಅಥವಾ ಹಗಲುಗನಸು ಕಾಣುವುದಕ್ಕಾಗಿ ಎಂದು ಅರ್ಥಮಾಡಿಕೊಂಡಿರಬಹುದು.  ನಿಮ್ಮ ಶಾಲೆಯು ಚೈತನ್ಯವಾಗಿರಿಸಿಕೊಂಡಿರುವ ಪ್ರಶ್ನೆಗಳನ್ನು ಅವರು ನಿಜವಾಗಿಯೂ ಪರಿಶೋಧಿಸುತ್ತಿರುವರೆಂದು ನೀವು ಹೇಗೆ ಖಚಿತಪಡಿಸಿಕೊಳ್ಳುವಿರಿ?
 
 
ಶಿ: ನಿಜವಾಗಲೂ ನಿಮಗೆ ಕಠಿಣ ಪ್ರಶ್ನೆಗಳನ್ನು ಕೇಳುವ ಜಾಣ್ಮೆ ಇದೆ!  ಹೌದು ನಾವು ಪ್ರತಿಯೊಬ್ಬರೂ ನಮ್ಮದೇ ಆದ ರೀತಿಯಲ್ಲಿ ಅರ್ಥೈಕೆಯನ್ನು ಕಾಣುತ್ತೇವೆ.  ನಾವು ವಿದ್ಯಾರ್ಥಿಗಳೊಡನೆ ಮಾತನಾಡುವಾಗ ಕಾಳಜಿ ಮತ್ತು ಉತ್ಸಾಹವನ್ನು ತುಂಬುತ್ತೇವೆ.  ಉದಾಹರಣೆಗೆ ಒಬ್ಬ ಸಾಮಾನ್ಯ ಹಿರಿಯ ವಿದ್ಯಾರ್ಥಿಯು ಒಂದು ವಾರದಲ್ಲಿ ಸುಮಾರು ಮೂರು ತಾಸುಗಳಷ್ಟು ಇಂತಹಾ ಸಂಭಾಷಣೆಯ ಅವಧಿಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ.  ದೊಡ್ಡವರೊಂದಿಗೆ ಅನೌಪಚಾರಿಕ ಮಾತು-ಕತೆಯಲ್ಲೂ ಇವರು ತೊಡಗಿಕೊಳ್ಳಬಹುದು. ಈ ವಿಷಯಗಳು ಶಾಲಾ ನಿಯಮಗಳು, ಅವರ ಪರಸ್ಪರ ಸಂಬಂಧಗಳು ಮತ್ತು ವಿಶ್ವದಲ್ಲಿ ತಮಗಿರುವ ಸ್ಥಾನವನ್ನು ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ.  ಇಲ್ಲಿನ ಪ್ರತಿಯೊಂದು ಕಾರ್ಯದಲ್ಲೂ ನಾವು ಆಶಿಸುವುದು ಏನೆಂದರೆ ಕ್ಷಣದಿಂದ ಕ್ಷಣಕ್ಕೂ ನಮ್ಮಲ್ಲಿ ಮೂಡುವ ಆಲೋಚನೆಗಳು ಮತ್ತು ಭಾವನೆಗಳಿಗೆ ನಿಜವಾಗಿಯೂ ಒಟ್ಟಾಗಿ ನಾವು ಗಮನ ನೀಡಿಬಹುದೇ ಎಂದು. ನನ್ನನ್ನು ನಂಬಿ, ವಾಸ್ತವವಾಗಿಯೂ ಇದು ಆಗ್ರಹಪೂರ್ವಕವಾಗಿ ಗಮನ ಬೇಡುತ್ತಿರುವಂಥಹದ್ದು.  ಇಲ್ಲಿ ನಾವೆಲ್ಲರೂ ನಮ್ಮ ಪ್ರಯಾಣದ ಪ್ರಾರಂಭದಲ್ಲಿರುವವರು.
 
 
ಗೆ: ಹಾಗಾದರೆ, ನಮ್ಮೆಲ್ಲರಲ್ಲಿ ಪ್ರಶ್ನಾತೀತವಾಗಿ ಆನುವಂಶಿಕವಾಗಿ ಬಂದಿರುವ ನಿರ್ಬಂಧಗಳಿಂದ ಮುಕ್ತರಾಗಿ ಸ್ನೇಹಪರ ಮತ್ತು ಸಹಾನುಭೂತಿಯುಳ್ಳ ಮಾನವರಾಗುವಂತೆ ವಿದ್ಯಾರ್ಥಿಗಳನ್ನು ಪೋಷಿಸಿ, ಬೆಳೆಸುವ ಆಶಯ ಹೊಂದಿದ್ದೀರೆಂದು ಹೇಳುತ್ತಿರುವುದಾಗಿ ನಾನು ಊಹಿಸುತ್ತೇನೆ.
 
ಶಶಿಧರ ಅವರು  1994ರಲ್ಲಿ ಸೈರಕಸ್ ವಿಶ್ವವಿದ್ಯಾನಿಲಯದಿಂದ  ಗಣಿತದಲ್ಲಿ  ಪಿಎಚ್‍.ಡಿ. ಪದವಿಯನ್ನು ಪಡೆದಿದ್ದಾರೆ. ಇವರು 27 ವರ್ಷಕ್ಕಿಂತಲೂ ಹೆಚ್ಚು ಸಮಯ ಶಿಕ್ಷಕರಾಗಿ ಇದ್ದವರು.  ಇವರಿಗೆ ಯುವಜನತೆಯೊಂದಿಗೆ ಸಂವಹನ ಮಾಡುವುದು ಮತ್ತು ಕಾರ್ಯ ನಿರ್ವಹಿಸುವುದು ಹೆಚ್ಚಿನ ಆನಂದವನ್ನು ನೀಡುತ್ತದೆ.  ಇವರು ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಲರ್ನಿಂಗ್‍ನಲ್ಲಿ ಫ್ರೌಢ ಶಾಲಾ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.  ಇವರನ್ನು jshashidhar@gmail.com ಇಲ್ಲಿ ಸಂಪರ್ಕಿಸಬಹುದು.
 

ಪ್ರತಿಕ್ರಿಯೆಗಳು

gavisiddappa's picture

ಟೀಕೆ

19170 ನೊಂದಾಯಿತ ಬಳಕೆದಾರರು
7433 ಸಂಪನ್ಮೂಲಗಳು