ಈ ಅಂಕಣಕ್ಕೆ ಕುಡುಗೆ ನೀಡಿ ಪುಟಾಣಿ ಮಕ್ಕಳ ಶಿಕ್ಷಣದ ಮಹತ್ವ - ಲರ್ನಿಂಗ್ ಕರ್ವ್‌ನೊಂದಿಗೆ ಇಂದು ಪ್ರಸಾದ್ ಅವರ ಸಂಭಾಷಣೆ

ಪ್ರಸ್ತುತ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಪುಟಾಣಿ ಮಕ್ಕಳ ಶಿಕ್ಷಣವೊಂದೇ ನಿಯಮ ಕಟ್ಟುಪಾಡುಗಳಿಲ್ಲದ ಅನಿಯಂತ್ರಿತ ವಲಯವಾಗಿದೆ. ಶಾಲಾ ಶಿಕ್ಷಣಕ್ಕೆ ಹಲವಾರು ನಿಯಮಗಳು, ನೀತಿ ರಚನೆಗಳು ಮತ್ತು ಅನೇಕ ಕಾರ್ಯಚೌಕಟ್ಟುಗಳು ಹೀಗೆ ಬಹಳಷ್ಟು ನಿಯಮಗಳಿವೆ.ಈಗ ಸಾರ್ವತ್ರಿಕ ಶಾಲಾ ಶಿಕ್ಷಣಕ್ಕೂ ನಿಯಮ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಕಾರ್ಯಕ್ರಮವಾದ ಅಂಗನವಾಡಿ ಎಂಬ ಶಿಶುವಿಹಾರ ವ್ಯವಸ್ಥೆ ಇದೆ. ಆದರೆ ಖಾಸಗೀ ಪುಟ್ಟ ಮಕ್ಖಳ ಶಾಲೆಗಳಿಗೆ ಯಾವುದೇ ನಿಯಮಗಳಾಗಲೀ ನಿರ್ಬಂಧವಾಗಲಿ ಇಲ್ಲ.  ಹೀಗಾಗಿ ನಾನು ಇಂದು ನನ್ನ ಮನೆಯಲ್ಲಿ ಒಂದು ಶಿಶುವಿಹಾರವನ್ನು ಪ್ರಾರಂಭಿಸು ತ್ತೇನೆ ಎಂದು ಹೊರಟರೆ ನನ್ನನ್ನು ಪ್ರಶ್ನಿಸುವವರು ಯಾರೂ ಇಲ್ಲ. ನಿಮ್ಮ ಪಠ್ಯಕ್ರಮ ಏನು, ಯಾವ ಶಿಕ್ಷಣ ಮಂಡಳಿಯ ನಿಯಮವನ್ನು ಅನುಸರಿಸುತ್ತಿದ್ದೀರಿ, ಯಾವ ವಯಸ್ಸಿನ ಮಕ್ಕಳನ್ನು ದಾಖಲಿಸಿಕೊಳ್ಳುತ್ತೀರಿ, ಹದಿನೆಂಟು ತಿಂಗಳ ಮಕ್ಕಳನ್ನು ತೆಗೆದುಕೊಳ್ಳುವುದು ನ್ಯಾಯಸಮ್ಮತವೇ ಅಥವಾ ದಾಖಲಾತಿಗೆ ೩ ವರ್ಷ ತುಂಬಿರಲೇಬೇಕೆ, ಕನಿಷ್ಠ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಿರುವಿರಾ, ಶಿಕ್ಷಕರು ತರಬೇತಿ ಪಡೆದಿರುವರೇ ಅವರು ಏನು ತರಬೇತಿ ಪಡೆದಿರಬೇಕು -ಎಂಬ ಪ್ರಶ್ನೆಗಳನ್ನು ನನಗೆ ಯಾರೂ ಕೇಳುವುದಿಲ್ಲ. ಹೀಗಾಗಿ, ಇದು ಯಾರು ಏನುಬೇಕಾದರೂ ಮಾಡಿಕೊಳ್ಳ ಬಹುದಾದ ಮುಕ್ತ ವಲಯವಾಗಿದೆ.  ಆದ್ದರಿಂದ ಇಂದು ಪುಟಾಣಿ ಮಕ್ಕಳ ನಿಗಾವಣೆ ಮತ್ತು ಶಿಕ್ಷಣಕ್ಕಾಗಿ ಅನೇಕ ಖಾಸಗೀ ಕೇಂದ್ರಗಳು ನಾಯಿಕೊಡೆಯಂತೆ ಬೆಳೆಯುತ್ತಿವೆ.  ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಡೇ-ಕೇರ್ ಸೆಂಟರ್,ಕ್ರೆಷ್, ಶಿಶುವಿಹಾರಗಳು ವಿಪರೀತವಾಗಿ ಹುಟ್ಟಿಕೊಳ್ಳುತ್ತಿವೆ.  ಇವುಗಳನ್ನು ಪ್ರಾರಂಭಿಸಲು ಮತ್ತು ನಡೆಸಿಕೊಂಡು ಹೋಗಲು ಯಾವುದೇ ನಿಯಮಗಳಿಲ್ಲ. ಇದೇ ಈ ವಿಷಯದಲ್ಲಿ ಅತಿ ದೊಡ್ಡ ಆತಂಕದ ಅಂಶ. ಏಕೆಂದರೆ, ಮಕ್ಕಳ ಸುರಕ್ಷೆ, ಅವರ ಕಲಿಕೆ, ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಇದು ತೀವ್ರವಾದ ಪರಿಣಾಮ ಬೀರುತ್ತದೆ.   ಮಗುವಿನ ಬೆಳವಣಿಗೆಯ ಮಹತ್ವದ ಘಟ್ಟಗಳಲ್ಲಿ ಎಳೆಯ ವಯಸ್ಸು ಒಂದು ಅತ್ಯಂತ ಮಹತ್ವದ ಘಟ್ಟ.

ಪಟ್ಟಣ ಪ್ರದೇಶದಲ್ಲಿ ಈ ಚಿತ್ರ ಕಂಡರೆ, ಸರ್ಕಾರದಿಂದ ನಿಯಂತ್ರಿತವಾದ ಅಂಗನವಾಡಿಗಳಿರುವ ಗ್ರಾಮೀಣ ಪ್ರದೇಶಗಳಲ್ಲಿ, ಬಹಳಷ್ಟು ರಾಜ್ಯಗಳಲ್ಲಿ ಪಠ್ಯಕ್ರಮದ ಮಾರ್ಗದರ್ಶನ ಮತ್ತು ಪೌಷ್ಠಿಕಾಹಾರಕ್ಕೆ ನಿಗದಿಪಡಿಸಿದ ಗುಣಮಟ್ಟಗಳು ಪ್ರಶಂಸಾರ್ಹವಾದರೂ ಕಾರಣಾಂತರಗಳಿಂದ ಅವುಗಳ ಅನುಷ್ಠಾನ ತೀರ ಕಳಪೆಯದ್ದಾಗಿದೆ.  ಹೀಗಾಗಿ,  ನಗರ, ಅರೆ-ನಗರ, ಗ್ರಾಮೀಣ ಪ್ರದೇಶದಲ್ಲಿನ ಅನಿಯಂತ್ರಿತ ಖಾಸಗೀ ತಾಣಗಳು ಒಂದುಕಡೆ  ಮತ್ತು  ಕಳಪೆ ನಿರ್ವಹಣೆಯಿರುವ ನಿಯಂತ್ರಿತ ಸರ್ಕಾರಿ ಅಂಗನವಾಡಿಗಳು ಇನ್ನೊಂದುಕಡೆ ಈ ವಲಯದಲ್ಲಿ ನಮಗೆ ಕಂಡುಬರುತ್ತವೆ. ತಮಿಳುನಾಡು ತನ್ನ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು) ಕಾರ್ಯಕ್ರಮವನ್ನು ಚೆನ್ನಾಗಿ ಕಾರ್ಯರೂಪಕ್ಕೆ ತರುತ್ತಿದೆ.  ಆದರೆ, ಚೆನ್ನಾಗಿ ಎನ್ನುವುದು ಹೇಗೆಂದರೆ, ದೇಶದಲ್ಲಿನ ಉಳಿದ ಪ್ರದೇಶಗಳಲ್ಲಿನ ಈ ಕಾರ್ಯಕ್ರಮದ ನಿರ್ವಹಣೆಯೊಂದಿಗೆ ಹೋಲಿಸಿದಾಗ ಮಾತ್ರ ಚೆನ್ನಾಗಿ ನಡೆಯುತ್ತಿದೆ ಎಂದು ಕಾಣುವಂತಹದ್ದಾಗಿದೆ. ಕೆಲವು ಖಾಸಗೀ ಸಂಸ್ಥೆಗಳು ಅನಿಯಂತ್ರಿತವಾಗಿದ್ದರೂ ಉತ್ತಮವಾದ ಸೇವೆಯನ್ನು ನೀಡುತ್ತಿರಬಹುದೋ ಏನೋ ನಮಗೆ ತಿಳಿದಿಲ್ಲ.  ವಾಸ್ತವವಾಗಿ ಏನಾಗುತ್ತಿದೆ ಎಂದು ಹೇಳುವುದಕ್ಕೆ ಯಾವುದೇ ರೀತಿಯ ಸಂಶೋಧನೆಗಳಾಗಲೀ, ಅಧ್ಯಯನಗಳಾಗಲಿ ಇಲ್ಲವೆಂದೇ ಹೇಳಬಹುದು.  ಪಕ್ಕದ ಮನೆಯವರು ತಮ್ಮ ಮನೆಯಲ್ಲಿರುವ ಒಂದು ಕೋಣೆಯಲ್ಲಿ ಅಥವಾ ಗ್ಯಾರೇಜಿನಲ್ಲಿ ಅಥವಾ ಕೈತೋಟದಲ್ಲಿ ನಡೆಸುತ್ತಿರುವ ಶಿಶುವಿಹಾರಗಳಿಂದ ಸಾಮಾನ್ಯ ಜನರಿಗೆ ನಿಲುಕದಿರುವ ಅತ್ಯುತ್ತಮವಾದ ಸುಸಂಸ್ಕೃತ ಶಿಶುವಿಹಾರಗಳವರೆಗೂ ಒಂದು ಶ್ರೇಣಿಯನ್ನೇ ನಾವು ಈ ವಲಯದಲ್ಲಿ ಕಾಣಬಹುದು.  ಇದೊಂದು ಬೃಹತ್ತಾದ ವಲಯವಾಗಿದ್ದು, ಇದು ಒಂದು ಸಾಮಾನ್ಯ ತತ್ವವನ್ನು ಹೊಂದಿಲ್ಲ.  ಹೀಗಾಗಿ ಇದಕ್ಕೆ ’ಖಾಸಗೀ ಕ್ಷೇತ್ರ’ ಎಂದು ಹೆಸರಿಸಬಹುದಾದ ಏಕರೂಪದ ಅಸ್ತಿತ್ವವಿಲ್ಲ.

ಇನ್ನೊಂದು ಪ್ರಮುಖವಾದ ಆಯಾಮವೆಂದರೆ ವ್ಯವಸ್ಥಿತ ಕಲಿಕಾ ಪರಿಸರದ ಯಾವುದೇ ಪೂರ್ವ ತಿಳುವಳಿಕೆ ಇಲ್ಲದ ಮತ್ತು ಅನುಭವವಿಲ್ಲದ ಮಕ್ಕಳು  ದೊಡ್ಡ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯ ಒಂದನೇ ತರಗತಿಗೆ ದಾಖಲಾಗುತ್ತಿದ್ದಾರೆ. ಮನೆಯಲ್ಲಿ ಅಥವಾ ಸೂಕ್ತವಾಗಿ ಕಾರ್ಯ ನಿರ್ವಹಿಸದಿರುವ ಅಥವಾ ಹಾಗೇ ತೂಗಿಸಿಕೊಂಡು ಹೋಗುತ್ತಿರುವ ಅಂಗನವಾಡಿಗಳಲ್ಲಿ ತಮ್ಮ ಜೀವನದ ಮೊದಲ  ಐದೂವರೆ ವರ್ಷವನ್ನು ಕಳೆದಿರುವ ಅನೇಕಾನೇಕ ಮಕ್ಕಳು ಶಾಲೆಯ ಮೊದಲ ಅನುಭವವನ್ನು ಪಡೆಯಲು ಒಂದನೇ ತರಗತಿಗೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಅನೇಕ ಸನ್ನಿವೇಶಗಳಲ್ಲಿ ಪೋಷಕರಿಬ್ಬರೂ ದುಡಿಯುತ್ತಿರುವ, ಕೌಟುಂಬಿಕ ಬೆಂಬಲದ ವ್ಯವಸ್ಥೆ ಇರುವ ಕೆಲವೊಮ್ಮೆ ಇಲ್ಲದಿರುವ ವ್ಯವಸ್ಥೆಯನ್ನು ಹೊಂದಿರುವ ವಾಸ್ತವಿಕತೆಯನ್ನು ನೋಡಿದಾಗ ಪೌಷ್ಠಿಕಾಹಾರ ಕೊರತೆ , ಆರೋಗ್ಯದ ಮತ್ತು ಸುರಕ್ಷೆಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹೊರಗಿನ ಪ್ರಪಂಚದ ಬಗ್ಗೆ ಅರಿವಿಲ್ಲದೇ ತಮ್ಮ ಬಾಲ್ಯದ ಸುಮಾರು ಆರುವರ್ಷಗಳನ್ನು ಕಳೆದಿರುವ ಬೃಹತ್ ಸಂಖ್ಯೆಯಲ್ಲಿನ ಮಕ್ಕಳು ನಮ್ಮಲ್ಲಿರುವುದನ್ನು ಕಾಣಬಹುದು.  ಎಲ್ಲಾ ಕಡೆಯಲ್ಲೂ ಈ ರೀತಿ ಆಗುತ್ತಿದೆಯೆಂದಲ್ಲ, ಆದರೆ, ನಮ್ಮ ದೇಶದಲ್ಲಿನ ಮಕ್ಕಳ ಮೊದಲ ಆರು ವರ್ಷಗಳಲ್ಲಿ ಏನಾಗುತ್ತಿದೆ ಎನ್ನುವುದರ ಒಂದು ವಿಶಾಲ ಚಿತ್ರ ಇದಾಗಿದೆ.

ನಗರ ಪ್ರದೇಶಕ್ಕೆ ವಲಸೆ ಬರುವವರದ್ದು ಮತ್ತೊಂದು ವಲಯ.  ಇಲ್ಲಿ ಪುಟ್ಟ ಮಕ್ಕಳು ತಮ್ಮ ಕುಟುಂಬದವರೊಡನೆ ಕಟ್ಟಡ ನಿರ್ಮಾಣದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿರುತ್ತಾರೆ.  ಇವರ ಗತಿ ಏನು? ಸಾಮಾನ್ಯವಾಗಿ ಇವರು ಅನಾರೋಗ್ಯಕರ ಮತ್ತು ಅಸುರಕ್ಷಿತ ವಾತಾವರಣದಲ್ಲಿ ವಾಸಿಸುತ್ತಿರುತ್ತಾರೆ. ನಿರ್ಮಾಣ ಯೋಜನೆಯ ಗಾತ್ರಕ್ಕೆ ತಕ್ಕಂತೆ ಕಟ್ಟಡ ನಿರ್ಮಾಣಕಾರರು ಕ್ರೆಷ್ ಅನ್ನ್ನು ನಡೆಸಬೇಕು.  ಆದರೆ ಬಹಳಷ್ಟು ನಿರ್ಮಾಣ ಸಂಸ್ಥೆಗಳು ಇದನ್ನು ಮಾಡುವುದಿಲ್ಲ.  ಹೀಗಾಗಿ ಇದೂ ಒಂದು ಬಿಗಿ ನಿಯಂತ್ರಣವನ್ನು ಹೊಂದಿರದ ವಲಯ.  ಮಾಲಿನ್ಯ, ಅಸುರಕ್ಷೆ, ಸುತ್ತಲೂ ಸಾಮಾಗ್ರಿಗಳಿಂದ ತುಂಬಿದ, ನಿಗಾವಣೆಯ ಕೊರತೆ, ಶುಚಿತ್ವದ ಕೊರತೆ, ಪೌಷ್ಠಿಕಾಂಶದ ಕೊರತೆ ಇರುವ ಪರಿಸರದ ಚಿತ್ರಣವನ್ನು ನೋಡಿದಲ್ಲಿ, ಇಂತಹಾ ಮಕ್ಕಳ ಪರಿಸ್ಥಿತಿ ಬಹಳ ದುಸ್ಥರವಾಗಿರುತ್ತದೆ.  ಇದರ ಜೊತೆಯಲ್ಲಿ, ತಮ್ಮ ಹಳ್ಳಿಗಳಿಂದ ವಲಸೆ ಬಂದಿರುವುದರಿಂದ ಅವರು ತಮ್ಮದೇ ಮನೆಯ ನೆಮ್ಮ,ದಿಯ ಸೌಲಭ್ಯದಿಂದಲೂ ವಂಚಿತರಾಗಿರುತ್ತಾರೆ.  ಇಂತಹವರು ತಮ್ಮ ಗ್ರಾಮ, ಸಮುದಾಯ ಮತ್ತು ಸಂಬಂಧಿಕರಿಂದ ದೂರ ಉಳಿದು ಪ್ರತ್ಯೇಕ ಕುಟುಂಬಗಳಲ್ಲಿ ವಾಸಿಸುತ್ತಿರುತ್ತಾರೆ ಮತ್ತು ಇದರಲ್ಲಿ ಬಹಳಷ್ಟು ಸಮಯ ತಮ್ಮದೇ ಭಾಷೆಗಿಂತ ಭಿನ್ನವಾದ ಭಾಷೆಯನ್ನು ಹೊಂದಿರುವ ಸ್ಥಳಗಳಲ್ಲಿ ವಾಸಿಸುತ್ತಿರುತ್ತಾರೆ.

ಕೌಟುಂಬಿಕ ರಚನೆಯು ಸಂಪೂರ್ಣವಾಗಿ ಬದಲಾಗುತ್ತಿರುವುದರ ಸಂಧರ್ಭದಲ್ಲಿ ಇಂದು ನಾವಿದ್ದೇವೆ ಹಾಗೂ ಇದು ನಗರ ಪ್ರದೇಶ ಮತ್ತು ಅರೆ-ನಗರ ಪ್ರದೇಶಗಳನ್ನು ಹೆಚ್ಚಾಗಿ ಬಾಧಿಸುತ್ತಿದೆ.  ಇಂದು ಅಜ್ಜಿ-ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ, ಮಾವ, ಅತ್ತೆ ಮತ್ತು ಇತರ ಮಕ್ಕಳು ಕೂಡಿ ಬದುಕುವ ಕುಟುಂಬಗಳು ಇಂದು ಇಲ್ಲವೇ ಇಲ್ಲ ಎಂದು ಹೇಳಬಹುದು.  ಹಿಂದೆ, ನೀವು ಮನೆಯಲ್ಲಿರುವ ಹತ್ತು ಮಕ್ಕಳಲ್ಲಿ ಒಬ್ಬರಾಗಿದ್ದಿರಿ, ನಿಮ್ಮ ಅಜ್ಜಿ ನಿತ್ಯ ಕಥೆಗಳನ್ನು ಹೇಳುತ್ತಿದ್ದರು, ನಿಮ್ಮೊಡನೆ ಆಟವಾಡಲು ಸದಾ ಯಾರಾದರೊಬ್ಬರು ಇರುತ್ತಿದ್ದರು. ಇದಲ್ಲದೇ ಎಲ್ಲಾ ರೀತಿಯ ಪದಾರ್ಥಗಳು ತುಂಬಿದ ಅಡುಗೆ ಮನೆ ತೋಟ, ಸಾಕು ಪ್ರಾಣಿಗಳು ಇರುತ್ತಿದ್ದವು ಹಾಗೂ ಇಲ್ಲಿ ನಡೆಯುತ್ತಿದ್ದ ಅನೇಕ ಚಟುವಟಿಕೆಗಳು ಮಕ್ಕಳಿಗೆ ಕಲಿಯಲು ಅನುಕೂಲಕರವಾದ ಪರಿಸರವನ್ನು ಒದಗಿಸುತ್ತಿದ್ದವು.  ಮನೆಯಲ್ಲಿ ಅನೇಕ ವಯಸ್ಕರು ಇರುತ್ತಿದ್ದುದರಿಂದ ಹಾಗೂ ಎಲ್ಲ ರೀತಿಯವರೂ ಇರುತ್ತಿದ್ದುದರಿಂದ ಮಗುವಿಗೆ ಭಾಷೆಯ ಅನುಭವ ಚೆನ್ನಾಗಿ ಆಗುತ್ತಿತ್ತು.  ಕಲಿಯಲು ಮತ್ತು ಬೆಳೆಯಲು ರಚನಾತ್ಮಕವಾಗಿ ಇಲ್ಲದಿದ್ದರೂ,  ಮಗುವಿಗೆ ಎಲ್ಲಾ ರೀತಿಯ ಅವಕಾಶಗಳು ದೊರೆಯುತ್ತಿತ್ತು. ನಿಧಾನವಾಗಿ ಒಂದು ಅಥವಾ ಎರಡು ಮಕ್ಕಳಿರುವ ಕುಟುಂಬಗಳು ಪ್ರಾರಂಭವಾದವು ಮತ್ತು ಇಂತಹಾ ಒಡನಾಟಗಳು ಕಡಿಮೆಯಾಗುತ್ತಾ ಬಂತು. ಹೀಗಾಗಿ ಮಗುವಿಗೆ ಹಂಚಿಕೊಳ್ಳುವುದು, ಕೂಡಿ ಬಾಳುವುದು, ಭಾಷೆಯ ಸೂಕ್ಷ್ಮತೆಯನ್ನು ಕಲಿಯುವುದು, ಕಾರಣವನ್ನು ಕಂಡುಕೊಳ್ಳುವುದು ಹೀಗೆ ಅನೇಕ ಅನುಭವಗಳನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾಗುತ್ತಾ ಬಂತು.  ಉದಾಹರಣೆಗೆ, ಎರಡು ಅಥವಾ ಮೂರು ಮಕ್ಕಳಿರುವ ಮನೆಯಲ್ಲಿ ಪುಟ್ಟ ಮಗುವು ಶೀಘ್ರವಾಗಿ ಕಲಿಯುವುದನ್ನು ನೀವು ಗಮನಿಸಿರಬಹುದು.  ಇದರರ್ಥ ಸಣ್ಣ ಮಗು ಹೆಚ್ಚು ಬುದ್ಧಿವಂತ ಅಥವಾ ದೊಡ್ಡ ಮಗು ಕಡಿಮೆ ಬುದ್ಧಿ ಇರುವವ ಎಂದರ್ಥವಲ್ಲ.  ಇದು ದೊರೆಯುವ ಅವಕಾಶವನ್ನು ಎತ್ತಿ ಹೇಳುತ್ತದೆ - ಸಣ್ಣ ಮಗುವಿನ ಮೆದುಳು ಚುರುಕಾಗಿರುವ ಮತ್ತು ಸ್ಪಂಜಿನಂತೆ ಶೀಘ್ರವಾಗಿ ಹೀರಿಕೊಳ್ಳುವಂತಿರುವ ಘಟ್ಟದಲ್ಲಿ ಅವನಿಗೆ/ಅವಳಿಗೆ ಈಗಾಗಲೇ ಸಾಕಷ್ಟು ಕಲಿತಿರುವ ದೊಡ್ಡ ಮಗುವಿನ ಸಾಂಗತ್ಯದ ಅವಕಾಶ ದೊರೆಯುತ್ತದೆ.

ಮೊದಲ ಆರು ವರ್ಷಗಳು ಮಗುವಿನ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖವಾದ ಘಟ್ಟ ಎಂದು ಸಂಶೋಧನೆಗಳು ಹೇಳುತ್ತವೆ - ವಿಷಯ ಗ್ರಹಣೆಯ ಬೆಳವಣಿಗೆ, ಭಾವನಾತ್ಮಕ ಬೆಳವಣಿಗೆ, ಸಾಮಾನ್ಯ ಆರೋಗ್ಯ, ಕಲಿಕೆಯತ್ತ ಮನೋಧೋರಣೆಯ ಬೆಳವಣಿಗೆ, ಇತರರ ಬಗ್ಗೆ ಮನೋಧೋರಣೆ ಮುಂತಾದವು ಈ ವಯಸ್ಸಿನಲ್ಲಿ ಅಭಿವೃದ್ಧಿಗೊಳ್ಳುತ್ತದೆ.  ಹಸುಗೂಸುಗಳ ವಿಷಯದಲ್ಲಿ ಇದು ಬಹಳ ದೊಡ್ಡದಾಗಿ ಕಾಣಬಹುದು ಆದರೆ ಇದು ಅತ್ಯಂತ ಪ್ರಮುಖವಾದದ್ದು ಯಾಕೆಂದರೆ ಇದು ಬಹಳಷ್ಟು ನಿರೀಕ್ಷೆಗಳನ್ನು ಮತ್ತು ನಯಗೊಳಿಸುವಿಕೆಯನ್ನು ಗಟ್ಟಿಗೊಳಿಸುತ್ತದೆ.  ಮಕ್ಕಳು ತಮ್ಮ ಮೊದಲ ಆರು ವರ್ಷಗಳಲ್ಲಿ ಭಾಷೆಯನ್ನು ಕಲಿಯುವಷ್ಟು ಸುಲಭವಾಗಿ ತಮ್ಮ ಜೀವಿತಾವಧಿಯಲ್ಲಿ ಮುಂದೆಂದೂ ಕಲಿಯಲಾರರು. ಮೆದುಳಿನ ಬೆಳವಣಿಗೆಯನ್ನು ಗಮನಿಸಿದಾಗ, ಜೀವನದ ಮೊದಲ ಹನ್ನೆರಡು ವರ್ಷಗಳಲ್ಲಿ, ಅದರಲ್ಲೂ ವಿಶೇಷವಾಗಿ ಮೊದಲ ಆರು ವರ್ಷಗಳಲ್ಲಿ ನರ ಸಂಪರ್ಕಗಳು ರೂಪುಗೊಳ್ಳುವ ವಿಧಾನ ಆನಂತರದಲ್ಲಿ ಎಂದೂ ಪುನರಾವರ್ತಿಸುವುದಿಲ್ಲ ಎಂದು ಕಂಡುಬರುತ್ತದೆ.  ರೂಪುಗೊಳ್ಳುವ ನರ ಸಂಪರ್ಕಗಳು ವಾಸ್ತವವಾಗಿ ನಿಮ್ಮ ಒಟ್ಟು ಕಲಿಕೆಯದಾಗಿರುತ್ತದೆ.  ವೈಜ್ಞಾನಿಕವಾಗಿ ಹೇಳುವ ವಿಧಾನ ಇದಲ್ಲದಿದ್ದರೂ, ಸರಳವಾಗಿ ಅರ್ಥಮಾಡಿಕೊಳ್ಳವ ಮಾರ್ಗ ಇದಾಗಿದೆ. ಇದು ಮಕ್ಕಳಿಗೆ ದೊರಕುವ ವಿವಿಧ ಅನುಭವಗಳಿಂದಾಗುತ್ತದೆ ಮತ್ತು ಈ ಅನುಭವಗಳು ಮಕ್ಕಳಿಗೆ ಶೀಘ್ರವಾಗಿ ಕಲಿಯಲು ಸಹಾಯ ಮಾಡುತ್ತವೆ.  ಇದರರ್ಥ ತಮ್ಮ ವಯಸ್ಸಿಗೆ ಮುನ್ನವೇ ಕಲಿಯಬೇಕು ಎಂಬುದಲ್ಲ.  ಇದರರ್ಥ ಕೆಲವನ್ನು ನೋಡಿ ಅರ್ಥಮಾಡಿಕೊಳ್ಳುವ, ಪರಿಕಲ್ಪನೆಗಳನ್ನು ಬೆಳಸಿಕೊಳ್ಳುವ, ನಮ್ಮ ಸುತ್ತಲಿನ ಚಲನಶೀಲತೆಯನ್ನು ಅರ್ಥೈಸಿಕೊಳ್ಳುವ, ಸಂಪರ್ಕಗಳನ್ನು ಕಂಡುಕೊಳ್ಳುವ, ಸಂಬಂಧಗಳನ್ನು ಕಾಣುವ ಸಾಮರ್ಥ್ಯವನ್ನು ಬೆಳಸಿಕೊಳ್ಳುವುದರ ಬಗ್ಗೆ ಹೇಳುತ್ತಿದ್ದೇವೆ.  ಇವೆಲ್ಲವೂ ಸಣ್ಣ ವಯಸ್ಸಿನಲ್ಲೇ ಪ್ರಾರಂಭವಾಗುತ್ತದೆ.  ಭಾಷೆಯ ಪಾತ್ರ ಇದರಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ.  ಏಕೆಂದರೆ ಜ್ಞಾನ ಮತ್ತು ಭಾಷೆ ಇವೆರಡೂ ಅತ್ಯಂತ ನಿಕಟ ಸಂಪರ್ಕವನ್ನು ಹೊಂದಿವೆ.  ನಾವು ನಮ್ಮ ಮತ್ತು ಇತರರ ವಿಶ್ವವನ್ನು ಅರ್ಥೈಸಿಕೊಳ್ಳುವುದು ಭಾಷೆಯ ಮುಖಾಂತರವೇ ಆಗಿದೆ.  ಹೀಗಾಗಿ, ಮಕ್ಕಳು ಸಣ್ಣವರಿರುವಾಗಲೇ ಅವರೊಂದಿಗೆ ಹೆಚ್ಚು  ಮಾತನಾಡುವುದು, ಅವರಿಗೆ ವಿವರಿಸುವುದು, ಅವರೊಂದಿಗೆ ಚರ್ಚಿಸುವುದು ಅವರ ಭಾಷಾ ಬೆಳವಣಿಗೆಗೆ ಅದ್ಭುತವಾದ ನೆರವನ್ನು ನೀಡುತ್ತದೆ. ಮಕ್ಕಳು ಮಾತನಾಡಲು ಪ್ರಾರಂಭಿಸಿಲ್ಲದಿರಬಹುದು ಮತ್ತು ಮಾತನಾಡಲು ಇಂತಹದ್ದೇ ಭಾಷೆಯ ಅರಿವಿಲ್ಲದಿರಬಹುದು.  ಯಾರೇ ಆದರೂ ಆಲೋಚಿಸುವಾಗ ಮೊದಲು ಬಳಕೆಯಾಗುವುದು ಭಾಷೆ, ಮತ್ತು ಮಕ್ಕಳು ನಿರಂತರವಾಗಿ ಆಲೋಚನೆಯಲ್ಲಿ ತೊಡಗಿಕೊಂಡಿರುತ್ತಾರೆ.  ಮಾತನಾಡುವುದು, ಓದುವುದು ಮತ್ತು ಬರವಣಿಗೆ ಅನಂತರ ಬರುತ್ತದೆ.

ಯಾವ ಮನೆಯಲ್ಲಿ ಮುದ್ರಿತ/ಬರವಣಿಗೆಯ ಪದಗಳಿಗೆ ಹೆಚ್ಚು ಮೌಲ್ಯವನ್ನು ನೀಡುವರೋ ಅಂತಹ ಮನೆಯಲ್ಲಿ ಒಂದು ಮಗುವು ತನ್ನ ತಾಯಿ, ತಂದೆ, ಅಜ್ಜಿ, ಒಡಹುಟ್ಟಿದವರೊಡನೆ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ, ಕಥೆಗಳನ್ನು ಕೇಳುತ್ತಾ ಬರೆದಿರುವ/ಮುದ್ರಿತ ಪದಗಳು ಮತ್ತು ಕಥೆಯ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಮುದ್ರಿತ/ಬರವಣಿಗೆಯ ಪದಗಳಲ್ಲಿ ವಿಶ್ವದಲ್ಲಿನ ಅದ್ಭುತಗಳನ್ನು ಅರ್ಥಮಾಡಿಕೊಳ್ಳುವಲ್ಲಿ  ಪ್ರತಿ ನಿತ್ಯ ಕೆಲವೊಂದು ಗಂಟೆಗಳಾದರೂ ವ್ಯಯಿಸುತ್ತದೋ ಅಂತಹಾ ಮಗುವು ತನ್ನ ಐದು ಅಥವಾ ಆರನೇ ವಯಸ್ಸಿಗೆ ಬರುವಲ್ಲಿ ಅವಳಲ್ಲಿ/ಅವನಲ್ಲಿ ಆಗಿರುವ ಭಾಷಾ ಬೆಳವಣಿಗೆಯು ಅವಳಿಗೆ/ಅವನಿಗೆ ಮುಂದೆ ಶಾಲೆಯಲ್ಲಿ ಕಲಿಯಬೇಕಾಗಿರುವ ಪರಿಕಲ್ಪನೆಗಳನ್ನು ಸುಲಭವಾಗಿ ಗ್ರಹಿಸಿ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ.  ಏಕೆಂದರೆ ಈಗಾಗಲೇ ಆ ಮಗುವಿಗೆ ಸರಿಯಾದ ತಳಪಾಯ ಸಿಕ್ಕಿರುತ್ತದೆ.  ಎರಡನೆಯದಾಗಿ ಆ ಮಗುವಿಗೆ ಕೆಲಿಕೆಯ ಬಗ್ಗೆ ಒಲವು ಮೂಡಿರುತ್ತದೆ.  ಏಕೆಂದರೆ ಕಲಿಕೆಯು ಒಂದು ಧನಾತ್ಮಕ ಅನುಭವಾಗಿರತ್ತದೆ ಮತ್ತು ಒಳ್ಳೆಯ ಭಾವನೆಗಳು, ಸಂತೋಷಮಯ ಸನ್ನಿವೇಶಗಳು ಏನನ್ನಾದರೂ ಮಾಡುವ ಉತ್ಸಾಹ ಈ ಎಲ್ಲಾ ಧನಾತ್ಮಕ ಅನುಭವಗಳು ಅರ್ಥ ಮಾಡಿಕೊಳ್ಳುವ ಒಂದು ಸಂಪರ್ಕಜಾಲವನ್ನು ಸೃಷ್ಟಿಸಿ ಮೆದುಳಿನಲ್ಲಿ ಹುದುಗಿಸಿ ಬಿಟ್ಟಿರುತ್ತವೆ. ಈಗ ನಾವು ಇನ್ನೊಂದು ಸನ್ನಿವೇಶವನ್ನು ನೋಡೋಣ - ಯಾವ ಮನೆಯಲ್ಲಿ ಇಂತಹಾ ಸಂಪನ್ಮೂಲಗಳ ಬಡತನವಿರುತ್ತದೆ, ಈ ಮನೆಗಳು ಆರ್ಥಿಕವಾಗಿ ಶ್ರೀಮಂತ ಅಥವಾ ಬಡತನ ಹೊಂದಿವೆ ಎನ್ನುವುದು ಇಲ್ಲಿ ಮುಖ್ಯವಲ್ಲ, ಈ ಸಂಪನ್ಮೂಲಗಳಿಗೆ ಆರ್ಥಿಕತೆಯ ಪರಿಸ್ಥಿತಿ ಅಂತಹಾ ಪ್ರಮುಖವಾದುದಲ್ಲ.  ಆರ್ಥಿಕ ಪರಿಸ್ಥಿತಿಯು ಸಂಪನ್ಮೂಲಗಳ ಲಭ್ಯತೆಗೆ ನೆರವು ನೀಡುತ್ತವೆ, ಮತ್ತು ಸಾಮಾಜಿಕ-ಆರ್ಥಿಕ ತೊಂದರೆಯ ಹಿನ್ನೆಲೆಯಿಂದ ಬಂದಿರುವ ಮಕ್ಕಳು ಹೆಚ್ಚಿನ ಸಂಘರ್ಷಕ್ಕೆ ಒಳಗಾಗುತ್ತಾರೆ.  ಕೆಲವೊಂದು ಮನೆಗಳಲ್ಲಿ ಸಂಪನ್ಮೂಲಗಳ ಲಭ್ಯತೆ ಇರುತ್ತದೆ ಆದರೆ ಕಲಿಕೆಯ ಸಂಸ್ಕೃತಿ, ಓದುವ ಒಲವು, ಪುಸ್ತಕಗಳ ಲಭ್ಯತೆ ಹಾಗೂ ಓದುವ ಮತ್ತು ಬರೆಯುವುದರಲ್ಲಿನ ಪ್ರಚೋದನೆ ಮತ್ತು ಆನಂದದ ಕೊರತೆ ಇರುತ್ತದೆ.  ಹೀಗಾಗಿ ಒಂದು ಮಗು ತನ್ನ ಆರನೇ ವಯಸ್ಸಿನಲ್ಲಿ ಈ ರೀತಿಯ ಒಳ್ಳೆಯ ಅನುಭವಗಳಿಲ್ಲದೇ ಒಂದನೇ ತರಗತಿಗೆ ಸೇರಿದಾಗ, ಸುಲಭವಾಗಿ ಗ್ರಹಿಸಲು, ಸಂಪರ್ಕಗಳನ್ನು ಏರ್ಪಡಿಸಿಕೊಳ್ಳಲು, ವಿವಿಧ ಸಂಬಂಧಗಳನ್ನು ಕಾಣಲು ಮತ್ತು ಅರ್ಥ ಮಾಡಿಕೊಳ್ಳಲು  ಅನೇಕ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.  ಇಂತಹಾ ಮಗುವು ಕುಂಠಿತ ಬೆಳವಣಿಗೆಯೊಡನೆ ಬಂದಿದೆ ಎಂಬರ್ಥವನ್ನು ನೀಡುತ್ತದೆ.

ವಾಸ್ತವವಾಗಿ ಶಿಶುವಿಹಾರಗಳ ಉದ್ದೇಶ ಮುಟ್ಟಿ ತಟ್ಟಿ ಪರಿಶೀಲಿಸಲು, ಅರಿವಿನ ಪರಿಶೋಧನೆ, ಭಾವನಾತ್ಮಕ ಬೆಸುಗೆ, ಇತರರೊಡನೆ ಬೆರೆತು ಆಟವಾಡುವುದು, ಮತ್ತೊಬ್ಬರ ಬಗ್ಗೆ ಆಲೋಚಿಸುವುದನ್ನು ಕಲಿಯುವುದು, ಬಣ್ಣಗಳ ಬಗ್ಗೆ ಅರಿಯುವುದು, ಓದುವ ಆನಂದ ಇವುಗಳನ್ನು ಪ್ರೋತ್ಸಾಹಿಸುವುದಾಗಿದೆ.  ಶಿಶುವಿಹಾರದಲ್ಲಿ ಆನಂದ ಮತ್ತು ಉತ್ತಮ ಅನುಭವಗಳನ್ನು ನೀಡುವ ಅನೇಕ ಚಟುವಟಿಕೆಗಳನ್ನು ಪರಿಚಯಿಸಲಾಗುತ್ತದೆ.  ಇವು ಶಾಶ್ವತವಾದ ಬೆಸುಗೆಯನ್ನು ಹಾಕುತ್ತವೆ.  ಇಂತಹಾ ಚಟುವಟಿಕೆಗಳನ್ನು ಮಗು, ಮಗುವಾಗಿರುವಂತೆಯೇ, ಅವನು/ಅವಳು ಅವರಿರುವಂತೆಯೇ ಒಪ್ಪಿಕೊಳ್ಳುವ ವಿಧಾನದಲ್ಲಿ ಮತ್ತು ಭಾವನಾತ್ಮಕ ಸುರಕ್ಷೆಯ ಅನುಭವವನ್ನು ಹೊಂದುವ ವಾತಾವರಣದಲ್ಲಿ, ಮಕ್ಕಳನ್ನು ಪ್ರೋತ್ಸಾಹಿಸುವ, ಪ್ರಶಂಸಿಸುವ, ಪ್ರೀತಿಸುವ, ಕಾಳಜಿ ತೋರುವ, ಅವರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವ ಪರಿಸರದಲ್ಲಿ ನಡೆಸಿದ್ದೇ ಆದಲ್ಲಿ, ಅವರ ಸಂಪೂರ್ಣ ಅನುಭವವು ಸದ್ಭಾವನೆಯು ಮಗುವಿನ ಮನದಲ್ಲಿ ರೂಪುಗೊಳ್ಳುವಂತೆ ಮಾಡುತ್ತದೆ ಮತ್ತು ಅದು ಶಾಶ್ವತವಾಗಿ ಉಳಿಯುವಂತೆಯೂ ಮಾಡುತ್ತದೆ.  ಇದಕ್ಕೆ ತದ್ವಿರುದ್ಧವಾಗಿಯೂ ಆಗುವ ಸಾಧ್ಯತೆಗಳು ಇವೆ. ಎಳೆಯ ವಯಸ್ಸಿನಲ್ಲಿಯೇ ಅತ್ಯಂತ ಕಷ್ಟವನ್ನು ಅನುಭವಿಸುವ ಮಕ್ಕಳು ಅಂದರೆ ದಾರಿದ್ರ್ಯದ ಅನುಭವ, ಎಲ್ಲ ರೀತಿಯ ಹಿಂಸೆಗಳ ಅನುಭವ, ಹಿರಿಯರೊಂದಿಗಿನ ಅವರ ಒಡನಾಟದಲ್ಲಿ ಅಧಿಕಾರದ ಬಗ್ಗೆ ಭಯವನ್ನು ಹುಟ್ಟಿಸುವಂತಹಾ ಅನುಭವಗಳು, ಅವರನ್ನು ಹಿರಿಯರೆಂದರೆ, ಅಧಿಕಾರದಲ್ಲಿರುವವರ ಬಗ್ಗೆ, ನಿಯಂತ್ರಣವನ್ನು ಹೊಂದಿರುವವರ ಬಗ್ಗೆ ಹೆದರಿಕೆಯನ್ನು ಬೆಳಸಿಕೊಳ್ಳುವಂತೆ ಮಾಡುತ್ತದೆ ಮತ್ತು ಈ ರೀತಿಯ ಸಂದೇಶಗಳನ್ನು ಅವರು ಶಾಶ್ವತವಾಗಿ ತಮ್ಮಲ್ಲಿ ಉಳಿಸಿಕೊಳ್ಳುವಂತೆ ಮಾಡುತ್ತವೆ.
ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಕಲಿಕಾ ಪ್ರಚೋದನೆಯ ಅನುಭವಗಳು ಸಿಗಲೇ ಬೇಕೆಂದು ಹೇಳಿದರಷ್ಟೇ ಸಾಲದು; ಅದು ವಾಸ್ತವವಾಗಿ ಯಾವ ರೀತಿಯ ಅನುಭವಗಳನ್ನು ಒದಗಿಸುತ್ತೇವೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.  ಹೀಗಾಗಿ, ಮಕ್ಕಳನ್ನು ಎಳೆಯ ವಯಸ್ಸಿನಲ್ಲಿಯೇ ಯಾವುದೋ ಒಂದು ಕೆಟ್ಟ ಶಿಶುವಿಹಾರಕ್ಕೆ ಕಳುಹಿಸುವುದರ ಬದಲು ಉತ್ತಮವಾದ ಮತ್ತು ಸಂತೋಷ ತುಂಬಿದ ಮನೆಯ ಪರಿಸರದಲ್ಲಿಯೇ ಉಳಿಸಿಕೊಳ್ಳುವುದು ಒಳ್ಳೆಯದು.  ಮಗುವಿನೊಂದಿಗೆ ನಿಖರವಾಗಿ ಏನನ್ನು ಮಾಡಬೇಕು ಎಂದು ತಿಳಿದಿಲ್ಲದಿರುವ ತಂದೆ ತಾಯಿಗಳು ಅಜ್ಜ-ಅಜ್ಜಿಯರೊಡನೆ ಇರುವುದು ರಚನಾತ್ಮಕ ಮತ್ತು ಕಲಿಕೆ ಇರುವ ಶಿಶುವಿಹಾರಗಳಿಗೆ ಕಳುಹಿಸುವುದಕ್ಕಿಂತಾ ಸುರಕ್ಷಿತವಾಗಿರುತ್ತದೆ. ಏಕೆಂದರೆ ಅಲ್ಲಿ ಅವರನ್ನು ವಯಸ್ಸಿಗೆ ಮೀರಿದ ಕಲಿಕೆಯಲ್ಲಿ ತೊಡಗುವಂತೆ ಮಾಡಲಾಗುತ್ತದೆ ಅಥವಾ ಭಯ ಮತ್ತು ಬಲವಂತದಿಂದ ಕಲಿಯುವಂತೆ ಮಾಡಲಾಗುತ್ತದೆ.  ಶಿಶುವಿಹಾರದ ಸಂಪೂರ್ಣ ಪರಿಕಲ್ಪನೆ ಮಗುವಿಗೆ ಎಳೆಯ ವಯಸ್ಸಿನಲ್ಲಿ ಆನಂದದ ಅನುಭವವನ್ನು ಒದಗಿಸುವುದು ಮತ್ತು ಉತ್ಸಾಹವನ್ನು ಸೃಷ್ಟಿಸುವುದಾಗಿದೆ. ಮಕ್ಕಳು ತಮ್ಮ ಎಳೆ ವಯಸ್ಸಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ, ಕುತೂಹಲವನ್ನು ಹೊಂದಿರುತ್ತಾರೆ ಹಾಗೂ ಅನೇಕ ವಿಷಯಗಳಿಂದ ಸಾಮಾನ್ಯ ಎಂದು ಹಿರಿಯರು ಪರಿಗಣಿಸುವಂತಹಾ  ವಿಷಯಗಳಿಂದಲೂ ಉತ್ಸಾಹಿತರಾಗಿರುತ್ತಾರೆ.  ಇವರು ಮಕ್ಕಳೂ ತಮ್ಮದೇ ಪ್ರಪಂಚವನ್ನು ಹೊಂದಿದ್ದು ಉತ್ಸಾಹ ಮತ್ತು ಆಸಕ್ತಿಯನ್ನು ತುಂಬಿಕೊಂಡಿರುತ್ತಾರೆ.  ಇದೇ ಎಲ್ಲರನ್ನೂ ಜೀವಂತಿಕೆಯಿಂದ ಇರುವಂತೆ ಮಾಡುವುದು.  ಭಾಷೆಯ ವಿಷಯವನ್ನೇ ತೆಗೆದುಕೊಳ್ಳಿ ಮೂಲ ಪರಿಕಲ್ಪನೆ ಎಂದರೆ ಪ್ರತಿಯೊಂದಕ್ಕೂ ಒಂದು ಹೆಸರಿದೆ ನೀವು ಒಂದನ್ನು ಒಂದು ಹೆಸರಿನಿಂದ ಮತ್ತು ಮತ್ತೊಂದನ್ನು ಇನ್ನೊಂದು ಹೆಸರಿನಿಂದ ಗುರುತಿಸು , ವ್ಯವಸ್ಥೆಯೇ ಭಾಷೆ. ಬಣ್ಣಗಳ ಪರಿಕಲ್ಪನೆ, ಬಣ್ಣಗಳಲ್ಲಿಯ ವಿಭಿನ್ನ ವರ್ಣಗಳು ಹೀಗೆ ವಿಶ್ವವು ಉತ್ಸಾಹ ಮತ್ತು ಕೌತುಕದಿಂದ ಕೂಡಿದೆ,  ಅದರಲ್ಲೂ ಪ್ರಪಂಚವನ್ನು ಹೊಸದಾಗಿ ಅರಿಯಲು ಪ್ರಾರಂಭಿಸಿದವರಿಗೆ ಇದು ಮತ್ತಷ್ಟು ಉತ್ಸಾಹವನ್ನು ತುಂಬುತ್ತದೆ.  ಹೀಗಾಗಿ ಶಿಶುವಿಹಾರದ ಆಲೋಚನೆಯು ನಾವು ಮಕ್ಕಳಿಗೆ ಅರಿವನ್ನು ಪ್ರಚೋದಿಸುವ ಮತ್ತು ಭಾವನಾತ್ಮಕವಾಗಿ ಸುರಕ್ಷಿತವಾದ ಅನುಭವಗಳನ್ನು ಒದಗಿಸುವುದಾಗಿದೆ.  ಇದು ಸಾಧ್ಯವಾದಲ್ಲಿ, ಮಗುವಿನಲ್ಲಿ ಕಲಿಕೆಯ ಬಗ್ಗೆ ಉತ್ಸಾಹದ ಮನೋಧೋರಣೆಯನ್ನು ಬೆಳಸಿಕೊಳ್ಳುವಂತೆ ಮಾಡಿ ಶಾಲೆಯಲ್ಲಿ ಅವನು/ಅವಳು ಸುಲಭವಾಗಿ ಬೆರೆಯುವಂತೆ ಮಾಡುವುದು ಸಾಧ್ಯವಾಗುತ್ತದೆ.

ಪೌಷ್ಠಿಕಾಹಾರ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.  ಆದರೆ ನಮ್ಮ ದೇಶದಲ್ಲಿ ಇದು ದೊಡ್ಡ ವಿಷಯ, ಏಕೆಂದರೆ ಒಂದನೇ ತರಗತಿಗೆ ದಾಖಲಾಗುವ ಆರು ವರ್ಷದ ಅನೇಕ ಮಕ್ಕಳಲ್ಲಿ ಪೌಷ್ಠಿಕತೆಯ ಅತ್ಯಂತ ಪ್ರಮುಖ ಘಟಕಗಳ ಕೊರತೆ ಇರುತ್ತದೆ (ವಿಟಮಿನ್ ಬಿ ಕಾಂಪ್ಲೆಕ್ಸ್, ಖನಿಜಗಳು ಮುಂತಾಗಿ) ಅನೇಕರಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ರಕ್ತಹೀನತೆ ಇರುತ್ತದೆ.  ಪ್ರಮುಖವಾದ ಎಲ್ಲಾ ಪೋಷಕಾಂಶಗಳು ವಿಷಯಗ್ರಹಣಾ ಸಾಮರ್ಥ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಪೌಷ್ಠಿಕಾಂಶದ ಕೊರತೆ ಮತ್ತು ವಿಷಯಗ್ರಹಣಾ ಸಾಮರ್ಥ್ಯದ ನಡುವೆ ಪ್ರಬಲವಾದ ಸಂಬಂಧವಿದೆ.  

ಹೀಗಾಗಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳು ಈಗಾಗಲೇ ಮೂರು ಹೆಜ್ಜೆ ಹಿಂದಿರುತ್ತಾರೆ, ಆದ್ದರಿಂದಲೇ ಅಂಗನವಾಡಿಗಳಲ್ಲಿ ಪೌಷ್ಠಿಕಾಂಶದ ವಿಷಯ ಬಹಳ ದೊಡ್ಡ ವಿಷಯವಾಗಿದ್ದು ನಮ್ಮ ದೇಶದಲ್ಲಿ ಖಂಡಿತವಾಗಿಯೂ ಇದನ್ನು ಅವಗಣನೆ ಮಾಡಲು ಸಾಧ್ಯವಿಲ್ಲ.  ಮಧ್ಯಾಹ್ನದ ಬಿಸಿಯೂಟಕ್ಕೆ ಇದೇ ಕಾರಣ.  ಮೊದಲನೆಯದಾಗಿ, ಇದು ಹಾಜರಾತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿತ್ತು, ಆದರೆ ಆಹಾರ ಮತ್ತು ಮೆದುಳಿನ ಕಾರ್ಯಕ್ಷಮತೆ ಹಾಗೂ ಕಲಿಕೆಯ ನಡುವೆ ನೇರವಾದ ಸಂಬಂಧವಿದೆ.  ಸ್ಕ್ಯಾಂಡಿನೇವಿಯನ್ ದೇಶಗಳನ್ನು ನೀವು ನೋಡಿದಾಗ, ಉದಾಹರಣೆಗೆ ಫಿನ್‌ಲ್ಯಾಂಡ್, ವಿಶ್ವದಲ್ಲಿಯೇ ಕೆಲವೊಂದು ಶ್ರೀಮಂತ ರಾಷ್ಟ್ರಗಳು ಅಲ್ಲಿವೆ, ಆದರೆ ಇಲ್ಲಿನ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನ ಕಾರ್ಯಕ್ರಮವಿದೆ.  ಇದು ಮಕ್ಕಳಿಗೆ ತಮ್ಮ ಭೋಜನವನ್ನು ತಾವೇ ತರುವ ಶಕ್ತಿ ಇಲ್ಲವೆಂದು ಜಾರಿಗೊಳಿಸಿರುವುದಲ್ಲ ಅಥವಾ ಪೌಷ್ಠಿಕ ಆಹಾರವನ್ನು ಒದಗಿಸಲು ದುಸ್ತರವೆನಿಸುವ ಕುಟುಂಬದಿಂದ ಬರುತ್ತಾರೆ ಎಂದಲ್ಲ, ಆದರೆ ಇದನ್ನು ಆ ದೇಶದವರು ಶಿಕ್ಷಣದ ಅತ್ಯಂತ ಮೂಲಭೂತ ಮತ್ತು ಅತ್ಯಾವಶ್ಯಕ ಭಾಗವನ್ನಾಗಿ ಕಾಣುತ್ತಾರೆ.  ಬಡತನ ಅಥವಾ ಸಿರಿವಂತಿಕೆ ಇದಕ್ಕೆ ಸಂಬಂಧ ಪಟ್ಟಿದ್ದಲ್ಲ, ಆದರೆ ಪೌಷ್ಠಿಕತೆ ಮತ್ತು ಕಲಿಕೆ ಒಂದರೊಡನೆ ಇನ್ನೊಂದು ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದೆ ಎನ್ನುವ ಅಂಶಕ್ಕೆ ಸಂಬಂಧಿಸಿದ್ದಾಗಿದೆ.

ಪೌಷ್ಠಿಕಾಹಾರವು ನಿಮ್ಮ ದೇಹಕ್ಕೆ ಮಾತ್ರ ಸಂಬಂಧಿಸಿರುವುದಲ್ಲ, ಇದು ನಿಮ್ಮ ಮೆದುಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದಕ್ಕೂ ಸಂಬಂಧಿಸಿದೆ.  ಉದಾಹರಣೆಗೆ, ರಕ್ತಹೀನತೆಯು ಜ್ಞಾಪಕ ಶಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತದೆ.  ಇದು ಕಲಿಕೆಯ ಒಂದು ಪ್ರಮುಖವಾದ ಭಾಗ.  ಆದ್ದರಿಂದ ಶಿಶುವಿಹಾರಗಳಲ್ಲಿ, ಗಮನಿಸಬೇಕಾದ ಆಂಶಗಳು ಮೆದುಳಿನ ಬೆಳವಣಿಗೆಯನ್ನು ಕುರಿತದ್ದಾಗಿವೆ.  ಹೀಗಾಗಿ ಮಗುವಿಗೆ ನಾವು ಒದಗಿಸುವ ಪ್ರಚೋದನಾತ್ಮಕ ಪರಿಸರ, ಮಗು ಸಂಬಂಧಗಳನ್ನು ಬೆಳಸಿಕೊಳ್ಳಲು ನಾವು ನೀಡುವ ನೆರವು, ನಾವು ದೇಹಕ್ಕೆ ನೀಡುವ ಪೌಷ್ಠಿಕಾಹಾರ ಮತ್ತು ದೈಹಿಕ ಚಲನವಲನಕ್ಕೆ ನೀಡುವ ಅವಕಾಶ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ  ಆದ್ದರಿಂದಲೇ ನಾವು ಸುವ್ಯವಸ್ಥಿತ, ಸುರಚಿತವಾದ ಶಿಶುವಿಹಾರದ ಪರಿಸರದ ಆಲೋಚನೆಗೆ ತೊಡಗಿದೆವು.  ಇಲ್ಲದಿದ್ದಲ್ಲಿ, ಇವೆಲ್ಲವೂ ದೊರೆಯುವ ಕುಟುಂಬವೇ ಮಕ್ಕಳಿಗೆ ಸಾಕು.  ಅನೇಕರು ಇದನ್ನು ಒಪ್ಪದಿರಬಹುದು ಆದರೆ ನನಗೆ ಅನಿಸುವಂತೆ,  ಮಗುವಿಗೆ ಈ ಎಲ್ಲವೂ ದೊರೆಯುವ ಕುಟುಂಬವಿದ್ದರೆ ಅದಕ್ಕಿಂತ ಇನ್ನೇನು ಬೇಕು.  ಇದಕ್ಕೆ ಔಪಚಾರಿಕ ಶಾಲೆಯೇ ಬೇಕಾಗಿಲ್ಲ.  ಮಗುವನ್ನು ಶಿಶುವಿಹಾರಕ್ಕೆ ಕಳುಹಿಸುವುದರಿಂದ ಆಗಬಹುದಾದ ಲಾಭವೆಂದರೆ ಆ ಮಗುವಿಗೆ ಆರು ವರ್ಷವಾದಾಗ ನಿಯಮಿತವಾದ ಶಾಲೆಗೆ ದಾಖಲಾದ ಅನಂತರ ಎದುರಿಸಬೇಕಾದ ಸುರಚಿತ ಪರಿಸರಕ್ಕೆ ಹೊಂದಿಕೊಳ್ಳುವ ಅಭ್ಯಾಸವನ್ನು ಒದಗಿಸುವುದಾಗಿದೆ. ಚೆನ್ನಾಗಿ ಹೊಂದಿಕೊಳ್ಳುವ ಅಭ್ಯಾಸವುಳ್ಳ ಮಕ್ಕಳಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ.  ಅವರು ಶೀಘ್ರವಾಗಿ ಕಲಿಯಬಲ್ಲರು.

ಮಗುವಿನ ಸರ್ವಾಂಗೀಣ ಬೆಳವಣಿಗೆಗೆ  ಎಳೆಯ ವಯಸ್ಸು ಅತ್ಯಂತ ಪ್ರಮುಖವಾದದ್ದಾಗಿದ್ದರೂ, ಅದಕ್ಕೆ ಕೊಡಬೇಕಾದ ಪ್ರಾಮುಖ್ಯತೆಯನ್ನು ನಾವು ಕೊಡುತ್ತಿಲ್ಲ.  ಉನ್ನತ ಶಿಕ್ಷಣಕ್ಕೆ ನಾವು ಹೆಚ್ಚಿನ ಗಮನವನ್ನು ನೀಡುತ್ತಿದ್ದೇವೆ ಆದರೆ, ಮಗುವಿನ ಜೀವನದ ಆರಂಭದ ಘಟ್ಟವನ್ನುವನ್ನು ನಡೆದಂತೆ ನಡೆಯಲಿ ಎಂದು ಬಿಟ್ಟು ಬಿಟ್ಟಿದ್ದೇವೆ.  ಶಿಶುವಿಹಾರಗಳು ಶೈಕ್ಷಣಿಕ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲ.  ಇದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸೇರಿದ್ದಾಗಿದೆ.  ಕೇಂದ್ರಸರ್ಕಾರದಲ್ಲಿ ಇದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಂದು ಕರೆಯುತ್ತಾರೆ, ಆದರೆ ರಾಜ್ಯ ಸರ್ಕಾರದಲ್ಲಿ ಇದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುತ್ತದೆ.  ಅಂಗನವಾಡಿಯ ಸಂಪೂರ್ಣ ವ್ಯವಸ್ಥೆಯು ಇದಕ್ಕೆ ಸೇರಿರುವುದಾಗಿದೆ. ಪ್ರಾಥಮಿಕ ಶಾಲೆಯಿರುವ ಆವರಣದಲ್ಲಿಯೇ ಅಂಗನವಾಡಿ ಇದ್ದರೂ, ವ್ಯವಸ್ಥೆಯ ಮಟ್ಟದಲ್ಲಿ, ಇವೆರೆಡೂ ಒಂದರೊಂದಿಗೆ ಇನ್ನೊಂದು ಒಡನಾಟವನ್ನು ಇಟ್ಟುಕೊಳ್ಳುವುದಿಲ್ಲ.  ಅಂಗನವಾಡಿಯಲ್ಲಿ ಮಗು ಏನನ್ನು ಕಲಿಯುವುದೋ ಅದು ಒಂದನೆಯ ತರಗತಿಯಲ್ಲಿ ಮಕ್ಕಳ ಕಲಿಕೆಯೊಂದಿಗೆ ಸಂಪರ್ಕವನ್ನು ಹೊಂದಿಲ್ಲ.  ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಯ ನಡುವೆ ಯಾವುದೇ ಸಂಭಾಷಣೆಯಿಲ್ಲ.  ಆದ್ಧರಿಂದ್ಟ ವ್ಯವಸ್ಥೆಯ ಮಟ್ಟದಲ್ಲಿ , ಅಂಗನವಾಡಿ ವ್ಯವಸ್ಥೆ ಮತ್ತು ಪ್ರಾಥಮಿಕ ಶಾಲಾ ವ್ಯವಸ್ಥೆಯ ನಡುವೆ ಶೂನ್ಯ ಸಂಪರ್ಕವಿರುತ್ತದೆ.  ಪುಟಾಣಿ ಮಕ್ಕಳ ಶಿಕ್ಷಣವನ್ನು ಮೊದಲನೆಯದಾಗಿ ಮಗುವಿನ ನಿರಂತರ ಶಿಕ್ಷಣದ ಅಂಗ ಭಾಗ ಎಂದು ನೋಡಲಾಗುತ್ತಿಲ್ಲ, ಮತ್ತು ಎರಡನೆಯದಾಗಿ ಮಗುವಿನ ಒಟಟಾರೆ ಶಿಕ್ಷಣಕ್ಕೆ ಪ್ರಮುಖವಾದದ್ದು ಎಂದಾಗಲೀ ಪರಿಗಣಿಸುತ್ತಿಲ್ಲ.

ಎಳೆಯ ವಯಸ್ಸಿನ ಬೆಳವಣಿಗೆಯನ್ನು ಇನ್ನೂ ಆರೋಗ್ಯ ಮತ್ತು ವೈದ್ಯಕೀಯ ದೃಷ್ಟಿಯಲ್ಲೇ ನೋಡಲಾಗುತ್ತಿದೆ.  ಅಂದರೆ, ಸುರಕ್ಷಿತ ಹೆರಿಗೆ, ಲಸಿಕೆ ಹಾಕುವುದರ ಮೇಲೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.  ಒಂದು ವ್ಯವಸ್ಥೆಯಾಗಿ, ಅದಕ್ಕಿಂತ ಹೆಚ್ಚಾಗಿ ಸಮಾಜದ ಒಂದು ಭಾಗವಾಗಿ ಎಳೆವಯಸ್ಸಿನಲ್ಲಿ ದೊರೆಯುವ ವಿವಿಧ ಪ್ರಚೋದನೆಗಳು ಹೇಗೆ ಅವರ ಭವಿಷ್ಯದ ಜೀವನದೊಂದಿಗೆ ಸಂಪರ್ಕವನ್ನು ಹೊಂದಿದ್ದು ಅದನ್ನು ಸಶಕ್ತಗೊಳಿಸುತ್ತದೆ ಎನ್ನುವುದನ್ನು  ನಾವು ಅರ್ಥಮಾಡಿಕೊಂಡಿಲ್ಲ.  ಉದಾಹರಣೆಗೆ, ನಮ್ಮ ಎಷ್ಟೋ ಕ್ರಿಯೆಗಳು ಎಷ್ಟು ಮುಖ್ಯವಾದದ್ದು ಮತ್ತು ಅದು ಎಳೆಯ ವಯಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ತಂದೆತಾಯಿಗಳಾಗಿಯೂ  ನಾವು ಅರ್ಥಮಾಡಿಕೊಂಡಿಲ್ಲ. ಇದರರ್ಥ ಪ್ರತಿಯೊಬ್ಬರೂ ಅಸಹಜ ವಾದ ಬಹು ವ್ಯವಸ್ಥಿತ ತಂದೆತಾಯಿಗಳಾಗಬೇಕು ಎಂದಲ್ಲ.  ಆದರೆ,  ನೀವು ಏನೆಲ್ಲಾ ಮಾಡುತ್ತೀರೋ ಅದನ್ನು ನಿಮ್ಮ ಮನೆಯಲ್ಲಿರುವ ಮಗುವು ಗಮನಿಸಿ ಗ್ರಹಿಸುತ್ತಿರುತ್ತದೆ ಹಾಗೂ ಆ ಮಗುವು ನಿಮ್ಮನ್ನು ತನ್ನ ಜೀವನದ ಅತ್ಯಂತ ಪ್ರಮುಖವಾದ ವ್ಯಕ್ತಿ ಎಂದು ಭಾವಿಸಿರುತ್ತದೆ ಹಾಗಾಗಿ ನೀವು ಮಾಡುವ ಪ್ರತಿಯೊಂದು ವಿಷಯವೂ ಆ ಮಗುವಿನ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಮಗುವಿನ ಸಂಪೂರ್ಣ ಪ್ರಪಂಚ ನಿಮ್ಮ ಸುತ್ತಲೇ ತಿರುಗುತ್ತಿರುತ್ತದೆ ಹಾಗಾಗಿ ನೀವೇನು ಮಾಡುತ್ತಿರೋ ಅದು ಖಂಡಿತವಾಗಿಯೂ ಪ್ರಮಖವಾದದ್ದಾಗಿದೆ.  ಆದ್ದರಿಂದ ನಿಮ್ಮೊಂದಿಗೆಯೇ ಮಗುವು ಅನುಭವಗಳನ್ನು ಪಡೆಯುತ್ತಾ ಹೋಗುತ್ತದೆ.

ಆದ್ದರಿಂದ ಪೋಷಕರಾಗಿ ನಾವು ನಮ್ಮ ಪಾತ್ರವನ್ನು ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಬೇಕು.  ಇದರೊಟ್ಟಿಗೆ, ವ್ಯವಸ್ಥೆಯ ಮಟ್ಟದಲ್ಲಿ ಆಲೋಚಿಸಿದಾಗ ಮಗುವು ತನ್ನು ಐದು ಮತ್ತು ಆರನೆಯ ವಯಸ್ಸಿನ ಒಳಗೆ ಹಾಗೂ ಶಾಲೆಗೆ ದಾಖಲಾಗುವ ಮೊದಲು ಏನೆಲ್ಲಾ ಅನುಭವಗಳಿಗೆ ಒಳಗಾಗುತ್ತದೆ ಅದು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಚಿಂತನೆಯನ್ನು ಮಾಡುವುದಿಲ್ಲ.  ಇವೆಲ್ಲವೂ ಮಕ್ಕಳು, ಕಲಿಕೆ, ಬೆಳವಣಿಗೆ ಹಾಗೂ ಶಿಕ್ಷಣದ ಉದ್ದೇಶವೇನು ಎನ್ನುವುದರ ಬಗ್ಗೆ ನಮಗಿರುವ ಒಟ್ಟಾರೆ ಅರ್ಥೈಕೆ ಅಥವಾ ಅದರ ಅಭಾವದಿಂದ ಹುಟ್ಟಿರುವುದಾಗಿದೆ.  ಉದಾಹರಣೆಗೆ, ನನ್ನ ಪಕ್ಕದ ಮನೆಯಲ್ಲಿ  ಎರಡೂವರೆ ವರ್ಷದ ಒಂದು ಮಗುವಿದೆ  ಆ ಮಗುವಿನ ತಾಯಿ ತಾನು ಇನ್ನೂ ಮಗುವನ್ನು ಶಿಶುವಿಹಾರಕ್ಕೆ ಸೇರಿಸಿಲ್ಲ, ಆದರೆ ಇತರರು ತಮ್ಮ ಮಕ್ಕಳನ್ನು ಎರಡನೆಯ ವಯಸ್ಸಿನಲ್ಲಿಯೇ ಶಿಶುವಿಹಾರಕ್ಕೆ ಸೇರಿಸಿದ್ದಾರೆ ಈಗಾಗಲೇ ಆ ಮಕ್ಕಳು ಬರೆಯಲು ಕಲಿಯುತ್ತಿದ್ದಾರೆ ಎಂದು ತನ್ನ ಕಾಳಜಿಯನ್ನು ವ್ಯಕ್ತಪಡಿಸಿದಳು. ಮಗು ತುಂಬಾ ಚುರುಕಾಗಿದೆ, ಸಂಜೆ ಅದೇ ವಸತಿ ಸಮುಚ್ಚಯದಲ್ಲಿರುವ ಅನೇಕ ಮಕ್ಕಳೊಂದಿಗೆ ಆಟವಾಡುತ್ತಾನೆ ಮತ್ತು ಬೆಳೆಗಿನ ಇಡೀ ಸಮಯವನ್ನು ತನ್ನ ಅಜ್ಜಿಯೊಂದಿಗೆ ಕಳೆಯುತ್ತಾನೆ ಅಜ್ಜಿ ಅವನಿಗೆ ಸಂಪೂರ್ಣ ಮನರಂಜನೆ ಒದಗಿಸುತ್ತಾರೆ.  ಇದರಲ್ಲಿ ಕೊರತೆ ಇರುವುದು ಎಲ್ಲಿ ಎಂದು ನನಗೆ ಇನ್ನೂ ಅರ್ಥವಾಗಿಲ್ಲ.  ಆ ಮಗುವಿನ ತಾಯಿಗೆ ತಾನು ಮಗುವನ್ನು ಶಿಶುವಿಹಾರಕ್ಕೆ ಸೇರಿಸಿಲ್ಲ ಎನ್ನುವ ಕಾಳಜಿ ತನ್ನ ಸುತ್ತಲಿನ ಜನರು ಏನು ಮಾಡುತ್ತಿದ್ದಾರೆ ಎನ್ನುವ ಒತ್ತಡದಿಂದ ಉಂಟಾಗಿದೆಯಲ್ಲದೇ ಮಗುವಿಗೆ ವಾಸ್ತವವಾಗಿ ಏನು ಬೇಕಾಗಿದೆ ಎನ್ನುವುದರಿಂದಲ್ಲ.  ಕಾರ್ಯಾಚರಣೆಯ ಮೂಲಭೂತ ಚೌಕಟ್ಟೇ ಚಿಂತೆ ಮತ್ತು ಭಯದಿಂದ ಕೂಡಿದ್ದಾಗಿದೆ.  ಮಗು ಇತರ ಮಕ್ಕಳೊಂದಿಗೆ ಒಡನಾಟವನ್ನು ಹೊಂದಬೇಕು, ಹಂಚಿಕೊಳ್ಳುವುದನ್ನು ಕಲಿಯಬೇಕು ಎನ್ನುವ ನಿರೀಕ್ಷೆ ಸರಿಯಾದದ್ದೇ, ಆದರೆ ಮೂರು ತುಂಬುವುದರ ಒಳಗೇ ಆ ಮಗು ಬರೆಯಲು ಪ್ರಾರಂಭಿಸಬೇಕು ಎನ್ನುವುದು ಖಂಡಿತವಾಗಿಯೂ ಅನಗತ್ಯವಾದದ್ದು.  ಮಗುವಿನ ಚಲನಾ ಕೌಶಲ್ಯದ ಬೆಳವಣಿಗೆಯನ್ನು ನೋಡಿದ್ದೇ ಆದರೆ, ಇದು ಮಗು ಐದುವರ್ಷದ ಆಸು-ಪಾಸಿನಲ್ಲಿರುವಾಗ. ತನ್ನ ಶೂ ಲೇಸನ್ನು ತಾನೇ ಕಟ್ಟಿಕೊಳ್ಳುವುದು, ಗುಂಡಿಗಳನ್ನು ಹಾಕಿಕೊಳ್ಳುವುದು ಮತ್ತು ಬರೆಯುವುದು ಈ ಎಲ್ಲಾ ಕೆಲಸಗಳು ಮಗು ತನ್ನ ಆರನೆಯ ವಯಸ್ಸಿನಲ್ಲಿ ಮಾಡಲು ಪ್ರಾರಂಭಿಸುವಂತಹದ್ದು. ಇಂದು, ಅನೇಕ ಶಿಶುವಿಹಾರಗಳು ಮಕ್ಕಳಿಗೆ ಎರಡೂವರೆ ವರ್ಷವಿರುವಾಗಲೇ ಅವರ ಮಾಂಸ ಖಂಡಗಳು ಇನ್ನೂ ಸಂಪೂರ್ಣವಾಗಿ ತಯಾರಿರುವ ಮೊದಲೇ ಬರೆಯುವಂತೆ ಮಾಡುತ್ತಿವೆ.  ಇದು ವಾಸ್ತವವಾಗಿ ಬೆಳವಣಿಗೆಗೆ ಮಾರಕವಾದದ್ದು ಮತ್ತು ಇದು ಮಗುವಿಗೆ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಹಾನಿಯನ್ನು ಉಂಟುಮಾಡುವಂತಹದ್ದು.  ಭಾವನೆಗಳ ಬಗ್ಗೆ ಸ್ವಲ್ಪ ಹೊತ್ತು ಸಂಪೂರ್ಣವಾಗಿ ಮರೆತು ಬಿಡೋಣ ಅಥವಾ ಮೌಲ್ಯವನ್ನು ಬದಿಗಿಡೋಣ, ನರವಿಜ್ಞಾನವನ್ನು ಮಾತ್ರ ಪರಿಗಣಿಸಿದರೆ, ಬರೆಯುವ ಕ್ರಿಯೆ ಮತ್ತು ಬರೆಯುವಾಗ ಮಗು ಅನುಭವಿಸುವ ಯಾತನೆಯಿಂದ ಉಂಟಾಗುವ ನರಗಳ ಸಂಪರ್ಕಗಳ ರೂಪುಗೊಳ್ಳುವಿಕೆಯನ್ನು ಗಮನಿಸೋಣ.  ಮಗುವಿನ ಮನದಲ್ಲಿ ಉಳಿಯುವ ಭಾವನೆ ಎಂದರೆ ಬರೆಯುವುದು ಒಂದು ಯಾತನಾಮಯ ಕ್ರಿಯೆ; ನಾನು ಇದರಲ್ಲಿ ನಿಧಾನ; ನನಗೆ ಇದರಿಂದ ಬೈಗುಳ ಸಿಗುತ್ತದೆ; ನನ್ನ ಕೈ ನೋಯುತ್ತದೆ ಎಂದು.  ಮಗುವಿಗೆ ಬರೆಯುವ ಕ್ರಿಯೆಯನ್ನು ನಾವು ಒಂದು ಶಿಕ್ಷೆಯನ್ನಾಗಿ ಪರಿವರ್ತಿಸಿದ್ದೇವೆ.  ಈ ಬರವಣಿಗೆಯ ಕ್ರಿಯೆಯನ್ನು ಮಾಡಲು ವಿಧಾನಗಳಿವೆ.  ಮಕ್ಕಳು ಸ್ವಾಭಾವಿಕವಾಗಿ ತಮ್ಮ ಎಳೆವಯಸ್ಸಿನಲ್ಲೇ ಬರೆಯಲು ಪ್ರಾರಂಭಿಸಿದರೆ, ಬರೆಯಲು ಬಿಡಿ.  ಆದರೆ ಹೇಗೆ ಬರೆಯಬೇಕು ಎಂಬ ನಿರ್ಧಾರವನ್ನು ಅವರಿಗೇ ಬಿಡಿ. ಈ ಹಂತದಲ್ಲಿ ಅವರ ಬರವಣಿಗೆಯನ್ನು ತಿದ್ದುವುದಾಗಲೀ ಬರವಣಿಗೆಯ ಕೌಶಲ್ಯವನ್ನು ನಯಗೊಳಿಸುವುದನ್ನಾಗಲೀ ಮಾಡಬಾರದು.  ಇದನ್ನು ಮಗುವಿಗೆ ಆರು ವರ್ಷವಾದ ನಂತರ ಮಾಡಬಹುದು ಆ ಸಮಯದಲ್ಲಿ ಮಗುವಿಗೆ ಹೆಚ್ಚಿನ ನಿಯಂತ್ರಣ ಬಂದಿರುತ್ತದೆ.  ಸ್ವಲ್ಪ ಸಮಯ ತಡೆದು ತಿದ್ದುವುದರಿಂದ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ.  ಕಲಿಕೆಯ ವೇಗದಲ್ಲಿ ನಮನೀಯತೆಯನ್ನು ಹೊಂದುವುದೆಂದರೆ ಕಲಿಕೆಯು ಆಗುವುದೇ ಇಲ್ಲ ಎಂದಲ್ಲ.  ಮಗುವು ಒಳ್ಳೆಯ, ಪ್ರಚೋದನಾತ್ಮಕ ಮತ್ತು ಮಾನಸಿಕವಾಗಿ ಸವಾಲನ್ನು ಒಡ್ಡುವ ಅನುಭವಗಳನ್ನು ಹೊಂದುತ್ತಿದೆ ಎಂದಾದರೆ ಆ ಮಗುವು ಯಶಸ್ವೀಯಾಗುತ್ತದೆ ಏಕೆಂದರೆ ಆ ಮಗುವು ಕಲಿಯಲು ಸಮರ್ಥವಾಗಿದೆ ಮತ್ತು ಅತ್ಯಂತ ಚುರುಕಾಗಿದೆ ಎಂದರ್ಥ.  ಇದನ್ನು ಹಾಳುಗೆಡವುವವರು ನಾವೇ. ಮಕ್ಕಳಿಗೆ ಎಂಟು ಅಥವಾ ಹತ್ತು ವರ್ಷ ತುಂಬುವಷ್ಟರಲ್ಲಿ ಅವರು ಪ್ರಶ್ನೆ ಕೇಳುವುದನ್ನೇ ನಿಲ್ಲಿಸುವಂತಹಾ ಸನ್ನಿವೇಶವನ್ನು ನಾವು ಸೃಷ್ಟಿಸುತ್ತೇವೆ!

 

19170 ನೊಂದಾಯಿತ ಬಳಕೆದಾರರು
7433 ಸಂಪನ್ಮೂಲಗಳು