ಈ ಅಂಕಣಕ್ಕೆ ಕುಡುಗೆ ನೀಡಿ ಕೂಡಿ ಬೆಳೆಸಿದರೆ ಸ್ವರ್ಗ ಸುಖ

ಕವಲಗೇರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಹಚ್ಚ ಹಸುರಿನಿಂದ ಕೂಡಿದ ಗಿಡಗಳು ಕಂಗೊಳಿಸುತ್ತಿದ್ದು ಎಲ್ಲರಿಗೂ ಶಾಲೆಗೆ ಬರಲು ಕೈ ಬೀಸಿ ಕರೆಯುತ್ತಿವೆ. 2010 ರಲ್ಲಿ ಈ ಶಾಲೆಗೆ ಸದಾಶಿವ ಬಸಪ್ಪ ಬಿರಾದಾರವರು ಬಂದಾಗ ಹುಡಿಕಿದರೂ ಹುಲ್ಲು ಕಡ್ಡಿ ಅಲ್ಲ ಮುಳ್ಳಿನ ಕಡ್ಡಿ ಕೂಡ ಸಿಗುತ್ತಿರಲಿಲ್ಲ. ಅವರ ಈ ಹಿಂದಿನ ಶಾಲೆ ಹಸುರಿನಿಂದ ಕೂಡಿತ್ತು ಆದರೆ ಹಿರಿಯ ಪ್ರಾಥಮಿಕ ಶಾಲೆ, ಕವಲಗೇರಿಗೆ ಬಂದಾಗ ಅವರು ಚಿಂತಿತರಾಗಿ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಅವರು ಏನು ಮಾಡಿದರು ಎಂಬುದರ ವಿವರ ಅವರೊಂದಿಗೆ ಮಾಡಿದ ಪುಟ್ಟ ಸಂದರ್ಶನದಲ್ಲಿದೆ:
 
ಪ್ರಸ್ತುತ ಶಾಲೆಯಲ್ಲಿ ಎಷ್ಟು ಮರಗಳಿವೆ?
ಪ್ರಸ್ತುತ ಶಾಲೆಯಲ್ಲಿ 95 ಮರಗಳಿವೆ, ಶಾಲೆಗೆ “ಹಸಿರು ಶಾಲೆ” ಎಂಬ ಪ್ರಶಸ್ತಿ ಕೂಡ ಬಂದಿದೆ. ಇದರಲ್ಲಿ ಮಕ್ಕಳ ಮತ್ತು ಶಿಕ್ಷಕ ತಂಡದ ಸಹಕಾರ ತುಂಬಾ ಇದೆ. ಕಾರಣ ಮೊದಲಿಗೆ ¸ಮುದಾಯ ಮತ್ತ್ತು ಪಂಚಾಯತಿ ಸಹಕಾರ ನೀಡಿರಲಿಲ್ಲ. ಕ್ರಮೇಣ ಅರಿತು ಸಮುದಾಯ ಶಾಲೆಗೆ ಸಹಕಾರ ನೀಡುತ್ತಿದೆ.
 
ಶಾಲೆಯಲ್ಲಿ ಮರ ಬೆಳೆಸುವ ಯೋಚನೆ ಹೇಗೆ ಮೂಡಿತು?
ನನ್ನ ವೃತ್ತಿ ಜೀವನ ಪ್ರಾರಂಭವಾಗಿದ್ದು ಹಿರಿಯ ಪ್ರಾಥಮಿಕ ಶಾಲೆ ಕಡಕೋಳದಿಂದ. 2002 ರಲ್ಲಿ ನೇಮಕಾತಿ ಆಗಿತ್ತು. 8 ವರ್ಷ ಅಲ್ಲಿ ಕೆಲಸ ಮಾಡಿದ್ದೆ. ಒಳ್ಳೆಯ ವಾತಾವರಣ ಇತ್ತು. 2010 ಜೂನ್‍ನಲ್ಲಿ ಕವಲಗೇರಿ ಹಿರಿಯ ಪ್ರಾಥಮಿಕ ಶಾಲೆ ಅಂದರೆ ಈ ಶಾಲೆಗೆ ಬಂದೆ. ಇಲ್ಲಿ ಬಂದಾಗ ಇಲ್ಲಿರುವ ವಾತಾವರಣ ನೋಡಿ ಆಶ್ಚರ್ಯವಾಯಿತು. ದೊಡ್ಡ ಮೈದಾನ ಆದರೆ ಒಂದು ಮರ ಕೂಡ ಇರಲಿಲ್ಲ ಭೂಮಿ ಕೂಡ ಅಷ್ಟೇನೂ ಸರಿಯಾಗಿ ಇರಲಿಲ್ಲ. ಬಿಸಿಲಿನಿಂದ ಮಕ್ಕಳೆಲ್ಲ ಕಂಗೆಡುತ್ತಿದ್ದರು. ಆದ್ದರಿಂದ ಇಲ್ಲಿನ ವಾತಾವರಣ ಬದಲಾವಣೆ ಮಾಡಬೇಕು ಆಗ ಮಕ್ಕಳ ಕಲಿಕೆಗೆ ಪೂರಕವಾಗುತ್ತದೆ ಎಂಬ ಭಾವನೆ ನನ್ನಲ್ಲಿ ಮೂಡಿತು.
 
ಮರಗಳನ್ನು ಎಲ್ಲಿಂದ ಮತ್ತು ಎಷ್ಟು ತರಲಾಯಿತು?
ಒಟ್ಟು 102 ಮರಗಳನ್ನು ಸಂಕನಾಳದಿಂದ ಒಂದು ಗಾಡಿಯಲ್ಲಿ ತುಂಬಿಸಿ ತರಲಾಯಿತು. ಮರಗಳನ್ನು ನೆಟ್ಟುವ ಮುಂಚೆ ಮೈದಾನವನ್ನು ಸಮತಟ್ಟು ಮಾಡಿ ಮರಗಳನ್ನು ನೆಡಸಲಾಯಿತು. ಇದರಲ್ಲಿ ಬದಾಮ, ಬಸವನ ಪಾದ, ಸಿಲ್ವರ್  ಓಕ್, ಬಂಗಾಲ, ಸಂಕೇಶ್ವರ, ಅಶೋಕ ಮರಗಳಿವೆ.
 
ಇಷ್ಟು ಮರಗಳನ್ನು ಹೇಗೆ ಬೆಳೆಸಿದ್ದಿರಿ? ಸವಾಲುಗಳೇನು ಎದುರಾಗಲಿಲ್ಲವೆ?
ಪ್ರಾರಂಭದಲ್ಲಿ ನೀರಿನ ಸಮಸ್ಯೆ ಇತ್ತು ಅದಕ್ಕಾಗಿ ಮಕ್ಕಳು ಕೈ ತೊಳೆಯುವ, ಬಳಸಿದ ನೀರು ಗಿಡಗಳಿಗೆ ಹೋಗುವಂತೆ ಮಾಡಲಾಯಿತು, ಮಳೆ ಬಂದಾಗ ನೀರು ಇಂಗಲು ಅವಕಾಶ ಮಾಡಲಾಗಿತ್ತು. ಅಲ್ಲದೆ ಮಕ್ಕಳು ಮನೆಯಿಂದ ಬರುವಾಗ ಅವರೇ ಸ್ವಲ್ಪ ಸ್ವಲ್ಪ ಗೊಬ್ಬರವನ್ನು ತಂದು ಗಿಡಕ್ಕೆ ಹಾಕುತ್ತಿದ್ದರು. ಪ್ರತಿ ತರಗತಿಗೆ ಇಷ್ಟು ಮರ ಅಂತ ಜವಾಬ್ದಾರಿ ವಹಿಸಲಾಗಿತ್ತು, ಅವರೇ ಅದರ ಜವಾಬ್ದಾರಿ ನಿರ್ವಹಿಸುವುದರಿಂದ ಹೆಚ್ಚು ಅಡೆತಡೆಗಳೇನು ಬರಲಿಲ್ಲ. ಪ್ರಸ್ತುತ ಗ್ರಾಮ ಪಂಚಾಯಿತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಮುದಾಯದವರು ಸ್ವ ಇಚ್ಛೆಯಿಂದ ಗೋಡೆ ಬರಹ ಇತ್ಯಾದಿ ಕೆಲಸಗಳಿಗೆ ಸಹಾಯ ಮಾಡುತ್ತಿದ್ದಾರೆ.
 
ಇದಕ್ಕೆಲ್ಲಾ ಪ್ರೇರಣೆ ಏನು?
ಶಾಲೆಯ ವಾತಾವರಣ ನೋಡಿದರೆ ಎಲ್ಲಿಯೂ ನೆರಳು ಇರಲಿಲ್ಲ, ಮರಗಳಿಂದ ಮಕ್ಕಳಿಗೆ ಪ್ರಶಾಂತ ವಾತಾವರಣ ಸಿಗುತ್ತದೆ, ಮರ ಗಿಡಗಳಿಂದ ಕಲಿಕೆಗೆ ಪೂರಕ ವಾತಾವರಣ ಸಿಗುತ್ತದೆ, ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂಬ ನಂಬಿಕೆ ನನ್ನನ್ನು ಈ ಕೆಲಸಕ್ಕೆ ಮುಂದೆ ಮಾಡಿತು.
 
ನೆಟ್ಟಿರುವ ಗಿಡಗಳು ಸಮುದಾಯದವರು ಅಥವ ಇತರೆ ಯಾರೂ ಹಾಳು ಮಾಡಿಲ್ವಾ?
ಇಲ್ಲ. ಎತ್ತರವಾದ ಕಾಂಪೌಂಡು ಇರುವುದರಿಂದ ಯಾರೂ ಸಾಯಂಕಾಲದ ಸಮಯದಲ್ಲಿ ಶಾಲೆಯೊಳಗೆ ಬರುತ್ತಿರಲಿಲ್ಲ. ಗಿಡಗಳ ಸುತ್ತ ಬೇಲಿ ಹಾಕಲಾಗಿತ್ತು. ಅಲ್ಲದೆ ಮಕ್ಕಳಿಗೆ ಪ್ರತಿ ನಿತ್ಯ ಪ್ರಾರ್ಥನಾ ಸಮಯದಲ್ಲಿ ಗಿಡಗಳ ರಕ್ಷಿಸುವ, ಪೋಷಿಸುವ ಬಗ್ಗೆ ತಿಳಿಹೇಳುತ್ತಿದ್ದೇವು. ಆದ್ದರಿಂದ ನಮಗೆ ಮಕ್ಕಳು ಮತ್ತು ಜೊತೆಗಿರುವ ಶಿಕ್ಷಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ಸಂದರ್ಭದಲ್ಲಿ ಕೆಲವು ಗಿಡಗಳನ್ನು ಮಕ್ಕಳ ಮನೆಗೆ ಕೊಟ್ಟಿದ್ದೇವೆ,
ಮನೆಯಲ್ಲ್ಲೂ ಮಕ್ಕಳು ಗಿಡಗಳನ್ನು ಬೆಳೆಸಿದ್ದಾರೆ.
 
ಪ್ರಸ್ತುತ ಶಾಲೆಯಲ್ಲಿ ಯಾವ ವಿಷಯವನ್ನು ಬೋಧನೆ ಮಾಡುತ್ತೀರಿ?
ಪ್ರಸ್ತುತ ನಾನು 6, 7, ಮತ್ತು 8 ನೇ ತರಗತಿಯ ಮಕ್ಕಳಿಗೆ ಕನ್ನಡ ಮತ್ತು ಹಿಂದಿ ಭಾಷೆಯನ್ನು ಬೋಧಿಸುತ್ತೇನೆ, ನನ್ನ ಮೂಲ ಗ್ರಾಮ ಉತ್ನಾಳ. ವಿಜಯಪುರ ಬ್ಲಾಕ್‍ನಲ್ಲಿ ಬರುತ್ತದೆ. ಪ್ರತಿಯೊಬ್ಬರಿಗೂ ಗಿಡ ಮರಗಳನ್ನು ಬೆಳೆಸಲು ಪ್ರೇರೇಪಿಸುತ್ತೇನೆ. ಅದರಿಂದ ನನಗೂ ಸಂತೋಷವಾಗುತ್ತದೆ. ಇಂದು ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ, ಶಾಲೆಯ ದಾಖಲಾತಿ ಮತ್ತು ಹಾಜರಾತಿ ಉತ್ತಮವಾಗಿದ್ದು ಮಕ್ಕಳು ಶಾಲೆಗೆ ಖುಷಿಯಿಂದ ಬರುತ್ತಾರೆ. ಬೆಳಿಗ್ಗೆ 09.30ಕ್ಕೆ ಶಾಲೆಯಲ್ಲಿ ಎಲ್ಲರೂ ಇದ್ದು ಇಡೀ ದಿನ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳುತ್ತಾರೆ ನಮ್ಮ ಬಿರಾದರ ಸರ್.
 
ತಮ್ಮ ಸಾಧನೆಯ ಬಗ್ಗೆ ಕಿಚ್ಚಿತ್ತು ಅಹಂ ಇಲ್ಲದೆ ಎಲ್ಲರ ಕೊಡುಗೆಯಿಂದ ಮಾಡಿದ ಸಾಧನೆ ಎಂಬ ಭಾವನೆ ಬಿರಾದಾರ ಸರ್ ಅವರದು.
 
19210 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು