ಸೃಜನಶೀಲತೆ: ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಕಲೆಯ ಪಾತ್ರ -ಆಶಾ ಸಿಂಗ್

 
 ಕಲೆಯು ಶಿಕ್ಷಣದ ಬುನಾದಿ
- ದೇವಿ ಪ್ರಸಾದ್, ಶಿಲ್ಪ ಶಾಸ್ತ್ರಜ್ಞ ಮತ್ತು ಶಾಂತಿ ಕ್ರಿಯಾವಾದಿ
 
ಪುಟ್ಟ ಮಕ್ಕಳು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು, ಒಂದರೊಡನೆ ಇನ್ನೊಂದಕ್ಕೆ ಸಂಬಂಧ ಕಲ್ಪಿಸುವುದು, ಹೋಲಿಸುವುದು ಮತ್ತು ತಮ್ಮದೇ ನಿರ್ಣಯಕ್ಕೆ ಬರುವುದಕ್ಕೆ ಇರುವ ತಮ್ಮ ಒಲವನ್ನು ತೋರಿಸಲು ಬೇರೆ ಬೇರೆ ರೀತಿಯ ಬಹಳಷ್ಟು ಸಂಭಾಷಣೆಯನ್ನು ಮಾಡುತ್ತಾರೆ.  ಅವರ ಒಂದು ಸಂಭಾಷಣೆಯು ಈ ರೀತಿ ಇರಬಹುದುಇವತ್ತು ಮಳೆ ಬರ್ತಿದೆ ಯಾಕೇಂದ್ರೆ ನಮ್ಮ ಟೀಚರ್ ಇವತ್ತು ಬಕೆಟ್‌ಗಳಲ್ಲಿ ನೀರನ್ನ ಮೇಲೆ, ಮೇಲೆ, ಮೇಲೆ ಎರಚ್ತಾ ಇದ್ರು..  ಮೂರು ವರ್ಷದ ಮಗು ಅವಧಿಗಿಂತ ಸ್ವಲ್ಪ ಮುಂಚೆ ಮನೆಗೆ ಹೋಗಲು ಕಿರಿ-ಕಿರಿಗೊಂಡು ದೂರುತ್ತಾ ಯಾಕಮ್ಮ ಇಷ್ಟು ಬೇಗ ಬಂದೆ ಎಂದು ಕೇಳುತ್ತಿತ್ತು.  ನಾಲ್ಕು ವರ್ಷದ ಒಂದು ಮಗು ಅಡ್ಡಾ-ದಿಡ್ಡಿ ಇಟ್ಟಿದ್ದ ಕುರ್ಚಿಯ ದಿಂಬುಗಳನ್ನು ತನ್ನ ಅಮ್ಮ ಸರಿಯಾಗಿ ಜೋಡಿಸಿಟ್ಟಾಗ ನೀನು ಸಿಂಹದ ಗುಹೆಯನ್ನು ಹಾಳು ಮಾಡಿದೆ, ಈಗ ಅದು ಜಿಂಕೆಯನ್ನು ಹಿಡಿದು ಬಿಡತ್ತೆ! ಎಂದು ಕೂಗಾಡುತ್ತದೆ.  ಇಂತಹಾ ಮಕ್ಕಳ ಮಾತುಗಳು ಮಕ್ಕಳ ಚಿಂತನೆಯ ಉತ್ಸಾಹ ,ತುಡಿತ ಮತ್ತು ಚಿಂತನಾ ಪ್ರಕ್ರಿಯೆಯನ್ನು ತಿಳಿಸುತ್ತವೆ.ಇವು ಅವರು ವಿನೂತನವಾಗಿ ಆಲೋಚಿಸುವ ಅವರ ಸಾಮರ್ಥ್ಯವನ್ನು ಹೇಳುವುದಲ್ಲದೆ ವಾಸ್ತವವಾದ ಭೌತಿಕ-ಸಾಮಾಜಿಕ ಜಗತ್ತನ್ನು  ಅರ್ಥಮಾಡಿಕೊಳ್ಳಲು ಇರುವ ಸಾಮರ್ಥ್ಯವನ್ನು ತೋರಿಸುತ್ತವೆ. ಅವರ ಹೇಳಿಕೆಗಳು ದೊಡ್ಡವರು ಹೇಳಿಕೊಟ್ಟಿದ್ದರಿಂದ ರೂಪುಗೊಂಡಿರದೇ ಅವರದೇ ಅನುಭವ ಮತ್ತು ಶೋಧನೆಗಳಿಂದ ಹೊರಬಂದ ನವೀನ ದೃಷ್ಟಿಕೋನವನ್ನು ಬೊಟ್ಟುಮಾಡಿ ತೋರಿಸುತ್ತದೆ.  ಮಕ್ಕಳು ಸೃಜನಶೀಲ ಮನಸ್ಸು ಮತ್ತು ಬಹುಮುಖಿ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತಾರೆ.
 
ಸೃಜನಶೀಲತೆ ಎಂದರೆ ಏನು?
 
ಸೃಜನಶೀಲತೆಯನ್ನು ವಿಭಿನ್ನ ಮತ್ತು ನವೀನ ಚಿಂತನೆ ಎಂದು ನಿಘಂಟು ವ್ಯಾಖ್ಯಾನಿಸುತ್ತದೆ.  ಸೃಜನಶೀಲತೆಯು ಪರಿಶೋಧನೆ ಮತ್ತು ಅನ್ವೇಷಣೆಯಿಂದ ಸೋಪಜ್ಞ ಕಲ್ಪನೆಗಳು ರೂಪುಗೊಳ್ಳುವ ಪ್ರಕ್ರಿಯೆ.  ಬೋಧನೆ ಮತ್ತು ಕಲಿಕೆಯಲ್ಲಿ ಸೃಜನಶೀಲತೆಯು ಪ್ರಕ್ರಿಯೆಯಿಂದ ಬರುವ ಅನುಭವದಿಂದ ರೂಪುಗೊಳ್ಳುತ್ತದೆಯೇ ಹೊರತು ಸಿದ್ಧ ಉತ್ಪನ್ನದ ಹೀಗಿರಬೇಕು ಎಂಬ ಕಾಳಜಿಯಿಂದ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.  ಸೃಜನಶೀಲತೆಯು ಪ್ರತಿಭೆ, ಕೌಶಲ್ಯ ಅಥವಾ ಬುದ್ಧಿವಂತಿಕೆಯನ್ನೂ ಮೀರಿದ್ದು. ಸೃಜನಶೀಲತೆಯು ಸ್ಪರ್ಧೆ ಅಥವಾ ಇನ್ನೊಬ್ಬರಿಗಿಂತಾ ಉತ್ತಮವಾಗಿ ಮಾಡುವುದನ್ನೂ ಮೀರಿದೆ. ಅಲ್ಲದೆ ಇದು ಚಿಂತಿಸುವ, ಪರಿಶೋಧಿಸುವ, ಅನ್ವೇಷಿಸುವ ಮತ್ತು ಕಲ್ಪನೆಯನ್ನು ಮಾಡುವ ಕೆಲಸ. ಅನನ್ಯ ಸಾಧ್ಯತೆಗಳು ಮತ್ತು ನವೀನ ಚಿಂತನೆಗಳನ್ನು ಆಸ್ವಾದಿಸುವಂತೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆಯನ್ನು ಮಕ್ಕಳಲ್ಲಿ ಪೋಷಿಸುವುದು ಹೇಗೆ?  ಕಲಾವಿದರು ಸೃಜನಶೀಲರು ಮತ್ತು ಕಲೆಯ ಉತ್ಕೃಷ್ಟತೆಯೇ ಸೃಜನಶೀಲತೆ ಎಂದು ಅನೇಕ ಬಾರಿ ನಾವು ಪರಿಭಾವಿಸುತ್ತೇವೆ.
 
 
ಅಮುಲ್‌ನಂತಹ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಂಧರ್ಬಿಕವಾದ ಮತ್ತು ಹಾಸ್ಯಭರಿತ ಜಾಹೀರಾತುಗಳನ್ನು ನೀಡಿ ಸೃಜನಶೀತೆಯನ್ನು ತೋರುವ ಸಾಧ್ಯತೆ ಇದೆ, ಹಾಗೆಯೇ ಒಬ್ಬ ರೈತ ಸಸಿಗಳನ್ನು ನೆಡುವಾಗ ವಿನೂತನ ವಿನ್ಯಾಸಗಳನ್ನು ರೂಪಿಸಿ ಸೃಜನಶೀತೆಯನ್ನು ತೋರಿಸಬಹುದು, ಒಬ್ಬ ತಾಯಿಯು ಮನೆಯಲ್ಲಿನ ಸ್ಥಳಗಳನ್ನು ಆಸಕ್ತಿದಾಯಕ ತಾಣಗಳನ್ನಾಗಿ ವಿನ್ಯಾಸಗೊಳಿಸುವುದರಿಂದ ಸೃಜನಶೀಲತೆಯನ್ನು ತೋರಬಹುದು.   ಇದರಂತೆಯೇ ಅನೇಕ ತಂದೆತಾಯಿಯರು ಅದ್ಭುತವಾದ ಕಥೆಗಳನ್ನು ಸೃಷ್ಠಿಸಿ ತಮ್ಮ ಮಕ್ಕಳಿಗೆ ಹೇಳಿ ಅವರಿಗೆ ಆನಂದವನ್ನು ನೀಡುವುದರೊಂದಿಗೆ ಬಾಂಧವ್ಯವನ್ನೂ ಬೆಸೆಯುತ್ತಾರೆ.  ದೈನಂದಿನ ಕೆಲಸಕಾರ್ಯದಲ್ಲಿ ಹೊಸ ಮಿಂಚನ್ನು ಹೊಮ್ಮಿಸಲು ಸೃಜನಶೀಲತೆಯು ಸಾಧನವಾದರೂ ವೈವಿದ್ಯಮಯ ಆಲೋಚನೆಗಳು ಹಾಗೂ ನವೀನ ಚಿಂತನೆಗಳನ್ನು ಪ್ರೋತ್ಸಾಹಿಸಲು ಕಲೆಯು ಹೆಚ್ಚು ಉಪಯುಕ್ತ ಎಂಬುದು ಸತ್ಯ. ಸ್ವತಂತ್ರವಾಗಿ ಆಲೋಚಿಸುವ ಅನುಭವಗಳು, ಪರಿಶೋಧನೆ, ಪ್ರಯೋಗ ಮತ್ತು ಅನುಭವಗಳು ಈ ಮೂರು ಅಂಶಗಳು ಎಳೆಯ ಮಕ್ಕಳನ್ನು ಸೃಜನಶೀಲ ವ್ಯಕ್ತಿಗಳಾಗುವತ್ತ ಮುನ್ನೆಡೆಸುವ ಪ್ರಮುಖ ಸಾಧನಗಳಾಗಿವೆ. ತಾನು ಚಿಕ್ಕ ವಯಸ್ಸಿನಲ್ಲಿ ಕಲಿತ ಶಾಲೆಯಲ್ಲಿ ತನಗೆ ಸಿಕ್ಕ ಅವಕಾಶ ಮತ್ತು ಸಾಹಸದ ಅನುಭವವು ಇಂದಿನ ತನ್ನ ಅಪೂರ್ವವಾದ ಯಶಸ್ಸಿಗೆ ಕಾರಣ ಎಂದು ಜಪಾನ್ ದೂರದರ್ಶನದ ಕಾರ್ಯಕ್ರಮ ನಿರೂಪಕಿಯು ತಾನು ಬರೆದಿರುವ ಪುಸ್ತಕ ಟೊಟೊಚನ್‌ನಲ್ಲಿ ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಡಿ ಕಲಿಯುವ ಸ್ವಾತಂತ್ರ್ಯ ಮತ್ತು ಇದೆಲ್ಲಕ್ಕಿಂತ ಹೆಚ್ಚಾಗಿ ತಪ್ಪು ಮಾಡುವ ಸ್ವಾತಂತ್ರ್ಯ ಮತ್ತು ಪರ್ಯಾಯ ಮಾರ್ಗಗಳನ್ನು ಆಲೋಚಿಸಲು ಸಿಕ್ಕ ಮಾರ್ಗದರ್ಶನವು ಸಮಸ್ಯಾ ಪರಿಹಾರ, ಆತ್ಮವಿಶ್ವಾಸ ಮತ್ತು ಸ್ವತಂತ್ರ ಚಿಂತನೆಗಳಂತಹ ಕೌಶಲ್ಯಗಳನ್ನು ಬೆಳಸಿಕೊಳ್ಳಲು ಅವಕಾಶ ನೀಡುತ್ತದೆ. ಆಟವಾಡುತ್ತಾ ಪ್ರಯೋಗಮಾಡುವ ದಿನ-ನಿತ್ಯದ ಸರಳ ಕಾರ್ಯದ ಸಂಕೀರ್ಣವಾದ ಜಾಲದಲ್ಲಿ ಸೃಜನಶೀಲತೆಯು ಅಡಗಿದೆ.
 
 
ಸೃಜನಶೀಲತೆಯನ್ನು ಪೋಷಿಸುವುದು
ಶಾಲಾ ವಿದ್ಯಾಭ್ಯಾಸವು ಸಮುದಾಯ ನಿರ್ದೇಶಿತ  ವಿಧಾನಗಳನ್ನು ಬಳಸುವತ್ತ ಒಲವನ್ನು ಹೊಂದಿದ್ದು ಸಾಮರ್ಥ್ಯ ಮತ್ತು ಆಸಕ್ತಿಗಳಲ್ಲಿರುವ ವ್ಯಕ್ತಿಗತ ಭಿನ್ನತೆಯ ಕಡೆಗೆ ಗಮನ ಹರಿಸುವುದಿಲ್ಲ. ಇಂದಿನ ವಿದ್ಯಾಭ್ಯಾಸದ ಪರಿಯು ಮುದ್ರಿತ ಜ್ಞಾನಬಂಡಾರವನ್ನು ಸ್ವಾಧೀನ ಪಡಿಸಿಕೊಳ್ಳವುzಕ್ಕೆ ಸೀಮಿತವಾಗಿದ್ದು ವಿದ್ಯಾರ್ಥಿಯು ಹೊಂದಿರಬಹುದಾದ ನೋಡಿ ಅರಿತ ಅಥವಾ ಆಯಾಮ ಪರಿಣಿತಿಗೆ ಪ್ರೋತ್ಸಾಹ ನೀಡುವುದಿಲ್ಲ.  ಕಲಿಕೆಯ ಆಧಾರವಾಗಿ ಕಲೆಯನ್ನು ತೆಗೆದುಕೊಂಡಾಗ ತರಗತಿಯಲ್ಲಿನ ಏಕತಾನತೆಯನ್ನು ತೊಡೆದುಹಾಕಿ ಮಾಡಿ ಕಲಿಯುವ ಮತ್ತು ನೋಡಿ ಕಲಿಯುವ ವಿದ್ಯಾರ್ಥಿಗಳನ್ನು ಒಳಗೊಳ್ಳುವ ವಿಧಾನದಿಂದ ಮಾಂತ್ರಿಕ ಅಚ್ಚರಿಗಳನ್ನು ಉಂಟುಮಾಡುತ್ತದೆ.
 
ಕಲೆಯು ಹೆಚ್ಚು ಸಂವಹನ ಮಾರ್ಗಗಳನ್ನು ತೆರೆಯುವುದರಿಂದ ವಿಭಿನ್ನ ವಿದ್ಯಾರ್ಥಿಗಳ ವರ್ಗದ ಸಮಸ್ಯೆಯನ್ನು ಪರಿಹರಿಸುತ್ತದೆ. ಮುದ್ರಿತ ಪಠ್ಯಕ್ಕೆ ಒಲವಿರದ ಮತ್ತು ಅನುಕ್ರಮ ಸ್ಮರಣೆಯಲ್ಲಿ ಚುರುಕಾಗಿರದ ವಿದ್ಯಾರ್ಥಿಗಳು ವಿನ್ಯಾಸಗೊಂಡಿರದ ಅಭಿವ್ಯಕ್ತತೆಗೆ ಅವಕಾಶವನ್ನು ನೀಡುವ ಮಾಧ್ಯಮದತ್ತ ಹೆಚ್ಚು ಒಲವನ್ನು ತೋರುತ್ತಾರೆ.  ಕಲೆಯಲ್ಲಿ ನಿಗದಿಪಡಿಸಿದ ವ್ಯಾಖ್ಯಾನಗಳು ಅಷ್ಟಿಲ್ಲವಾದ್ದರಿಂದ ಮತ್ತು ಮರದ ಒಳಗಿನ ಬೇರುಗಳು ಹಾಗೂ ಮರದ ಮೇಲಿನಿಂದ ತೂಗಾಡುವ ಬಿಳಿಲುಗಳನ್ನು ಹೊಂದಿರವ ಎರಡೂ ರೀತಿಯ ಮರಗಳನ್ನು ಸಮಾನವಾಗಿ ಮೆಚ್ಚುತ್ತವೆ.  ಕಾಲ ಕಳೆದಂತೆ ಶಾಲಾ ವ್ಯವಸ್ಥೆಯು ಶಿಕ್ಷಣದಲ್ಲಿ ಕಲೆಯ ಎಷ್ಟೊಂದು ಶಕ್ತಿಪೂರ್ಣ ಮತ್ತು ಎಂತಹ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಗ್ರಹಿಸಬೇಕು.
 
ಇಪ್ಪತ್ತನೇ ಶತಮಾನದ ದಾರ್ಶನಿಕರಾದ ರಬೀಂದ್ರನಾಥ ಟಾಗೋರರು ಮತ್ತು ಶ್ರೀ ಅರಬಿಂದೋರವರು ಕಲೆಗೆ ಆದ್ಯತೆಯನ್ನು ನೀಡಿ ಅದನ್ನು ಆಧಾರವಾಗಿಸಿಕೊಳ್ಳುವ ಸಮಗ್ರ ಶಿಕ್ಷಣವಿಧಾನವನ್ನು ಪ್ರತಿಪಾದಿಸಿದ್ದಾರೆ.  ಸಾಂಸ್ಕೃತಿಕ ತಳಹದಿಯ ತರಗತಿ ತಂತ್ರಗಳ ಮೂಲಕ ಭಾವನೆಗಳು ಮತ್ತು ಆಧ್ಯಾತ್ಮಿಕತೆಯನ್ನು ಪೋಷಿಸುವ ಶಿಕ್ಷಣದಲ್ಲಿನ ಸಂವೇದನಾಶೀಲತೆಯನ್ನು ಅವರು ಒತ್ತಿ ಹೇಳಿದ್ದಾರೆ. ಕಲೆ ಎಂದರೆ ವಿಭಿನ್ನ ಸಂಸ್ಕೃತಿಗಳ, ಭಾಷೆಯ, ಭೌಗೋಳಿಕ ಪರಿಸರದಲ್ಲಿನ, ಶಿಕ್ಷಣದಲ್ಲಿ ವಿಭಿನ್ನ ಹಿನ್ನಲೆಯನ್ನು ಮತ್ತು ಸಾಮರ್ಥ್ಯಗಳ ಶ್ರೇಣಿಯನ್ನು ಹೊಂದಿರುವ ಅನೇಕ ಜನರು ಮಾತನಾಡುವ ಭಾಷೆಯಾಗಿದೆ. ಸಂಗೀತ ಮತ್ತು ಚಲನೆಯು ಜೀವನದ ಗತಿಗೆ ಆಧಾರವಾಗಿರುವುದರಿಂದಲೇ ರಚ್ಚೆಹಿಡಿದ ಒಂದು ಹಸುಗೂಸು ಸಹ ಪುನರಾವರ್ತಿತ ಶಬ್ದದ ಲಯದಿಂದ ತಾತ್ಕಾಲಿಕ ಸಮಾಧಾನವನ್ನು ಹೊಂದುವುದನ್ನು ಕಾಣಬಹುದಾಗಿದೆ.  ಅಂಗವೈಕಲ್ಯವನ್ನು ಹೊಂದಿರುವ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಲೆಯು ಹೆಚ್ಚಿನ ಕೊಡುಗೆಯನ್ನು ನೀಡಿರುವುದು ಅನೇಕ ಅಧ್ಯಯನಗಳಲ್ಲಿ ಕಂಡುಬರುತ್ತದೆ.   ವಿಭಿನ್ನ ನೈಪುಣ್ಯತೆಯ ವರ್ಗಗಳನ್ನು ಹೊಂದಿರುವ ಸಮುದಾಯಗಳಲ್ಲಿ ಕಲೆಯು ಬೆಸುಗೆಯಾಗಿರುವುದನ್ನು ಇಲ್ಲಿ ಗಮನಿಸುವುದು ಅಷ್ಟೇ ಮುಖ್ಯ.
 
ಪಾಶ್ಚಾತ್ಯ ಶೈಕ್ಷಣಿಕ ಪ್ರಪಂಚದಲ್ಲಿ ಸಮಗ್ರ ಶಿಕ್ಷಣವು ಹೋವರ್ಡ್ ಗಾರ್ಡನರ್‌ರವರ ಬಹುವಿಧ ಬುದ್ಧಿವಂತಿಕೆಯ ಸಿದ್ಧಾಂತವನ್ನೇ ಹೇಳುತ್ತಿದ್ದು ನಮ್ಮ ಶಾಲಾ ವ್ಯವಸ್ಥೆಯು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಆದರೆ ಮೂಲಭೂತವಾಗಿ ಭಾಷೆ ಮತ್ತು ತಾರ್ಕಿಕ-ಗಣಿತ ಈ ಎರಡು ರೀತಿಯ ಬುದ್ಧಿವಂತಿಕೆಯನ್ನು ಬೋಧಿಸುತ್ತದೆ, ಪರೀಕ್ಷಿಸುತ್ತದ್ಷೆ, ಮನದಟ್ಟು ಮಾಡಿಸುತ್ತದೆ ಮತ್ತು ಅದಕ್ಕೆ ಪ್ರಾಶಸ್ತ್ಯ ನೀಡುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಇವುಗಳನ್ನು ಯಾವುದೇ ಪ್ರಾಥಮಿಕ ಕೌಶಲ್ಯಗಳ ಮೂಲಾಧಾರ ಎಂದು ಸದಾ ಪರಿಗಣಿಸಲಾಗುತ್ತದೆ.  ಹೀಗಿದ್ದರೂ, ಇನ್ನೂ ಐದು ರೀತಿಯ ಬುದ್ಧಿವಂತಿಕೆಯು ಇದರಷ್ಟೇ ಪ್ರಮುಖವಾದವು ಎಂದು ಅವರು ಹೇಳುತ್ತಾರೆ.  ಅವುಗಳೆಂದರೆ ತಮ್ಮದೇ ಆದ ಸಾಂಕೇತಿಕ ವ್ಯವಸ್ಥೆಯೊಂದಿಗೆ ಬಹಳಷ್ಟು ಜನರು ಮಾತನಾಡುವ ಮತ್ತು ವೈಯಕ್ತಿಕ ವ್ಯತ್ಯಾಸಗಳ ವಿಶಾಲವ್ಯಾಪ್ತಿಯನ್ನು ತಲುಪುವಂತಹ ಭಾಷೆಗಳು ಎನ್ನಬಹುದು.  ಇದರಲ್ಲಿ ಚಾಕ್ಷುಷ/sಸ್ಥಾನಸಂಬಂಧಿ, ದೈಹಿಕ/ಕ್ರಿಯಾತ್ಮಕ, ಸಂಗೀತಾತ್ಮಕ, ವ್ಯಕ್ತಿಆಂತರ್ಗತ ಮತ್ತ ಅಂತರವ್ಯಕ್ತಿ ಬುದ್ಧಿವಂತಿಕೆಗಳು ಸೇರುತ್ತವೆ.  ಈ ಬುದ್ಧಿವಂತಿಕೆಗಳು ದೃಶ್ಯ ಕಲೆ, ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ಆಧಾರವನ್ನು ಒದಗಿಸುತ್ತವೆ ಮತ್ತು ಈ ಕಲಾ ಪ್ರಕಾರದ ಮೂಲಕ ಬಹಳಷ್ಟು ವಿದ್ಯಾರ್ಥಿಗಳು ಮಾತುಕತೆ ಮತ್ತು ಸ್ವ-ಅಭಿವ್ಯಕ್ತಿಗೆ ಮಾಧ್ಯಮವನ್ನು ಕಂಡುಕೊಳ್ಳುವುದಲ್ಲದೇ, ಅರ್ಥವನ್ನು ರಚಿಸಿಕೊಳ್ಳುವ ಮತ್ತು ಸಾಧಾರಣವಾಗಿ ಎಲ್ಲಾ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯುವ ಸಾಧನವನ್ನಾಗಿಯೂ ಬಳಸಿಕೊಳ್ಳುತ್ತಾರೆ.  ಕಲೆಯನ್ನು ಕೇವಲ ಒಂದು ಪ್ರತ್ಯೇಕ ವಿಷಯವನ್ನಾಗಿ ಬೋಧಿಸದೇ ಪಠ್ಯಕ್ರಮದ ಎಲ್ಲಾ ಮಟ್ಟಗಳಲ್ಲೂ ಸಂಯೋಜಿಸಿದಾಗ ಇದು ವಿಶೇಷವಾಗಿ ಸಾಧ್ಯವಾಗುತ್ತದೆ.
 
 
ಸಂಗೀತ, ಅಭಿನಯ, ವರ್ಣಚಿತ್ರ ರಚನೆ ಮತ್ತ ನಾಟಕವನ್ನು ಒಳಗೊಂಡಿರುವ ಕಲೆಯು ಬಹಳಷ್ಟು ವಿಷಯಗಳಿಗೆ ಜೀವಂತವಾಗಿಸುತ್ತವೆ ಮತ್ತು ಅಮೂರ್ತವಾದುವುಗಳನ್ನು ಅನುಭವಾತ್ಮಕ ವಾಸ್ತವಗಳನ್ನಾಗಿಸಲು ಅವಕಾಶವನ್ನು ನೀಡುತ್ತವೆ.
 
ಚಿತ್ರಕಲೆಯು ಮಕ್ಕಳು ಹೇಗೆ ಚಿಂತಿಸುತ್ತಿವೆ ಎಂಬುದಕ್ಕೆ ಪ್ರಮುಖವಾದ ಒಳನೋಟವನ್ನು ಒದಗಿಸುತ್ತದೆ.   ಮಕ್ಕಳ ಚಿತ್ರಕಲೆಯನ್ನು ಸಂಭಾಷಣೆಗೆ ಆಧಾರವನ್ನಾಗಿ ಬಳಸಿಕೊಳ್ಳುವುದು ಮುಖ್ಯ.  ರೇಖೆಗಳ ಸಂಗ್ರಹ ಎನ್ನುವಂತೆ ಮಕ್ಕಳು ವಕ್ರವಾದ, ನೇರವಾದ ಗೆರೆಗಳು ಅಥವಾ ಬಾಗಿ ಬಳುಕುವ ಗೆರೆಗಳನ್ನು ರಚಿಸಿದ್ದರೂ ಇವು ಮಕ್ಕಳ ಮನಸ್ಸಿನ ’ಕಣ್ಣಿ’ನಲ್ಲಿ ಒಂದಕ್ಕೊಂದು ಸಂಪರ್ಕವನ್ನು ಸೃಷ್ಟಿಸಿಕೊಂಡಿರುತ್ತವೆ.  ತರಗತಿಯಲ್ಲಿ ಕಲೆಯು ಮಗುವು ಪರಿಶೋಧಿಸಲು ಮತ್ತು ಅಭಿವ್ಯಕ್ತಗೊಳಿಸಲು ಅವಕಾಶವನ್ನು ನೀಡುತ್ತದೆ.  ನಿಖರವಾಗಿ ಪ್ರತಿಬಿಂಬಿಸುವ ಕೌಶಲ್ಯವು ಕ್ರಮೇಣ ಬರುತ್ತದೆ, ಪುಟಾಣಿ ಮಕ್ಕಳ ತರಗತಿಗಳು ಮಕ್ಕಳು ಪರಿಣಿತಿ ಪಡೆಯುವುದರ  ಮೇಲೆ ಗಮನ ಹರಿಸದೆ ಅವರಿಗೆ ಅನುಭವವನ್ನು ಒದಗಿಸಲು ಅವಕಾಶ ನೀಡುವುದು ಅವಶ್ಯ.
 
 
ಪುಟ್ಟ ಮಕ್ಕಳ ಶಿಕ್ಷಣ ಕಾರ್ಯಕ್ರಮಗಳಲ್ಲಿ ಕಲೆಯು ಒಂದು ಅನುಭವವಾಗುವುದಕ್ಕೆ ಮೂರು ವಿಧಾನಗಳಿವೆ.  ಒಂದು ಈಗಾಗಲೇ ಹೇಳಿರುವಂತೆ ವಾರ್ಷಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಕಲೆಗಳು.  ಇನ್ನೊಂದು ಪ್ರತಿ ನಿತ್ಯ ತರಗತಿಯಲ್ಲಿನ ಒಡನಾಟದಲ್ಲಿ ಕಲೆಯನ್ನು ಬಳಸಿಕೊಳ್ಳುವುದು. ವಿಶೇಷವಾಗಿ ವಾರ್ಷಿಕ ಕಾರ್ಯಕ್ರಮಗಳ ಆಚರಣೆಯನ್ನು ಏರ್ಪಡಿಸುವ ಪ್ರಗತಿಪರ ವ್ಯವಸ್ಥೆಗಳು ಬಹಳಷ್ಟು ಶಿಕ್ಷಕರಿಗೆ ತಿಳಿದಿದೆ ಹಾಗೆಯೇ ಕಲೆಯನ್ನು ದಿನ ನಿತ್ಯದ ಕೆಲಸದಲ್ಲಿ ಬಳಸಿಕೊಳ್ಳುವುದು ತಿಳಿದಿದೆ. ಆದರೆ ಅರಿಯ ಬೇಕಾದ ಮೂರನೇ ವಿಚಾರವೆಂದರೆ ಒಬ್ಬ ಕಲಾವಿದನೊಂದಿಗೆ ಮಕ್ಕಳು ದಿನವನ್ನು ಕಳೆಯುವ ಅಕಾಶ ಕಲ್ಪಿಸುವುದು 
 
 
ಪ್ರತಿ ನಿತ್ಯದ ಲಯದಲ್ಲಿ ಕಲೆ: ವಿನೋದಭರಿತ ಒಡನಾಟಗಳು
 
ಇತ್ತೀಚಿನ ವರ್ಷಗಳಲ್ಲಿ, ’ಮಗು ಕೇಂದ್ರಿತ ಕಲಿಕೆ’ ಕುರಿತು ವಾದಿಸುವವರು ಮಕ್ಕಳ ಕಲಿಕೆಯ ಶೈಲಿಯಲ್ಲಿ ಬಹುವಿಧಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.  ಮಕ್ಕಳ ಸಾಮಾಜಿಕ, ವಿಷಯ ಗ್ರಹಣೆ ಮತ್ತು ಭಾವನಾತ್ಮಕ ಸಾಮರ್ಥ್ಯಗಳು ಮತ್ತು ವಿಭಿನ್ನ ಭಾಷೆಗಳ ಭಿನ್ನತೆಯ ಬಗ್ಗೆ ಅರಿವು ಬೆಳೆಯುತ್ತಿದೆ.  ಪುಟ್ಟ ಮಕ್ಕಳ ಶಿಕ್ಷಕರಾಗಿ ತರಗತಿಯಲ್ಲಿನ ವೈವಿಧ್ಯ ಮತ್ತು ಔಪಚಾರಿಕ ಕಲಿಕಾ ವಾತಾವರಣದಲ್ಲಿ ಮಕ್ಕಳು ತಮ್ಮ ವೈಯಕ್ತಿಕ ಅವಕಾಶಗಳನ್ನು ಕಂಡುಕೊಳ್ಳುವ ವಿಧಾನಗಳ ಬಗ್ಗೆ ಅರಿತುಕೊಳ್ಳಲು ನಮಗೆ ಚುರುಕಾದ ಮಿದುಳು ಇರಬೇಕಾಗುತ್ತದೆ. ಗೊಂಬೆಗಳನ್ನು ಇಟ್ಟಿರುವ ಒಂದು ಸರಳವಾದ ಜಾಗವು ಅನಿಸಿಕೆಗಳು ಮತ್ತು ಗ್ರಹಿಕೆಗಳನ್ನು ತಿಳಿಸುವ ಪಾತ್ರಾಭಿನಯಕ್ಕೆ, ಸಂಭಾಷಣೆಗೆ ವಿಶಾಲವಾದ ಅವಕಾಶವನ್ನು ಒದಗಿಸುತ್ತದೆ.  ಪ್ರಕೃತಿ ವಿಹಾರದ ನಡಿಗೆ ಸಮಯದಲ್ಲಿ ಸಂಗ್ರಹಿಸಲಾದ ಎಲೆಗಳೊಂದಿಗೆ ತರಕಾರಿ ಜೋಡಣೆ ಮತ್ತು ಚಿತ್ರಕಲೆಯು ವಿನೋದವನ್ನು ಒದಗಿಸುವುದಲ್ಲದೇ ನಿಸರ್ಗ, ತರಗತಿ ಮತ್ತು ಕಲಿಕೆಯ ನಡುವೆ ಸಂಪರ್ಕವನ್ನು ಪ್ರಚೋದಿಸುತ್ತದೆ.  ಸಂಗೀತ, ಕಥೆಹೇಳುವುದು, ಗೊಂಬೆಯಾಟದ ವೀಕ್ಷಣೆ ಮತ್ತು ಚಲನೆಗೆ ಬಹುವಿಧ ಕೌಶಲ್ಯಗಳನ್ನು ಒಳಗೊಂಡಿದೆ ಮತ್ತು ಬಹು ಆಯಾಮದ ಕಲಿಕೆಯನ್ನು ಒದಗಿಸುತ್ತದೆ.  ಸೃಜನಶೀಲತೆಯು ಪುಟಾಣಿ ಮಕ್ಕಳ ಪಠ್ಯಕ್ರಮದ ಒಂದು ಭಾಗವಾದ ಚಟುವಟಿಕೆಗಳಲ್ಲಿದೆ ಹಾಗೂ ಅಭಿವ್ಯಕ್ತತೆಗೆ ಅವಕಾಶವನ್ನು ನೀಡುವ ಮಕ್ಕಳ ತೊಡಗಿಸಿಕೊಳ್ಳುವಿಕೆಯನ್ನು ಪೋಷಿಸಲು ಇದು ಒಂದು ವಿನೋದ ಭರಿತ ವಿಧಾನವಾಗಿದೆ.
 
 
ವಾರ್ಷಿಕ ಸಮಾರಂಭದ ಕಾರ್ಯಕ್ರಮಗಳಾಗಿ ಕಲೆ: ಸಂಪರ್ಕವನ್ನು ಸೃಷ್ಟಿಸುವುದು
 
ಒಂದು ಸರಣಿ ಕಾರ್ಯಕ್ರಮದ ತರಾತುರಿಯನ್ನು ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೃಷ್ಟಿಸುವುದರಿಂದ ಇವು ಬಹಳಷ್ಟು ಸಮಯ ವಾರ್ಷಿಕ ಕಾರ್ಯಕ್ರಮಗಳನ್ನು ಹಾಳುಗೆಡವುತ್ತವೆ.  ಹೀಗಿದ್ದರೂ, ನಾವು ಪ್ರತಿಯೊಬ್ಬರೂ ವಿಭಿನ್ನ ಸ್ಮರಣೆಯೊಂದಿಗೆ ಶಾಲಾ ವಾರ್ಷಿಕ ಆಚರಣೆಯ ಸವಿ ನೆನಪನ್ನು ಸ್ಮರಿಸುತ್ತೇವೆ.  ಶಾಲೆಯ ನಿಶ್ಶಬ್ದ, ಶಿಸ್ತಿನ ವಾತಾವರಣವು ಬದಲಾಗಿ ಚಿತ್ರಕಲೆ, ಕಸೂತಿ ಕೆಲಸ ಅಥವಾ ನೃತ್ಯ ಮತ್ತು ಸಂಗೀತವನ್ನು ಅಭ್ಯಸಿಸುತ್ತಿರುವ ಚಟುವಟಿಕೆ ತುಂಬಿದ ಸ್ಥಳಗಳಾಗಿ ಬಿಡುತ್ತವೆ.  ಶಾಲಾ ಪ್ರಾಂಗಣದಲ್ಲಿ ಮಕ್ಕಳ ಕಲೆಯ ಕಾರ್ಯಗಳನ್ನು ಪ್ರದರ್ಶಿಸಲಾಗಿರುತ್ತದೆ; ವಾರ್ಷಿಕ ಕಾರ್ಯಕ್ರಮಗಳು ವಿವಿಧ ಪ್ರದರ್ಶನಗಳನ್ನು ಪ್ರಮುಖವಾಗಿ ಹೊಂದಿರುತ್ತವೆ. ವಿಶೇಷವಾಗಿ ಈ ಪ್ರದರ್ಶನಗಳು ಕಲಿಕೆಯಲ್ಲಿ ಹುದುಗಿರುವ ಕಲೆಯೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ.
 
ಪೌರಾಣಿಕ ಪಾತ್ರಗಳಾಗಿ ವೇಷ ಭೂಷಣ ಧರಿಸಿದ ಮಕ್ಕಳ ಪಾತ್ರಗಳು ಸಾಂಸ್ಕೃತಿಕ ಸಂಕೇತಗಳನ್ನು ಅರ್ಥೈಸಿಕೊಳ್ಳುವಂತೆ ಮಾಡುತ್ತವೆ, ನಾಗ ಬುಡಕಟ್ಡು ಜನಾಂಗದ ವೇಷದಲ್ಲಿ ಅಥವಾ ಸಂತಾಲೀ ಸೀರೆಯಲ್ಲಿ ಹೀಗೆ ಅಲಂಕರಿಸಿಕೊಳ್ಳುವುದು ಅವರಿಗೆ ಒಂದು ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ. ವಿವಿಧ ರಾಜ್ಯಗಳಲ್ಲಿನ ಚಿರಪರಿಚಿತವಲ್ಲದ ಉಡುಗೆಗಳಲ್ಲಿ ಅಲಂಕರಿಸಿಕೊಳ್ಳುವುದು ಕ್ಷಣಿಕವಾಗಿ ಮಕ್ಕಳನ್ನು ತಮ್ಮ ಭೌಗೋಳಿಕ ಮಿತಿಯ ಹೊರಗಿನ ವಿಶ್ವದಲ್ಲಿ ನಿಲ್ಲಿಸುತ್ತದೆ.  ಉಡುಗೆ-ತೊಡುಗೆಗಳ ಮೂಲಕ ಮಕ್ಕಳ ಕಲ್ಪನೆಯಲ್ಲಿ ಜನರ ಜೀವನದಲ್ಲಿನ ವೈವಿಧ್ಯತೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.  ಮಕ್ಕಳು ವಿಭಿನ್ನವಾಗಿ ಅಲಂಕರಿಸಿಕೊಂಡಾಗ ಅಥವಾ ಯಾವುದೇ ರೀತಿಯ ನೃತ್ಯದಲ್ಲಿ ಭಾಗವಹಿಸಿದಾಗ ಅವರು ಅವರಂತಲ್ಲದೇ ಆ ಪಾತ್ರವಾಗಿಯೇ ಅಭಿನಯಿಸುತ್ತಾರೆ.  ಕಲೆಯು ಒಂದು ಪ್ರದರ್ಶನವಾಗಿ ಬಹು ವಿಧದ ಸಾಮಾಜಿಕ-ಸಾಂಸ್ಕೃತಿಕತೆಯೊಂದಿಗೆ ಸಂಪರ್ಕವನ್ನು ಹೊಂದುವ ಸಾಮರ್ಥ್ಯವನ್ನು ಬೆಳಸುತ್ತದೆ.  ನವ್ಯತೆಯನ್ನು ಅನುಭವಿಸಲು ಮತ್ತು ಹೊಸ ದೃಷ್ಟಿಕೋನದ ಸಾಧ್ಯತೆಗಳೊಂದಿಗೆ ಸಂಬಂಧವನ್ನು ಬೆಳಸಿಕೊಳ್ಳಲು ಮಕ್ಕಳು ಸಮರ್ಥರಾಗುತ್ತಾರೆ.
 
 
ಸಂಗೀತ ಮತ್ತು ಸಾಹಿತ್ಯಗಳು ಭಾಷೆಗಳ ಸ್ವರದ ಏರಿಳಿತ ಮತ್ತು ಶಬ್ಧಗಳನ್ನು ಅನಾವರಣಗೊಳಿಸುತ್ತದೆ.  ಚಲನೆಯ ಮೂಲಕ ಅಥವಾ ಚಿತ್ರಕಲೆಯ ರಚನೆಯ ಮೂಲಕ ಕಲಾಪ್ರಕಾರಗಳ ಅನುಭವವನ್ನು ಪಡೆಯುವುದು ವಿವಿಧ ಸಾಮಾಜಿಕ, ಭೌಗೋಳಿಕ ಪರಿಸರದಲ್ಲಿ ಬಣ್ಣ ಅಥವಾ ವರ್ಣಗಳಿಗಿರುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವಂತೆ ಮಾಡುವುದಲ್ಲದೇ ಅದಕ್ಕೆ ಸಂಬಂಧಿಸಿದ ಕಥೆಗಳು, ಉಡುಗೆಗಳು ಮತ್ತು ಆಚರಣೆಗಳನ್ನು ತಿಳಿಯಲು ಕುತೂಹಲವನ್ನು ಹುಟ್ಟುಹಾಕುತ್ತವೆ.
 
 
ಪರಿಣಿತರ ಮೂಲಕ ಕಲೆ
ಮಕ್ಕಳಿಗೆ ಶಾಲಾ ಜೀವನದಲ್ಲಿ ಕಲೆಗೆ ಅನೇಕ ಅವಕಾಶಗಳನ್ನು ಒದಗಿಸಲು ಕೆಲವು ಶಾಲೆಗಳು ಬೇರೆಯ ವಿಧಾನಗಳನ್ನು ಅನುಸರಿಸುತ್ತವೆ.  ವೃತ್ತಿಪರ ಕಲಾಪರಿಣಿತರೊಂದಿಗೆ ಶಿಬಿರಗಳನ್ನು ಏರ್ಪಡಿಸುವ ಪ್ರಯತ್ನಗಳು, ಪ್ರಸಿದ್ಧ ಕಲಾವಿದರೊಂದಿಗೆ ಕಾರ್ಯ ನಿರ್ವಹಿಸುವುದು ಹೀಗೆ ಅನುಭವಗಳನ್ನು ಮೀರಿ ಆಕರ್ಷಣೆಯನ್ನು ಎದುರಿಸುವಾಗ ಅವರು ಪರಿಣಿತಿಯ ಬಗ್ಗೆ ಮತ್ತು ಕೌಶಲ್ಯಗಳ ಬಗ್ಗೆ ಅಚ್ಚರಿಯನ್ನು ಹೊರ ಹಾಕುವಂತೆ ಮಾಡುತ್ತದೆ.  ಮಕ್ಕಳ ಸಂತೋಷಕ್ಕಾಗಿ ಕೆಲವು ಶಾಲೆಗಳು ಇಂತಹ ಪ್ರಯತ್ನಗಳನ್ನು ಮಾಡುವ ಕ್ರಮಗಳನ್ನು ಹೊಂದಿವೆ.  ಸ್ಪಕ್ ಮ್ಯಾಕೆ ಈ ನಿಟ್ಟಿನಲ್ಲಿ ಇಡುವ ಒಂದು ಹೆಜ್ಜೆಯಾಗಿದೆ.  ಕಲಾ ಚಟ್ಟುವಟಿಕೆಗಳನ್ನು ಕೇಂದ್ರ ಭಾಗಕ್ಕೆ ತರುವುದರಲ್ಲಿ ಅನೇಕ ಸಂಪತ್ತನ್ನು ಹೊಂದಿದೆ.  ಅವುಗಳೆಂದರೆ
ಸ್ಪೂರ್ತಿದಾಯಕತೆ
ಬಹುವಿಧ ಪ್ರತಿಭೆಗೆ ಮೌಲ್ಯವನ್ನು ಸೃಷ್ಟಿಸುವುದು
ವಿವಿಧ ವೃತ್ತಿಗಳೆಡೆಗೆ ಗೌರವವನ್ನು ಸೃಷ್ಟಿಸುವುದು. (ಸಂಗೀತ ಸಾಧನಗಳನ್ನು ನುಡಿಸುವವರು, ಕುಂಬಾರರು, ಗಣಿತಜ್ಞರು ಹೀಗೆ ಪ್ರತಿಯೊಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಳ್ಳುವರು)
ಪರಿಪೂರ್ಣತೆಗೆ ಅಭ್ಯಾಸದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು.
ವಿಭಿನ್ನ ಪ್ರತಿಭೆಯನ್ನು ಹೊಂದಿರುವ ಮಕ್ಕಳಿಗೆ ಸಂವಹಿಸಲು ಮತ್ತು ಅಭಿವ್ಯಕ್ತಿಸಲು ಅವಕಾಶವನ್ನು ತೆರೆಯುವುದು.
 
ತಮ್ಮ ಅನುಭವವಾಗಿ ಕಲೆ ಪುಸ್ತಕದಲ್ಲಿ ಜಾನ್ ಡ್ಯೂಯಿಯವರ‍್ಲು ಒಂದು ಸಾಂಪ್ರದಾಯಿಕ ಮತ್ತು ವಾಡಿಕೆಯ ಅರಿವಿನ ಪದರವನ್ನು ಛೇದಿಸಿ ಹೊರಹೊಮ್ಮುವ ಅನನ್ಯ ಸಾಮರ್ಥ್ಯ ಕಲೆಗೆ ಇದೆ ಎಂದು ಬರೆದಿದ್ದಾರೆ.   ಕಲೆಗಾರ ಸರ್ವದಾ ಹೊಸತನದ ನೈಜ ಪ್ರತಿಪಾದಕನಾಗಿದ್ದಾನೆ. ಇಲ್ಲಿ ಹೊರಗೆ ನಡೆದ ಘಟನೆಗಳಷ್ಟೇ ಹೊಸತಲ್ಲ  ಅದು ಪ್ರಚೋದಿಸುವ ಭಾವನೆಗಳು,ದೃಷ್ಟಿಕೋನಗಳು ಮನಗಾಣ್ಕೆ ಮುಖ್ಯವಾಗುತ್ತದೆ. ಎಂದು ಅವರು ಭಾವಿಸುತ್ತಾರೆ.  ನಾವೇ ಕಲೆಯನ್ನು ಸೃಷ್ಟಿಸಲು ಮತ್ತು ಅದಕ್ಕೆ ಪ್ರತಿಸ್ಪಂದಿಸಲು ಪ್ರಾರಂಭಿಸಿದಾಗ, ಭಾವನೆ, ದೃಷ್ಟಿಕೋನ ಮತ್ತು ಮನಗಾಣ್ಕೆಯನ್ನು ಪ್ರಚೋದಿಸುತ್ತೇವೆ. ನಾವು ವಿಶ್ವದ ಮೇಲ್ಮೈ ವಾಸ್ತವಿಕತೆಯ ತಳದಲ್ಲಿರುವ  ಸತ್ಯವನ್ನು ನೋಡುತ್ತೇವೆ.  ನಾವು ನಮ್ಮ ಕಲ್ಪನೆಯನ್ನು ಹೊರಹಾಕುತ್ತೇವೆ.
ಕಲೆಗಳು ಏಕೆ ಮಹತ್ವದ್ದಾಗಿವೆ?
೧. ಇವು, ವರ್ಣೀಯ, sssಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಡೆ-ತಡೆಗಳನ್ನು ತುಂಡರಿಸಿ ಎಲ್ಲಾ ಜನರೂ ಮಾತನಾಡುವ ಭಾಷೆಯಾಗಿದೆ ಮತ್ತು ಸಾಂಸ್ಕೃತಿಕ ಮೆಚ್ಚುಗೆಯನ್ನು ಹಾಗೂ ಅರಿವನ್ನು ಹೆಚ್ಚಿಸುವುದಾಗಿದೆ.
೨. ಅಕ್ಷರಗಳು ಮತ್ತು ಸಂಖ್ಯೆಗಳಂತೆಯೇ ಇವು ಪ್ರಮುಖವಾದ ಸಾಂಕೇತಿಕ ವ್ಯವಸ್ಥೆಗಳು.
೩. ಇವು ಮನಸ್ಸು, ದೇಹ ಮತ್ತು ಆತ್ಮವನ್ನು ಒಗ್ಗೂಡಿಸುತ್ತವೆ.
೪. ಸ್ವ-ಅಭಿವ್ಯಕ್ತಿಗೆ ಇವು ಅವಕಾಶವನ್ನು ಒದಗಿಸಿ, ಆಂತರಿಕ ವಿಶ್ವವನ್ನು ಗಟ್ಟಿಯಾದ ವಾಸ್ತವಿಕ ಬಾಹ್ಯವಿಶ್ವಕ್ಕೆ ಹೊಂದಿಸುತ್ತವೆ
೫. ಇವು ಉಲ್ಲಾಸದಸ್ಥಿತಿಗೆ ಮತ್ತು ಅನುಭವದ ಉತ್ತುಂಗತೆಗೆ ಮಾರ್ಗವನ್ನು ನೀಡುತ್ತವೆ.
೬. ಉತ್ತೇಜನ, ನಿರ್ದೇಶನ, ಮೌಲ್ಯಾಂಕನ ಮತ್ತು ಆಳವಾದ ಅರ್ಥೈಕೆಯನ್ನು ಉಂಟುಮಾಡುವ ವಾಸ್ತವಿಕ ಅನ್ವಯಗಳ ನಡುವೆ ಪರಿಮಿತಿ ಇಲ್ಲದ ಸಂಪರ್ಕವನ್ನು ರಚಿಸುತ್ತವೆ.
೭. ಆರಂಭದಿಂದ ಅಂತ್ಯದವರೆಗೂ ಇವು ಪ್ರಕ್ರಿಯೆಯನ್ನು ಅನುಭವಿಸಲು ಇರುವ ಅವಕಾಶ ಒದಗಿಸುತ್ತವೆ.
೮. ಅವು ಸ್ವಾವಲಂಬನೆ ಮತ್ತು ಸಹಯೋಗ ಎರಡನ್ನೂ ಬೆಳಸುತ್ತವೆ.
೯. ಅವು ಕೂಡಲೇ ಹಿಮ್ಮಾಹಿತಿಯನ್ನು ಒದಗಿಸುತ್ತವೆ ಮತ್ತು ಪರ್ಯಾಲೋಚನೆಗೆ ಅವಕಾಶವನ್ನು ಒದಗಿಸುತ್ತವೆ.
೧೦. ವೈಯಕ್ತಿಕ ಸಾಮರ್ಥ್ಯಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದನ್ನು ಸಾಧ್ಯವಾಗಿಸುತ್ತದೆ ಮತ್ತು ಕೆಲವೊಮ್ಮೆ ಈ ಸಾಮರ್ಥ್ಯಗಳ ಮೂಲಕ ಕಷ್ಟಕರವಾದ ಅಮೂರ್ತತೆಯನ್ನು ಅರ್ಥಮಾಡಿಕೊಳ್ಳಲು ಸೇತುವೆಯಾಗುತ್ತದೆ.
೧೧. ಪ್ರಕ್ರಿಯೆ ಮತ್ತು ವಿಷಯ ಸಾಮಾಗ್ರಿ ಎರಡರ ಕಲಿಕೆಯನ್ನು ಜೋಡಿಸುತ್ತವೆ.
೧೨. ಇವು ಶೈಕ್ಷಣಿಕ ಸಾಧನೆಗಳನ್ನು ಸುಧಾರಿಸುತ್ತವೆ - ಪರೀಕ್ಷೆಯಲ್ಲಿ ತೆಗೆಯುವ ಅಂಕಗಳನ್ನು, ಧೋರಣೆಗಳನ್ನು, ಸಾಮಾಜಿಕ ಕೌಶಲ್ಯಗಳನ್ನು, ನಿರ್ಣಾಯಕ ಮತ್ತು ಸೃಜನಾತ್ಮಕ ಚಿಂತನೆಗಳನ್ನು ವೃದ್ಧಿಸುತ್ತವೆ.
೧೩. ವಿಮರ್ಶೆ, ನಿರ್ಮಾಣ, ಮೌಲ್ಯಮಾಪನ ಮತ್ತು ಸಮಸ್ಯಾ ಪರಿಹಾರದಂತಹ ಉನ್ನತ ಮಟ್ಟದ ಆಲೋಚನೆಗಳ ಕೌಶಲ್ಯಗಳನ್ನು ಅಭಿವೃದ್ಧಿಸುತ್ತವೆ ಮತ್ತು ಅಭ್ಯಸಿಸುವಂತೆ ಮಾಡುತ್ತವೆ.
೧೪. ಇವು ಯಾವುದೇ ಪರ್ಯಾಯ ಮೌಲ್ಯಮಾಪನದ ಪ್ರಮುಖವಾದ ಘಟಕವಾಗಿವೆ. 
೧೫. ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಯಲು ಇವು ಸಾಧನವನ್ನು ಒದಗಿಸುತ್ತವೆ.
ಮುಕ್ತಾಯ ಮತ್ತು ಸರಳ ತರಗತಿ ತಂತ್ರಗಳು:
ನಮ್ಮ ಶಾಲೆಗಳಲ್ಲಿ ಕಲೆಗೆ ಅತ್ಯಂತ ಕಡಿಮೆ ಅವಕಾಶವನ್ನು ನೀಡಿದ್ದೇವೆ.  ಹೀಗಿದ್ದರೂ, ವಿದ್ಯಾರ್ಥಿಗಳ ವೈವಿಧ್ಯತೆಯನ್ನು ಪರಿಗಣಿಸಿ ಮಾನವ ಅಭಿವೃದ್ಧಿಗಾಗಿ ಮತ್ತು ಸೃಜನಶೀಲತೆಗಾಗಿ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ವಿವಿಧ ಆಯ್ಕೆಗಳನ್ನು ಒದಗಿಸುವತ್ತ ಹೆಚ್ಚಿನ ಚಿಂತನೆಯನ್ನು ಮಾಡುವ ಕಡೆಗೆ ಇದೊಂದು  ಆಂದೋಲನ.
ಅಸಮರ್ಥತೆಯುಳ್ಳ ಮಕ್ಕಳಿಗೂ ಅಭಿವ್ಯಕ್ತಿ ಸ್ನೇಹಿ ಎಕತಾನತೆಯಿರದ ಕಲಾ ಪ್ರಕಾರಗಳಲ್ಲಿ ಸಾಕಷ್ಟು ಅವಕಾಶ ಮತ್ತು ಪರಿಸರ ದೊರಕುತ್ತದೆ.
ಆದ್ದರಿಂದ ಶಾಲೆಗಳು ಈ ವಿಷಯಗಳೆಡೆಗೆ ಗಮನ ಹರಿಸಬೇಕು:
ವಿವಿಧ ಪ್ರಕಾರಗಳನ್ಣೊಳಗೊಂಡಂತೆ ಹೆಚ್ಚು ಸಮಾವೇಶಿಯನ್ನಾಗಿಸುವುದು: ಒಂದೇ ರೀತಿಯ ಪ್ರತಿಸ್ಪಂದನೆಗಳ ಬದಲಿಗೆ ವೈವಿಧ್ಯಮಯವಾಗಿಸುವುದು
ವಿಭಿನ್ನ ಶಾಲಾ ವ್ಯವಸ್ಥೆಗಳ ಅತ್ಯುತ್ತಮ ಅಭ್ಯಾಸಗಳ ಶೋಧನೆ: ಈ ದಿನದ ಹಾಡು,
ಸ್ಥಳೀಯ ದಿನಗಳು: ಉಡುಗೆಗಳು, ಮುಖವಾಡಗಳು ಮತ್ತು ತಬಲಾ ವಾದಕಗಳ ವಸ್ತುಸಂಗ್ರಹಾಲಯದ ಬಳಕೆ
ಸ್ಥಳೀಯ ಕಲೆಗಳು ಮತ್ತು ಆಚರಣೆಗಳು: ವಿವಿಧ ಕಲಾವಿದರೊಂದಿಗೆ ಸಂಪರ್ಕ
ಮಕ್ಕಳಿಗೆ ಅಭಿಮುಖವಾದ  ಯೋಜನೆಗಳಿಗಾಗಿ ಕಲಾವಿದರೊಂದಿಗೆ ಸಂಪರ್ಕ ಹೊಂದಿರಿ 
 
 
ತರಗತಿಯಲ್ಲಿ ಲವಲವಿಕೆ ತುಂಬಲು ಕೆಲವು ಹೊಳಹುಗಳು
ಕಥೆಗಳನ್ನು ಓದುವುದು, ಒಟ್ಟಿಗೆ ನಗುವುದು, ಮಕ್ಕಳು ಪಾತ್ರಗಳಂತೆ ಅಭಿನಯಿಸಲು ಪ್ರೋತ್ಸಾಹಿಸುವುದು, ಧ್ವನಿಯ ಏರಿಳಿತವನ್ನು ಬಳಸುವುದು
ಕಲ್ಪನಾತ್ಮಕ ಆಟಗಳ ಸಮಯದಲ್ಲಿ  ಅಥವಾ ಗೊಂಬೆ ಇಡುವ ಸಮಯಗಳಲ್ಲಿ ಮನೆಯ ಚಹಾ ಸಮಾರಂಭಗಳಲ್ಲಿ ಸೇರುವುದು
ತಯಾರಿ ಕೋಣೆಯನ್ನು ಅಥವಾ ಮನೆಯ ಕೋಣೆಯನ್ನು ಮೂರು ಕರಡಿಗಳ ಕಥೆಯಲ್ಲಿನ ಪಾತ್ರಗಳಿಗೆ ಸ್ಥಳಗಳನ್ನು ವಿವಿಧ ಸಂಖ್ಯೆಯ ಮಕ್ಕಳ ಗುಂಪುಗಳನ್ನು ಒಟ್ಟುಗೂಡಿಸಿ ಮಾರ್ಪಡಿಸುವುದು. ಅದೇ ಸ್ಥಳವನ್ನು ಬಾಹ್ಯಾಕಾಶ ನೌಕೆಯನ್ನಾಗಿ ಅಥವಾ ವೈದ್ಯಕೀಯ ಚಿಕಿತ್ಸಾಲಯವನ್ನಾಗಿಸುವುದು.
ಮರದ ಚೌಕಗಳಿಂದ ಸೇತುವೆಗಳನ್ನು ಮತ್ತು ಗೋಪುರಗಳನ್ನು ಕಟ್ಟುವ ಆಟದಲ್ಲಿ ಮಕ್ಕಳೊಂದಿಗೆ ತೊಡಗಿಕೊಳ್ಳುವುದು.  ವಿವಿಧ ಭೂ ವಿನ್ಯಾಸಗಳನ್ನು ನಿರ್ಮಿಸಲು ಹಳೆಯ ರಟ್ಟಿನ ಪೆಟ್ಟಿಗಳು ಮತ್ತು ಎಲೆಗಳನ್ನು ಬಳಸುವುದು.
ಬೆರಳುಗಳನ್ನು ಬಳಸಿ ಆಟವಾಡುವುದನ್ನು ಮತ್ತು ಹಾಡುಗಳನ್ನು ಕಲಿಯಲು ಮಕ್ಕಳೊಂದಿಗೆ ಮಾತನಾಡಲು ಗೊಂಬೆಯಾಟದವರನ್ನು ಆಹ್ವಾನಿಸುವುದು.
ಹೊಸ ಉದ್ದೇಶಗಳು ಮತ್ತು ಕಾರ್ಯಗಳನ್ನು ಪ್ರೋತ್ಸಾಹಿಸಲು ತರಗತಿ ಪೀಠೋಪಕರಣಗಳ ಜೋಡಣೆಯನ್ನು ಬದಲಿಸುವುದು.
ಎಲ್ಲರೂ ಕೂಡಿ ಕಥೆಗಳನ್ನು ಕೇಳುವುದು ಮತ್ತು ಊಟ ಮಾಡುವುದಕ್ಕಾಗಿ ಮೇಜನ್ನು ಬಳಸುವ ಬದಲು ನೆಲದ ಮೇಲೆ ಕೂರುವುದು.
ಮಕ್ಕಳು ಕುಳಿತು ಓದುವುದಕ್ಕೆ ಮತ್ತು ಒಗಟುಗಳನ್ನು ಬಿಡಿಸುವುದನು ಅನುಕೂಲವಾಗುವ ಪ್ರತ್ಯೇಕ ಸ್ಥಳಗಳನ್ನು ನಿರ್ಮಿಸುವುದು.
ಪ್ರತಿ ನಿತ್ಯ ಬಳಸುವ ಸಾಮಾನ್ಯ ವಸ್ತುಗಳನ್ನು ಹೊಸ ಹೊಸ ರೀತಿಯಲ್ಲಿ ಬಳಸುವುದು.  ಉದಾಹರಣೆಗೆ, ರಬ್ಬರ್ ಚೆಂಡನ್ನು ಬಣ್ಣದಲ್ಲಿ ಅದ್ದಿ ಚಿತ್ರ ರಚಿಸುವುದು, ಪುಸ್ತಕವನ್ನು ಮಾತನಾಡುವ ಗೊಂಬೆಯನ್ನಾಗಿ ಬದಲಾಯಿಸುವುದು, ಅಥವಾ ಮೇಜನ್ನು ತಲೆಕೆಳಗಾಗಿಸಿ ದೋಣಿಯನ್ನಾಗಿಸುವುದು.
 
 
ಆಶಾರವರು ದೆಹಲಿಯಲ್ಲಿರುವ ಲೇಡಿ ಇರ್ವಿನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇಲ್ಲಿ ಇವರು ಮಾನವ ಬೆಳವಣಿಗೆ ವಿಷಯವನ್ನು ಬೋಧಿಸುತ್ತಿದ್ದಾರೆ.  ಇವರ ಮೂಲ ಆಸಕ್ತಿಯು ಶಿಕ್ಷಣದಲ್ಲಿ ಕಲೆಯನ್ನು ಬಳಸಿಕೊಳ್ಳುವುದು.  ಶಿಕ್ಷಣದಲ್ಲಿ ನಾಟಕದ ಪ್ರಯೋಗ ವಿಷಯದಲ್ಲು ಇವರು ಕಾರ್ಯನಿರ್ವಹಿಸಿದ್ದಾರೆ.  ಬೋಧಿಸುವುದಲ್ಲದೇ, ಇವರು ನಾಟಕವನ್ನು ಬೋಧನೆಯ ಹಾಗೂ ಸ್ವ-ಪರ್ಯಾಲೋಚನೆಯ ಸಾಧನವನ್ನಾಗಿ ಬಳಸಲು ಶಿಕ್ಷಕರು ಮತ್ತು ಮಕ್ಕಳೊಂದಿಗೂ ಕಾರ್ಯ ನಡೆಸುತ್ತಿದ್ದಾರೆ.  ನೃತ್ಯದಲ್ಲಿನ ತರಬೇತಿ ಮತ್ತು ನಾಟಕದಲ್ಲಿ ಇವರಿಗಿರುವ ಆಸಕ್ತಿಯು ನವೀನ ತರಗತಿ ಬೋಧನಾ ತಂತ್ರಗಳನ್ನು ಸೂಚಿಸುತ್ತವೆ.  ಎಳೆಯ ಮಕ್ಕಳ ಶಿಕ್ಷಣದಕ್ಕೂ ಇವರು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.  ಎಳೆಯ ಮಕ್ಕಳ ಶಿಕ್ಷಣದ ಮಟ್ಟದಲ್ಲಿ ಪ್ರಾಥಮಿಕ ಮಟ್ಟದವರೆಗೂ ಇವರು ಶಿಕ್ಷಕರೊಂದಿಗೆ ನಿಕಟವಾಗಿ ಕಾರ್ಯವೆಸಗುತ್ತಿದ್ದಾರೆ.  
 
18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು