ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೆ ಸೂಕ್ತ ಗುರು ವಂದನ

ಕರ್ನಾಟಕವು ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಶಿಕ್ಷಕರ ದಿನದಂದು “ಗುರು ಚೇತನ” ಎಂಬ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯ ಒಂದು ಸಾಮರ್ಥ್ಯ ವರ್ಧನೆಯ ಯೋಜನೆಯನ್ನು ಪ್ರಾರಂಭಿಸಿದೆ.

ಸರ್ವೆಪಲ್ಲಿ ರಾಧಾಕೃಷ್ಣನ್ ಅವರು 1888 ರ ಸೆಪ್ಟೆಂಬರ್ 5 ರಂದು ಜನಿಸಿದರು. ತೌಲನಿಕ ಧರ್ಮ ಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ವಿಶೇಷ ವಿದ್ವಾಂಸರಾದ ಅವರು ಈ ವಿಷಯ ಗಳ ಬಗ್ಗೆ ಪಾಂಡಿತ್ಯ ಪೂರ್ಣವಾಗಿ ಅದ್ಭುತ ಕೃತಿಗಳನ್ನು ರಚಿಸಿದ್ದೇ ಅಲ್ಲದೆ  ಮೈಸೂರು, ಕಲ್ಕತ್ತಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಬೋಧಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದ ಉತ್ತರಾರ್ಧದಲ್ಲಿ  , ಅವರು ಶೈಕ್ಷಣಿಕ ಜೀವನವನ್ನೂ ಮೀರಿ ಸಾರ್ವಜನಿಕ ಜೀವನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. 1952 ರಲ್ಲಿ ಅವರು ಭಾರತದ  ಮೊತ್ತಮೊದಲ ಉಪರಾಷ್ಟ್ರಪತಿಯಾದರು ಮತ್ತು 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾದರು.

ಅವರು ತಮ್ಮ ಅನೇಕ ಪಾತ್ರಗಳನ್ನು ಬಲು ಉತ್ಕೃಷ್ಟವಾಗಿ ನಿರ್ವಹಿಸಿದರು, ಆದರೂ ಅವರು ತಮ್ಮ  ಅಂತರಾಳದಲ್ಲಿ ಮಹಾನ್ ತತ್ವಶಾಸ್ತ್ರಜ್ಞರಾಗಿಯೇ ಉಳಿದಿದ್ದರು, ಹಿಂದೂ ಧರ್ಮದ ಅನುಯಾಯಿಗಳು ಮತ್ತು ಅದರ ಟೀಕೆ ಮಾಡುವವರಿಗೆ ಅದನ್ನು ವಿಷದವಾಗಿ ವಿವರಿಸಲು ಪ್ರಯತ್ನಿಸಿದರು. ಅವರು ರಾಷ್ಟ್ರಪತಿಯಾದಾಗ, ಅವನ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಅವರ ಜನ್ಮದಿನವನ್ನು ಆಚರಿಸಲು ಬಯಸಿದರು. ಆಗ ಅವರು ಈ ರೀತಿ ಹೇಳಿದರು: "ನನ್ನ ಜನ್ಮದಿನವನ್ನು ಆಚರಿಸುವ ಬದಲಾಗಿ, ಸೆಪ್ಟೆಂಬರ್ 5 ನೇ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಇದು ನನಗೆ ಬಲು ಹೆಮ್ಮೆಯಾಗುತ್ತದೆ."

ಹಿಂದೂ ಧರ್ಮ ಮತ್ತು ಭಾರತದ ಸಾಂಸ್ಕೃತಿಕ ಸಂಪ್ರದಾಯಗಳ ಬಗ್ಗೆ ಸ್ಪಷ್ಟ ನಿಲುವಿನ, ಮುಕ್ತ ಮನಸ್ಸಿನ ಮತ್ತು ಹೆಮ್ಮೆಯ ಪ್ರತಿಪಾದಕರಾದ  ರಾಧಾಕೃಷ್ಣನ್  ಅವರು ಶಿಕ್ಷಕರ ದಿನವು ಬರುಬರುತ್ತಾ ನೀರಸ ಆಚರಣೆಯಾಗಿ ಬದಲಾಗಿ  ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದು ಪರಿಗಣಿಸಿದರೆ ಆಶ್ಚರ್ಯವಾಗುವುದಿಲ್ಲ . ನಮ್ಮ ಅನೇಕ ಸಂಪ್ರದಾಯಗಳ ಗತಿಯೂ ಇದೇ ಆಗಿದೆ.  ವರ್ಷದಲ್ಲಿ   ಒಂದು ದಿನ ಶಿಕ್ಷಕರಿಗೆ ಹಾರ ಹಾಕಿ ಸನ್ಮಾನಿಸಿ ಶಿಕ್ಷಕರ ಬಗ್ಗೆ ಉದ್ದುದ್ದ  ಭಾಷಣ ಮಾಡಿಬಿಟ್ಟರೆ ಅದು ಮುಂದೆ ವರ್ಷವಿಡೀ ಸುಳ್ಳುಸುಳ್ಳೆ ಶಿಕ್ಷಕರ ಮಾನಕಳೆಯುವುದು  ಮತ್ತು ಶಿಕ್ಷಕರ ಅವಹೇಳನ  ಮಾಡುವಂತಹ ಸಾರ್ವಜನಿಕ ಸಂವಾದವನ್ನು ಉತ್ತೇಜಿಸಲು ಪರವಾನಗಿ ನೀಡುತ್ತದೆ ಎಂದು ನಾವು ನಂಬುತ್ತೇವೆ. ಭಾರತದ ಅತ್ಯುತ್ತಮ ವಿಜ್ಞಾನಿಗಳಲ್ಲಿ  ಒಬ್ಬರು, ಅಸ್ಖಲಿತ ಪ್ರಾಮಾಣಿಕತೆಗೆ ಹೆಸರಾದವರು ಮತ್ತು ಮಹಾನ್  ಬುದ್ಧಿವಂತರಾದ ನಮ್ಮ ಒಂದು  ವೈಜ್ಞಾನಿಕ ಸಂಸ್ಥೆಯ ಮುಖ್ಯಸ್ಥರೊಬ್ಬರು  ಕಳೆದ ವಾರ ನನಗೆ ಹೀಗೆ ಹೇಳಿದರು, " ಫೋಟೋ ತೆಗೆಸಿಕೊಳ್ಳುವ ಒಂದು ಅವಕಾಶದ ಸಂದರ್ಭವೊಂದನ್ನು ಬಿಟ್ಟರೆ ಬೇರೆ ಯಾವ ಸಂದರ್ಭದಲ್ಲೂ ಯಾರೂ ಶಿಕ್ಷಕರಿಗೆ  ಗೌರವವನ್ನು ಕೊಡುವುದಿಲ್ಲ . "

ಶಿಕ್ಷಕರ ಈ ಪರಿಸ್ಥಿತಿಗೆ ನಮ್ಮ ಹುಚ್ಚುಚ್ಚು  ಮಾಧ್ಯಮ ಮತ್ತು ಸರಿಯಾಗಿ ವಿಷಯ ತಿಳಿಯದ ಸಾರ್ವಜನಿಕರು ಕಾರಣ ಅಲ್ಲ. ಇದು  ರಚನಾತ್ಮಕ ಮತ್ತು ಸಾಂಸ್ಕೃತಿಕವಾಗಿಆಳವಾಗಿ  ಬೇರೂರಿದ ದುಸ್ಥಿತಿಯಾಗಿದೆ. ಶಿಕ್ಷಣ ವ್ಯವಸ್ಥೆಯನ್ನೂ ಇತರ ದೊಡ್ಡ ಕಟ್ಟುನಿಟ್ಟಿನ ಅಧಿಕಾರಿಶಾಹಿ ವ್ಯವಸ್ಥೆಗಳಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಸಾರ್ವಜನಿಕ ಹಾಗು ಖಾಸಗಿ ಕ್ಷೇತ್ರಗಳೆರಡರಲ್ಲೂ  ಶಿಕ್ಷಕರು ಕೆಳಮಟ್ಟದ ಕೆಲಸಗಾರರಾಗಿ ದುಡಿಯುತ್ತಾರೆ.  ಇದೆಲ್ಲ  ಶಿಕ್ಷಕರ ಸಬಲೀಕರಣದ ಕೊರತೆ, ಅವರನ್ನು ದಿನನಿತ್ಯ ನಡೆಸಿಕೊಳ್ಳುವ ರೀತಿ ಮತ್ತು ಅಪನಂಬಿಕೆಯ ಸರ್ವಾಧಿಕಾರಿ ಸಂಸ್ಕೃತಿಯಲ್ಲಿ ಎದ್ದುಕಾಣುತ್ತದೆ. ಅಷ್ಟೇ ಅಲ್ಲ  ಶಿಕ್ಷಕರನ್ನು ಅವರ ಕಾರ್ಯಕ್ಕೆ ಸಜ್ಜುಗೊಳಿಸುವ ದಿಶೆಯಲ್ಲಿ  ತೀರ ಕಡಿಮೆ ಹಣ ಹೂಡಿಕೆಯಲ್ಲಿ, ಅವರ ಪಾತ್ರ ಎಷ್ಟೊಂದು  ಸಂಕೀರ್ಣವಾದದ್ದು ಎಂಬುದನ್ನು ಸರಿಯಾಗಿ ಮನಗಾಣದೇ ಇರುವುದರಲ್ಲಿ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ  ಏನೇ ಕುಂದು ಕೊರತೆಗಳಾದರೂ ಶಿಕ್ಷಕರನ್ನೆ ಅದಕ್ಕೆ ಬಲಿಪಶುವಾಗಿಮಾಡುವುದರಲ್ಲೂ ಪ್ರಕಟವಾಗುತ್ತಿದೆ.ಶಾಲಾ ಶಿಕ್ಷಣದಲ್ಲಿನ ನಮ್ಮ ಸಮಸ್ಯೆಗಳ ಕೇಂದ್ರದಲ್ಲಿ ಶಿಕ್ಷಕರ ಬಗ್ಗೆ ಅಪನಂಬಿಕೆ,ಅವರ ಸಾಮರ್ಥ್ಯ ಹರಣ ಮತ್ತು ಅವರನ್ನು ಹೀಗಳೆಯುವ ವಿಷವರ್ತುಲ ಕೆಲಸ ಮಾಡುತ್ತದೆ.   ಇದು ಮನಸಿಲ್ಲದ ಮನಸ್ಸಿನಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆಯಿಂದ ಬದಲಾಗುವುದಿಲ್ಲ.

ಹೀಗಾಗಿ, ಶಿಕ್ಷಕದಿನಾಚರಣೆಯು ಶಿಕ್ಷಕನ ಯೋಗ್ಯ ಸ್ಥಾನಮಾನವನ್ನು ಅವರಿಗೆ ಮತ್ತೆ ದೊರಕಿಸಿಕೊಡುವ  ಒಂದು ಪ್ರಯತ್ನವಾಗುವುದ ಬಲು ಅಪರೂಪದ ಘಟನೆ . ಇಡೀ ರಾಜ್ಯದ ಶಾಲಾ ವ್ಯವಸ್ಥೆಯಲ್ಲಿ ಮೂಲಭೂತವಾದ ರಚನಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಯನ್ನು ಪ್ರಾರಂಭಿಸುವ ಮೂಲಕ ಇದನ್ನು ಮಾಡುತ್ತಿರುವುದು ಇನ್ನೂ ಗಮನಾರ್ಹ ಸಂಗತಿ.  ಕಳೆದ ವಾರ ನಡೆದ  ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ  ಕರ್ನಾಟಕ ಸರ್ಕಾರವು  ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯಾದ  "ಗುರು ಚೇತನ" ಕಾರ್ಯಕ್ರಮವನ್ನು ಪ್ರಾರಂಭಿಸಿತು. ದೇಶದಾದ್ಯಂತ ಶಿಕ್ಷಕ ವೃತ್ತಿಪರ ಅಭಿವೃದ್ಧಿಯ ಹೆಸರಿನಲ್ಲಿ ಏನಾಗುತ್ತದೆ ಎಂಬುದಕ್ಕೆ  ಹೋಲಿಸಿದಾಗ ಮಾತ್ರ ಇದರ ಪರಿಣಾಮ ಎಂಥದ್ದು  ಎಂದುನೋಡಲು ಸಾಧ್ಯವಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ, ಲಕ್ಷಾಂತರ ಶಿಕ್ಷಕರು ಶಿಕ್ಷಕ ತರಬೇತಿಯ ಕ್ರಮರಹಿತ ಮತ್ತು ಅಸಂಬದ್ಧ ಯಂತ್ರದ ಮೂಲಕ ಹಾದು ಹೋಗಿದ್ದಾರೆ. ತರಬೇತಿಗಾಗಿ ತೀರ ಕಿರಿದಾದ ವಿಷಯಗಳನ್ನು ಪ್ರತಿ ವರ್ಷವೂ ರಾಜ್ಯ ಮಟ್ಟದಲ್ಲಿ ಕೇಂದ್ರವಾಗಿ ನಿರ್ಧರಿಸಲಾಗುತ್ತದೆ. ಕೆಲವೇ ಕೆಲವು ವಿಷಯಗಳಲ್ಲಿ ನೂರಾರು ,ಸಾವಿರಾರು  ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದರಿಂದ ಪ್ರತಿ ಯೊಬ್ಬ  ಶಿಕ್ಷಕನ ನಿಜವಾದ ವೈಯಕ್ತಿಕ ತರಬೇತಿ ಅಗತ್ಯಗಳನ್ನು ಪೂರೈಸುವ  ಮಾರ್ಗವೇ ಇರಲಿಲ್ಲ. ವರ್ಷವಿಡೀ ನಡೆಯುವ ತರಬೇತಿಗಳಲ್ಲಿ ಯಾವುದೇ ಸುಸಂಗತತೆ ಮತ್ತು ಸಮನ್ವಯ  ಇರಲೇ ಇಲ್ಲ. ಈ ವಿಧಾನವು ಶಿಕ್ಷಕರಿಗೆ ತಮ್ಮ ಅಗತ್ಯ ತಿಳಿಸಲು ಯಾವ ಅವಕಾಶವನ್ನೂ ನೀಡದು .ಅಲ್ಲಿ ಅವರ ನೈಜ ಅಗತ್ಯಗಳನ್ನು ಯಾವುದೋ ಕೇಂದ್ರೀಕೃತ ವ್ಯವಸ್ಥೆಗೆ ತಲೆಬಾಗಿ ನಡೆಯಲು ನಿರ್ಲಕ್ಷಿಸಲಾಗುತ್ತದೆ. ವಾಸ್ತವ ತರಬೇತಿ ವಿಷಯ ಕ್ಕೆ ಬಂದರೆ ಅದು ಇನ್ನೂ ಕೆಡುಕು. ಸಾಮಾನ್ಯವಾಗಿ ತರಬೇತು ನೀಡುವವರನ್ನು ಯಾವುದೋ ಅನುಕೂಲಕ್ಕಾಗಿ ಆಯ್ಕೆಮಾಡಲಾಗುತ್ತದೆಯೇ ಹೊರತು ಅವರ ಬೋಧನಾ ಸಾಮರ್ಥ್ಯದ ಆಧಾರದ  ಮೇಲೆ ಅಲ್ಲ ಮತ್ತು ನಂತರ ಬೇಕಾಬಿಟ್ಟಿ ಯಾಗಿ ತರಬೇತಿ ನೀಡಲಾಗುತ್ತದೆ.

ಗುರು ಚೇತನವು ಸಂಪೂರ್ಣವಾಗಿ ವಿಭಿನ್ನವಾದ  ಕ್ರಾಂತಿಕಾರಕ ವಿಧಾನವನ್ನು ಅಳವಡಿಸಿಕೊಂಡಿದೆ.  ಈ ಅಂಶವು ಅದರ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಎದ್ದು ಕಾಣುತ್ತದೆ. ಇದರಲ್ಲಿ ಬಲು  ಎಚ್ಚರಿಕೆಯಿಂದ ಅಭಿವೃದ್ಧಿಪಡಿಸಲಾದ 100-150 ದಿನಗಳವರೆಗಿನ ಪಠ್ಯಕ್ರಮವಿದೆ. ಒಬ್ಬ ಶಿಕ್ಷಕ ಒಂದು ವರ್ಷದಲ್ಲಿ 10-15 ದಿನಗಳವರೆಗೆ ವೃತ್ತಿಪರ ಅಭಿವೃದ್ಧಿ ಪಡೆಯಲು ಹೋಗಬಹುದು. ಇಲ್ಲಿ ವಿಷಯದ ವ್ಯಾಪ್ತಿಯಲ್ಲಿ ಬಹಳಷ್ಟು ಆಯ್ಕೆಗಳ ಅವಕಾಶ ವಿರುವುದರಿಂದ, ವರ್ಷವಿಡೀ ಅರ್ಥಪೂರ್ಣವಾಗಿ ಒಂದಕ್ಕೊಂದು ಸಂಬಂಧಿತ ಪ್ರಯತ್ನಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಸಾಧ್ಯವಿದೆ . ಪಠ್ಯಕ್ರಮವು ವಿಷಯದ ಒಳಾಂಶಗಳು, ಬೋಧನಾ ವಿಧಾನ ಮತ್ತು ಸ್ವರೂಪದ ಜೊತೆಗೆ ಶೈಕ್ಷಣಿಕ ದೃಷ್ಟಿಕೋನದ ವಿಷಯಗಳನ್ನೂ ಒಳಗೊಳ್ಳುತ್ತದೆ.

ತರಬೇತಿ ಪಡೆಯುವ ಶಿಕ್ಷಕರು ವಿಷಯ ಮತ್ತು "ಮಾಡ್ಯೂಲ್" ಅನ್ನು ಆಯ್ಕೆ ಮಾಡಿ, ಸಂಬಂಧಿತ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ ಅನೇಕ ಇತರ ವಿಧಾನಗಳ ಮೂಲಕ ನೆರವು ಲಭ್ಯವಾಗುತ್ತದೆ, ಉದಾ. ಸಣ್ಣ ಮಾಸಿಕ ತರಬೇತಿ ಅವಧಿಗಳು, ಸಹೋದ್ಯೋಗಿ ಜಾಲಗಳು, ಆನ್ಲೈನ್ ನಲ್ಲಿ ಲಭ್ಯವಿರುವ ​​ವಾಚನಸಾಮಾಗ್ರಿಗಳು. ಶಿಕ್ಷಕರು ಏನನ್ನು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು, ವೈವಿಧ್ಯ ಮತ್ತು ಸಂಕೀರ್ಣತೆಯನ್ನು ಸಮರ್ಥವಾಗಿ ನಿಭಾಯಿಸಲು ಕಾರ್ಯಾಚರಣೆ ಮತ್ತು ಐಟಿ ವ್ಯವಸ್ಥೆಗಳನ್ನು ಸೂಕ್ತವಾಗಿ ಅಭಿವೃದ್ಧಿ ಪಡಿಸುವುದು ಅಗತ್ಯವಾಗಿದೆ. ‘ಗುರು ಚೇತನ’ಕ್ಕಾಗಿ 2,000 ತರಬೇತಿನೀಡುವವರನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ, ಮತ್ತು ಕಠಿಣವಾದ ಸಿದ್ಧತೆಯ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸಿ ಹೊರ ಬಂದಿರುತ್ತಾರೆ.

ಇದೆಲ್ಲವನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರವು 14 ತಿಂಗಳು ಶ್ರಮವಹಿಸಿ ಕೆಲಸವನ್ನು ಮಾಡಿದೆ. ನಾನು ಯಾವುದೇ ರಾಜ್ಯದಲ್ಲಿ ಈ ರೀತಿಯಲ್ಲಿ ಗಂಭೀರವಾಗಿ ಪಟ್ಟು ಹಿಡಿದು ದುಡಿಯುವ ಛಲವನ್ನು ದೀರ್ಘಕಾಲದವರೆಗೆ  ನೋಡಿರಲಿಲ್ಲ.ಇದನ್ನು ಅನುಷ್ಠಾನಕ್ಕೆ ತರುವಾಗ ತನ್ನದೇ ಆದ ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು, ಆದರೆ ಸಿದ್ಧತೆ ವಿಷಯಕ್ಕೆ ಬಂದರೆ ಇದಕ್ಕಿಂತ ಮಿಗಿಲಾದ ತಯಾರಿಕೆ ಮಾಡಲು ಸಾಧ್ಯವಿಲ್ಲ.

ಗುರು ಚೇತನದ ಶೈಕ್ಷಣಿಕ ದೃಷ್ಟಿಕೋನವು ,  ತನ್ನ ಸಮಗ್ರ ಪಠ್ಯಕ್ರಮ ಮತ್ತು ಬಹುವಿಧದ ನೆರವಿನ ಕಾರಣದಿಂದಾಗಿ ಈಗ ನಡೆಯುತ್ತಿರುವ ತರಬೇತಿ ಕಾರ್ಯಾಚರಣೆಗಳಿಗಿಂತ ಪೂರ್ಣವಾಗಿ ಭಿನ್ನವಾಗಿದೆ. ಶಿಕ್ಷಕರು ತಾವೇನು ಕಲಿಯಬೇಕೆಂಬುದನ್ನು ಆಯ್ಕೆ ಮಾಡುವ ಅವಕಾಶ ಪಡೆಯುವ ಕಾರಣ ಗುರು ಚೇತನವು   ಅವರನ್ನು ಸಬಲರನ್ನಾಗಿಸಿ ಹೊಸ ಸಾಂಸ್ಕೃತಿಕ ಬದಲಾವಣೆಗೆ ನಾಂದಿಹಾಡಿದೆ. ಇಲ್ಲಿ ಶಿಕ್ಷಕನು ನಿಷ್ಕ್ರಿಯ ಸ್ವೀಕೃತದಾರನಾಗಿ ಹೇಳಿಕೊಟ್ಟದಷ್ಟನ್ನು ಕಲಿತುಬರುವ ಚೈತನ್ಯ ರಹಿತ  ಪಾತ್ರವಾಗಿ ಉಳಿಯುವುದಿಲ್ಲ .ಇದು ಶಿಕ್ಷಕರನ್ನು  ತನ್ನ ಸ್ವಂತ ಉಮೇದಿನಿಂದ ಕಲಿಯುವ ಸಕ್ರಿಯ ಮತ್ತು ಸಚೇತನ ವ್ಯಕ್ತಿಯಾಗಿ  ಮಾರ್ಪಡಿಸುತ್ತದೆ.  ಅಷ್ಟೇ ಅಲ್ಲದೆ ಇದು ಮತ್ತೊಂದು ಪ್ರಬಲ ಸಂದೇಶವನ್ನು ರವಾನಿಸುತ್ತದೆ, ಸರ್ಕಾರವು ತನ್ನ ಶಿಕ್ಷಕರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡಿದೆ . ಇದಕ್ಕಿಂತ ಮಿಗಿಲಾದ ಕ್ರಾಂತಿ ಬೇಕೆ?.

ಈ ಒಂದು ಕ್ರಾಂತಿಕಾರಕ ಹೆಜ್ಜೆಯು ಮಾತ್ರವೇ ಇಡೀ ವ್ಯವಸ್ಥೆಯನ್ನು ಅದರ ಎಲ್ಲಾ ಅಂಶಗಳಲ್ಲೂ ಬದಲಾಯಿಸುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಇದೊಂದು ಶುಭಾರಂಭ  ಮತ್ತು ಇತರ ರಾಜ್ಯಗಳು ಅನುಕರಿಸಬಹುದಾದ ಮನೋಭಾವದ ಬದಲಾವಣೆ. ಇಂಥ ಶಿಕ್ಷಕ ಸಬಲೀಕರಣದ ಆಚರಣೆಯ ಮೂಲಕ ಸಲ್ಲಿಸಿದ ಅಭಿವಂದನೆಗೆ ಡಾ|| ರಾಧಾಕೃಷ್ಣನ್  ಖಂಡಿತಾ ಹೆಮ್ಮೆಪಡುತ್ತಿದ್ದರು.

 

ಅನುರಾಗ್ ಬೆಹರ್ ಅವರು ಅಜೀಂ ಪ್ರೇಂಜಿ ಫೌಂಡೇಶನ್ನಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ವಿಪ್ರೋ ಲಿಮಿಟೆಡ್ ಸಂಸ್ಥೆಯ  ಸುಸ್ಥಿರತೆ ಉಪಕ್ರಮಗಳ ನೇತಾರರಾಗಿದ್ದಾರೆ  . ಅವರು ಪರಿಸರ ಮತ್ತು ಶಿಕ್ಷಣದ ವಿಷಯಗಳ ಬಗ್ಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಲೇಖನವನ್ನು ಬರೆಯುತ್ತಾರೆ.

ಮೂಲ ಇಂಗ್ಲಿಷ್ ಲೇಖನಕ್ಕೆ ಲಿಂಕ್

http://www.livemint.com/Opinion/6gn1I3MFjt1fEOo2S8K5VL/An-appropriate-tr...

ಕನ್ನಡಾನುವಾದ :ಜೈಕುಮಾರ್ ಮರಿಯಪ್ಪ

 

18999 ನೊಂದಾಯಿತ ಬಳಕೆದಾರರು
7423 ಸಂಪನ್ಮೂಲಗಳು