ಮಕ್ಕಳ ಸಾಹಿತ್ಯದಲ್ಲಿ ಸಮಾವೇಶನದ ಹುಡುಕಾಟ- ಉಷಾ ಮುಕುಂದ

ಪ್ರತಿಯೊಬ್ಬರ ಬಾಲ್ಯದಲ್ಲೂ ಬಾಗಿಲು ತೆರೆದು ಭವಿಷ್ಯವನ್ನು ಬರಮಾಡಿಕೊಳ್ಳುವ ಒಂದು ಕ್ಷಣವು ಯಾವಾಗಲೂ ಇದ್ದೇ ಇರುತ್ತದೆ.- ಗ್ರಹಾಂ ಗ್ರೀನ್

ಮಕ್ಕಳ ಸಾಹಿತ್ಯದಲ್ಲಿ ಸಮಾವೇಶನ- ಇದೇನು ಸುಲಭದ ಕಥೆಯೇ?
ಓದುವುದರ ಪ್ರಯೋಜನವನ್ನು ಎಷ್ಟು ಹೇಳಿದರೂ ಸಾಲದು. ಈ ವಾಸ್ತವದ ಹಿನ್ನೆಲೆಯಲ್ಲಿ , ಎಲ್ಲಾ ವರ್ಗದ ಮತ್ತು ಸಾಮರ್ಥ್ಯದ ಮಕ್ಕಳಿಗೂ ಓದುವ ಪರಿಕರಗಳು ತಪ್ಪದೇ ಲಭ್ಯವಿರಬೇಕು. ಆದರೆ ಕೇವಲ ಲಭ್ಯತೆ ಒಂದೇ ಸಾಲದು. ಒಳ್ಳೆಯ ಮಾಹಿತಿಯುಳ್ಳ ಪುಸ್ತಕಗಳು ಲಭ್ಯವಿರಬೇಕು ಮತ್ತು ಮಕ್ಕಳು ತಾವು ಓದಿದ ಪುಸ್ತಕಗಳನ್ನು ಅವಲೋಕಿಸಿ ಅದಕ್ಕೆ ಸಂಬಂಧಿಸಿದಂತೆ ಮುಕ್ತವಾಗಿ ಮಾತನಾಡಲು ಅನುಕೂಲವಾಗುವಂತಹ ಸನ್ನಿವೇಶ ನಿರ್ಮಾಣ ಮಾಡಬಲ್ಲ ಸುಗಮಕಾರರು ಇರಬೇಕು.

ಸಮಾವೇಶನಕ್ಕೂ ಇಷ್ಟೇ ಸಮನಾದ ಅವಕಾಶವಿರಬೇಕು. ಸಮಾವೇಶನವೆಂದರೆ ಕಡಿಮೆ ತಿಳಿದವರನ್ನು ಹೆಚ್ಚು ತಿಳಿದವರೊಡನೆ ಒಟ್ಟುಗೂಡಿಸುವುದಲ್ಲ್ಲ. ಅದು ಎಲ್ಲರೂ ಸಮವೆಂದು ಪರಿಗಣಿಸಿ ಸಮಾವೇಶನವನ್ನು ಮಾಡುವುದು. ಆದ್ದರಿಂದ ಎಲ್ಲಾ ಮಕ್ಕಳೂ ಒಬ್ಬರಿನ್ನೊಬ್ಬರ ಜೀವನ ಶೈಲಿ, ಪರಿಸ್ಥಿತಿ ಮತ್ತು ವಿಶೇಷ ವಿವರಗಳನ್ನು ಓದಿ ಅರಿತುಕೊಳ್ಳುವುದು ಅತ್ಯಂತ ಅವಶ್ಯ.

ಮಗುವೊಂದು ಪುಸ್ತಕವನ್ನು ಓದಿದಾಗ, ಅವಳು ಅನೇಕ ರೀತಿಯಲ್ಲಿ ಅದರೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾಳೆ.. ಅದರ ವಿಷಯ ಮತ್ತು ಕಥಾವಸ್ತು ಅವಳ ಕಲ್ಪನೆಯನ್ನು ಆಕರ್ಷಿಸುತ್ತದೆ, ಒಂದೆರಡು ಪಾತ್ರಗಳನ್ನು ತಾನೇ ಅದು ಎಂಬಂತೆ ಬಲವಾಗಿ ಗುರುತಿಸಿಕೊಳ್ಳುತ್ತಾಳೆ, ಅದರಲ್ಲಿನ ಚಿತ್ರಗಳು ಮನದಲ್ಲೇನೋ ಮಿಡಿಯುತ್ತವೆ. ಅಲ್ಲಿನ ಭಾಷೆಯು ಅವಳ ಮನಸ್ಸಿನ ಭಾವಗಳನ್ನೆ ಬಿಂಬಿಸಿದಂತೆ ಭಾಸವಾಗುತ್ತದೆ. ಪುಸ್ತಕವನ್ನು ಓದಿ ಮುಗಿಸಿದ ನಂತರ, ಕೊನೆಯಲ್ಲಿ ಅರಿವಿಲ್ಲದೆಯೇ ಒಂದು ಚಿಂತನಾ ಪ್ರಕ್ರಿಯೆ ಆರಂಭವಾಗುತ್ತದೆ.

ನಗರ ಮತ್ತು ಗ್ರಾಮಾಂತರ ಹಿನ್ನೆಲೆಯುಳ್ಳ ಮಕ್ಕಳೊಂದಿಗೆ ನಾನು ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಹೇಳುವುದಾದರೆ ಜಗತ್ತಿನಾದ್ಯಂತ ಇರುವ ಕೆಲವೊಂದು ಪುಸ್ತಕಗಳು ಮಕ್ಕಳು ಯಾವ ಹಿನ್ನೆಲೆಯಿಂದ ಬಂದವರೇ ಆಗಿರಲಿ ಎಲ್ಲರಿಗೂ ಅಚ್ಚುಮೆಚ್ಚಿನವಾಗಿರುತ್ತವೆ. ಬಸವ ಅಂಡ್ ದ ಮ್ಯಾಜಿಕ್ ಡಾಟ್ಸ್ ಎನ್ನುವ ಕಥೆಯಲ್ಲಿ ಹಳ್ಳಿಯ ಹುಡುಗನೊಬ್ಬ ತನ್ನ ತಾಯಿಯೊಂದಿಗೆ ಕಾಡಿನ ಅಂಚಿನಲ್ಲಿ ವಾಸವಾಗಿರುತ್ತಾನೆ. ಅವರ ಜೀವನ ಸರಳ ಮತ್ತು ಕಷ್ಟಕರವಾಗಿತ್ತು. ನಗರದಲ್ಲಿ ಬೆಳೆದ ಹುಡುಗನೊಬ್ಬನು ಈ ಕಥೆಯನ್ನು ಓದಿ ಆಕರ್ಷಿತನಾಗಿ ಬಸವನೊಂದಿಗೆ ವಿಶೇಷ ಅನುಬಂಧವನ್ನು ಬೆಳೆಸಿಕೊಳ್ಳುತ್ತಾನೆ. ಅವನಿಗೆ ಕಥೆ ಮತ್ತು ಪಾತ್ರಗಳೆರಡೂ ಮೆಚ್ಚಿಗೆಯಾದವು.ಹೀಗೆ ಇಲ್ಲಿ ಯಾವುದೇ ಅಡೆತಡೆಗಳಿಲ್ಲ.

ಮತೊಬ್ಬ ಗ್ರಾಮೀಣ ಹಿನ್ನೆಲೆಯುಳ್ಳ ಹುಡುಗಿಯು ಸುರಾಂಗಿನಿ ಕಥೆಯನ್ನು ಮತ್ತೆ ಮತ್ತೆ ಓದಿ ತೀರ ವಿಭಿನ್ನ ಸಾಮಾಜಿಕ ಹಿನ್ನೆಲೆಯಿಂದ ಬಂದ ಮಕ್ಕಳಂತೆಯೇ ಅದರಲ್ಲಿರುವ ಸುಂದರ ಚಿತ್ರ ಮತ್ತು ವಿನ್ಯಾಸಗಳನ್ನು ಇಷ್ಟಪಡುತ್ತಾಳೆ. ಚುಸ್ಕಿತ್ ಗೋಸ್ ಟು ಸ್ಕೂಲ್ ಎನ್ನುವುದು ಲಢಾಕ್‌ನಲ್ಲಿ ವಾಸವಾಗಿರುವ ಗಾಲಿ ಕುರ್ಚಿಯಲ್ಲಿ ಜೀವನ ಕಳೆಯ ಬೇಕಾದ ಹುಡುಗಿಯೊಬ್ಬಳು ಶಾಲೆಗೆ ಹೋಗುವ ಕಥೆಯಾಗಿದೆ. ಆಕೆ ಸದಾ ನಗುಮುಖದ ಹುಡುಗಿಯಾಗಿದ್ದು, ಆಕೆ ಬಹಳ ಸ್ನೇಹಿತರನ್ನು ಹೊಂದಿರುತ್ತಾಳೆ. ಅವರೊಂದಿಗೆ ತಾನೂ ಶಾಲೆಗೆ ಹೋಗಲು ಸಾಧ್ಯವಿಲ್ಲವಲ್ಲ ಎನ್ನುವುದೇ ಅವಳಿಗೆ ಸದಾ ಕೊರಗು. ಅಲ್ಲಿನ ಭೂ ಪ್ರದೇಶ ಅವಳ ಗಾಲಿ ಕುರ್ಚಿಗೆ ಅನುಕೂಲಕರವಾಗಿಲ್ಲ. ಈ ಕಥೆಯ ಅಂತ್ಯ ವಿಶಿಷ್ಟವಾಗಿ. ಏಕೆಂದರೆ ಮಕ್ಕಳೇ ಆ ಸುಖಾಂತ್ಯಕ್ಕೆ ಕಾರಣರಾಗುತ್ತಾರೆ. ಓದುಗನಿಗೆ ಅದರಲ್ಲಿ ವರ್ಣಿಸಿರುವ ಭೂ ಪ್ರದೇಶದ ಸೌಂದರ್ಯವೇ ಕಣ್ತುಂಬಿ ಹೋಗಿದ್ದು, ಚುಸ್ಕಿತ್ ನ ಅಸಮರ್ಥತೆಯು ಯಾವುದೇ ರೀತಿಯಲ್ಲ್ಲಿ ಅವರ ಆನಂದಕ್ಕೆ ಅಡ್ಡ ಬರುವುದಿಲ್ಲ.

ನಾನು ತಿಂಗಳಿಗೊಮ್ಮೆ ಭೇಟಿನೀಡುವ ಅಸಮರ್ಥ ಮಕ್ಕಳ ಶಾಲೆಗೆ ’ಸಮಾವೇಶನವನ್ನು’ಒಳಗೊಂಡ ಈ ಕಥೆಯನ್ನು ಬಲು ಸಂತೋಷದಿಂದ ತೆಗೆದುಕೊಂಡು ಹೋದೆ. ಆಶ್ಚರ್ಯವೆಂದರೆ ಉಳಿದ ಯಾವುದೇ ಒಳ್ಳೆಯ ಕಥೆಗೆ ಪ್ರತಿಕ್ರ್ರಿಯಿಸುವಂತೆಯೇ ಇದಕ್ಕೂ ಆ ಮಕ್ಕಳು ಪ್ರತಿಕ್ರ್ರಿಯಿಸಿದರು. ಆ ಪುಸ್ತಕವನ್ನು ಮಕ್ಕಳು ಬಹಳು ಇಷ್ಟಪಟ್ಟರು ಆದರೆ ಚುಸ್ಕಿತ್ ತಮ್ಮಂತೆ ಒಬ್ಬಳು ಎಂದು ಯಾರೂ ಗುರುತಿಸಲು ಹೋಗಲಿಲ್ಲ.

ಆದ್ದರಿಂದ, ಓದುಗನಿಗೆ ತಾನು ತಿಳಿದಿರುವಂತಹ ಪರಿಸರ ಮತ್ತು ಪಾತ್ರಗಳಿರುವ ಕಥೆಗಿಂತ, ಮನದಲ್ಲಿ ಅಚ್ಚಳಿಯದೆ ಉಳಿಯುವ  ಪಾತ್ರಗಳು ಮತ್ತು ಕಾಲ್ಪನಿಕ ಕಲಾ ವಸ್ತುಗಳನ್ನು ಹೊಂದಿರುವ ಕಥೆಗಳು ನಿಜಕ್ಕೂ ಹೆಚ್ಚು ಮಹತ್ವ ಹೊಂದಿರುತ್ತವೆ ಎಂದು ಹೇಳೋಣವೇ. ತುಂಬ ಚೆನ್ನಾಗಿ ಬರೆದ ಉತ್ತಮ ಪುಸ್ತಕಗಳು ಎಲ್ಲಾ ಅಡೆತಡೆಗಳನ್ನು ಮೀರಿನಿಂತು ವಿಭಿನ್ನವಾದ ಹಿನ್ನೆಲೆಗಳಿಂದ ಬಂದಿರುವಂತಹ ಪುಟ್ಟ ಮಕ್ಕಳು ಅಂತಹ ಪುಸ್ತಕವನ್ನು ಒಂದೇ ರೀತಿಯಲ್ಲಿ  ಮೆಚ್ಚಿ ಆನಂದಿಸುವಂತೆ ಮಾಡಿದ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಆದರೂ, ಮಕ್ಕಳ ಕಥೆಗಳ ಕಥೆಗಾರರು ಮತ್ತು ಚಿತ್ರಕಾರರು ಆದಷ್ಟು ಸೂಕ್ಷ್ಮ ಗ್ರಹಿಕೆಯಿಂದ ಪ್ರತಿಯೊಬ್ಬ ಓದುಗನಿಗೂ ನಿಲುಕುವಂತೆ ಕೃತಿ ರಚಿಸಬೇಕು ಎಂದು ಬಲವಾಗಿ ಪ್ರತಿಪಾದಿಸ ಬೇಕಾದ ಅಗತ್ಯವಿದೆ  ಎನ್ನುವುದರಲ್ಲಿ ಎರಡು ಮಾತಿಲ. ಆದರೆ ಹೀಗೆ ಬರೆಯಲು ಹೊರಟ ಪುಸ್ತಕಗಳಿಗೆ ಅಡೆತಡೆ  ಪ್ರಾರಂಭದ ಹಂತದಿಂದಲೇ ಒದಗುತ್ತದೆ! ತಮಗೆ ಯಾವುದು ಸತ್ಯವೆಂದು ತೋರುತ್ತದೆಯೋ ಅದನ್ನು ಮಂಡಿಸಲು ಪ್ರತಿಯೊಬ್ಬ ಲೇಖಕ ಮತ್ತು ಕಲಾವಿದನಿಗೆ ಸೃಜನಶೀಲ ಸ್ವಾತಂತ್ರ್ಯ ಇರಲೇಬೇಕು.  ಆಗ ಎಲ್ಲಾ ಓದುಗರೂ ಆ ಧ್ವನಿಯ ಯಥಾರ್ಥತೆಗೆ ದನಿಗೂಡಿಸುತ್ತಾರೆ.

ಮಕ್ಕಳ ಸಾಹಿತ್ಯದಲ್ಲಿ ಸಮಾವೇಶನದ ವಿಷಯಗಳನ್ನು ಒಳಗೊಂಡಂತಹ ಪುಸ್ತಕಗಳು ಭಾರತದಲ್ಲಿ ಲಭ್ಯವಿವೆಯೇ?
ಮಹಿಳಾ ಅಧ್ಯಯನಕ್ಕಾಗಿ ಇರುವ ಅನ್ವೇಶಿ ಸಂಶೋಧನಾ ಕೇಂದ್ರ, ಹೈದರಾಬಾದ್ ಹೊರತಂದಿರುವ ಕಥಾಸರಣಿಯಲ್ಲಿ ಇದರ ಸಾಧ್ಯತೆಯೊಂದು ಕಂಡು ಬರುತ್ತದೆ. ಇಲ್ಲಿನ ಕಥಾ ವಸ್ತು ಮಕ್ಕಳನ್ನು (ನಮಗೆ) ಅಷ್ಟೊಂದು ಪರಿಚಯವಿಲ್ಲದ  ಸನ್ನಿವೇಶUಳಲ್ಲಿ  ಮಕ್ಕಳ ಚಿತ್ರವನ್ನು ನೀಡುತ್ತವೆ ಮತ್ತು ಮನಕಲಕಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅದರೂ ಮಕ್ಕಳು ಬಲು ಬೇಗ ಅದಕ್ಕೂ ತಮಗೂ ಸಂಬಂಧ ಕಲ್ಪಿಸಿಕೊಳ್ಳಲಾರರು ಎಂಬ ಕಾರಣದಿಂದ ಈ ಕಥೆಗಳು ಸ್ವಲ್ಪ ಕಡಿಮೆ ತೀವ್ರತೆಯನ್ನು ಹೊಂದಿರಬೇಕಿತ್ತು ಎಂದು ಯಾರಿಗಾದರೂ ಅನಿಸಬಹುದು.  ಆದರೆ ಮಕ್ಕಳ ಕಥೆಗಳಿಗೆ ಅವಶ್ಯವಿರುವ ಅತ್ಯಂತ ಬಲವಾದ ಮಾನದಂಡವೇನೆಂದರೆ ಅದು ’ತುಂಬ ಒಳ್ಳೆಯ ಕಥೆ’ ಯಾಗಿರಬೇಕು. ಇಂತಹ ವಿಭಿನ್ನ ಸ್ವರೂಪದ ಕಥೆಗಳಲ್ಲಿ ಹಿರಿಯರ ಮಧ್ಯ ಪ್ರವೇಶ ಅವಶ್ಯವಿರಬಹುದು ಆದರೂ ಅವು ನಮಗೆ ದಾರಿಯನ್ನು ತೋರಿಸುತ್ತವ.

ಮಕ್ಕಳ ಸಾಹಿತ್ಯದಲ್ಲಿ  ಸರ್ವರನ್ನು ಸರಿ ಸಮಾನಗೊಳಿಸುವ ಅಂಶಗಳು ಯಾವುವು?

೧.    ಅನೇಕ ಬಗೆಯ ಭಾಷೆಗಳಿರುವುದು ಅತ್ಯಾವಶ್ಯಕ
ಭಾರತದ ಎಲ್ಲಾ ರಾಜ್ಯಗಳಲ್ಲಿ ಅನೇಕ ಭಾಷೆಗಳು ತುಂಬಿತುಳುಕುತ್ತಿರುವ ಈ ಸನ್ನಿವೇಶದಲ್ಲಿ ಏಕಲವ್ಯ ಸಂಸ್ಥೆಯ ಸಾಧನೆ ನಿಜಕ್ಕೂ ಮೆಚ್ಚತಕ್ಕದ್ದು. ಕೇವಲ ಮುಖ್ಯವಾಹಿನಿಯಲ್ಲಿರುವ ಹಿಂದಿ, ಬೆಂಗಾಲಿ, ಮರಾಠಿ, ಗುಜರಾತಿ, ಉರ್ದು ಮತ್ತು ಛತ್ತೀಸ್‌ಘರಿ ಭಾಷೆಗಳಲ್ಲಿ ಮಾತ್ರವಲ್ಲದೇ, ಮಾಳ್ವಿ (ಮಧ್ಯಪ್ರದೇಶದ ಮಾಳ್ವ ಪ್ರಾಂತ್ಯದಲ್ಲಿ ಮಾತನಾಡುವ ಭಾಷೆ), ಬುಂದೇಲ್‌ಖಂಡಿ (ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರಾಂತ್ಯದಲ್ಲಿ ಮಾತನಾಡುವ ಭಾಷೆ), ಗೋಂಡಿ, ಕೊರ್ಕು (ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬುಡಕಟ್ಟು ಜನಾಂಗದ ಭಾಷೆಗಳು) ಮತ್ತು ಇತ್ತೀಚೆಗೆ ಕುಂಕ್ನ (ದಕ್ಷಿಣ ಗುಜರಾತಿನ ಬುಡಕಟ್ಟು ಜನಾಂಗದ ಬಾಷೆ) ಭಾಷೆ ಯಲ್ಲಿಯೂ ಪುಸ್ತಕಗಳನ್ನು ಪ್ರಕಟಿಸುವಂತಹ ದಿಟ್ಟ ಹೆಜ್ಜೆಯನ್ನು ಇವರು ಕೈಗೊಂಡಿದ್ದಾರೆ. ಇತರೆ ಪ್ರಕಾಶಕರಾದ ಪ್ರಥಮ್ ಮತ್ತು ತೂಕಲಿಕಾಗಳೂ ಅನೇಕ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರ ದ್ವಿಭಾಷಾ ಪುಸ್ತಕಗಳು ಸಮಾವೇಶನಕ್ಕೆ ಪ್ರೋv ಹದಾಯಕವಾಗಿವೆ. ಜ್ಯೋತ್ಸ್ನಾ ಪ್ರಕಾಶಕರು ಮರಾಠಿ ಓದುಗರಿಗೆ  ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಸಾಕಷ್ಟು ರಾಜ್ಯಗಳಲ್ಲಿ ಪ್ರಾಂತೀಯ ಪ್ರಕಾಶಕರಿದ್ದರೂ ಸಹ ಅವರ ಕೃತಿಗಳ ಗುಣಮಟ್ಟ ಏಕಪ್ರಕಾರವಾಗಿಲ್ಲ. ರಾಜ್ಯ ಸರ್ಕಾರಗಳು ಇದರತ್ತ ಗಮನ ಹರಿಸಿ, ಈ ಪ್ರಕಾಶಕರಿಗೆ ಹೇಗೆ ಬೆಂಬಲವನ್ನು ಒದಗಿಸಬೇಕು ಎನ್ನುವತ್ತ ಒತ್ತು ಕೊಡಬೇಕು.

೨.    ವಿಭಿನ್ನ ಪಾತ್ರಗಳು, ಕಲೆ ಮತ್ತು ಪರಿಸರ ಇರುವುದು
ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಬರಹಗಾರರು ಮತ್ತು ಚಿತ್ರಕಾರರು ಇದರಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಇದು ಕ್ರಮೇಣ ಜಾರಿಗೆ ಬರುತ್ತಿದೆ. ಪುಸ್ತಕಗಳು ನೈಜವಾಗಿ ಹೊರಹೊಮ್ಮುವಂತೆ ಮಾಡಲು ತಮ್ಮ ಬಾಲ್ಯದ ದಿನಗಳನ್ನು ನೆನಪಿಗೆ ತರುವಂತಹ ಪಾತ್ರಗಳು, ಕಲಾ ಪ್ರಕಾರಗಳು ಮತ್ತು ಪರಿಸರದ ಚಿತ್ರಣಗಳನ್ನು ಅವರು ಮಾಡುತ್ತಿದ್ದಾರೆ.  ಎನ್‌ಬಿಟಿ ಪ್ರಕಾಶನದ ಮಹಾಶ್ವೇತಾದೇವಿಯವರ ದ ವೈ-ವೈ ಗರ್ಲ್ ಇದಕ್ಕೆ ವಿಶಿಷ್ಟವಾದ ಉದಾಹರಣೆಯಾಗಿದೆ.

೩.    ವಿಭಿನ್ನ ಸಮುದಾಯ ಮತ್ತು ಸಂಸ್ಕೃತಿಗಳನ್ನು ಇಂದಿಗೆ ಸರಿಹೊಂದಿಸಿರಿ. ಅವುಗಳನ್ನು ಮ್ಯೂಸಿಯಂ ವಸ್ತುಗಳನ್ನಾಗಿಸಬೇಡಿ
ಸಮಾವೇಶಿ ಸಾಹಿತ್ಯವೆನ್ನುವುದು ಅನೇಕ ಬಾರಿ ’  ------ ನ ಜನಪದ ಕಥೆಗಳು’ ಮತ್ತು ’ ----- ನ ಪ್ರಾಚೀನ ಪುರಾಣ ಕಥೆ’ಗಳು  ಪರ್ಯಾಯ ರೂಪವಾಗಿರುತ್ತದೆ. ಆದರೆ ಅವುಗಳಲ್ಲಿ ಆಗಿನ ಕಾಲವನ್ನು ಅಥವಾ ಯುಗವನ್ನು ವೈಭವೀಕರಿಸಲಾಗುತ್ತದೆ. ಸಮಾವೇಶನದ ಅನುಭವವನ್ನು ಪಡೆಯಲು ಸಮಕಾಲೀನ ಕಥೆಗಳು ಇನ್ನೂ ಹೆಚ್ಚು ಸೂಕ್ತವೆನ್ನಿಸುತ್ತವೆ. ಎಸ್ಕಿಮೋ ಬಾಯ್ ಎನ್ನುವ ಪುಸ್ತಕದಲ್ಲಿ ಕೆಲವು ವಿಶಿಷ್ಟ ಅಂಶಗಳನ್ನು ಹೊರತುಪಡಿಸಿದರೆ ಅದೊಂದು ಸರ್ವೆ ಸಾಧಾರಣ ಕುಟುಂಬವೊಂದರ ಒಳ್ಳೆಯ ಪುಸ್ತಕವೆನಿಸಿದೆ. ಅದು ಇಗ್ಲೂನಲ್ಲಿ ವಾಸಿಸುವ ಅಥವಾ ಮೀನು ಹಿಡಿಯಲು ಮಂಜಿನಲ್ಲಿ ರಂಧ್ರಗಳನ್ನು ಕೊರೆಯುವ ಜನಗಳ ಕಥೆಯಲ್ಲ.
 
೪.        ಚರ್ವಿತ ಚರ್ವಣ ಎನಿಸದೆಯೂ ಹೆಮ್ಮೆಯ ಭಾವನೆಯನ್ನು ಪ್ರಚೋದಿಸಬಹುದು
ಮಕ್ಕಳು ತಮ್ಮ ಸಂಸ್ಕೃತಿ ಮತ್ತು ಲಿಂಗಕ್ಕೆ ಸಂಬಂಧಿಸಿದ ಕಥೆಗಳನ್ನು ಓದಿದಾಗ ಹೆಮ್ಮೆಯ ಭಾವನೆ ಪ್ರಚೋದನೆ ಆಗಬಹುದು.  ಹೂ ವಿಲ್ ಬಿ ನಿಂಗ್ ಥೌ ಎನ್ನುವ ಕಥೆಯಲ್ಲಿ ಮಣಿಪುರದ ಅರಸನ ಚಿಕ್ಕ ಮಗಳನ್ನು ರಾಜ್ಯದ ಅತಿ ಸೂಕ್ತ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುತ್ತಾರೆ. ಮಾಲು ಭಾಲು ವಿನಲ್ಲಿ ತಾಯಿ ಮಗಳ ಸಾಹಸವನ್ನು ನಾವು ಮೆಚ್ಚುತ್ತೇವೆ.
ಕಾಲಿ ಅಂಡ್ ದಿ ವಾಟರ್ ಸ್ನೇಕ್ ಏಕಪ್ರಕಾರತೆಯಿಂದ ಕೂಡಿದ್ದರೂ, ಹುಡುಗನೊಬ್ಬ ಹಾವನ್ನು ಹಿಡಿಯುವ ಸಾಹಸವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಈ ಎಲ್ಲಾ ಪುಸ್ತಕಗಳನ್ನು ತೂಲಿಕಾ ಪ್ರಕಾಶಕರು ಹೊರತಂದಿದ್ದಾರೆ.

ಎ ಮತ್ತು ಎ ಪ್ರಕಾಶಕರು, ಹೆಣ್ಣು ಮಕ್ಕಳಿಗಾಗಿ ಮೀಸಲಾದ ಅನೇಕ ಒಳ್ಳೆಯ ಪುಸ್ತಕಗಳ ಸರಣಿಯನ್ನು ಹೊರತಂದಿದ್ದಾರೆ. ಎನ್‌ಬಿಟಿಯ ಎಟೋವ ಮುಂಡಾ ವನ್ ದ ಬ್ಯಾಟಲ್ ಬುಡಕಟ್ಟು ಜನಾಂಗದ ಹುಡುಗನ ಕಥೆಯಾಗಿದ್ದು, ಆತ ಶಿಕ್ಷಣಕ್ಕಾಗಿ ಎಂತಹ ಕಷ್ಟಗಳನ್ನು ಎದುರಿಸುತ್ತಾನೆ ಎನ್ನುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
೫. ಸರಳತೆ
ಮನೋರಂಜಕ ಕಥೆಗಳನ್ನು ಮಕ್ಕಳು ಇಷ್ಟಪಡುತ್ತಾರೆ. ಕಥೆಗಳು ವಿಷಯಕ್ಕೆ ಅನುಗುಣವಾಗಿದ್ದರೂ ಸಹ, ಅದು ಸರಳ ನಿರೂಪಣೆ ಯಾಗಿರಬೇಕು. ಇದರಿಂದಾಗಿಯೇ ತೂಲಿಕಾ ಪ್ರಕಾಶನದ ಜ್ಯೂಸ್ ಸ್ಟೋರಿ ಮತ್ತು ಅಂಡರ್ ದ ನೀಮ್ ಟ್ರೀ ಬಹಳ ಜನಪ್ರಿಯವಾಗಿವೆ. ಇದರಲ್ಲಿ ವಿಷಯಗಳು ಸ್ವಲ್ಪ ಗಹನವೆನಿಸಿದರೂ, ಮಕ್ಕಳು ಅದನ್ನು ಸರಳವಾಗಿ ನಿಭಾಯಿಸುತ್ತಾರೆ ಏಕಲವ್ಯದ ಐ ಆಮ್ ಎ ಕ್ಯಾಟ್ ನಲ್ಲಿ ಹುಡುಗಿಯೊಬ್ಬಳು ಮನೆಗೆಲಸವನ್ನು ತಪ್ಪಿಸಿಕೊಳ್ಳಲು ತನ್ನ ತಾಯಿಯ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾಳೆ. ಅದರ ನಿರೂಪಣೆ ಮತ್ತು ಅಂದವಾದ ಜಲವರ್ಣದ ಚಿತ್ರಗಳಲ್ಲಿ ಅವರ ಆರ್ಥಿಕ ಪರಿಸ್ಥಿತಿಯು ನೈಜವಾಗಿ ಬಿಂಬಿತವಾಗಿದೆ. ಅವರ ಮನೆಯ ತಗಡಿನ ಮೇಲ್ಛಾವಣಿ, ಅತಿ ಕಡಿಮೆ ಸಾಮಾನುಗಳು ಮತ್ತು ಹರಿದ, ತ್ಯಾಪೆ ಹಾಕಿರುವ ಅಂಗಿಗಳನ್ನು ಗಮನಿಸಿ. ಆದರೆ ಅಲ್ಲೆಲ್ಲಿಯೂ ಲೇಖಕ ಅಥವಾ ಪಾತ್ರ ಯಾರಿಂದಲೂ ಯಾವುದೇ ಅನುಕಂಪವನ್ನು ಬಯಸುವುದಿಲ್ಲ. ಅದು ಯಾವುದೇ ಮಗುವು ತನ್ನನ್ನು ತಾನು ಹೋಲಿಸಿಕೊಳ್ಳಬಲ್ಲ ಮೋಜಿನ ಕಥೆಯಷ್ಟೇ.

೬.ವೈವಿಧ್ಯಮಯ ಕಥಾವಸ್ತುಗಳು
ಈ ವರೆಗೂ ಲೇಖಕರು ಮತ್ತು ಪ್ರಕಾಶಕರು ಆದಷ್ಟು ’ಸುರಕ್ಷಿತ’ವಾದ ವಿಷಯಗಳಲ್ಲಷ್ಟೇ ತೊಡಗಿದ್ದಾರೆ.ತಾರಾ ಪ್ರಕಾಶನದವರ  ಪೊನ್ನಿ ದಿ ಫ್ಲವರ್ ಸೆಲ್ಲರ್ ಮತ್ತು ಬಾಬು ದ ಹೋಟೆಲ್ ವೈಟರ್ ಖಂಡಿತವಾಗಿಯೂ ಉತ್ತಮ ಆರಂಭವೆನಿಸಿವೆ ಆದರೆ, ಎ ಡೇ ಇನ್ ದ ಲೈಫ್ ಆಫ್ ಲಕ್ಷ್ಮಿ ದ ಹಿಜಿರಾ ಆರ್ ಆಫ್ ಎ ಡಿಸೇಬಲ್ಡ್ ಚೈಲ್ಡ್? ಕಥೆ ತೆಗೆದುಕೊಂಡರೆ ಹೇಗೆ? ಆನ್ವೇಷಿ ತನ್ನ ಸ್ಯಾಕ್‌ಕ್ಲಾತ್‌ಮ್ಯಾನ್ನಲ್ಲಿ ಅತ್ಯಂತ ಕಠಿಣವಾದ ವಿಷಯವನ್ನು ತೆಗೆದುಕೊಂಡಿದೆ. ಇಲ್ಲಿ ತನ್ನದೇ ಕುಟುಂಬದ ದುರಂತವನ್ನು ಅನುಭವಿಸುತ್ತಿರುವ ಚಿಕ್ಕ ಹುಡುಗಿಯೊಬ್ಬಳು ಮಾನಸಿಕವಾಗಿ ಗೊಂದಲಗ್ರಸ್ತ   ವ್ಯಕ್ತಿಗೆ ಸ್ನೇಹಿತಳಾಗಿ ಹೇಗೆ ನೆರವಾಗುತ್ತಾಳೆ ಎಂಬುದು ಇಲ್ಲಿನ ಕಥೆ . ಇಂತಹ ಪರಿಸ್ಥಿತಿಯಲ್ಲಿ ನಾವೇ ಇದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆವು ಎಂಬ ಪ್ರಶ್ನೆಗೆ ಕಾರಣವಾಗುತ್ತದೆ. ಅನ್‌ಟೋಲ್ಡ್ ಸ್ಕೂಲ್ ಸ್ಟೋರೀಸ್ ನಲ್ಲಿ ಕೆಳ ಜಾತಿಯ ಹುಡುಗಿಯೊಬ್ಬಳಿಗೆ ಶಿಕ್ಷಕರು ಮತ್ತು ಸಹಪಾಠಿಗಳು ಶಿಕ್ಷೆ ಕೊಟ್ಟು ಯಾತನೆಯನ್ನು ನೀಡುತ್ತಾರೆ.

೭. ಎಳೆಯ ಓದುಗರು ತಾವೇ  ಚಿಂತಿಸಿ, ಇತರರೊಂದಿಗೆ ಚರ್ಚಿಸಿ ಒಂದು ಅಭಿಪ್ರಾಯಕ್ಕೆ  ಬರಲು ಕೆಲವೊಂದು ವಿಷಯಗಳನ್ನು ಹೇಳದೆಯೇ ಹಾಗೆಯೇ ಬಿಟ್ಟು ಬಿಡಿ.
ಬಿ. ಆರ್. ಅಂಬೇಡ್ಕರ್‌ರವರ ಜೀವನಾಧಾರಿತ ಕಾದಂಬರಿ ಭೀಮಾಯಣ ನಿಜವಾದ ಕಥೆಯಾಗಿದ್ದು, ಅತ್ಯುತ್ತಮ ಕಾದಂಬರಿ ಮತ್ತು ಕಲಾತ್ಮಕ ಚಿತ್ರಗಳಿಗೆ ಉತ್ತಮ ಉದಾಹರಣೆಯಾಗಿದೆ. ಮುಕುಂದ ಮತ್ತು ರಿಯಾಜ್ ದೇಶ ವಿಭಜನೆಯ ಸನ್ನಿವೇಶಗಳಿಗೆ ಒಳಗಾದ ಇಬ್ಬರು ಗೆಳೆಯರ ಕಥೆಯಾಗಿದೆ. ಇಲ್ಲಿರುವ ವಿಷಯಗಳು ಜಟಿಲವಾದರೂ ಪ್ರತಿಯೊಂದನ್ನೂ ವಿವರಿಸಿ ಹೇಳುವ ಅಗತ್ಯವಿಲ್ಲ. ಮುಂದೆ ಇನ್ನೂ ಸಾಕಷ್ಟು ವಿಷಯಗಳು ಬರಲಿವೆ ಎನ್ನುವುದು ಮಕ್ಕಳಿಗೆ ತಿಳಿಯಬೇಕಷ್ಟೇ. ದ ಅನ್‌ಬಾಯ್ ಬಾಯ್ ಇದಕ್ಕೆ ಮತ್ತೊಂದು ಉದಾಹರಣೆ.

.ವಿಶಾಲವಾದ ಕಥಾ ಹಂದರದಲ್ಲ್ಲಿ ಹೆಣೆದ ವಿಭಿನ್ನತೆಯ ಕಥೆ ಮತ್ತು ಕಥಾವಸ್ತು
ಟಾಗೋರ್‌ರವರ ಕಾಬೂಲಿವಾಲಾವನ್ನು ನಾವು ಹೀಗೆ ಓದಿ ನೋಡಬಹುದು. ಬಲು ಗಟ್ಟಿಯಾದ ಅಪ್ಪ-ಮಗಳ ಸಂಬಂಧದ ನಡುವೆ  ಈ ’ಅಪರಿಚಿತನ’  ಪ್ರವೇಶವಾಗುತ್ತದೆ.

.ಸುಲಭವಾಗಿ ಸಿಗುವುದು ಮತ್ತು ಕೈಗೆಟಕುವುದು
ಈ ನಿಟ್ಟಿನಲ್ಲಿ ಎನ್‌ಬಿಟಿ ಮತ್ತು ಪ್ರಥಮ್ ಪುಸ್ತಕಗಳು ಅತಿ ದೂರದ ಪ್ರದೇಶಗಳಲ್ಲಿ ತಮ್ಮ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಿ, ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುವುದರ ಮೂಲಕ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ.

೧೦.    ವಾಸ್ತವಿಕತೆ, ಅತಿ ಭಾವುಕತೆಯ ಹೊರೆಯನ್ನು ಹೇರದೇ, ಇದ್ದುದನ್ನು ಇದ್ದ ಹಾಗೇ ಹೇಳುವುದು
ರೂಪ ಪ್ರಕಾಶನದ ರಸ್ಕಿನ್ ಬಾಂಡ್ ಬರೆದ ಆಂಗ್ರಿ ರಿವರ್ ಸೊಕ್ಕಿದ ನದಿಯ ಪ್ರವಾಹದ ಕಥೆಯಾಗಿದ್ದು, ಒಂದು ಚಿಕ್ಕ ಹುಡುಗಿ ಮತ್ತು ಆಕೆಯ ತಾತ-ಅಜ್ಜಿಯ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಬಿಂಬಿಸುತ್ತದೆ- ಸರಳವಾದರೂ ಭಾವುಕತೆಯಿಂದ ಕೂಡಿದೆ.
೧೧.    ವಾಸ್ತವ ಕಥೆಗಳು
ತಾರಾ ಪ್ರಕಾಶನದ ಟ್ರಾಷ್-ಆನ್ ರ‍್ಯಾಗ್ ಪಿಕ್ಕರ್ ಚಿಲ್ಡ್ರನ್ ಅಂಡ್ ರಿಸೈಕ್ಲಿಂಗ್ ಮತ್ತು ತೂಲಿಕಾ ಪ್ರಕಾಶನದ ಸುರೇಶ್ ಅಂಡ್ ದ ಸೀ ಇವೆರಡೂ ನಿರ್ದಿಷ್ಟ ಜೀವನಶೈಲಿಗೆ ಕಟ್ಟು ಬಿದ್ದ ಮಕ್ಕಳತ್ತ ಗಮನ ಹರಿಸುತ್ತವೆ. ವೈ ಆರ್ ಯು ಅಫ್‌ರೈಡ್ ಟು ಹೋಲ್ಡ್ ಮೈ ಹ್ಯಾಂಡ್ ನಲ್ಲಿ ಅಂಗವಿಕಲ ಮಗುವೊಂದು ತನ್ನ ’ ಆರೋಗ್ಯಶಾಲಿ’ ಗೆಳೆಯನಿಗೆ ಈ ಪ್ರಶ್ನೆಯನ್ನು ಕೇಳುತ್ತದೆ. ಏಕಲವ್ಯದ ಹಿಂದಿ ಭಾಷೆಯ ಪುಸ್ತಕ ಬೇಟಿ ಕರೇ ಸವಾಲ್ ಹೆಣ್ಣು ಮಕ್ಕಳಲ್ಲಿ ತಮ್ಮ ದೇಹ ಮತ್ತು ಅದರ ಬದಲಾವಣೆಯ ಬಗ್ಗೆ ಪ್ರಶ್ನಿಸುತ್ತದೆ. ನ್ಯಾಷನಲ್ ಬುಕ್ ಟ್ರಸ್ಟ್ ಅವರ ಸಂ ಸ್ಟ್ರೀಟ್ ಗೇಮ್ಸ್ ಆಫ್ ಇಂಡಿಯಾ ಖುಷಿ ಕೊಡುವ ಮತ್ತೊಂದು ಪುಸ್ತಕವಾಗಿದ್ದು, ಎಲ್ಲಾ ಹಿನ್ನೆಲೆಯಿಂದ ಬಂದಿರುವ ಮಕ್ಕಳು ಈ ಸರಳವಾದ ಆಟಗಳನ್ನು ನಿಜಕ್ಕೂ ಆನಂದಿಸುತ್ತಾರೆ ಎಂಬುದನ್ನು ತೋರಿಸಿಕೊಡುತ್ತದೆ.

೧೨.    ಬಾಯಿಯಲ್ಲಿ ಹೇಳಿದ ಕಥೆಗಳನ್ನು ಮಕ್ಕಳು ಬರೆಯುವುದು ಮತ್ತು ಹೊಸ ಕಥೆಗಳನ್ನು ರಚಿಸುವುದು.
ಇತ್ತೀಚೆಗೆ ಒಮ್ಮೆ, ದೂರ ಪ್ರದೇಶಗಳಲ್ಲಿರುವ ಸಮುದಾಯ ಗ್ರಂಥಾಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಂಥಾಲಯ ಶಿಕ್ಷಕರನ್ನು ಭೇಟಿಯಾದಾಗ ಮಕ್ಕಳು ಮಾತನಾಡುವ ಭಾಷೆಯನ್ನು ತಾವು ಕಲಿತು ತಾವು ಅವರೊಂದಿಗೆ ಅದೇ ಭಾಷೆಯಲ್ಲಿ ಮಾತನಾಡುವುದು ತಮ್ಮ ಮೊದಲ ಆದ್ಯತೆ ಎಂದರು. ಇದಾದ ನಂತರ ಅವರು ಕಥೆಗಳನ್ನು ಪಾರ್ಧಿ ಎನ್ನುವ ಸ್ಥಳೀಯ ಭಾಷೆಗೆ ಅನುವಾದಿಸಿ, ಕೊನೆಯ ಹಂತದಲ್ಲಿ ಮಕ್ಕಳು ಸ್ವತಃ ಕಥೆಗಳನ್ನು ಬರೆಯುವಂತೆ ಮಾಡಿದರು. ಮಹಾರಾಷ್ರ್ಟದಲ್ಲಿರುವ ಮತ್ತೊಂದು ಗುಂಪು ಇದೇ ಮಾದರಿಯನ್ನು ಪರಿಶೋಧಿಸಿತು. ಮಕ್ಕಳ ಸಮಾವೇಶಿ ಪುಸ್ತಕಗಳಿಗೆ ಒಂದು ಹೊಸ ಕಲ್ಪನೆ!

ಈ ಹಿಂದೆಯೇ ಹೇಳಿರುವ ಪ್ರಕಾಶಕರ ಜೊತೆಗೆ, ಪುಣೆಯ ಸೆಂಟರ್ ಫಾರ್ ಲರ್ನಿಂಗ್ ರಿಸೋರ್ಸಸ್ (ಶಿಕ್ಷಣ ಸಂಪನ್ಮೂಲ ಕೇಂದ್ರ) ಮತ್ತು ದೆಹಲಿಯ ಖೇಲ್ ಕಿತಾಬ್‌ಗಳೆರಡೂ ತಮ್ಮ ಪ್ರಕಟಣೆಗಳಲ್ಲಿ ಸಮಾವೇಶಿ ವಿಷಯಗಳನ್ನು ಸೇರಿಸಿಕೊಂಡಿದ್ದಾರೆ. ಪರಾಗ್ ಇನಿಷಿಯೇಟೀವ್ ಕೂಡ ಮಕ್ಕಳ ಪುಸ್ತಕಗಳಿಗಾಗಿ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಆದರೂ ಅದು ತೀರ ಕಡಿಮೆ ಮತ್ತು ಆಗೊಮ್ಮೆ ಈಗೊಮ್ಮೆ ಕೊಡುವ ಸಹಾಯವಾಗಿದೆ.

ಕಡೆಯದಾಗಿ, ಅಡೆತಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಸಮಾವೇಶಿ ಸಾಹಿತ್ಯವೂ ಒಂದು ವಿಧಾನವಾಗ ಬಲ್ಲದು. ಆದರೆ ಇಲ್ಲಿ ಮಕ್ಕಳು ತಾವು ಕೇಳುವ ಕಥೆಗಳಲ್ಲಿ ತಮ್ಮನ್ನು ತಾವು ’ಗುರುತಿಸಿಕೊಳ್ಳುತ್ತಾರೆಯೇ’ ಎನ್ನುವುದು ಅತಿ ಪ್ರಮುಖ ಅಂಶವಾಗಿದೆ. ಇಲ್ಲದಿದ್ದರೆ, ಮಕ್ಕಳ ಪುಸ್ತಕಗಳು ಸಮಾವೇಶಿಯಾಗುವ ಉದ್ದೇಶಹೊಂದಿದ್ದರೂ ಅದು ಮಕ್ಕಳ ಆಂತರಿಕ ಸಂವೇದನೆಯನ್ನು ತಲುಪುವಲ್ಲಿ ವಿಫಲವಾದಂತಹ ಅತ್ಯಂತ ದುರದೃಷ್ಟ ಪರಿಸ್ಥಿಯನ್ನು ತಂದೊಡ್ಡುತ್ತದೆ.

ಅಜ್ಞಾನವೇ ನಮ್ಮ ಒಡೆಯನಾದಾಗ, ನಿಜವಾದ ಶಾಂತಿಗೆ ಅಲ್ಲಿ ಎಡೆಯಿರುವುದಿಲ್ಲ- ಪರಮ ಪೂಜ್ಯ ದಲಾಯಿ ಲಾಮಾ.

ಧನ್ಯವಾದಗಳು: ನನ್ನ ವಿನಂತಿಯ ಮೇರೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನೊಂದಿಗೆ ಇ-ಮೇಲ್ ಮುಖಾಂತರ ಸಂಭಾಷಣೆಯನ್ನು ನಡೆಸಿದ ನನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಾದ- ಅರವಿಂದ ಅನಂತರಾಮನ್, ಆಶಾ ನೆಹೆಮಿಯ, ಗಾಯತ್ರಿ ತೀರ್ಥಾಪುರ ಮತ್ತು ಯಾಮಿನಿ ವಿಜಯನ್‌ರವರಿಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಅವರು ಕೊಟ್ಟ ಮಾಹಿತಿ ಇದರಲ್ಲಿ ಬಳಕೆಯಾಗಿ ಈ ಲೇಖನವನ್ನು ನಿಜಕ್ಕೂ ಸಮಾವೇಶಿಯನ್ನಾಗಿಸಿದೆ!

ಮಕ್ಕಳು ಮತ್ತು ಮಕ್ಕಳ ಪುಸ್ತಕಗಳೊಂದಿಗೆ ಉಷಾರವರ ೩೦ ವರ್ಷಗಳ ನಿರಂತರ ಒಡನಾಟ ಮೋಜಿನ ಜೊತೆಗೆ ಕಲಿಕೆಯಿಂದಲೂ ಕೂಡಿದೆ. ಈ ಪಯಣದಲ್ಲಿ ಅವರು ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿರುವುದರ ಜೊತೆಗೆ ಅದನ್ನು ಎಲ್ಲಾ ಮಕ್ಕಳು ಮತ್ತು ಕೆಲವು ದೊಡ್ಡವರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಅವರು ಗ್ರಾಮೀಣ ಮತ್ತು ಹಳ್ಳಿಗಳ ಗ್ರಂಥಾಲಯಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಅವರನ್ನು usha.mukunda@gmail.co ನಲ್ಲಿ ಸಂಪರ್ಕಿಸಬಹುದು.
 

19007 ನೊಂದಾಯಿತ ಬಳಕೆದಾರರು
7424 ಸಂಪನ್ಮೂಲಗಳು