ಬಹುಭಾಷಾ ತರಗತಿಯಲ್ಲಿ ಸಂಪನ್ಮೂಲವಾಗಿ ಇಂಗ್ಲಿಷ್ ಭಾಷೆಯ ಬಳಕೆ

ಪೀಠಿಕೆ

ಬಹುಭಾಷಾ ಬಳಕೆ ಕುರಿತ ಶೈಕ್ಷಣಿಕ ಲೇಖನಗಳನ್ನು ಓದುವುದು ಓರ್ವ ಶಿಕ್ಷಕನಿಗೆ ಬಲು ನಿರಾಶಾಧಾಯಕ ಅನುಭವವಾಗುವ ಸಾಧ್ಯತೆಯಿದೆ. ವೈಯಕ್ತಿಕ ಬಹುಭಾಷಾ ಸಾಮರ್ಥ್ಯ, ಸಾಮಾಜಿಕ ದ್ವಿಭಾಷಾಸಾಮರ್ಥ್ಯ, ಪ್ರಾದೇಶಿಕ ಬಹುಭಾಷಾ ಸಾಮರ್ಥ್ಯ ಅಥವಾ ಸಾಂಸ್ಥಿಕ ಬಹುಭಾಷಾ ಸಾಮರ್ಥ್ಯಗಳಂತಹ ಪರಿಭಾಷೆ ಗಳನ್ನು ಆತ ಎದುರಿಸಬೇಕಾಗುತ್ತದೆ. ಬಹುಭಾಷಾ ಬೋಧನೆ ಬಗ್ಗೆ ಚರ್ಚೆಗಳು ಅನೇಕ ವೇಳೆ ತೀರ ತಾತ್ವಿಕವಾಗಿದ್ದು,  ವಿವಿಧ ಭಾಷೆಗಳಲ್ಲಿ ಮಾತನಾಡುವ,  ಆದರೆ ಇಂಗ್ಲಿಷ್ ಅನ್ನು ಮೂಲಭೂತ ಸಂಭಾಷಣೆಗೂ  ಬಳಸಲು ಬಾರದಿರುವ ಮಕ್ಕಳಿರುವಂತಹ ಬಹುಭಾಷಾ ತರಗತಿಗಳಲ್ಲಿ ವೃತ್ತಿನಿರತ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ  ಅವು ಏನೇನೂ ಸಹಾಯವನ್ನು ಒದಗಿಸುವುದಿಲ್ಲ. ಆದ್ದರಿಂದ, ಬಹುಭಾಷಾ ಶಿಕ್ಷಣಶಾಸ್ತ್ರದ ಗುಣಾವಗುಣಗಳನ್ನು ಕುರಿತು ಸೈದ್ಧಾಂತಿಕ ಚರ್ಚೆಗಳನ್ನು ಪಕ್ಕಕ್ಕೆ ಇಟ್ಟು, ಈ ಲೇಖನವು ಭಾರತದ ಬಹುಭಾಷಾ ಇಂಗ್ಲಿಷ್ ಪಾಠದ ಕೋಣೆಗಳಲ್ಲಿ ಬಳಸಬಹುದಾದ ಕೆಲವು ಬೋಧನಾ ಪದ್ಧತಿಗಳನ್ನು ಅನ್ವೇಷಿಸುವ ಉದ್ದೇಶವನ್ನು ಹೊಂದಿದೆ.

2. ಭಾರತದಲ್ಲಿ ಬಹುಭಾಷಾಬಳಕೆಯನ್ನು ಅರ್ಥಮಾಡಿಕೊಳ್ಳುವುದು.

 ಶಿಕ್ಷಣದಲ್ಲಿ ಬಹುಭಾಷಾಬಳಕೆ ಸಾಮರ್ಥ್ಯ ಎನ್ನುವ ಪದಕ್ಕೆ ನಾವು ಮಾಡಿರುವಷ್ಟು ಅನ್ಯಾಯ ಬೇರಾವುದಕ್ಕೂ ಮಾಡಿರುವುದಿಲ್ಲ. ಅದರ ಅರ್ಥ, ಬಳಕೆ ಮತ್ತು ಬೋಧನೆಯಲ್ಲಿ ಅದೆಷ್ಟು ಪ್ರಸ್ತುತ ಎಂಬುದನ್ನೆಲ್ಲ ನಾವು ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಬೇಕು, ಭಾರತದ ಬಹುಭಾಷಾ ತರಗತಿಗಳನ್ನು ಅಮೆರಿಕಾ ಅಥವಾ ಕೆನಡಾದ ಬಹುಭಾಷಾ ತರಗತಿಯೊಂದಿಗೆ ಹೋಲಿಸಿ ನೋಡಲು ಹೋಗಬಾರದು. ಅಮೇರಿಕಾದ ಒಂದು ಮಾದರಿಯ ಬಹುಭಾಷಾ ತರಗತಿಯನ್ನು ತೆಗೆದುಕೊಂಡರೆ, ಅಲ್ಲಿ ಇಂಗ್ಲಿಷ್ ಭಾಷೆ ಕಲಿಯಲು ಬಂದಿರುವ ಎಲ್ಲರಿಗೂ  ಒಂದೇ ಮೊದಲ ಭಾಷೆ ಇರುವುದಿಲ್ಲ, ಕಲಿಯುವವರು ವಿಭಿನ್ನದೇಶಗಳು ಮತ್ತು ಸಂಸ್ಕೃತಿಗಳಿಂದ ಬಂದಿರುತ್ತಾರೆ ಮತ್ತು ಅವರು ತಮ್ಮತಮ್ಮ ನಿರ್ದಿಷ್ಟ ವಿದೇಶ ಭಾಷೆಯ ಮೂಲವನ್ನು ಅವಲಂಬಿಸಿ ಇಂಗ್ಲಿಷ್ ವಾಕ್ಯರಚನೆ ಮತ್ತು ಉಚ್ಚಾರಣೆಯಲ್ಲಿ ಬೇರೆ ಬೇರೆ ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಇಷ್ಟೆಲ್ಲಾ ಅಂಶಗಳಿದ್ದರೂ, ಅವರು ಕಲಿಯಲು ಬಂದಿರುವ  ಭಾಷೆಯಾದ  ಇಂಗ್ಲಿಷ್ ಶಾಲೆಯಲ್ಲಿ ವ್ಯಾಪಕವಾಗಿ ಹರಡಿರುತ್ತದೆ ಮತ್ತು ಕಲಿಯುವವರಿಗೆ ತಮ್ಮ ಮಾತೃ ಭಾಷೆಗಳಲ್ಲಿ ತಮ್ಮ ಆಲೋಚನೆಗಳನ್ನು ಹೇಳಿ ಹರಟೆ ಹೊಡೆಯಲು ಅಥವಾ ವಿಚಾರಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ಕಾರಣ ಅವರ ಸಹಪಾಠಿಗಳೊಂದಿಗೆ ಇಂಗ್ಲಿಷ್ ನಲ್ಲಿ ಸಂಭಾಷಣೆ  ಮಾಡದೇ ಗತ್ಯಂತರವಿಲ್ಲ. ಆದರೆ ಭಾರತದ ಬಹುಭಾಷಾ ತರಗತಿಯಲ್ಲಿ, ಬಹುಪಾಲು ಮಕ್ಕಳು ಸಾಮಾನ್ಯವಾಗಿ  ಒಂದೇ ಮೊದಲ ಭಾಷೆಯನ್ನು ಹೊಂದಿರುತ್ತಾರೆ, ಅವರ ಮೊದಲ ಭಾಷೆಗಳು ತಮ್ಮ ಸಹಪಾಠಿಗಳ ಮೊದಲ ಭಾಷೆಗಳೊಂದಿಗೆ ಬಹಳಷ್ಟು ಹೋಲಿಕೆಗಳನ್ನು ಹೊಂದಿರುತ್ತವೆ ಮತ್ತು ಅವರು ಒಂದೇ ಸಾಂಸ್ಕೃತಿಕ ಪರಂಪರೆಯ ಬಂಧವನ್ನು ಹೊಂದಿರುತ್ತಾರೆ, ಇದರಿಂದ ಹಲವಾರು ಭಾರತೀಯ ಭಾಷೆಗಳಲ್ಲಿ ಮಾತನಾಡುವ ಮಕ್ಕಳಲ್ಲಿ ಭಾಷಾ ಮೈಗೂಡಿಸಿಕೊಳ್ಳುವಿಕೆಯು ಅಪ್ರಜ್ಞಾಪೂರ್ವಕ ಪ್ರಕ್ರಿಯೆಯಾಗಿರುತ್ತದೆ. ಬಹುಭಾಷಾ ತರಗತಿಗೆ  ಹಾಜರಾಗುತ್ತಿರುವ ಅಮೆರಿಕಾದ ವಲಸೆಗಾರ ಮಕ್ಕಳಿಗೆ ಹೋಲಿಸಿದರೆ, ಬಹುಭಾಷಾ ತರಗತಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಯುವ ಭಾರತೀಯ ಮಕ್ಕಳು ಇಂಗ್ಲಿಷ್ ಬಾಷೆಯನ್ನು ಬಿಟ್ಟು  ಇತರ ಭಾಷೆಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಹರಟೆ ಹೊಡೆಯಬಲ್ಲರು ಮತ್ತು ಸಂಭಾಷಣೆ ಬಲ್ಲರು

ಅಮೇರಿಕಾದ ಬಹುಭಾಷಾ ತರಗತಿ ಕೋಣೆಯ ಪರಿಸರಕ್ಕೂ ಮತ್ತು ಭಾರತೀಯ ಬಹುಭಾಷಾ ತರಗತಿ ಕೋಣೆಯ ಪರಿಸರಕ್ಕೂ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಇಂಗ್ಲಿಷ್ ಶಿಕ್ಷಕರ ಗುಣಮಟ್ಟ ಮತ್ತು ಪರಿಣತಿ.  ಅಮೇರಿಕಾದಲ್ಲಿನ ಇಂಗ್ಲಿಷ್ ಶಿಕ್ಷಕರು ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು ಮಾತ್ರವಲ್ಲ  , ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡಲು ಸೂಕ್ತ  ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ಭಾರತದಲ್ಲಿ, ದುರದೃಷ್ಟವಶಾತ್, ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತಿರುವ ಶಿಕ್ಷಕರು ಬಹಳ ಸಾರಿ ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡಲಾರರು ಅಥವಾ ಇಂಗ್ಲಿಷ್ ಅಥವಾ ಇತರ ಯಾವುದೇ ಭಾಷೆಯನ್ನು ಕಲಿಸಲು ಅವರು ಸಾಕಷ್ಟು ತರಬೇತಿ ಪಡೆದಿರುವುದಿಲ್ಲ. ಬಹು ಭಾಷಾ  ಶಿಕ್ಷಣ ಪದ್ಧತಿಯನ್ನು ಬಳಸುವ ಭಾರವು ಶಿಕ್ಷಕರ ಮೇಲೆ ಇರುವಾಗ, ಸರಿಯಾಗಿ ಸಜ್ಜಾಗಿರದ ಭಾರತೀಯ ಇಂಗ್ಲಿಷ್ ಶಿಕ್ಷಕನು ಬಹುಭಾಷಾ ಶಿಕ್ಷಣ ವಿಧಾನವನ್ನು  ಬಳಸುವ ಗೋಜಿಗೇ  ಹೋಗುವುದಿಲ್ಲ.

ಭಾರತೀಯ ಇಂಗ್ಲೀಷ್ ಬಹುಭಾಷಾ ತರಗತಿ ಮತ್ತು ಅಮೆರಿಕಾದ ಇಂಗ್ಲೀಷ್ ಬಹುಭಾಷಾ ತರಗತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸುವ ಮೂಲಕ ಬಹುಭಾಷಾ ತರಗತಿಗಳಲ್ಲಿ ಇಂಗ್ಲಿಷ್ ಅನ್ನು ಒಂದು ಸಂಪನ್ಮೂಲವನ್ನಾಗಿ  ಚರ್ಚಿಸಲು ಪ್ರಾರಂಭಿಸಿದ್ದೇನೆ. ಏಕೆಂದರೆ ವಿಶ್ವದಾದ್ಯಂತದ ಇಂಗ್ಲಿಷ್ ಭಾಷೆ ಬೋಧನೆಯ ತಜ್ಞರು ಮತ್ತು ಅದನ್ನು ಬಳಸಿ ಬೋಧಿಸುತ್ತಿರುವವರು ಪ್ರತಿಪಾದಿಸಿದ ಬಹುಭಾಷಾ ತತ್ವ ಮತ್ತು ಬಹುಭಾಷಾ ಶಿಕ್ಷಣಶಾಸ್ತ್ರದ ಸಿದ್ಧಾಂತಗಳು ಸ್ಥಳೀಯವಾಗಿ ಮತ್ತು ಸಾಂಧರ್ಭಿಕವಾಗಿ ಭಾರತೀಯ ಇಂಗ್ಲಿಷ್ ಶಿಕ್ಷಕರಿಗೆ ಅಪ್ರಸ್ತುತವಾಗಿರುತ್ತವೆ. ಭಾರತದಲ್ಲಿ ಇಂಗ್ಲಿಷನ್ನು  ಕಲಿಯುವವರು ವಲಸಿಗರೂ ಅಲ್ಲ ಅಥವಾ ದ್ವಿಭಾಷಿಗರಾಗಿದ್ದು, ತಮ್ಮ ಭಾಷೆ ಮರೆತರೂ ಪರವಾಗಿಲ್ಲ  ಇಂಗ್ಲಿಷ್ ನಲ್ಲಿ ಸಂಪೂರ್ಣವಾಗಿ ಮುಳುಗಿಹೋಗಲು ಬಯಸುತ್ತಾರೆ. ಭಾರತದ ಬಹುಭಾಷಾ ಇಂಗ್ಲಿಷ್ ತರಗತಿಗಳಲ್ಲಿ ಇಂಗ್ಲಿಷ್ ಭಾಷೆಯು  ಪ್ರಬಲ ಭಾಷೆಯ ಸ್ಥಾನವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಮತ್ತು ಆದ್ದರಿಂದ, ಭಾರತೀಯ ಬಹುಭಾಷಾ ಪರಿಸರದಲ್ಲಿ  ಇಂಗ್ಲಿಷ್ ಭಾಷೆ ಬೋಧನೆಯ ಶಿಕ್ಷಣಶಾಸ್ತ್ರವು ಯೂರೋ-ಕೇಂದ್ರಿತ ಬಹುಭಾಷಾ ಶಿಕ್ಷಣ ವಿಧಾನ ಮತ್ತು ಭಾರತೀಯ ವಾಸ್ತವತೆ ಇವೆರಡನ್ನೂ ವಿವೇಚನಾಪೂರ್ಣವಾಗಿ ಬಳಕೆ ಮಾಡಬೇಕಾಗಿದೆ.

3. ಭಾರತಕ್ಕಾಗಿ ಬಹುಭಾಷಾ ಬೋಧನಾ ವಿಧಾನ

ಇಂಗ್ಲಿಷ್ ಭಾಷೆ ಬೋಧನೆಯನ್ನು ಕುರಿತ NCF ಪೊಸಿಷನ್ ಪೇಪರ್ ಭಾರತದಲ್ಲಿ ಇಂಗ್ಲಿಷ್ ಬೋಧನೆಗಾಗಿ ಬಹುಭಾಷಾ ಬೋಧನಾ ವಿಧಾನವನ್ನು ಬಲವಾಗಿ ಸಮರ್ಥಿಸುತ್ತದೆ ಮತ್ತು ಕೆಳ ಪ್ರಾಥಮಿಕ ಹಂತದಲ್ಲಿ ಅಥವಾ ಕನಿಷ್ಠ ಒಂದರಿಂದ  ಮೂರನೇ ತರಗತಿಗಳಲ್ಲಿ ಕಲಿಕೆಯ ಚಟುವಟಿಕೆಗಳಲ್ಲಿ ಮೊದಲ ಭಾಷೆಯ (ಗಳ) ಜೊತೆಗೆ ಇಂಗ್ಲಿಷ್  ಸಹ ಇರಬೇಕು ಎಂದು ಸೂಚಿಸುತ್ತದೆ. (NCF 2006). ಈ ಸಲಹೆಯನ್ನೇ ಆಧಾರವಾಗಿಟ್ಟು ಕೊಂಡು, ನಾವು ಪ್ರಾಥಮಿಕ ಹಂತದಲ್ಲಿ ಭಾರತಕ್ಕೆ ಬಹುಭಾಷಾ ಶಿಕ್ಷಣಕ್ಕಾಗಿ, ಇಂಗ್ಲಿಷ್ ಮತ್ತು ಶಾಲಾ ಭಾಷೆ ಮತ್ತು 'ಭಾಷೆ' ಮತ್ತು 'ವಿಷಯಗಳ ನಡುವೆ' ಕೃತಕ ಅಡೆತಡೆಗಳನ್ನು ತರಗತಿಯ ದೈನಂದಿನ ಚಟುವಟಿಕೆಯಿಂದ ತೆಗೆದುಹಾಕಬೇಕು ಎಂದು ಹೇಳಬಹುದು. ಪ್ರಾಥಮಿಕ ಶಾಲೆಗಳಲ್ಲಿ. ಭಾಷೆಗಳು, ಅವನ್ನು ಯಾವುದೇ ಹೆಸರಿನಿಂದ ಕರೆಯಿರಿ! ಅವು  ಮಗುವಿನ ಮತ್ತು ಮಗುವಿಗಾಗಿ ಇರುವ ಭಾಷೆಗಳು. ಇದು ಶಾಲಾ ಭಾಷೆ ಅಥವಾ ಇಂಗ್ಲಿಷ್ ಆಗಿದ್ದರೂ ಸರಿಯೇ , ಅವನ್ನು ಮಗುವಿನ ಅಗತ್ಯತೆಗಳು ಮತ್ತು ನಿರೀಕ್ಷೆಗೆ ತಕ್ಕಂತೆ ಸಹಜವಾಗಿ ಪ್ರಸ್ತುತಪಡಿಸಿದ್ದರೆ ಸಾಕು ಯಾವುದೇ ಭಾಷೆಯ ಶಬ್ದಕೋಶ, ರಚನೆಗಳು ಮತ್ತು ಸಂವಾದ ವಿನ್ಯಾಸಗಳು  ಮಗುವಿನ ಮನಸ್ಸಿಗೆ ಹಿಡಿಸುತ್ತವೆ. 

ತನ್ನ ತರಗತಿಯಲ್ಲಿ ಬಹುಭಾಷಾ ಶಿಕ್ಷಣವನ್ನು ಬಳಸುವ ಇಂಗ್ಲಿಷ್ ಶಿಕ್ಷಕನು ಎರಡನೇ ಭಾಷೆಯನ್ನು ಪರಿಚಯಿಸಿ ಬೋಧಿಸಿದಾಗ ಭಾಷೆ 1 ಮತ್ತು ಭಾಷೆ 2 ಗಳು  ದ್ವಿಭಾಷೆ ಕಲಿಯುವ ಮಗುವಿನ ಮನಸ್ಸಿನಲ್ಲಿ ಎರಡು ಪ್ರತ್ಯೇಕ ವಿಭಾಗಗಳಲ್ಲಿ ವಾಸಿಸುವುದಿಲ್ಲ ಎಂಬ ಅಂಶವನ್ನು ಅರಿತುಕೊಳ್ಳಬೇಕು. ಭಾಷೆ 1 ಮತ್ತು ಭಾಷೆ 2 ರ ಶಬ್ದಭಂಡಾರ  , ವಾಕ್ಯರಚನೆ , ಧ್ವನಿಸ್ವರೂಪ , ವ್ಯಾವಹಾರಿಕ ಭಾಷಾ ಪ್ರಯೋಗಗಳು ಪದಗಳನ್ನು ಭಾಷೆ 2 ರ ಬಳಕೆದಾರರ ಮನಸ್ಸಿನಲ್ಲಿ ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಆದ್ದರಿಂದ, “ಎರಡನೇ ಭಾಷೆಯ ಕಲಿಕೆಯು  ನಿಮ್ಮ ಹಿತ್ತಲಿನಲ್ಲಿ ಮನೆ ವಿಸ್ತರಣೆ ಮಾಡಿ ಕೇವಲ ನಿಮ್ಮ ಮನೆಗೆ ಹೊಸ ಕೊಠಡಿಗಳನ್ನು ಸೇರಿಸುವುದಲ್ಲ . ಅದು ಎಲ್ಲಾ ಆಂತರಿಕ ಗೋಡೆಗಳ ಪುನರ್ನಿರ್ಮಾಣ ಮಾಡುವ ಕೆಲಸ' (ಕುಕ್, 2001: 407). ಮಗುವಿನ ಪ್ರಥಮ ಭಾಷೆಯ ಜೊತೆಯಲ್ಲಿ ಎರಡನೇ ಭಾಷೆಯನ್ನು ಬಳಸಿದಾಗ ಅದು ಎರಡೂ ಭಾಷೆಗಳಲ್ಲಿ ಮಗುವಿನ ಭಾಷಾ ಬತ್ತಳಿಕೆಯನ್ನು ಬಲಪಡಿಸುತ್ತದೆ ಮತ್ತು ಆದ್ದರಿಂದ ಬಹುಭಾಷಾ ಬೋಧನೆಯು ಶಿಕ್ಷಣಶಾಸ್ತ್ರೀಯ ದೃಷ್ಟಿಕೋನದಿಂದ ಎರಡು ಅಲಗನ್ನು ಹೊಂದಿರುವ ಸಾಧನವಾಗಿದೆ.

4. ಮಗುವಿನ ಸಹಜ ಸಾಮರ್ಥ್ಯವನ್ನು ಬಳಸಿಕೊಳ್ಳುವುದು

ಏಕೈಕ ಭಾಷಾ ಪರಿಸರದಲ್ಲಿ ಬೆಳೆಯುತ್ತಿರುವ ಮಗುವು  ತನ್ನ ಮನೆಮಾತನ್ನು ಕಲಿತುಕೊಳ್ಳುವ ರೀತಿಯಲ್ಲಿಯೇ ಒಂದು ಬಹುಭಾಷಾ ಪರಿಸರದಲ್ಲಿ ಬೆಳೆಯುತ್ತಿರುವ ಮಗುವು ತನ್ನ ಪರಿಸರದ ವಿವಿಧ ಭಾಷೆಗಳನ್ನು ಕಲಿತುಕೊಳ್ಳುತ್ತದೆ.ಆದ್ದರಿಂದ, ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳನ್ನು ಬೋಧಿಸುವ ಶಿಕ್ಷಕನು ಒಂದು ನಿರ್ದಿಷ್ಟ ತರಗತಿಯಲ್ಲಿ ದೊರೆಯುವ  ವಿಭಿನ್ನ ಭಾಷೆಗಳನ್ನು  ಸೃಜನಾತ್ಮಕವಾಗಿ ಬಳಸಿಕೊಳ್ಳುವ ವಿಧಾನಗಳನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು. ಉದ್ದೇಶಿತ ಭಾಷೆಯ ಕಲಿಕೆಯನ್ನು ಮುನ್ನಡೆಸಲು ಶಿಕ್ಷಕರು ವಿದ್ಯಾರ್ಥಿಗಳಿಗಿರುವ  ಒಂದಕ್ಕಿಂತ ಹೆಚ್ಚು ಭಾಷೆಯ ಪರಿಚಯವನ್ನು ಸದುಪಯೋಗ  ಮಾಡಿಕೊಳ್ಳಬೇಕು. ಬಹು ಭಾಷೆಗಳಲ್ಲಿ ವಿಷಯಗ್ರಹಣೆ ಯ ಸವಾಲಿನ ಕಾರ್ಯಗಳನ್ನು ಬಳಸಿ,ಇಂಗ್ಲೀಷ್ ಶಿಕ್ಷಕನು ವಿದ್ಯಾರ್ಥಿಗಳಿಗೆ ಕಲಿಸಲು ಉದ್ದೇಶಿಸಿರುವ ಭಾಷೆಯ ಬಳಕೆಗಳನ್ನು ಕುರಿತು ಚಿಂತಿಸಲು ಮತ್ತು ಕಲಿತು ತಮ್ಮದಾಗಿಸಿಕೊಳ್ಳಲು  ಸಾಕಷ್ಟು ಭಾಷಾಶಾಸ್ತ್ರೀಯ ಮಾಹಿತಿಗಳನ್ನು ಕಂಡುಕೊಳ್ಳಬಹುದು.

5. ಬಹುಭಾಷಾ ಬೋಧನೆಯ ತಂತ್ರಗಳು

ಬಹುಭಾಷಾ ಶಿಕ್ಷಣವು ಭಾಷೆಯನ್ನು  ಒಂದು ಅರ್ಥ-ಕಲ್ಪಿಸುವ ವ್ಯವಸ್ಥೆಯೆಂದು ಪರಿಗಣಿಸುವ ಪೂರ್ಣ ಭಾಷೆಯ ವಿಧಾನಕ್ಕೆ ಅನುಗುಣವಾಗಿರಬೇಕು.

ಶುಭಾಶಯ, ಸಂಬೋಧನೆಗಳು ಮತ್ತು ಸೌಜನ್ಯದ ಮಾತುಗಳು:

ಮೂರು ಚಿತ್ರಗಳನ್ನು ಬಳಸಿರಿ. ಒಂದು ಚಿತ್ರದಲ್ಲಿ, ಶಿಕ್ಷಕನು ತನ್ನ ವಿದ್ಯಾರ್ಥಿಯ ಜೊತೆಯಲ್ಲಿ ಸಂಭಾಷಣೆ ಮಾಡುತ್ತಿರುತ್ತಾರೆ, ಮತ್ತೊಂದು ಚಿತ್ರದಲ್ಲಿ  ಇಬ್ಬರು   ಮಕ್ಕಳು ಆಟದ ಮೈದಾನದಲ್ಲಿ ಪರಸ್ಪರ ಮಾತನಾಡುತ್ತಿದ್ದಾರೆ ಮತ್ತು ಇನ್ನೊಂದು ಚಿತ್ರದಲ್ಲಿ, ತೋಟದಲ್ಲಿ ಅಥವಾ ಭತ್ತದ ಗದ್ದೆಯಲ್ಲಿ ಇಬ್ಬರು ಕೆಲಸಗಾರರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಹಾಗು ದೈನಂದಿನ ಸುದ್ದಿ ಸಮಾಚಾರವನ್ನು ಮಾತನಾಡುತ್ತಿದ್ದಾರೆ, ತಮ್ಮ ಮಾತೃಭಾಷೆಯಲ್ಲಿನ ಸಂಭಾಷಣೆಯನ್ನು ನಟನೆ ಮಾಡಿ ತೋರಿಸಲು ವಿದ್ಯಾರ್ಥಿಗಳನ್ನು ಕೇಳಿರಿ.ಅನಂತರ ಅದೇ ಸಂಭಾಷಣೆಯನ್ನು  ನೀವು ಇಂಗ್ಲಿಷ್ ಭಾಷೆಯಲ್ಲಿ ನಟನೆ ಮಾಡಿ ತೋರಿಸಿರಿ. ನಿರ್ದಿಷ್ಟ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಭಾಷೆಗಳನ್ನು ಹೇಗೆ  ಬಳಸಬೇಕೆಂದು ಈಗಾಗಲೇ ತಿಳಿದಿರುತ್ತಾರೆ, ಅವೇ ನಿರ್ದಿಷ್ಟ ಸಂದರ್ಭಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬಳಕೆ ಹೇಗಿರುತ್ತದೆ ಎಂದು ತಿಳಿಯಲು  ಅವರು ಆಸಕ್ತರಾಗಿರುತ್ತಾರೆ  

ಸಹಜ ಸಂದರ್ಭಗಳಲ್ಲಿ ನಡೆಯುವ ಸಂಭಾಷಣೆಗಳನ್ನು ಪರಿಚಯಿಸುವ ಮೂಲಕ, ಸಂದರ್ಭದಿಂದ ಸಂದರ್ಭಕ್ಕೆ ಬಳಸುವ ಪದಗಳು, ವಾಕ್ಯರಚನೆ  ಮತ್ತು ರೂಢಿಯು ಇಂಗ್ಲಿಷ್ ಭಾಷೆಯಲ್ಲಿ  ಮತ್ತು ಅವರ ಮಾತೃಭಾಷೆಯಲ್ಲಿ ಹೇಗೆ ಬದಲಾಗುತ್ತವೆ ಎಂಬುದನ್ನು ಗಮನಿಸಲು ನೀವು ಅವರನ್ನು ಪ್ರೇರೇಪಿಸುತ್ತೀರಿ. ಆರಂಭದಲ್ಲಿ, ಅವರು ಅದನ್ನು ಸ್ವಲ್ಪ ಭಾಷಾಶಾಸ್ತ್ರೀಯವಾಗಿ ಸವಾಲಿನ ಕೆಲಸವೆಂದು ಕಂಡುಕೊಳ್ಳಬಹುದು, ಆದರೆ ಕಾರ್ಯವು ವಿಷಯಗ್ರಹಣೆ ಮತ್ತು ಸಾಂದರ್ಭಿಕವಾಗಿ ಏನೇನೂ ಸವಾಲಿನ ವಿಷಯವಾಗಿರುವುದಿಲ್ಲ ಮತ್ತು. ಕನ್ನಡ ಮಾತನಾಡುವ ಮಗುವು (How are  you ಎಂಬ ಇಂಗ್ಲಿಷ್ ಪ್ರಶ್ನೆ ಯನ್ನು) ಕನ್ನಡದಲ್ಲಿ "ನೀನು ಹೇಗೆ ಇದ್ದೀಯಾ" ಮತ್ತು "ನೀವು ಹೇಗೆ ಇದ್ದೀರಾ", ಎಂದು ಯಾವಾಗ ಯಾವಾಗ ಕೇಳಬೇಕು "ಬರ್ತೀಯಾ" ಮತ್ತು "ಬರ್ತೀರಾ" ಎಂದು ಯಾವಾಗ ಯಾವಾಗ  ಕೇಳಬೇಕು  ಎಂಬುದನ್ನು ತಿಳಿದಿರುತ್ತದೆ. ಇಂಗ್ಲಿಷ್ ಭಾಷೆಯಲ್ಲಿ. “Who are you?” ಎಂಬ ಪ್ರಶ್ನೆಯನ್ನು "ನೀನು ಯಾರು?" "ನೀವು ಯಾರು?",  ಎಂದು ಯಾವ ಯಾವ ಸಂದರ್ಭದಲ್ಲಿ ಕೇಳಬೇಕು ಎಂಬುದನ್ನು ಕನ್ನಡ ಮಾತನಾಡುವ ಮಗುವು ಚೆನ್ನಾಗಿ  ತಿಳಿದಿರುತ್ತದೆ. ಯಾವ ಸಂದರ್ಭದಲ್ಲಿ ಮೊದಲ ಪ್ರಶ್ನೆಯನ್ನು ಬಳಸಬೇಕು ಮತ್ತು ನಂತರದನ್ನು ಬಳಸಬಾರದು . ಎಂಬುದನ್ನು ಕನ್ನಡ ಮಾತನಾಡುವ ಮಗುವು ಅರಿತಿರುತ್ತದೆ.  ಇಂಗ್ಲಿಷ್ನಲ್ಲಿ, 'ಹಲೋ'  ಎಂದ ಮೇಲೆ ‘How do you do’  ಎಂದು ಕೇಳುವುದು ರೂಢಿ . ಆದರೆ 'ಹಾಯ್' ಎಂದು ಸಂಬೋಧಿಸಿದ ತರುವಾಯ  ‘How are you.’ ಎಂದು ಕೇಳುವುದು ರೂಢಿ. ಇಂಗ್ಲಿಷ್ ನಲ್ಲಿ ವಿವಿಧ ಸನ್ನಿವೇಶದಲ್ಲಿ ರೂಢಿಯಲ್ಲಿರುವ  ಎಲ್ಲಾ ಸಂಬೋಧನೆ ಮತ್ತು ಶುಭಾಶಯ ಅಭಿವ್ಯಕ್ತಿಗಳನ್ನು  ಮಕ್ಕಳಿಗೆ ತಿಳಿಸಿಕೊಡಿ ಮತ್ತು ಮಕ್ಕಳು ತಮ್ಮ ಸಂಭಾಷಣೆಯಲ್ಲಿ ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡಿ. ಇದೇ ಅಭ್ಯಾಸವನ್ನು ಹಿಂದಿ ಅಥವಾ ಯಾವುದೇ ಇತರ ಭಾಷೆಗಳಲ್ಲಿ ಬಳಸುವ ಸಂಬೋಧನೆ ಹಾಗು ಶುಭಾಶಯಗಳನ್ನು ಬಳಸಿಕೊಂಡು  ಮಾಡಬಹುದು.

ನಿಮ್ಮ ಮಕ್ಕಳು ತಮ್ಮ ಮನೆಯ ಭಾಷೆಗಳಲ್ಲಿ ಪರಸ್ಪರ ಸಂಭಾಷಣೆಯಲ್ಲಿ  ವಿನಯ ಪೂರ್ವಕ ಅಭಿವ್ಯಕ್ತಿಗಳನ್ನು ಹೇಗೆ ಬಳಸುತ್ತಾರೆ? ಚಿತ್ರಗಳಲ್ಲಿ ಇಂಗ್ಲಿಷ್ ನಲ್ಲಿ ಮತ್ತು ವಿದ್ಯಾರ್ಥಿಗಳ ಮನೆಯ ಭಾಷೆಗಳಲ್ಲಿ ವಿನಯ ಪೂರ್ವಕ ಅಭಿವ್ಯಕ್ತಿಗಳನ್ನು ಬಳಸಿದ ಕಥೆಗಳನ್ನು ತಿಳಿಸಿರಿ ಮತ್ತು ಕಥೆಗಳನ್ನು ಹೇಳುವ ನೆಪದಲ್ಲಿ ಮಕ್ಕಳಿಗೆ  ಅವನ್ನು ತಿಳಿಸಿಕೊಡಿ.. ‘Help. Help me please. Can you help me please? Could you help me please? Will you help me please? It would have been nice if you could help me. I wonder if you could help me, please.’('ಸಹಾಯ ಮಾಡಿ. ದಯವಿಟ್ಟು ನನಗೆ ಸಹಾಯ ಮಾಡಿ. ದಯವಿಟ್ಟು ನನಗೆ ಸ್ವಲ್ಪ ಸಹಾಯ ಮಾಡ್ತೀರಾ? ನಿಮ್ಮಿಂದ ನನಗೆ ಸಹಾಯ ಮಾಡಿಕೊಡಲು ದಯವಿಟ್ಟು ಆಗುತ್ತಾ? ದಯವಿಟ್ಟು ಸ್ವಲ್ಪ ಸಹಾಯ ಮಾಡಿಕೊಡುತ್ತೀರಾ? ನೀವು ನನಗೆ ಸಹಾಯ ಮಾಡಿಕೊಟ್ಟರೆ ಬಹಳ ಉಪಕಾರವಾಗುತ್ತಿತ್ತು. ದಯವಿಟ್ಟು ನಿಮ್ಮಿಂದ ನನಗೆ ಏನಾದರೂ ಸಹಾಯ ಆಗಬಹುದಾ?”) ಈ ಎಲ್ಲ ವಾಕ್ಯಗಳ ಸೂಕ್ಷ್ಮಅರ್ಥ ವ್ಯತ್ಯಾಸಗಳನ್ನು ತಮ್ಮ ಮನೆಯ ಭಾಷೆಯಲ್ಲಿ ಮಕ್ಕಳು ಅರ್ಥಮಾಡಿಕೊಳ್ಳಬಲ್ಲರು ಮತ್ತು ಆದ್ದರಿಂದ ನೀವು ಸೂಕ್ತವಾದ ಸಂದರ್ಭಗಳಲ್ಲಿ ಇಂಗ್ಲಿಷ್ ನಲ್ಲಿ ಈ ವಾಕ್ಯಗಳನ್ನು ಪ್ರಸ್ತುತಪಡಿಸಿದರೆ, ಮಕ್ಕಳು ಅದನ್ನು ಸೃಜನಾತ್ಮಕವಾಗಿ ಬಳಸುವುದನ್ನು ಕಲಿಯುತ್ತಾರೆ. 

• ಮುದ್ರಿತ ಪರಿಸರದಲ್ಲಿ ಬಹು ಭಾಷೆಗಳ ಸಮೃದ್ಧ  ಬಳಕೆ

ಬಹುತೇಕ ಭಾರತೀಯ ಭಾಷೆಗಳಲ್ಲಿ ಹಲವಾರು ಇಂಗ್ಲಿಷ್ ಪದಗಳನ್ನು ಹಾಗೆಯೇ ಸಹಜವಾಗಿ ಬಳಸಲಾಗುತ್ತದೆ. ಆ ಪದಗಳನ್ನು ಅನೇಕ ಭಾಷೆಗಳಲ್ಲಿ  ಚಿತ್ರಗಳ ಸಮೇತ ಪ್ರಸ್ತುತಪಡಿಸಿ. ಮಕ್ಕಳಿಗೆ ತಮ್ಮ ಮನೆ ಭಾಷೆಗಳಲ್ಲಿ ಆ ಪದಗಳನ್ನು ಸಂದರ್ಭೋಚಿತವಾಗಿ ಬಳಸಲು ಕೇಳಿರಿ ಮತ್ತು ಅವುಗಳನ್ನು ಬಳಸುವ ಇಂಗ್ಲಿಷ್ ವಾಕ್ಯಗಳನ್ನು ಕೇಳಲು ಹೇಳಿರಿ. ಎಷ್ಟೋ ಮಕ್ಕಳಿಗೆ ಅವರ ಮನೆಗಳಲ್ಲಿ ಯಾವುದೇ ಮುದ್ರಿತ ಪತ್ರಿಕೆ ಪುಸ್ತಕಗಳು ದೊರಕುವ ವಾತಾವರಣವಿಲ್ಲದೆ ಇರಬಹುದು, ಆದ್ದರಿಂದ ತರಗತಿಯು ಬಹುಭಾಷಾ ಮುದ್ರಣ ಸಮೃದ್ಧ ಪರಿಸರವನ್ನು ಒದಗಿಸಬೇಕಾಗುತ್ತದೆ, ಈ ಪರಿಸರ ವ್ಯವಸ್ಥೆಯಲ್ಲಿ  ಅವರು ತಮ್ಮ ಮನೆ ಭಾಷೆಗಳೊಂದಿಗೆ ಇಂಗ್ಲಿಷ್ ಅನ್ನು ಕಲಿಯಬಹುದು.

ಡಾಕ್ಟರು, ನರ್ಸು, ಆಸ್ಪತ್ರೆ, ಸ್ಟೇಷನ್, ಬಸ್ಸು, ರೈಲು, ಟಿಕೆಟ್ಗಳು, ಬಲೂನ್ಗಳು, ಬಾಲುಗಳು, ಕ್ರಿಕೆಟ್ ಮುಂತಾದ ಪದಗಳು ಬಹು ಭಾಷೆಗಳಲ್ಲಿ ಸಂಭಾಷಣೆಗಳನ್ನು ಪ್ರಾರಂಭ ಮಾಡಿಸಬಹುದು. ಹೀಗಿದ್ದರೂ, ಎಚ್ಚರಿಕೆಮಾತು ಏನೆಂದರೆ, ಈ ಪದಗಳನ್ನು ಪ್ರತ್ಯೇಕವಾಗಿ ಬಳಸಬಾರದು. ಮಕ್ಕಳು ಈ ಪದಗಳನ್ನು ತಮ್ಮ ಮನೆ ಭಾಷೆಗಳಲ್ಲಿ ಮೊದಲು ಬಳಸಬೇಕು ಮತ್ತು ಇಂಗ್ಲಿಷ್ ವಾಕ್ಯಗಳಲ್ಲಿ ಶಿಕ್ಷಕರು ಅದನ್ನು  ಬಳಸುವಾಗ ಗಮನವಿಟ್ಟು ಕೇಳಬೇಕು. ಇಂಗ್ಲಿಷ್ ಭಾಷೆಯಲ್ಲಿರುವ ಇಂಗ್ಲಿಷ್ ಪದವನ್ನು  ಬಳಸಿರುವ  ಅನೇಕ ಭಾಷೆಗಳಲ್ಲಿ ಬರೆದ ಸರಳವಾದ ವಾಕ್ಯಗಳನ್ನು ತಮ್ಮ ತರಗತಿಯಲ್ಲಿ ಪ್ರದರ್ಶಿಸಬಹುದು. 

• ಭಾಷಾ ಆಟಗಳು

ರೂಪದ ಮೇಲೆ ಕೇಂದ್ರೀಕರಿಸದೆ ಅದರ ಅರ್ಥದ ಮೇಲೆ ಕೇಂದ್ರೀಕರಿಸಿದರೆ  ಭಾಷೆಯನ್ನು  ಬಹಳ ಸುಲಭವಾಗಿ ಕಲಿಯಬಹುದು. ಭಾರತೀಯ ಮಕ್ಕಳಲ್ಲಿ ಅವರ ಮನೆಯಲ್ಲಿ  ಮಾತನಾಡುವ ಅಥವಾ ಅವರ ನೆರೆಹೊರೆಯಲ್ಲಿ ಮತ್ತು ಸುತ್ತ ಮುತ್ತಲೂ ಮಾತನಾಡುವ ಭಾರತೀಯ ಮತ್ತು ಇತರ ಭಾಷೆಗಳ ಪದಸಂಪತ್ತು ಇಂಗ್ಲಿಷ್  ಬೋಧಿಸಲು ಉತ್ತಮ ಸಂಪನ್ಮೂಲವಾಗಬಹುದು. ಆಟಗಳನ್ನು ಆಡುವಾಗ  ಇಂಗ್ಲಿಷ್ ಭಾಷೆಯ ಸಂಖ್ಯೆಗಳೂ ಸೇರಿದಂತೆ ಅನೇಕ ಭಾಷೆಗಳಲ್ಲಿನ  ಸಂಖ್ಯಾವಾಚಕಗಳನ್ನು ಬಳಸುವುದು ಸೂಕ್ತವಾದ ಸಂದರ್ಭಗಳಲ್ಲಿ ಇಂಗ್ಲಿಷ್ ಅಂಕಿಗಳನ್ನು ಪರಿಚಯಿಸಲು ಉತ್ತಮ ಸಂಪನ್ಮೂಲವಾಗುತ್ತದೆ. ಕನ್ನಡದಲ್ಲಿ, ‘three’ ಎಂದರೆ 'ಮೂರು' ತೆಲುಗು ಭಾಷೆಯಲ್ಲಿ ಅದು మూడు  (ಮೂಡು) 'ರ' ಧ್ವನಿಯ ಭಿನ್ನ ಉಚ್ಛಾರಣೆಯು  ಕನ್ನಡದಲ್ಲಿ  'ರು' ಅನ್ನು ತೆಲುಗು 'ಡು' ಆಗಿ ಮಾಡಿರಬಹುದು. ಮಕ್ಕಳಿಗೆ ತಮ್ಮದೇ ಭಾಷೆಯಲ್ಲಿ 1 ರಿಂದ 100 ರವರೆಗೆ ಎಣಿಸಲು ಕೇಳಿರಿ, ನಂತರ ಅವುಗಳಿಗೆ  1 ರಿಂದ 100 ರವರೆಗೆ ಇಂಗ್ಲಿಷ್  ಪರ್ಯಾಯ ರೂಪಗಳನ್ನು ದೃಶ್ಯ ರೂಪ ಗಳನ್ನು ಒದಗಿಸಿ ಮತ್ತು ಅವರು ಇಂಗ್ಲಿಷ್ ನಲ್ಲಿ ಭಾಷಾ ಸಂವೇದನೆ ಮತ್ತು ಭಾಷಾ ಪ್ರಯೋಗ ಸಾಮರ್ಥ್ಯವನ್ನು ಹೇಗೆ ಬೆಳಸಿಕೊಳ್ಳುತ್ತಾರೆ ಎಂಬುದನ್ನು ನೋಡಿ. ನೀವು ವಿವಿಧ ಭಾಷೆಗಳಲ್ಲಿ ಪ್ರಚಲಿತವಿರುವ ಅಂಕಿಗಳ ಹಾಡುಗಳನ್ನು ಹಾಡಲು ಕೇಳಬಹುದು.(ಒಂದು ಎರಡು-ಬಾಳೆಲೆ ಹರಡು)(one two buckle my shoe)

 

 • ಮನೆಯ ಭಾಷೆಯ ಸಂದರ್ಭದಲ್ಲಿ ಇಂಗ್ಲಿಷಿನ ಅಕ್ಷರಗಳು ಮತ್ತು ಶಬ್ದಗಳು

ಇಂಗ್ಲಿಷ್ ಅಕ್ಷರಗಳು ಮತ್ತು ಅವುಗಳ ಉಚ್ಛಾರಣೆ ನಡುವೆ ಕೆಲವೊಮ್ಮೆ ಒಂದಕ್ಕೊಂದು ಸಂಬಂಧ ಇಲ್ಲದಿರುವುದು ಇಂಗ್ಲಿಷ್ ಕಲಿಯುವ ಭಾರತೀಯರಿಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಶಿಕ್ಷಕರು ಸಾಮಾನ್ಯವಾಗಿ ದೂರುತ್ತಾರೆ. ಹಿಂದಿ ಮತ್ತು ಕನ್ನಡದಲ್ಲಿ, 'ch' ಯಾವಾಗಲೂ 'ಚ' ಆಗಿದ್ದು, ಅದನ್ನು 'ಕ' ಎಂದು ಎಂದಿಗೂ ಉಚ್ಚರಿಸಲಾಗುವುದಿಲ್ಲ. ಸರಿ, ಈ ಕೆಳಗಿನ ಕನ್ನಡ ಪದಗಳನ್ನು ವಾಕ್ಯಗಳಲ್ಲಿ ಇರಿಸಿ ಮತ್ತು ಕನ್ನಡ ಮಾತನಾಡುವ ಮಕ್ಕಳು ಅರ್ಥವನ್ನು ಅರ್ಥಮಾಡಿಕೊಳ್ಳಬಹುದೇ ಎಂದು ನೋಡಿ. 'ಓದು' (read), ಓಡು(run) ಕಾಲು( leg).ಕಾಳು(grams) ಹಲ್ಲು(tooth)  'ಹಾಲು' (milk), 'ಹಾಳು' (spoilt), 'ಅನ್ನ' (Rice), ಅಣ್ಣ '(elder brother) . ನಂತರ ತಪ್ಪಾದ ಉಚ್ಚಾರಣೆಯಿಂದ ಗೊಂದಲಕ್ಕೆ ಕಾರಣವಾಗುವಂತಹ ಆದರೆ ಸರಿಯಾದ ಸಂದರ್ಭಗಳಲ್ಲಿ ಬಳಸಿದರೆ ಅರ್ಥ ಸ್ಪಷ್ಟವಾಗುವ ಇಂತಹ ಪದಗಳನ್ನು ಕಂಡುಹಿಡಿಯಲು ಇತರ ಭಾಷೆಗಳನ್ನು ಮಾತನಾಡುವ ಮಕ್ಕಳನ್ನು ಕೇಳಿರಿ. ಒಮ್ಮೆ ನೀವು ಮಕ್ಕಳ ಭಾಷೆಯ ಸಂವೇದನೆಯನ್ನು ಅಭಿವೃದ್ಧಿಪಡಿಸಿದರೆ, ಅವರು ಹಿಂಜರಿಕೆಯಿಲ್ಲದೆ ಕಠಿಣ ಸಂದರ್ಭವನ್ನು ಶೋಧಿಸಬಲ್ಲರು.

• ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಷೆಗಳಿಗೆ ಸ್ಥಳಾವಕಾಶವನ್ನು ಒದಗಿಸುವುದು

ಭಾಷೆಯು ಮಕ್ಕಳಿಗೆ ಒಂದು ಪ್ರದರ್ಶನ ಕಲೆ ಇದ್ದಂತೆ, ಅವರು ಪದಗಳು ಮತ್ತು ಅಭಿವ್ಯಕ್ತಿಗಳೊಂದಿಗೆ ಆಟವಾಡುವುದನ್ನು ಆನಂದಿಸುತ್ತಾರೆ. ಆದ್ದರಿಂದ ಇಂಗ್ಲಿಷ್ ಶಿಕ್ಷಕನು ವಿವಿಧ ಭಾಷೆಗಳನ್ನು ಬೇರ್ಪಡಿಸಿ ಅಂದರೆ ಬೇರೆ ಬೇರೆ ಅಂಕಣದಲ್ಲಿರಿಸಿ ಸಂಯೋಜಿಸಬಾರದು. ಬಹುಭಾಷಾ ಸನ್ನಿವೇಶದಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಇಂಗ್ಲಿಷು ಭಾಷೆಯಲ್ಲಿ  ಆ ಮಕ್ಕಳು ಸಾಮಾಜಿಕವಾಗಿ ವ್ಯವಹರಿಸಿ ಸಂವಾದ ನಡೆಸುವಂತೆ ಮಾಡುವುದು ಎಂದು ಮಾತ್ರ ಅರ್ಥವಲ್ಲ, ಇದು ಅವರ ಜ್ಞಾನಗ್ರಹಣದ ಕ್ಷೇತ್ರದಲ್ಲೂ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂಗ್ಲಿಷ್ ಭಾಷೆಯನ್ನು ತಮ್ಮ ಮನೆಯ ಭಾಷೆಗಳೊಂದಿಗೆ ಕಲಿಯುವಾಗ, ಅವರು ಅನೇಕ ದೃಷ್ಟಿಕೋನಗಳಿಂದ ವಿಷಯಗಳನ್ನು ನೋಡುತ್ತಾರೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳೊಂದಿಗೆ ಅನ್ವೇಷಿಸಲು ಅವಕಾಶವನ್ನು ಒದಗಿಸುವ ಮೂಲಕ ಮತ್ತು ಇಂಗ್ಲಿಷ್ ಪಾಠದ ತರಗತಿಯಲ್ಲಿ ತಮ್ಮ ಸ್ಥಳೀಯ ಭಾಷೆಗಳ ಸಂಪನ್ಮೂಲಗಳನ್ನು ಪರೀಕ್ಷಿಸಲು ಮಕ್ಕಳನ್ನು ಉತ್ತೇಜಿಸುವ ಮೂಲಕ, ಇಂಗ್ಲೀಷ್ ಶಿಕ್ಷಕ ಮಕ್ಕಳ ಬಹುಭಾಷಾ ಜಾಗೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು  ವಹಿಸುತ್ತಾರೆ.

6. ಬಹುಭಾಷಾ ತರಗತಿಯಲ್ಲಿ ಶಿಕ್ಷಕನ ಪ್ರಮುಖ ಪಾತ್ರ

ಬಹು ಭಾಷೆಯ ತರಗತಿಯಲ್ಲಿ ಇಂಗ್ಲಿಷ್ ಬೋಧನೆ ಮಾಡುವಾಗ  ಶಿಕ್ಷಕನು ಉತ್ತಮ ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ಹೊಂದಿರಲೇಬೇಕು. ಶಿಕ್ಷಕರು ಸಂಪೂರ್ಣ ಭಾಷೆಯ ವಿಧಾನ, ಶಾರೀರಿಕ ಪ್ರತಿಕ್ರಿಯೆ ಸಿದ್ಧಾಂತ, ಸಾಂದರ್ಭಿಕ ಭಾಷೆಯ ಬೋಧನೆಯ ವಿಧಾನ, ತರಗತಿಗಳಲ್ಲಿ ಅಧಿಕೃತ ವಸ್ತುಗಳನ್ನು ಬಳಸುವ ತಂತ್ರಗಳು, ವಾಸ್ತವ ಜೀವನದ ವಿಷಯಗಳ ಬಳಕೆ, ಮತ್ತು ರಂಗಪರಿಕರಗಳ ಬಳಕೆ ಮುಂತಾದವನ್ನು ಪ್ರಾರಂಭಿಕ  ಭಾಷಾ ತರಗತಿಗಳಲ್ಲಿ ಬಳಸಬೇಕು. ವಿವಿಧ ಭಾಷೆಗಳಲ್ಲಿರುವ ಲೇಬಲ್ಗಳನ್ನು ಬಳಸುವ ಮೂಲಕ  ದೃಶ್ಯರೂಪದ  ಪೂರಕ ಸಾಮಾಗ್ರಿಗಳನ್ನು ಒದಗಿಸಬಹುದು. ತರಗತಿಯ ಎಲ್ಲಾ ಪೀಠೋಪಕರಣಗಳು ಮತ್ತು ತರಗತಿಯ ವೈಶಿಷ್ಟ್ಯಗಳಿಗೆ ಇಂಗ್ಲಿಷ್ನಲ್ಲಿ ಮತ್ತು ಮಕ್ಕಳಿಗೆ ತಿಳಿದಿರುವ ಭಾಷೆಗಳಲ್ಲಿ ಲೇಬಲ್ ಮಾಡಬಹುದಾಗಿದೆ.

 ವಿವಿಧ ಭಾಷೆಗಳಲ್ಲಿ ಬಳಸಿದ ಹವಾಮಾನ, ತಿಂಗಳುಗಳು ಮತ್ತು ದಿನಗಳ ಸಂದರ್ಭಗಳಲ್ಲಿ ನಿರ್ದಿಷ್ಟ ಪದಗಳಿಗೆ ಸಂವಾದಿ ಚಿಹ್ನೆಗಳನ್ನು ಒಟ್ಟು ಶಾರೀರಿಕ ಪ್ರತಿಕ್ರಿಯೆಯ ಚಟುವಟಿಕೆಗಳ ಭಾಗವಾಗಿ ಬಳಸಬಹುದು. ಆದರೆ ಈ ಎಲ್ಲಾ ಚಟುವಟಿಕೆಗಳನ್ನು ಮಾಡಿಸುವ ಇಂಗ್ಲಿಷ್ ಶಿಕ್ಷಕನು ಇಂಗ್ಲಿಷ್ ನಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿರಲೇಬೇಕು. ತಾವು ಇಂಗ್ಲಿಷ್ ಭಾಷೆ  ಬಳಸುವಾಗ ನಮ್ಮ ಶಿಕ್ಷಕರು ಅದನ್ನು ಸುಲಲಿತವಾಗಿ ಬಳಸುತ್ತಾರೆಯೇ? ಇಲ್ಲದಿದ್ದರೆ, ಇಂಗ್ಲಿಷ್ ಭಾಷಾ ಬೋಧನೆಯಲ್ಲಿ ವೃತ್ತಿಪರ ಅಭಿವೃದ್ಧಿ ಕೋರ್ಸುಗಳಿಗೆ ಸೇರಿಕೊಳ್ಳಲು ಇದು ಸುಸಮಯ. ನಮ್ಮ ದೇಶದಲ್ಲೂ TESOL ನಂತಹ ವೃತ್ತಿಪರ ಸಂಸ್ಥೆಯನ್ನು ನಾವು ಯೋಚಿಸಬಹುದಲ್ಲವೇ? ಇಂಗ್ಲಿಷ್ ಬೋಧನೆ ಇಂದು ಒಂದು ತಾಂತ್ರಿಕ ಉದ್ಯಮವಾಗಿದೆ. ಆದ್ದರಿಂದ, ನಿಮಗೆ ಇಂಗ್ಲಿಷ್ ಶಿಕ್ಷಕನಾಗಲು ಒಂದು ಸಮರ್ಥ ಪ್ರಾಧಿಕಾರ ನೀಡಿದ ಪರವಾನಗಿ ಬೇಕು!

7. ಕೊನೆಯ ಮಾತು

ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲು, ಇಂಗ್ಲೀಷ್ ಭಾಷಾ ತರಗತಿಯಲ್ಲಿ ಮನೆ ಭಾಷೆ ಮತ್ತು ಇಂಗ್ಲಿಷ್ ಭಾಷೆ ನಡುವೆ ಒಂದರಿಂದ ಇನ್ನೊಂದಕ್ಕೆ ಮಕ್ಕಳು ಭಾಷೆ ಬದಲಾಯಿಸಿ ಬಳಸುವುದನ್ನು-ಇದನ್ನು ತಾಂತ್ರಿಕವಾಗಿ translanguaging ಎಂದು ಕರೆಯುತ್ತಾರೆ - ಪ್ರೋತ್ಸಾಹಿಸಬೇಕು. ಒಂದಕ್ಕಿಂತ ಹೆಚ್ಚು ಭಾಷೆ ಪ್ರಯೋಗಗಳಿಗೆ  ತೆರೆದಿರುವ ಭಾರತೀಯ ಮಕ್ಕಳಿಗೆ ಒಂದೇ ಸಂಭಾಷಣೆಯಲ್ಲಿ ಅಥವಾ ಒಂದೇ ಭಾಷಣದಲ್ಲಿ ವಿವಿಧ ಭಾಷೆಗಳ ಪದಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಮಿಶ್ರಣ ಮಾಡುವುದು ಅವರ ಬಾಲ್ಯದಿಂದಲೂ ಸಾಕಷ್ಟು ಸಹಜವಾಗಿಬಂದಿರುವ ವಿಷಯವಾಗಿದೆ. ಇದಕ್ಕೆ ಸಾಮಾನ್ಯ ಜನರ ಜೀವನದಲ್ಲಿ ಸಿನೆಮಾ ಮತ್ತು ದೂರದರ್ಶನಗಳ ಪ್ರಭಾವವೂ ಒಂದು ಕಾರಣವೆನ್ನಬಹುದು . . ಆದ್ದರಿಂದ,ಬಹುಭಾಷೆಯಲ್ಲಿ ಬೋಧನೆಯು, ಭಾರತೀಯ ಇಂಗ್ಲೀಷ್ ಶಿಕ್ಷಕರಿಗೆ ಹೊರಗಿನಿಂದ ಕಲಿತ ತಂತ್ರ ವಾಗ ಬೇಕಾಗಿಲ್ಲ. ಇದು ಅವರ ಪಠ್ಯಕ್ರಮದ ಬೋಧನೆಯಲ್ಲಿ  ಸಹಜ ಅವಿಭಾಜ್ಯ ಭಾಗವಾಗಿರಬೇಕು.

 

ಲೇಖಕರು ಪಾರ್ಥಸಾರಥಿ ಮಿಶ್ರ

ಕನ್ನಡಾನುವಾದ: ಜೈಕುಮಾರ್ ಮರಿಯಪ್ಪ.

19007 ನೊಂದಾಯಿತ ಬಳಕೆದಾರರು
7424 ಸಂಪನ್ಮೂಲಗಳು