ಜಗತ್ತಿನ ಶ್ರೇಷ ಶಿಕ್ಷಕರ ಸಾಲಿನಲ್ಲಿ ಇವಳೂ ಒಬ್ಬಳು-ಗುಂಡಪ್ಪ ಕಾಟೀಕರ

ಶಾಲೆಗೆ ಹೋದ ಮೇಲೆ ಅಲ್ಲಿ ನಾಲ್ಕಕ್ಷರ ಕಲಿಸಿದವರು ಮಾತ್ರ ಶಿಕ ಕರೆಂದು ಭಾವಿಸುವುದು ತಪ್ಪೆಂದು ನನ್ನ ಭಾವನೆ. ಏಕೆಂದರೆ ಅಕ್ಷರ ಕಲಿಕೆ .ಏಕೆಂದರೆ ಅಕ್ಷರ ಕಲಿಕೆಯನ್ನು ಶಾಲೆಯ ಹೊರಗೂ ಕೂಡ ಬೇರೆ ಬೇರೆ ವ್ಯಕ್ತಿಗಳಿಂದ ಕಲಿಯುವುದಕ್ಕೆ ಸಾಧ್ಯವಿದೆ. ಅದರ ಜೊತೆಗೆ ಬದುಕಿನ ಪಾಠವನ್ನು ಕಲಿಸಿದ ಎಷ್ಟೋ ಮಹತ್ವದ ವ್ಯಕ್ತಿತ್ವವುಳ್ಳವರನ್ನು ನಮ್ಮ ಬದುಕಿನಲ್ಲಿ ನೋಡಿರುತ್ತೇವೆ. ಅಂಥ ಮಹತ್ವದ ಶಿಕ್ಷಕರ ಸಾಲಿನಲ್ಲಿ ನೋಡಿದಾಗ ನನಗೆ ಕಾಣುವ ಶಿಕ್ಷಕಿಯೆಂದರೆ ನನ್ನ ಅಮ್ಮ. ನಾನು ಸಣ್ಣವನಿದ್ದಾಗ ನನಗೆ ಅಕ್ಷರ ಕಲಿಸಿದ್ದು ಯಾರೋ ಒಬ್ಬ ಶಾಲೆಯ ಶಿಕ್ಷಕರಲ್ಲ. ಬದಲಾಗಿ ನನ್ನ ಅವ್ವ. ನನಗೆ ಪ್ರಾರಂಭದ ಎರಡು ಅಕ್ಷರಗಳನ್ನು ಕಲಿಸಿದವಳು ಆಕೆ. ಹಾಗೆಂದ ಮಾತ್ರಕ್ಕೆ ಅವಳೇನು ಓದಿದವಳಲ್ಲ. ಕೂಲಿ ಕೆಲಸ ಮಾಡಿಕೊಂಡೇ ರಾತ್ರಿ ಮನೆಗೆ ಬಂದಾಗ ಪಾಟಿ ಮೇಲೆ ಎರಡು ಅಕ್ಷರಗಳನ್ನು ತನಗೆ ಬಂದ ಹಾಗೆ ಬರೆದು ಅದನ್ನು ತಿದ್ದುವುದಕ್ಕೆ ಹೇಳಿಕೊಡುತ್ತಿದ್ದಳು. ಅಂದಿನಿಂದ ಶುರುವಾದ ಅವಳ ಬೋಧನೆ ನನಗೆ ಇಂದಿಗೂ ಕೂಡ ನಿರಂತರವಾಗಿದೆ. ಪ್ರಾಥಮಿಕ ಶಾಲೆಯಿಂದ ಕಲಿಸಿದ ಎಲ್ಲ ಶಿಕ್ಷಕರನ್ನು ಮೊದಲು ಮಾಡಿ ನೋಡಿದಾಗ ನನಗೆ ನಿರಂತರವಾಗಿ ತಪ್ಪಿಲ್ಲದಂತೆ ಕಲಿಸಿದ ಏಕ ಮಾತ್ರ ಶಿಕ್ಷಕಿ ಎಂದರೆ ನನ್ನ ತಾಯಿ ಎಂದು ಹೇಳಬಹುದು. ಏಕೆಂದರೆ ನನ್ನ ಒಂದೊಂದು ವಯೋಮಾನಕ್ಕೆ ತಕ್ಕೆಂತೆ ನನಗೆ ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕೆ ಬೇರೆ ಬೇರೆ ಶಿಕ್ಷಕರು ಶಾಲಾ ಕೋಣೆಯೊಳಗೆ ಬಂದು ಹೋದರು. ಆದರೆ ನನಗೆ ಹುಟ್ಟಿನಿಂದ ಇಲ್ಲಿಯವರೆಗೆ ನಿರಂತರವಾಗಿ ಹತ್ತು ಹಲವಾರು ವಿಷಯಗಳನ್ನು ಒಬ್ಬಳೇ ನಿರಂತರವಾಗಿ ಬೋಧಿಸಿರುವುದನ್ನು ಗಮನಿಸಿದರೆ ಅವರೆಲ್ಲರಿಗಿಂತಲೂ ನನ್ನ ತಾಯಿಯೇ ನನಗೆ ಶ್ರೇಷ್ಠ ಶಿಕ್ಷಕಿ ಎಂದು ಕಾಣಿಸುತ್ತಾಳೆ. ನನಗೆ ಗಣಿತ ಕಲಿಸಿದ ಶಿಕ್ಷಕರು ಲೆಕ್ಕ ಬರುವುದಿಲ್ಲವೆಂದು ಹೊಡೆದು ಹೊಡೆದು ಲೆಕ್ಕ ಕಲಿಸಿದರೂ ಕೂಡ ಕೊನೆಗೂ ನನಗೆ ಅವರು ಕಲಿಸಿದ ಲೆಕ್ಕ ಬರಲೇ ಇಲ್ಲ. ಆದರೆ ನನ್ನ ಅಮ್ಮ ಕಲಿಸಿದ ಜೀವನದ ಲೆಕ್ಕ ನನಗೆ ಇಂದಿಗೂ ಕೂಡ ಎಂಥ ಕಠಿಣ ಪರಸ್ಥಿತಿಯಲ್ಲಿಯೂ ಕೂಡ ಉತ್ತರ ಕಂಡುಕೊಳ್ಳಲಿಕ್ಕಾಗಿದೆ. ಇವಳು ಕಲಿಸಿದ ಸಾಮಾಜಿಕ ಬದುಕು ಯಾವೊಬ್ಬ ಸಮಾಜ ವಿಜ್ಞಾನದ ಶಿಕ್ಷಕ ಹೇಳಿಕೊಡುವುದಕ್ಕಿಂತಲೂ ಕಡಿಮೆಯೇನಿಲ್ಲ. ಯಾವುದೇ ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳದೆ ಅದರ ಬಗ್ಗೆ ಸರಿಯಾಗಿ ಮಾತನಾಡುವುದಕ್ಕೆ ಸಾಧ್ಯವಿಲ್ಲವೆನ್ನುವುದನ್ನು ನನಗೆ ಮೊದಲು ಹೇಳಿಕೊಟ್ಟವಳೇ ನನ್ನವ್ವ . ಒಬ್ಬ ಭಾಷಾ ಶಿಕ್ಷಕ ಕಲಿಸುವ ಕೌಶಲ್ಯಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿಯೇ ಅವಳು ನನಗೆ ಎಲ್ಲವನ್ನು ಕಲಿಸಿಕೊಟ್ಟಳು. ಆದರೆ ಒಂದೇ ಒಂದು ಸಣ್ಣ ವ್ಯತ್ಯಾಸವೆಂದರೆ ನನ್ನವ್ವನಿಗೆ ಇವುಗಳಿಗೆ ಭಾಷಾ ಕೌಶಲ್ಯಗಳೆನ್ನುತ್ತಾರೆ, ಇವುಗಳಿಗೆ ಸಾಮಾಜಿಕ ಜ್ಞಾನ ಎನ್ನುತ್ತಾರೆ, ಇವುಗಳನ್ನು ಸರಳಬಡ್ಡಿ ಲೆಕ್ಕಗಳೆನ್ನುವರು ಎನ್ನುವ ಹೆಸರುಗಳು ಮಾತ್ರ  ಗೊತ್ತಿಲ್ಲ. ಎಲ್ಲವಿಷಯಗಳ ಮೂಲ ಅಂಶಗಳನ್ನು ನನಗೆ ಬಾಲ್ಯದಿಂದಲೇ ಕಲಿಸಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ರೂಪಿಸಿದ ಇಂಥ ಶಿಕ್ಷಕಿಗಿಂತ  ಬೇರೆ ಶಿಕ್ಷಕರು ಬೇಕೆ?

 

ನನಗೆ ಶಾಲಾ ಕಾಲೇಜುಗಳು ನೀಡಿರುವ ಪ್ರಮಾಣ ಪತ್ರಗಳಿಗಿಂತ ನನ್ನವ್ವ ನೀಡಿದ ಪ್ರಮಾಣ ಪತ್ರವೇ ಬದುಕನ್ನು ಕಟ್ಟಿ ಕೊಳ್ಳುವುದಕ್ಕೆ ಸಾಧ್ಯವಾಗಿದೆ. ಏಕೆಂದರೆ ಕಾಲೇಜುಗಳು ನೀಡಿರುವ ಪ್ರಮಾಣ ಪತ್ರಗಳು ಕೇವಲ ಪುಸ್ತಕದೊಳಗಿನ ಅಕ್ಷರಗಳ ಪಡಿನೆರಳಿನ ಮೇಲೆ ನಿರ್ದಿಷ್ಟಗೊಳಿಸಿ ಪ್ರಮಾಣೀಕರಿಸಿದರೆ, ನನ್ನವ್ವ ನೀಡಿದ ಪ್ರಮಾಣ ಪತ್ರ ವಾಸ್ತವ ಬದುಕಿನ ಅನುಭವದ ನೆಲೆಯಲ್ಲಿ ನಿಂತು ತಿದ್ದಿ ತೀಡಿ ತೆಗೆದ ಅಚ್ಚಿನ ಮೂರ್ತಿಯಾಗಿದೆ.ಚಿಕ್ಕ ಗುಡಿಸಲೇ ನನಗೆ ವಿಶ್ವ ವಿದ್ಯಾಲಯವಾಗಿತ್ತು. ಅಂದಿನ ಚಿಕ್ಕ ದೀಪದ ಬೆಳಕಿನಲ್ಲಿ ಕಲಿಸಿಕೊಟ್ಟ ಬದುಕಿನ ಪಾಠ ಇಂದಿನ ಆಧುನಿಕ ಪ್ರಖರ ಬೆಳಕಿನಲ್ಲಿ ಯಾವೊಂದೂs ಭಯವಿಲ್ಲದೆ ಸರಾಗವಾಗಿ ಜೀವನ ನಡೆಸುವುದಕ್ಕೆ ಸಾಧ್ಯವಾದದ್ದು ನನ್ನ ಅವ್ವ ಹೇಳಿದ ಮಾತುಗಳಿಂದ, ಅವಳು ಬೆಳೆಸಿದ ಆತ ವಿಶ್ವಾಸದಿಂದ.

ಮನೆಯೇ ಮೊದಲ ಪಾಠ ಶಾಲೆ

ಜನನಿ ತಾನೆ ಮೊದಲ ಗುರುವು

ಜನನಿಯಿಂದ ಪಾಠ ಕಲಿತ ಜನರು ಧನ್ಯರು

ಎಂಬ ಲೋಕೋಕ್ತಿಯಿಂತೆ ನಾನು ನನ್ನವ್ವನಿಂದ ಕಲಿತ ಪಾಠದಿಂದ ಧನ್ಯನಾಗಿದ್ದೇನೆ.

 

ಬೇಸರಿಲ್ಲದ ಜೀವ ದುಡಿ ದುಡಿದು ಸಾಕಿತೆನಗೆ

ಬೇಸರಿಕೆ ಕಳೆಯಲೆಂದು ಹಾಡ  ಹಾಡಿ ರಮಿಸಿತೆನಗೆ

ಹಗಲೆಲ್ಲ ದುಡಿದು, ರಾತ್ರಿಯಲ್ಲಿ ತುತ್ತ ಮಾಡಿ ಉಣಿಸಿ

ನನ್ನ ರಟ್ಟೆಗೆ ಕಸುವ ತುಂಬಿ

ಎದೆಯೊಳಗೆ ಅಕ್ಷರದ ಬೀಜ ಬಿತ್ತಿದವಳು ನನ್ನ ತಾಯಿ

ಅವಳ ತ್ಯಾಗಕೊಂದು ನಮನ

ಅವಳ ಮಮತೆಗೊಂದು ನಮನ

ಮತ್ತೆ ಮತ್ತೆ  ಜನುಮವಿರಲಿ ಅವಳ ಉದರದಲ್ಲಿ

ಮತ್ತೆ ಮತ್ತೆ  ದೊರಕಲೆನಗೆ ಇಂಥ ಶಿಕ್ಷಣ

18812 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು