ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ವೈಚಾರಿಕತೆ

ಕನ್ನಡನಾಡಿನ ಮನೆ ಮನಗಳಲ್ಲಿ ಮಾತಾಗಿರುವ ಮೇರು ಕವಿ ಕುವೆಂಪು. ಅವರ ಗೀತೆ, ಕವಿತೆಯನ್ನು ಓದದಿರುವ, ಕಿವಿಗೆ ಹಾಕಿಕೊಳ್ಳದಿರುವವರಾರಿದ್ದಾರೆ? ಎಂದೂ ಮರೆಯದ ಯುಗದ ಕವಿ ಕುವೆಂಪು. ಅವರು ಕವಿ ಮಾತ್ರ ಎಂದು ನಾವು ತಿಳಿದಿದ್ದರೆ ಅದು ನಮ್ಮ ಸಂಕುಚಿತ ಪರಧಿ! ಕವಿಯಾತ್ಮದಾಚೆಗೂ ಅವರ ನಿಲುವಿದೆ. ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಮಾನವತಾವಾದಿ, ನಿರಂಕುಶಮತಿಗಳು. ಎಲ್ಲದಕ್ಕಿಂತ ಹೆಚ್ಚಾಗಿ ವೈಜ್ಞಾನಿಕ ಕ್ರಾಂತಿಕಾರರು. ಅವರನ್ನು ತಿಳಿಯುತ್ತಾ ಹೋದಂತೆ ಅವರ ವೈಚಾರಿಕತೆ, ವೈಜ್ಞಾನಿಕತೆ ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತ. ರಸಋಷಿ ಕುವೆಂಪುರವರು ನೀಡಿರುವ ವಿಶ್ವಮಾವ ಸಂದೇಶ ಮತ್ತು ವೈಚಾರಿಕತೆಯ ಸಂದೇಶವಾದರೂ ಏನು? ತಿಳಿಯುವ. ಹುಟ್ಟುತ್ತಾ ವಿಶ್ವಮಾನವನಾಗಿಯೇ ಇರುವ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಮತ ಜನಾಂಗ, ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು. ಲೋಕ ಉಳಿದು ಬಾಳಿ ಬದುಕಬೇಕು, ವಿಶ್ವ ವಿದ್ಯೆಯಿಂದ, ವಿಶ್ವ ಪ್ರಜ್ಞೆಮೂಡಿ ವಿಶ್ವ ಮೈತ್ರಿ ಪಡೆದವರೇ ವಿಶ್ವಮಾನವರು. ವಿಶ್ವ ಮಾನವ ಸಂದೇಶ ಮನುಜ ಮತ: ಇಡೀ ಮಾನವ ಕುಲವೇ ಒಂದು ಎಂಬ ಭಾವನೆ. ಜಾತಿ, ಮತ, ಭೇದವನ್ನು ಹಾಗೂ ಭೇದ ಭಾವಗಳನ್ನು ಎಣಿಸದಿರುವುದು. ಜಾತಿ ಮತಗಳು ಸಹಮಾನವರನ್ನು ಅಗಲಿಸುವ ಯಂತ್ರ ಮಂತ್ರಗಳಾಗಿವೆಯೇ ಹೊರತು ಸೇರಿಸುವ ಸೇತುವೆಗಳಾಗಲಿಲ್ಲ, ಆದ್ದರಿಂದ ನಾವು ಯಾವ ಮತಕ್ಕೂ ಸೇರದೆ ಎಲ್ಲ ಮತಗಳಲ್ಲಿರುವ ಹೊಟ್ಟು ತೂರಿ, ಅವುಗಳಲ್ಲರುವ ಸತ್ಯಾಂಶಗಳನ್ನು ಹೀರಿಕೊಂಡು ವಿವೇಕದಿಂದ ಮತಿ ತೋರಿದ ಮಾರ್ಗದಲ್ಲಿ, ಯಾರಿಗೂ ಬಾಧಕವಾಗದಂತೆ, ಸರ್ವ ಸಮಾನತೆ, ಸ್ವಾತಂತ್ರ್ಯ ಭ್ರಾತೃತ್ವ, ಮಾನವೀಯತೆಗಳನ್ನು ಧ್ಯೇಯವಾಗಿಟ್ಟುಕೊಂಡು ನಡೆನುಡಿಗಳೊಂದಾಗಿ ನಡೆಯುತ್ತ ಎಲ್ಲ ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ವೈಚಾರಿಕತೆ ಜೀವಿಗಳ ಲೇಸನ್ನು ಬಯಸುವುದೇ ಮನುಜ ಮತ. ವಿಶ್ವಪಥ :

ಮನುಷ್ಯನು ಜಾತಿ, ಮತದ ಹೆಸರಿನಲ್ಲಿ ಸಂಕುಚಿತ ಭಾವದಿಂದ ಇನ್ನೊಬ್ಬರ ಮಾನವ ಘನತೆಯನ್ನು ಗೌರವಿಸದೆ ಕವಲು ದಾರಿಯಲ್ಲಿ ನಡೆಯದೆ ಎಲ್ಲರನ್ನೂ ತನ್ನಂತೆಯೇ ಎಂದು ಭಾವಿಸಿ ಸಮರಸ ಭಾವದಿಂದ ಮುಂದುವರಿಯಬೇಕೆಂಬ ಜೀವನ ಮಾರ್ಗವೇ ವಿಶ್ವಪಥ. ಸರ್ವೋದಯ: ಸರ್ವರ ಉದ್ಧಾರ, ವಿಶ್ವ ಕಲ್ಯಾಣ, ಯಾವೊಬ್ಬ ವ್ಯಕ್ತಿಯ ಅಥವಾ ಮತದ ಉದಯವಲ್ಲ; ಇಡೀ ಮನುಕುಲದ ಉದಯ. ಜಡತೆಯಲ್ಲಿರುವ ಚೈತನ್ಯ ಮೂಡುವಂತಾಗಬೇಕು, ಸಸ್ಯಪ್ರಜ್ಞೆ ಪ್ರಾಣಿಪ್ರಜ್ಞೆಯಾಗಿ, ಮಾನವ ಪ್ರಜ್ಞೆ ಅತಿಮಾನಸಪ್ರಜ್ಞೆಯಾಗಿ ವಿಕಾಸಗೊಳ್ಳಬೇಕು. ಸರ್ವಸ್ತರದ ಉದ್ಧಾರ ಸಕಲ ಜೀವಿಗಳ ಲೇಸನ್ನೇ ಬಯಸಬೇಕು. ಸರ್ವೋದಯದ ಕಲ್ಪನೆಯಲ್ಲಿ ಜಾತಿ ಮತಗಳ ವಿಭಜನೆ ಇರಲಾರದು. ಸ್ಪೃಶ್ಯಾಸ್ಪೃಶ್ಯಗಳ ಭೇದವಿರುವುದಿಲ್ಲ ಸಮಾಜದ ಅತಿ ದುರ್ಬಲರು/ ಕಟ್ಟಕಡೆಯವರು ಸರ್ವೋಚ್ಛ ಸ್ಥಾನಕ್ಕೇರುವ ಅವಕಾಶವಿರುತ್ತದೆ. ಇಡೀ ವಿಶ್ವಕಲ್ಯಾಣವೇ ಸರ್ವೋದಯದ ಗುರಿ. ಸಮನ್ವಯ: ’ಹಳೆಬೇರು ಹೊಸ ಚಿಗುರು ಕೂಡಿರಲು ಮರಸೊಬಗು, ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ, ಋಷಿವಾಕ್ಯದೊಡನೆ ವಿಜ್ಞಾನ, ಕಲೆ, ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ”. ಎನ್ನವಂತೆ ಅಧ್ಯಾತ್ಮ ವಿಜ್ಞಾನ ಸಮನ್ವಯವಾಗಬೇಕು. ಬೌದ್ಧಿಕ ಉನ್ನತಿಯೊಂದಿಗೆ ಮಾನವೀಯತೆ ಸೇರಬೇಕು, ಬುದ್ಧಿ ಭಾವಗಳು ಸಂಗಮವಾಗಬೇಕು. ಪೂರ್ಣದೃಷ್ಟಿ: ಒಂದು ವಸ್ತುವಿನ ಅಥವಾ ಒಬ್ಬ ಪೂರ್ಣದೃಷ್ಟಿ: ಒಂದು ವಸ್ತುವಿನ ಅಥವಾ ಒಬ್ಬ ವ್ಯಕ್ತಿಯ ಜೀವನವನ್ನು ಬಿಡಿಬಿಡಿಯಾಗಿ ನೋಡದೆ, ಇಡಿಯಾಗಿ ನೋಡುವ ಅದನ್ನು ಪ್ರತ್ಯೇಕವಾಗಿ ವಿಶ್ಲೇಷಿಸದೆ ಇಡೀ ವಿಶ್ವದ ಅಂಗವಾಗಿ, ಅಂದರೆ ವ್ಯಷ್ಟಿಯನ್ನು ಸಮಷ್ಟಿಯ ಭಾಗವಾಗಿ ಪರಿಭಾವಿಸುವ ದೃಷ್ಟಿಯೇ ಪೂರ್ಣದೃಷ್ಟಿ. ಪೂರ್ಣಸೃಷ್ಟಿ, ಪೂರ್ಣದರ್ಶನ, ಭೌತಿಕ ಮತ್ತು ಪಾರಮಾರ್ಥಿಕ ತತ್ವವನ್ನು ಅರಿಯುವುದು.

ವಿಶ್ವಮಾನವ ಸಂದೇಶದ ಸಪ್ತ ಸೂತ್ರಗಳು

೧.       ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರುಪಾಧಿಯಾಗಿ ಸ್ವೀಕರಿಸಬೇಕು. ೨. ವರ್ಣಾಶ್ರಮ ಧರ್ಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ೩. ಎಲ್ಲ ದೇಶಗಳಲ್ಲಿ, ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ ವಿನಾಶಗೊಳಿಸಬೇಕು. ೪. ಮತ ತೊಲಗಿ, ಅಧ್ಯಾತ್ಮ ಮತ್ತು ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು ೫.ಮತ, ಗುಂಪುಕಟ್ಟುವ ವಿಷಯವಾಗಬಾರದು ಯಾರೂ ಯಾವ ಒಂದು ಮತಕ್ಕೂ ಸೇರದೆ ತಾನು ಕಂಡುಕೊಳ್ಳುವ ತನ್ನ ಮತಕ್ಕೆ ಮಾತ್ರ ಸೇರಬೇಕು. ೬. ಯಾವ ಒಂದು ಗ್ರಂಥವೂ ಏಕೈಕ ಪರಮಪೂಜ್ಯ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಾಧ್ಯವಾದವುಗಳನ್ನೆಲ್ಲಾ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು. ೭. ವಿಶ್ವಮಾನವ ಸಂದೇಶಗಳು ಸರ್ವದೇಶ, ಕಾಲಕ್ಕೂ ಅನ್ವಯ ವಾಗಬಹುದಾದ ವಿಶ್ವಮೌಲ್ಯಗಳು. ವಿಶ್ವಮಾನವ ಸಂದೇಶದ ನೆಲೆಗಟ್ಟೆಂದರೆ ವೈಚಾರಿಕತೆ, ಮತ್ತು ವೈಜ್ಞಾನಿಕ ದೃಷ್ಟಿ, ಸತ್ಯ, ಅಹಿಂಸೆ. ಪ್ರೇಮಾದಿ ಮೌಲ್ಯಗಳು ಅದರ ವಾಹಕಗಳು.

 ಕುವೆಂಪು ವಿಚಾರವಾದ * ವಿಜ್ಞಾನ, ಧರ್ಮ, ಅಧ್ಯಾತ್ಮ, ಮಾನವೀಯತೆಗಳು ವಿರೋಧಿಗಳಲ್ಲ, ಪೂರಕ, ಇವುಗಳ ಗುರಿ ವಿಶ್ವಕಲ್ಯಾಣ. * ಸಾಮಾಜಿಕ ಅಸಮಾನತೆ, ಜಾತಿ, ಮತ, ಅನಕ್ಷರತೆ, ಮೌಢ್ಯಗಳನ್ನು ಬುಡಸಮೇತ ಕಿತ್ತಹಾಕಲು ಯುವಕರು ಕಾರ್ಯಪ್ರವೃತ್ತರಾಗಬೇಕು. * ಶ್ರಮಸಂಸ್ಕೃತಿ ಬೆಳೆಸಿಕೊಳ್ಳುವುದು, ಶ್ರಮಜೀವಿ ರೈತ/ ನೆಲಯೋಗಿಯನ್ನು ಗೌರವಿಸಬೇಕು. * ಶಾಸ್ತ್ರ, ಸ್ಮೃತಿ, ಕಂದಾಚಾಗಳನ್ನು ವಿಮರ್ಷಿಸುವ, ಪ್ರಶ್ನಿಸುವ ಗುಣ. * ಸರ್ವಧರ್ಮ ಸಮಭಾವ ವ್ಯಕ್ತಿತ್ವ ಬೆಳೆಸಿಕೊಳ್ಳುವುದು. * ಒಂದು ಉತ್ತಮ ಪುಸ್ತಕ ಓದುವುದರಿಂದ ಒಬ್ಬ ಮಹಾತ್ಮನ ಸ್ನೇಹ ಸಂಗದಿಂದ ಬರಬಹುದಾದ ಲಾಭ ಪಡೆಯಬಹುದು. * ಅಧ್ಯಯನದಲ್ಲಿ ಏಕಾಗ್ರತೆ, ಸ್ವತಂತ್ರ ಚಿಂತನೆ, ಬೆಳೆಸಿಕೊಳ್ಳುವುದು. * ಮತಿ ಗೌರವ, ಜೀವನದಲ್ಲಿ ಗುರಿಯ ಹಿರಿಮೆ, ಉದ್ದೇಶದ ಶ್ರೇಷ್ಠತೆ, ಸಾಧನದ ಸಾಹಸವನ್ನು ಹೊಂದುವುದು. * ತೆರೆದ ಮನಸ್ಸು, ವಿವೇಕ, ವಿಚಾರ ಮತ್ತು ಪೂರ್ಣದೃಷ್ಟಿ ಬೆಳೆಸಿಕೊಳ್ಳುವುದು. * ಆತ್ಮಶ್ರೀಯನ್ನು ಬೆಳೆಸಿಕೊಳ್ಳುವುದು, ಆತ್ಮಗೌರವ, ಆತ್ಮ ಸ್ಥೈರ‍್ಯ, ಆತ್ಮವಿಶ್ವಾಸ , ಆತ್ಮತೃಪ್ತಿ, ಮಾನವ ಘನತೆ, ಅಂತರಂಗದ ವಿಕಾಸದ ಮೂಲಕ ಆತ್ಮದರ್ಶನ ಮಾಡಿಕೊಳ್ಳುವುದು. * ಜಾತಿ, ವರ್ಣಗಳ ಅಸ್ಪೃಶ್ಯತೆಗಳನ್ನು ತೊಲಗಿಸಲು ಹೋರಾಡುವುದು. * ಈ ರೀತಿ ’ಸರ್ವ ಮತಗಳಿಗಿಂತಲೂ, ಶುದ್ಧ ಹೃದಯದ, ಸಂಸ್ಕೃತಿಯ ಮತವೇ ಮಹೋನ್ನತವಾದುದೆಂದು ಕುವೆಂಪು ಅವರು ಸಾರಿದ್ದಾರೆ.

- ಸುಶೀಲಾ ಮಂಜುನಾಥ್, ಸಹಶಿಕ್ಷಕಿ, ಅರಸನಹಳ್ಳಿ, ಚಿಕ್ಕಬಳ್ಳಾಪುರ ತಾ/ಜಿಲ್ಲೆ. ಮೊ; ೮೪೫೩೨೪೭೩೨೪

18812 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು