ಕರ್ನಾಟಕದ ಜಲಿಯನ್ ವಾಲಾಬಾಗ್

 
ವಿದುರಾಶ್ವತ್ಥ ಕ್ಷೇತ್ರವು ಒಂದು ಪ್ರವಾಸಿ ತಾಣವಾಗಿದ್ದು, ಇಲ್ಲಿ ಅಶ್ವತ್ಥ ನಾರಾಯಣಸ್ವಾಮಿ ದೇವಾಲಯವಿದೆ.  ಮಹಾಭಾರತದ ವಿದುರನು ಪರ್ಯಟನೆ ಮಾಡುತ್ತಾ ಇಲ್ಲಿಗೆ ಆಗಮಿಸಿದನೆಂದು ಪ್ರತೀತಿ ಇದೆ. ವಿದುರನು ಇಲ್ಲಿ ಒಂದು ಅಶ್ವತ್ಥ ವೃಕ್ಷದ ಸಸಿಯನ್ನು ನೆಟ್ಟು ಹಲವು ಕಾಲ ಇಲ್ಲಿಯೇ ನೆಲೆಸಿದ್ದನೆಂಬ ಪುರಾಣ ಕಥೆ ಇದೆ. ನಾಗಪ್ರತಿಷ್ಠೆಗೆ ಪ್ರಸಿದ್ಧಿ ಪಡೆದಿರುವ ಈ ಪುರಾಣ ಸ್ಥಳಕ್ಕೆ ವರ್ಷಪೂರ್ತಿ ಯಾತ್ರಾರ್ಥಿಗಳು ಬರುತ್ತಾರೆ.
 
ಪೌರಾಣಿಕ ಪ್ರಾಮುಖ್ಯತೆಯನ್ನು ಹೊರತುಪಡಿಸಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳ ಚರಿತ್ರೆಯಲ್ಲಿ ಕರ್ನಾಟಕದ ವಿದುರಾಶ್ವತ್ಥ ಧ್ವಜ ಸತ್ಯಾಗ್ರಹವು ಪ್ರಸಿದ್ಧವಾದುದು. ವಿದುರಾಶ್ವತ್ಥ ಗ್ರಾಮವನ್ನು ರಾಷ್ಟ್ರೀಯ ಸ್ವಾತಂತ್ರ ಚಳುವಳಿಯ ಇತಿಹಾಸದ ಪುಟಗಳಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಗುರುತಿಸಲಾಗುತ್ತದೆ. ಪಂಚಾಬಿನ ಅಮೃತಸರದ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ನಡೆದಂತಹ ಒಂದು ಹೃದಯವಿದ್ರಾವಕ ಬ್ರಿಟಿಷ್ ದೌರ್ಜನ್ಯದ ಘಟನೆ ೧೯೩೮ ರ ಏಪ್ರಿಲ್ ೨೫ ರಂದು ವಿದುರಾಶ್ವತ್ಥದಲ್ಲಿಯೂ ನಡೆಯಿತು. ಧ್ವಜ ಸತ್ಯಾಗ್ರಹಕ್ಕೆಂದು ನೆರೆದಿದ್ದ ಜನರ ಮೇಲೆ ಪೋಲೀಸರು ಗುಂಡು ಹಾರಿಸಿ ಸುಮಾರು ೩೨ ಜನರ ದುರಂತ ಸಾವಿಗೆ ಕಾರಣರಾಗಿದ್ದರು. ಈ ಘಟನೆಯಿಂದಾಗಿ ಜನರು ಜನ ಪ್ರತಿನಿಧಿಗಳಿರುವ ಜವಾಬ್ದಾರಿ ಸರ್ಕಾರಕ್ಕಾಗಿ ಮೈಸೂರು ಸಂಸ್ಥಾನದ ಸರ್ಕಾರದ ಮೇಲೆ ಒತ್ತಡವನ್ನು ಹಾಕಿದರು. ಇದರಿಂದ ಮುಂದೆ ಜವಾಬ್ದಾರಿ ಸರ್ಕಾರಕ್ಕಾಗಿ ಜನಜಾಗೃತಿ ಹೆಚ್ಚಾಯಿತು. ಮುಂದಿನ ಎಲ್ಲಾ ಹೋರಾಟಗಳಿಗೆ ಇದು ಸ್ಪೂರ್ತಿಯ ಸೆಲೆಯಾಗಿ ಪರಿಣಮಿಸಿತು.
 
ಸ್ವಾತಂತ್ರ್ಯ ಪೂರ್ವ ಭಾರತದ ಹಲವು ಪ್ರಾಂತ್ಯಗಳು ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿದ್ದವು. ಇನ್ನು ಕೆಲವು ಸಂಸ್ಥಾನಗಳಲ್ಲಿ ರಾಜರುಗಳು ಆಳ್ವಿಕೆ ನಡೆಸುತ್ತಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯ ಚಟುವಟಿಕೆಗಳು ಬ್ರಿಟಿಷ್ ಇಂಡಿಯಾದ ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದ್ದವು ಆದರೆ ಕಾಂಗ್ರೆಸ್ ಪ್ರತಿ ವರ್ಷ ರಾಷ್ಟ್ರಮಟ್ಟದಲ್ಲಿ ನಡೆಸುತ್ತಿದ್ದ ಅಧಿವೇಶನಗಳು ಜನರಲ್ಲಿ ರಾಷ್ಟ್ರೀಯ ಚಳುವಳಿಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಯಿತು. ಮಹಾತ್ಮ ಗಾಂಧೀಜಿಯವರು ದೇಶದ ವಿವಿಧ ಪ್ರಾಂತ್ಯಗಳಲ್ಲಿ ಸಂಚರಿಸಿ ಸಭೆಗಳನ್ನುದ್ದೇಶಿಸಿ ಭಾಷಣಗಳನ್ನು ಮಾಡಿದರು. ಇಷ್ಟೆಲ್ಲಾ ಆಂದೋಲನಗಳಿಂದಾಗಿ ಜನರು ರಾಷ್ಟ್ರೀಯ ಚಳುವಳಿಯೆಡೆಗೆ ಹೆಚ್ಚು ಹೆಚ್ಚು ಆಕರ್ಷಿತರಾದರು. ಅದೇ ಕಾಲಕ್ಕೆ ಗಾಂಧೀಜಿಯವರು ಹರಿಜನೋದ್ದಾರ ಕಾರ್ಯಕ್ರಮಕ್ಕಾಗಿ ನಿಧಿ ಸಂಗ್ರಹಿಸಲು ಗೌರಿಬಿದನೂರು ಹಾಗೂ ಮೈಸೂರು ಸಂಸ್ಥಾನದ ಹಲವು ಭಾಗಗಳಲ್ಲಿ ಪಾದಯಾತ್ರೆ ಕೈಗೊಂಡು ಹಲವಾರು ಸಭೆಗಳನ್ನುದ್ದೇಶಿಸಿ ಮಾತನಾಡಿದ್ದರಿಂದ ಚಳುವಳಿಗೆ ಮತ್ತಷ್ಟು ಹುರುಪು ಬಂದಂತಾಯಿತು.
 
ಶಿವಪುರದಲ್ಲಿ ಸರ್ಕಾರವು ಹೇರಿದ್ದ ನಿಷೇಧವನ್ನು ಧಿಕ್ಕರಿಸಿ ತ್ರಿವರ್ಣ ಧ್ವಜವನ್ನು ಯಶಸ್ವಿಯಾಗಿ ಹಾರಿಸಲಾಗಿದ್ದನ್ನು ಇತರ ಪ್ರದೇಶಗಳಿಂದ ಬಂದಿದ್ದ ಕಾಂಗ್ರೆಸ್ಸಿಗರಿಗೂ ಸಹ ತಮ್ಮ ತಮ್ಮ ಊರುಗಳಲ್ಲಿ ಕಾಂಗ್ರೆಸ್ ಧ್ವಜಾರೋಹಣ ಮಾಡಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲು ಸಹಾಯವಾಯಿತು. ವಿದುರಾಶ್ವತ್ಥದಲ್ಲಿ ಅಶ್ವತ್ಥನಾರಾಯಣ ಸ್ವಾಮಿಯ ದೇವಾಲಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತಿತ್ತು. ಇಲ್ಲಿ ಎಲ್ಲಾ ಕಡೆಗಳಿಂದ ಜನರು ಹೆಚ್ಚು ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದರು. ಇಲ್ಲಿ ಹದಿನೈದು ದಿನಗಳ ಕಾಲ ರಥೋತ್ಸವ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ತೀರ್ಮಾನಿಸಿ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡರು. ಕಾಂಗ್ರೆಸ್‌ನ ಧ್ಯೇಯೋದ್ದೇಶಗಳನ್ನು ಮತ್ತು ಸಂದೇಶಗಳನ್ನು ಜನರಿಗೆ ತಿಳಿಸಿ ಚಳುವಳಿಗೆ ಹೆಚ್ಚು ಬೆಂಬಲ ಪಡೆದುಕೊಳ್ಳುವುದು ಇದರ ಉದ್ದೇಶವಾಗಿತ್ತು.
 
ಈ ಒಂದು ಚಳುವಳಿಗೆ ಕಲ್ಲೂರು ಸುಬ್ಬರಾವ್, ಎನ್ ಸಿ ನಾಗಯ್ಯರೆಡ್ಡಿ, ಶ್ರೀಪಾಲಯ್ಯ, ರಾಮಸ್ವಾಮಿ, ನಾರಾಯಣಪ್ಪ ಮುಂತಾದವರು ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಡಿಸ್ಟಿಕ್ಟ್ ಮ್ಯಾಜಿಸ್ಟ್ರೇಟರವರು ಪ್ರತಿಬಂಧಕಾಜ್ಞೆ ಹೊರಡಿಸಿ ಎಲ್ಲೂ ಯಾವ ಭಾಷಣಗಳನ್ನು ಮಾಡಬಾರದೆಂದು ಆಜ್ಞೆ ಹೊರಡಿಸಿದರು. ಆದರೂ ಸಹ ಗೌರಿಬಿದನೂರಿನಿಂದ ಹಾಗೂ ಸುತ್ತ ಮುತ್ತಲ ಹಲವಾರು ಗ್ರಾಮಗಳಿಂದ ಮೆರವಣಿಗೆಯು ಹಲವು ಗುಂಪುಗಳಲ್ಲಿ ಹೊರಟು ವಿದುರಾಶ್ವತ್ಥವನ್ನು ತಲುಪಿತು. ಆ ವೇಳೆಗೆ ನಾನಾ ಕಡೆಯಿಂದ ಬಂದಿದ್ದ ಸಾವಿರಾರು ಜನ ಮೆರವಣಿಗೆಯಲ್ಲಿ ಸೇರಿಕೊಂಡರು(ಸುಮಾರು ಏಳು ಸಾವಿರ ಜನ ಎಂದು ಹೇಳಲಾಗಿದೆ). ಅಲ್ಲಿದ್ದ ಮುಖಂಡರು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಿ ವೇದಿಕೆಯ ಕಡೆ ಹೋಗಿ ಸರ್ಕಾರದ ಆಜ್ಞೆ ಉಲ್ಲಂಘಿಸಿ ಧ್ವಜ ಹಾರಿಸಿ ಬಂಧಿತರಾದರು. ಇದರಿಂದ ಗುಂಪು ಉದ್ರಿಕ್ತವಾಗಲಾರಂಭಿಸಿತು. ಬಿಸಿಲಿನ ಜಳ ಹೆಚ್ಚಾಗಿದ್ದರಿಂದ ಚಳುವಳಿಗಾರರು ನೆರಳಿನಲ್ಲಿ ವಿಶ್ರಮಿಸಿಕೊಂಡು ಹೋಗುತ್ತೇವೆಂದು ತಿಳಿಸಿದರು. ಆದರೆ ಇದಕ್ಕೆ ಅವಕಾಶ ನೀಡದೆ ಲಾಠಿಚಾರ್ಜ್ ಮಾಡಿದರು. ಇದರಿಂದ ಜನರು ರೊಚ್ಚಿಗೆದ್ದು ಪೋಲೀಸರಿಗೆ ಕಲ್ಲು, ಇಟ್ಟಿಗೆ ತೂರಲಾರಂಭಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಪೋಲಿಸರು ರಿವಾಲ್ವರಿನಿಂದ ಗುಂಡು ಹಾರಿಸಿದರು. ಇದರಿಂದಾಗಿ ಜನರು, ಹೆಂಗಸರು, ಮಕ್ಕಳ ಕೂಗಲಾರಂಭಿದರು,  ಹಕ್ಕಿ ಪಕ್ಷಿಗಳು ಗುಂಡೇಟಿನಿಂದ ಕೆಳಗೆ ಬೀಳುತ್ತಿದ್ದವು. ಗಾಯಗೊಂಡ ಜನರೆಲ್ಲ ಅಯ್ಯೋ, ಅಮ್ಮಾ ಎಂದು ಕೂಗಾಡುತ್ತಾ ನರಳುತಿದ್ದರು. ಎಲ್ಲಿ ನೋಡಿದರೂ ರಕ್ತದ ಹನಿಗಳು ಬಿದ್ದಿದ್ದವು. ಆ ದಿನ ವಿದುರಾಶ್ವತ್ಥದ ನಿಶ್ಯಸ್ತ್ರ ಜನರ ಮಾರಣ ಹೋಮವು ಜಲಿಯನ್‌ವಾಲಾ ಬಾಗ್ ಘಟನೆಯ ಪುನರಾವರ್ತನೆಯಂತಿತ್ತು. ಈ ಗೋಲಿಬಾರ್‌ನಿಂದ ೩೨ ಮಂದಿ ಸತ್ತರು ಹಾಗೂ  ೪೮ ಮಂದಿ ಗಾಯಗೊಂಡರು. ನೂರಾರು ಹಕ್ಕಿಗಳು, ಕೋತಿಗಳು ಸತ್ತವು. ಇದರ ಜ್ಞಾಪಕಾರ್ಥವಾಗಿ ಒಂದು ಸ್ಮಾರಕ ಶಿಲೆಯನ್ನು ೧೯೭೩ ರಲ್ಲಿ ನಿರ್ಮಿಸಿದರು. ೨೦೦೪ ರಲ್ಲಿ ಸ್ಥೂಪ ಹಾಗೂ ವೀರಸೌಧವನ್ನು ನಿರ್ಮಿಸಲಾಗಿದೆ. ವಿದುರಾಶ್ವತ್ಥದ ದುರಂತವು ಇತಿಹಾಸದಲ್ಲಿ ಚಿರಸ್ಮರಣೀಯವಾದುದಾಗಿದೆ. 
 
ವಿದುರಾಶ್ವತ್ಥದಲ್ಲಿ ಶ್ರೀಯುತ ಗಂಗಾಧರ ಮೂರ್ತಿಯವರ ಸಹಾಯದಿಂದ ಗ್ಯಾಲರಿಯನ್ನು ನಿರ್ಮಿಸಲು ಸ್ಥಳೀಯ ಶಾಸಕರು ಮುಂತಾದವರ ಸಹಾಯ ಪಡೆದು ವೀರಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಚಳುವಳಿಯ ಚಿತ್ರಪಟಗಳನ್ನು ತುಂಬಾ ಸುಂದರವಾಗಿ ಅಳವಡಿಸಿದ್ದಾರೆ. (ಬಹುಶಃ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿರುವ ಸಂಗ್ರಹಾಲಯಗಳಲ್ಲಿ ಇದು  ಅತ್ಯುತ್ತಮವಾದ ಗ್ಯಾಲರಿಯಾಗಿದೆ ಎಂದು ಹೇಳಬಹುದು).  ಇದರ ಜೊತೆಗೆ ಗ್ರಂಥಾಲಯವನ್ನು ತೆರೆದಿದ್ದಾರೆ. ಗ್ರಂಥಾಲಯದಲ್ಲಿ ಗಾಂಧೀಜಿಯವರ ಬಾಲ್ಯದ ಬಗ್ಗೆ ಹಾಗೂ ಅವರು ಸ್ವಾತಂತ್ರ್ಯಕ್ಕೆ ದೇಣಿಗೆ ಪಡೆಯುವ ಬಗ್ಗೆ ವಿಡಿಯೋ ಚಿತ್ರವನ್ನು ಸಹ ತೋರಿಸಲಾಗುತ್ತದೆ. ವಿದುರಾಶ್ವತ್ಥದಲ್ಲಿರುವ ಹುತಾತ್ಮರ ನೆನಪಿಗಾಗಿ ಸ್ಮಾರಕ ಸ್ಥಂಭವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಮಕ್ಕಳಿಗೆ ಆಟ ಆಡಲು ಒಳ್ಳೆಯ ಸ್ಥಳವಿದೆ ಮತ್ತು ಸುಂದರವಾದ ಉದ್ಯಾನವನವಿದೆ ಅದು ನೋಡಲು ಆಕರ್ಷಕವಾಗಿದೆ.
 
ಒಟ್ಟಾರೆ ಹೇಳುವುದಾದರೆ ಇದೊಂದು ಐತಿಹಾಸಿಕ ತಾಣವಾಗಿದ್ದು, ನೋಡಲೇ ಬೇಕಾದ ಚಾರಿತ್ರಿಕ ಸ್ಥಳವಾಗಿದೆ. ನಮ್ಮ ಶಾಲೆಗಳಲ್ಲಿ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದರೆ ಇಂತಹ ಸ್ಥಳಕ್ಕೆ ಕರೆದುಕೊಂಡು ಹೋಗಿ ಇಲ್ಲಿನ ಇತಿಹಾಸವನ್ನು ತಿಳಿಸುವುದರ ಜೊತೆಗೆ ಇಲ್ಲಿರುವ ಚಿತ್ರಪಟಗಳ ಮೂಲಕ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ತಿಳಿಸುವುದರಿಂದ ಮಕ್ಕಳಿಗೆ ಇತಿಹಾಸವು ತುಂಬಾ ಚೆನ್ನಾಗಿ ಅರ್ಥವಾಗುತ್ತದೆ ಎಂಬ ಭಾವನೆ ನನ್ನದು.
 
 
----------------------------------------------------------------------------
ಶೋಭ.ಎನ್  , ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅನ್ನೂರು ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

.

 
19007 ನೊಂದಾಯಿತ ಬಳಕೆದಾರರು
7424 ಸಂಪನ್ಮೂಲಗಳು