ಆನೆ-ನಮ್ಮ ರಾಷ್ಟ್ರೀಯ ಪಾರಂಪರಿಕ ಪ್ರಾಣಿ

ಭಾರತದ  ಆನೆ ಯನ್ನು (Elephas maximus indicus ) 2010 ರ ಅಕ್ಟೋಬರ್ 10 ರಂದು  ಭಾರತ ಸರ್ಕಾರವು ನಮ್ಮ ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಿ ಅಧಿಸೂಚನೆಯನ್ನು ಹೊರಡಿಸಿದೆ.

ಆನೆಗೂ ನಮ್ಮ ಪರಂಪರೆಗೂ ಮುಗಿಯದ ನಂಟು. ಹಿಂದೆ ರಾಜ ಮಹರಾಜರು ಯುದ್ದಕ್ಕೆ ಆನೆಯನ್ನು ಬಳಸುತ್ತಿದ್ದರು. ಅರಣ್ಯಗಳಲ್ಲಿ ಮರದ ದಿಮ್ಮಿಗಳ ಸಾಗಣೆಯಲ್ಲಿ ಅವನ್ನು ವ್ಯಾಪಕವಾಗಿ ಬಳಸುತ್ತಾರೆ.ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುತ್ತಾರೆ.ವಿಶ್ವ ವಿಖ್ಯಾತ ದಸರಾ ಮೆರವಣಿಗೆಯಲ್ಲಿ ಜಂಬೂ ಸವಾರಿ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು  ಮೈಸೂರಿಗೆ ಬರುತ್ತಾರೆ.ಹಾಗೆಯೇ ತ್ರಿಚೂರಿನ ಪೂರಂ ಉತ್ಸವದಲ್ಲಿ ಆನೆಗಳ ಮೇಳವೇ ನಡೆಯುತ್ತದೆ.

ಸುಮಾರು 1983 ರಿಂದ ಭಾರತದ ಆನೆ ಯು  ಅಳಿವಿನ ಅಂಚಿನಲ್ಲಿದೆ ಎಂದು IUCN ನಡೆಸಿದ ತನ್ನ ಪ್ರಾಣಿಗಳ ಗಣತಿಯಲ್ಲಿ ತಿಳಿಸಿದೆ.ಕಳೆದ ಮೂರು ತಲೆಮಾರುಗಳಿಂದ ಈ ಸಂತತಿಯು ಶೇ 50 ಕ್ಕಿಂತ ಹೆಚ್ಚು ಅಳಿದು ಹೋಗಿದೆ ಎಂದು ಹೇಳಲಾಗಿದೆ.ಸುಮಾರು 60-75 ವರ್ಷಗಳಿಂದೀಚೆಗೆ ಇದರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆನೆಗಳು ಮೂಲತಃ ನೆಲೆವಾಸದ ವಿನಾಶ,ಅರಣ್ಯ ನಾಶ ಮತ್ತು ಅರಣ್ಯಗಳ  ತುಂಡು ತುಂಡಾಗಿ ವಿಭಜನೆ ಆಗಿರುವುದರಿಂದ ಅಪಾಯಕ್ಕೀಡಾಗಿದೆ. ಆನೆಗಳ ಸಂಚಾರ ಮಾರ್ಗಕ್ಕೆ ಅಡಚಣೆಯ ಕಾರಣದಿಂದಾಗಿ ಅವುಗಳ ಓಡಾಟಕ್ಕೆ ತೊಂದರೆ ಆಗಿ ಮನುಷ್ಯ ಮತ್ತು ಆನೆಯ ಸಂಘರ್ಷ ಪದೇ ಪದೇ ಉಂಟಾಗುತ್ತಿದೆ.

ಭಾರತದ ಆನೆಗಳು ಆಫ್ರಿಕನ್ ಆನೆಗಳಿಗಿಂತ ಗಾತ್ರದಲ್ಲಿ ಚಿಕ್ಕವು.ಅದಲ್ಲದೇ ತಮ್ಮ ತಲೆಯ ಭಾಗದಲ್ಲೇ ಅತ್ಯಧಿಕ ಶಕ್ತಿಯನ್ನು ಪಡೆದಿವೆ. ಅವುಗಳ ಕೋರೆ ದಂತವು ಮುಂದೆ ಚಾಚಿರುತ್ತವೆ. ಅವುಗಳ ಬೆನ್ನಿನ ಭಾಗ ಉಬ್ಬಿದಂತೆ ಅಥವಾ ಒಂದೇ ಸಮನಾಗಿ ಕಾಣುತ್ತವೆ.ಅಲ್ಲದೇ ಇದಕ್ಕೆ 19 ಜೊತೆ ಪಕ್ಕೆಲುಬುಗಳಿವೆ. ಹೆಣ್ಣಾನೆಗಳು ಸಾಮಾನ್ಯವಾಗಿ ಗಂಡಾನೆಗಳಿಗಿಂತ ಗಾತ್ರದಲ್ಲಿ ಚಿಕ್ಕವಾಗಿರುತ್ತವೆ.ಇವುಗಳಿಗೆ ಸಣ್ಣ ಗಾತ್ರದ ಕೋರೆ ದಂತಗಳು ಇರಬಹುದು ಅಥವಾ ಇಲ್ಲದೇ ಇರಬಹುದು.

ಭಾರತದ ಆನೆಗಳ ಕಿವಿಗಳು ಹೋಲಿಸಿದಲ್ಲಿ ಆಫ್ರಿಕಾದ ಆನೆಗಿಂತ  ಸಣ್ಣ ಗಾತ್ರದ್ದು.ಆದರೆ ಇನ್ನುಳಿದವುಗಳಿಗೆ ಹೋಲಿಸಿದರೆ ವಿಸ್ತೃತ ತಲೆ ಬುರುಡೆಗಳನ್ನು ಪಡೆದಿವೆ.ಅದಲ್ಲದೇ ಇವುಗಳಿಗೆ ಆಫ್ರಿಕನ್ ಆನೆಗಳಿಗಿಂತ ದೊಡ್ಡ ಕೋರೆ ದಂತಗಳಿವೆ. ಮುಂಗೊರಸುಗಳು ವಿಶಾಲ ಮತ್ತು ಅಗಲವಾಗಿವೆ. ತಮ್ಮ ಆಫ್ರಿಕನ್ ಸೋದರ ಸಂಬಂಧಿಗಳಿಗಿರುವಂತೆ ಅವುಗಳ ಉದರ ಭಾಗವು ಅವುಗಳ ದೇಹದ ತೂಕಕ್ಕೆ ಸರಿಯಾದ ಅನುಪಾತದಲ್ಲಿದೆ.

 

ಆನೆಗಳ ಚಲನವಲನ ಮತ್ತು ವಾಸಸ್ಥಾನಗಳ ವಿಧಾನಗಳ ಬಗ್ಗೆ ದಕ್ಷಿಣ ಭಾರತದಲ್ಲಿ 1981-83ರ ಅವಧಿಯಲ್ಲಿ ಒಂದು ಅಧ್ಯಯನ ಮಾಡಲಾಗಿತ್ತು. ಆನೆಗಳ ವಾಸದ ಪ್ರದೇಶವು ಹಸಿರು ಅರಣ್ಯಪ್ರದೇಶವನ್ನು ಆವರಿಸಿ ವಿವಿಧ ಪ್ರಕೃತಿ ವೈವಿಧ್ಯತೆ ಹೊಂದಿರುತ್ತದೆ-ಅದರಲ್ಲಿಯೂ ಒಣ ಹುಲ್ಲು ಗರಿ- ಸದಾ ಹಸಿರಿನ ಶೊಲಾ ಅರಣ್ಯ ಭಾಗ ಮತ್ತು ಹುಲ್ಲುಗಾವಲು ಸೇರಿವೆ. ಆಯಾ ಋತುಮಾನದಲ್ಲಿನ ವಾಸಸ್ಥಾನಗಳು ಅಲ್ಲಿ ದೊರೆಯುವ ನೀರು ಮತ್ತು ಆಹಾರದ ಸಸ್ಯವರ್ಗ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ.

ಆನೆಗಳನ್ನು ಬೃಹದಾಕಾರದ ಸಸ್ಯಾಹಾರಿಗಳು ಎಂದು ಪರಿಗಣಿಸಲಾಗಿದೆ. ಅವು ಪ್ರತಿ ದಿನ ಒಂದು ದೊಡ್ಡ ಮರವನ್ನೇ ತಮ್ಮ 150 ಕೆ.ಜಿ. ಆಹಾರಕ್ಕಾಗಿ ಬಳಸುತ್ತವೆ ಎನ್ನುತ್ತಾರೆ. ಅವುಗಳು ಸಾಮಾನ್ಯವಾಗಿ ಮೇಯುವುದಲ್ಲದೇ ಆಹಾರಕ್ಕಾಗಿ ವಿಶಾಲ ಪ್ರದೇಶಗಳಲ್ಲಿ ಅಲೆದಾಡುತ್ತವೆ. ದಕ್ಷಿಣ ಭಾರತದಾದ್ಯಂತ ಬಿದಿರು ಸಸ್ಯಜಾತಿಗಳು, ಮತ್ತು ದ್ವಿದಳ ಧಾನ್ಯದ ಸಸ್ಯ,ತಾಳೆ ಜಾತಿ ಮರ,ಜೊಂಡು ಹುಲ್ಲು ಮತ್ತು ಹಸಿರು ಹುಲ್ಲಿನ ಜಾತಿಯ ಸಸ್ಯಗಳನ್ನು ತಿನ್ನುತ್ತವೆ. ಅವು ಎತ್ತರವಾಗಿ ಬೆಳೆದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಮೇಯುತ್ತವೆ,ಆದರೆ ಆಯಾ ಋತುಮಾನದಲ್ಲಿ ಅವುಗಳ ಆಹಾರ ಸೇವಿಸುವ ಪ್ರಮಾಣದ ಮೇಲೆ ಅದು ನಿಗದಿಯಾಗಿರುತ್ತದೆ. ಏಪ್ರಿಲ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಹೊಸಹುಲ್ಲು ಬೆಳೆಯುತ್ತದೆ,ಆಗ ಅವು ತುದಿ ಭಾಗದ ಮೆತ್ತಗಿನದನ್ನು ತೆಗೆದು ಪೊದೆಗಳಲ್ಲಿ ಮೇಯುತ್ತವೆ. ಹುಲ್ಲು ಸಸ್ಯಗಳು ಎತ್ತರವಾಗಿದ್ದರೆ. ಆಗ ಅವು ಇಡೀ ಪೊದೆಯನ್ನೇ ಬುಡಸಮೇತ ಕಿತ್ತು ಅದರ ಮಣ್ಣಿನ ಭಾಗ ಮತ್ತು ಬೇರನ್ನು ಜಾಣತನದಿಂದ ತೆಗೆದು ತಾಜಾ ಎಲೆ,ಹುಲ್ಲು ಸಸ್ಯಗಳನ್ನೇ ಸೇವಿಸುತ್ತವೆ. ಶರತ್ಕಾಲದಲ್ಲಿ ಸಾಮಾನ್ಯವಾಗಿ ಹುಲ್ಲು ಪೂರ್ಣ ಪ್ರಮಾಣದಲ್ಲಿ ಬೆಳೆಯುತ್ತದೆ.ಆಗ ಆನೆಗಳು ಇಂತಹ ರಸಭರಿತ ಹುಲ್ಲನ್ನು ಸ್ವಚ್ಛಗೊಳಿಸಿ ಅದರ ಬೇರುಗಳನ್ನು ಬೇರ್ಪಡಿಸಿ,ಚೂಪಾದ ಭಾಗವನ್ನು ತೆಗೆದು ಹುಲ್ಲನ್ನು ಮೇಯುತ್ತವೆ. ಬಿದಿರು ಸಸ್ಯಗಳಿಂದ ಎಳೆಯ ಕಾಂಡಗಳ ಭಾಗವನ್ನು,ಪಾರ್ಶ್ವದ ಸಸ್ಯಭಾಗ ಮತ್ತು ಸಣ್ಣ ಕೊಂಬೆಗಳನ್ನು ತಿನ್ನುತ್ತವೆ. ಜನವರಿಯಿಂದ ಏಪ್ರಿಲ್ ವರೆಗಿನ ಶುಷ್ಕ ವಾತಾವರಣದ ಅವಧಿಯಲ್ಲಿ ಹುಲ್ಲುಗಾವಲುಗಳಲ್ಲಿ ಅಲೆದಾಡಿ ತಮ್ಮ ಪ್ರಮುಖ ಆಹಾರ ಮೂಲಗಳನ್ನು ಪಡೆಯುತ್ತವೆ. ಅವು ಎಲೆಗಳು ಮತ್ತು ಕೊಂಬೆಗಳನ್ನು ಅವುಗಳ ತಾಜಾತನದ ಮೇಲೆ ಆಯ್ಕೆ ಮಾಡಿಕೊಳ್ಳುತ್ತವೆ.ಅಕೇಶಿಯಾದ ಮುಳ್ಳುಭರಿತ ಪೊದೆಯನ್ನು ಯಾವುದೇ ಹಿಂಜರಿಕೆ ಇಲ್ಲದೇ ಸೇವಿಸುತ್ತವೆ. ಅವುಗಳು ಮರದ ತೊಗಟೆಯನ್ನು ಬಿಳಿದಾದ ಮುಳ್ಳುಗಳ ಹೊರ ಪದರಿನ ಭಾಗ ಮತ್ತು ಇನ್ನಿತರ ಹೂಬಿಡುವ ಸಸ್ಯಗಳನ್ನು ಆಹಾರಕ್ಕಾಗಿ ಅವಲಂಬಿಸಿವೆ.ಬೇಲದ ಹಣ್ಣು,ಹುಣಸೆ,ಕುಂಭಿ ಮತ್ತು ಈಚಲು ಗಿಡದ ಎಲೆಗಳನ್ನು ತಿನ್ನುತ್ತವೆ.

ಗಣತಿಯ ಪ್ರಕಾರ  ದೇಶದಲ್ಲಿ ಪ್ರಾಣಿ ಸಂಗ್ರಹಾಲಯಗಳು ಮತ್ತು ವಿಶೇಷವಾಗಿ ದೇಶದ ದಕ್ಷಿಣ ಮತ್ತು ಈಶಾನ್ಯ ಭಾಗಗಳಲ್ಲಿ ದೇವಾಲಯಗಳಲ್ಲಿ ಇರುವ 3,500 ಆನೆಗಳೂ ಸೇರಿದಂತೆ 25,000 ಕ್ಕೂ ಹೆಚ್ಚು  ಆನೆಗಳು ಇವೆ. 

ಆನೆಗಳ ಸಂರಕ್ಷಣೆಗಾಗಿ ಕ್ರಮಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಸರ್ಕಾರವು ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಲಾಗಿದೆ.

ಅನಾದಿಕಾಲದಿಂದಲೂ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಗೆ ನಿಕಟ ಸಂಬಂಧ ಹೊಂದಿದ್ದರೂ ಆನೆಗಳಿಗೆ, ಸಂರಕ್ಷಣೆಯ ದೃಷ್ಟಿಯಲ್ಲಿ ಹುಲಿಗೆ ದೊರೆತಿದ್ದ ಸ್ಥಾನಮಾನ ದೊರೆತಿಲ್ಲ ಎಂಬ ಕೊರಗನ್ನು ಅನುಭವಿಸುತ್ತಿದ್ದ ಸಂರಕ್ಷಣಾಕಾರರು ತಾವು ದೀರ್ಘಕಾಲದಿಂದ ಕಾಯುತ್ತಿದ್ದ ಸರ್ಕಾರದ ಕ್ರಮವನ್ನುಬಲು ಸಂತೋಷದಿಂದ ಸ್ವಾಗತಿಸಿದ್ದಾರೆ.
ಆನೆಗಳನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಿರುವುದು ಮತ್ತು ಅವುಗಳ ರಕ್ಷಣೆಗಾಗಿ National Elephants Conservation Authority (NECA)  ಸ್ಥಾಪನೆಗೆ ಸರ್ಕಾರ ಮುಂದೆ ಬಂದಿರುವುದು ಆನೆಗಳ ಉಳಿವಿಗೆ ಬಲು ಆಶಾದಾಯಕವಾಗಿದೆ.

ನಿರೂಪಣೆ ಮತ್ತು ಸಂಪಾದನೆ:ಜೈಕುಮಾರ್ ಮರಿಯಪ್ಪ.

18927 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು